ಹತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಬೆಳಕಿಗೆ ತಂದ ಹಳಕಟ್ಟಿ: ಡಾ. ಬಸವಕುಮಾರ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ತಾವು ನೋವುಂಡರೂ ಸಹ ಛಲ ಬಿಡದೆ ಚದುರಿ ಹೋಗಿದ್ದ ಸಾವಿರಾರು ವಚನಗಳನ್ನು ಹುಡುಕಿ ಹೆಕ್ಕಿ ಪ್ರಕಟಿಸಿದ ಕೀರ್ತಿ ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ. ಅವರು ನೂರಾರು ವಚನಕಾರರ ಹತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಬೆಳಕಿಗೆ ತಂದಿದ್ದಾರೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಸ್ಮರಿಸಿದರು.

ವಚನ ಪಿತಾಮಹ ಫ.ಗು.ಹಳಕಟ್ಟಿಯವರ ೧೪೫ನೇ ಜಯಂತ್ಯೋತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಫ.ಗು.ಹಳಕಟ್ಟಿಯವರ ಅವಿರತ ಶ್ರಮದ ಫಲವಾಗಿ ನಾವು ಇಂದು ಶರಣರ ವಚನಗಳನ್ನು ಕಾಣುತ್ತಿದ್ದೇವೆ. ನಾವೆಲ್ಲ ಅವರ ಜೀವನ ಸಾಧನೆಯ ಬಗ್ಗೆ ಅರಿತುಕೊಂಡು ನಮ್ಮ ಬದುಕು ಸಾರ್ಥಕಪಡಿಸಿಕೊಳ್ಳಬೇಕು. ಒಮ್ಮೆ ಬಿ.ಎಂ.ಶ್ರೀಕಂಠಯ್ಯನವರು ವಿಜಯಪುರಕ್ಕೆ ಭೇಟಿ ನೀಡಿದಾಗ ಎಲ್ಲರೂ ಅವರನ್ನು ಪ್ರಸಿದ್ಧ ಗೋಳಗುಮ್ಮಟ ನೋಡಲು ಆಹ್ವಾನಿಸುತ್ತಾರೆ. ಆದರೆ ಬಿ.ಎಂ.ಶ್ರೀರವರು ತಾವು ವಚನ ಗುಮ್ಮಟವನ್ನು ಕಟ್ಟಿದ ಫ.ಗು.ಹಳಕಟ್ಟಿಯವರನ್ನು ಮೊದಲು ನೋಡುವುದಾಗಿ ಹೇಳಿ ಫ.ಗು.ಹಳಕಟ್ಟಿಯವರನ್ನು ಭೇಟಿ ಮಾಡಿ ಅವರ ಕಾರ್ಯವನ್ನು ಮೆಚ್ಚಿಕೊಳ್ಳುತ್ತಾರೆ ಎಂದರು.

ಯಾವ ಸಂಘ-ಸಂಸ್ಥೆ, ಮಠ-ಮಾನ್ಯಗಳು, ಸಮಾಜಗಳು ಮಾಡದ ಮಹತ್ಕಾರ್ಯವನ್ನು ಫ.ಗು.ಹಳಕಟ್ಟಿಯವರು ಮಾಡಿದ್ದಾರೆ. ಬಸವ ಜಯಂತಿಗೆ ನೀಡುವಷ್ಟೇ ಪ್ರಾಶಸ್ತ್ಯ ಫ.ಗು.ಹಳಕಟ್ಟಿಯವರ ಜಯಂತಿಗೂ ನೀಡಿ ಇಡೀ ಕರ್ನಾಟಕ ಆಚರಣೆ ಮಾಡಬೇಕು. ತಮ್ಮ ಇಡೀ ಜೀವನವನ್ನು ವಚನಗಳ ಸಂರಕ್ಷಣೆಗಾಗಿ ಫ.ಗು.ಹಳಕಟ್ಟಿಯವರು ಮುಡಿಪಾಗಿಟ್ಟರು ಎಂದು ಹೇಳಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘನ ಸರ್ಕಾರ ಘೋಷಿಸಿದೆ. ಬಸವಣ್ಣನವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಜೂನ್ ೩೦ ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ಬಸವ ಸಂಸ್ಕೃತಿ ಅಭಿಯಾನ ಸೆಪ್ಟಂಬರ್ ೧ ನೇ ತಾರಿಖಿನಿಂದ ಅಕ್ಟೋಬರ್ ೧ನೇ ತಾರೀಖಿನವರೆಗೆ ರಾಜ್ಯದಾದ್ಯಂತ ಆಯೋಜಿಸಲಾಗಿದ್ದು ಚಿತ್ರದುರ್ಗಕ್ಕೆ ಸೆಪ್ಟೆಂಬರ್ ೧೬ ಆಗಮಿಸಿಲಿದ್ದು ಎಲ್ಲ ಸಮಾಜಗಳ ಮುಖಂಡರು ಈ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಲೇಖಕರು, ಪ್ರಕಾಶಕರು ಆದ ಮೈಸೂರಿನ ಗಣೇಶ ಅಮೀನಗಡ ವಿಷಯಾವಲೋಕನ ಮಾಡಿ ಮಾತನಾಡುತ್ತ, ೧೯೫೬ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಫ.ಗು.ಹಳಕಟ್ಟಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡುವಂತಹ ಸಂದರ್ಭದಲ್ಲಿ ಔತಣಕೂಟದಲ್ಲಿ ಅಂದಿನ ಗೃಹಮಂತ್ರಿ ಸದಾಶಿವ ಒಡೆಯರ್ ಫ.ಗು.ಹಳಕಟ್ಟಿಯವರಿಗೆ ಕೋಟ್ ತೆಗೆದು ಭೋಜನ ಮಾಡಲು ಸಲಹೆ ನೀಡಿದಾಗ ಫ.ಗು.ಹಳಕಟ್ಟಿಯವರು ಕೋಟ್ ತೆಗೆಯಲು ನಿರಾಕರಿಸುತ್ತಾರೆ. ಸದಾಶಿವ ಒಡೆಯರ್ ಕಾರಣ ಕೇಳಿದಾಗ ಫ.ಗು.ಹಳಕಟ್ಟಿಯವರು ಹೇಳುತ್ತಾರೆ ತಮ್ಮ ಅಂಗಿ ಹರಿದಿದೆ, ಆ ಕಾರಣ ತಾವು ಕೋಟ್ ತೆಗೆಯಲು ಮುಜುಗರವಾಗುತ್ತೆಂದು ಹೇಳುತ್ತಾರೆ.

ಹೀಗೆ ಫ.ಗು.ಹಳಕಟ್ಟಿಯವರು ತಮ್ಮ ಸರ್ವಸ್ವವನ್ನು ವಚನಗಳ ಉಳಿವಿಗಾಗಿ ಮುಡಿಪಿಟ್ಟಿದ್ದರು. ಅವರು ೧೮೮೦ ಜುಲೈ ೨ರಂದು ಧಾರವಾಡದಲ್ಲಿ ಜನಿಸಿದರು ತಂದೆ ಗುರುಬಸಪ್ಪನವರು ಶಿಕ್ಷಕರು ಸಾಹಿತಿಗಳಾಗಿದ್ದರು. ಅವರ ತಂದೆಯಿAದ ಸಾಹಿತ್ಯದ ಕಡೆ ಪ್ರೇರಣೆ ಪಡೆದರು. ಫ.ಗು.ಹಳಕಟ್ಟಿಯವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ ನಂತರ ಮುಂಬೈನಲ್ಲಿ ತಮ್ಮ ಪದವಿ ಹಾಗೂ ಕಾನೂನು ಶಿಕ್ಷಣವನ್ನು ಮುಗಿಸಿದರು. ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು.

ನಂತರದಲ್ಲಿ ಫ.ಗು.ಹಳಕಟ್ಟಿಯವರು ಬೆಳಗಾವಿಯಲ್ಲಿ ಕೆಲಕಾಲ ವಕೀಲ ವೃತ್ತಿ ನಡೆಸಿದರು. ನಂತರದಲ್ಲಿ ತಮ್ಮ ಮಾವನವರ ಸೂಚನೆಯಂತೆ ವಿಜಯಪುರದಲ್ಲಿ ಸಮಾಜ ಸೇವೆಗೆ ತೊಡಗಿಸಿಕೊಂಡರು. ಅವರಿಗೆ ಸೈಕಲ್ ಸಂಗಾತಿಯಾಗಿತ್ತು. ಅವರದ್ದು ಸರಳ ಜೀವನ. ಬಾಡಿಗೆ ಮನೆಯಲ್ಲಿ ತಮ್ಮ ಜೀವನ ಸವೆಸಿದರು. ವಚನ ಸಾಹಿತ್ಯ ಸಂರಕ್ಷಣೆಯ ಜೊತೆಗೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದರು ಎಂದು ಹೇಳಿದರು.

ವಿಜಯಪುರದಲ್ಲಿ ಬಿಎಲ್‌ಡಿಎ ಶಿಕ್ಷಣ ಸಂಸ್ಥೆ ಸ್ಥಾಪನೆ, ಜನತಾ ಶಿಕ್ಷಣ ಸಂಫ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನಿಡಿದರು. ಸಿದ್ಧೇಶ್ವರ ಸಹಕಾರ ಸಂಘ ಸ್ಥಾಪಿಸಿ ಸಹಕಾರ ಕ್ಷೇತ್ರದ ಕಡೆಗೂ ತಮ್ಮ ಗಮನ ಹರಿಸಿದರು. ಶಿಕ್ಷಣ ವಂಚಿತ ಜಿಲ್ಲೆಯನ್ನು ಅಕ್ಷರವಂತರ ಜಿಲ್ಲೆಯನ್ನಾಗಿ ಮಾಡಿದರು. ತಾವು ನಗರ ಪಾಲಿಕೆಯಲ್ಲಿ ಶಿಕ್ಷಣ ಸಮಿತಿಯಲ್ಲಿದ್ದ ಕಾಲಾವಧಿಯಲ್ಲಿ ಹೆಚ್ಚು ಕನ್ನಡ ಶಾಲೆಗಳನ್ನು ತೆರೆದು ಕನ್ನಡದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದರು. ಆ ಮೂಲಕ ಕನ್ನಡದ ಮಕ್ಕಳು ವಚನಗಳನ್ನು ಓದಲಿ ಎಂಬುದು ಅವರ ಆಶಯವಾಗಿತ್ತು.

ಕೃಷಿಕರಿಗೆ ಒಡ್ಡು ಕಟ್ಟಲು ಸಲಹೆ ನೀಡಿ ಮಳೆ ನೀರು ನಿಲುಗಡೆಯ ಮಹತ್ವ ತಿಳಿಸಿದರು. ಶ್ರೀಮಂತಿಕೆಯ ಜೀವನದ ಕಡೆ ಒಲವು ತೋರದೆ ವಚನಗಳ ಉಳಿವಿಗಾಗಿ ತಮ್ಮ ಬದುಕನ್ನು ಸರ್ಮಪಿಸಿದರು. ಒಮ್ಮೆ ರೈಲಿನಿಂದ ಬಿದ್ದು ತಮ್ಮ ಕಾಲು ಮುರಿದುಕೊಂಡರೂ ಸಹ ಲೆಕ್ಕಿಸದೇ ತಮ್ಮ ಕೆಲಸ ಮುಂದುವರೆಸಿದರು. ಶಿವಾನುಭವ ಎಂಬ ಪತ್ರಿಕೆಯನ್ನು ಸುಮಾರು ೩೦ ವರ್ಷಗಳ ಕಾಲ ನಡೆಸಿ ವಚನಗಳನ್ನು ಪ್ರಕಟಿಸಿದರು. ನವಕರ್ನಾಟಕ ವಾರಪತ್ರಿಕೆ ಸಹ ನಡೆಸಿದರು. ೧೯೧೫ರಲ್ಲಿ ಆಂಗ್ಲಭಾಷೆಗೆ ವಚನಗಳನ್ನು ಭಾಷಾಂತರಿಸಿ ವಿಶ್ವದಾದ್ಯಂತ ವಚನಗಳು ಪಸರಿಸಲು ಕಾರಣರಾದರು.

ಸರಳ ಜೀವನ ನಡೆಸಲು, ಯುವ ಜನತೆ ದುಶ್ಚಟ ಮಕ್ತರಾಗಲು ಪ್ರೆರೇಣೆ ನೀಡಿದರು. ಜಾತಿ-ಭೇದ ನಿಮೂರ್ಲನೆ, ಸ್ತ್ರೀ ಸಮಾನತೆ, ಮೌಢ್ಯಗಳ ನಿವಾರಣೆ ಕುರಿತ ಶರಣರ ವಚನಗಳನ್ನು ಪ್ರಕಟಿಸಿ ವಚನಗಳ ಮಹತ್ವವನ್ನು ಸಮಾಜಕ್ಕೆ ಸಾರಿದರು. ತಮ್ಮ ಪುತ್ರನನ್ನು ಅಪಘಾತದಲ್ಲಿ ಕಳೆದುಕೊಂಡರು ಸಹ ಧೃತಿಗೆಡದೇ ವಚನಗಳ ಸಂಶೋಧನೆಗೆ, ಉಳಿವಿಗೆ, ಪ್ರಕಟಣೆಗಾಗಿ ಅವರು ಬದುಕಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು, ವಿವಿಧ ಸಂಘ-ಸಂಸ್ಥೆ, ಸಮಾಜಗಳ ಮುಖಂಡರುಗಳಾದ ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಅಖಿಲ ಭಾರತೀಯ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಲೇಖಕ ಆನಂದ್ ಕುಮಾರ್, ಶಿವಸಂಪಿ ಸಮಾಜದ ಜಯದೇವ್ ಮೂರ್ತಿ, ಹೇಮರೆಡ್ಡಿ ಸಮಾಜದ ನಾಗರಾಜ, ಜಂಗಮ ಸಮಾಜದ ಷಡಾಕ್ಷರಯ್ಯ, ಅ.ಭಾ.ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಪಿ.ಎನ್.ಸಿದ್ದಪ್ಪ, ಬಂಜಾರ ಸಮಾಜದ ರಾಜಾನಾಯ್ಕ್, ಹೇಮರೆಡ್ಡಿ ಸಮಾಜದ ಶಿವಾನಂದಪ್ಪ, ಕದಳೀ ವೇದಿಕೆಯ ಶ್ರೀಮತಿ ಜಯಲಕ್ಷಿ, ಬಂಜಾರ ಸಮಾಜದ ಡಾ.ಕೆ ಮಂಜುನಾಥ್ ನಾಯ್ಕ್, ಜಾಗತಿಕ ಲಿಂಗಾಯಿತ ಮಹಾಸಭಾದ ಬಸವರಾಜ ಕಟ್ಟಿ, ಮುಸ್ಲಿಂ ಸಮಾಜದ ಸಾದಿಕ್, ಕಮ್ಮಾರ ಸಮಾಜದ ಹನುಮಂತಪ್ಪ, ಪಂಚಮಸಾಲಿ ಸಮಾಜದ ಮಂಜಣ್ಣ, ಕುಂಚಿಟಿಗ ಸಮಾಜದ ಕುಬೇರಪ್ಪ, ನಾಯಕ ಸಮಾಜದ ಸುರೇಶ್ ನಾಯಕ, ಕುಂಬಾರ ಸಮಾಜದ ರ‍್ರಿಸ್ವಾಮಿ, ರಕ್ಷಣಾ ವೇದಿಕೆಯ ಕೋದಂಡರಾಮ, ಸವಿತಾ ಸಮಾಜದ ಶ್ರೀನಿವಾಸ್, ಮಾದಾರ ಸಮಾಜದ ತಿಪ್ಪೇಸ್ವಾಮಿ, ಉಪ್ಪಾರ ಸಮಾಜದ ಮೂರ್ತಿ, ಪುಟ್ಟಸ್ವಾಮಿ, ಸಿದ್ದೇಶ್, ಗೌಳಿ ಸಮಾಜದ ರುದ್ರಪ್ಪ, ಶಿವಸಂಪಿ ಸಮಾಜದ ಮಹಿಳಾ ಘಟಕದ ಶ್ರೀಮತಿ ಗೀತ ಮುರುಗೇಶ್, ಗಾಣಿಗ ಸಮಾಜದ ಅಧ್ಯಕ್ಷೆ ಶ್ರೀಮತಿ ಶೈ¯ಜಾ ಬಾಬು, ಶ್ರೀಮತಿ ಗೀತರುದ್ರೇಶ್, ಶ್ರೀಮತಿ ಶಾಂತಮ್ಮ ಸೇರಿದಂತೆ ಇನ್ನಿತರೆ ಸಮಾಜಗಳ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ-ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು, ನಗರದ ವಿವಿಧ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಎಸ್.ಜೆ.ಎಂ. ದಂತ ಮಹಾವಿದ್ಯಾಲಯದವರು ಕಾರ್ಯಕ್ರಮ ನಡೆಸಿಕೊಟ್ಟರು. ಕಾಯಕ್ರಮದಲ್ಲಿ ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಶ್ರೀಮತಿ ಅನ್ನಪೂರ್ಣ ಲಿಂಗರಾಜ್ ನಿರೂಪಿಸಿದರು. ಶ್ರೀಮತಿ ಮಂಗಳಗೌರಿ ಸ್ವಾಗತಿಸಿದರು. ನವೀನ್ ಮಸ್ಕಲ್ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *