ಹರಪನಹಳ್ಳಿ ತಾಲ್ಲೂಕಿನಲ್ಲಿ ‘ನಮ್ಮ ನಡೆ ಸರ್ವೋದಯದೆಡೆಗೆ’ ಪಾದಯಾತ್ರೆ

ಸಾಣೇಹಳ್ಳಿ

‘ನಮ್ಮ ನಡೆ ಸರ್ವೋದಯದೆಡೆಗೆ’ ಜಾಥಾ ಹರಪನಹಳ್ಳಿ ತಾಲ್ಲೂಕು ಕೆಸರಹಳ್ಳಿಯಲ್ಲಿ ಉದ್ಘಾಟನೆಗೊಂಡು ಬಸವನಾಳ, ಗೌರಿಪುರ, ಬಳಿಗಾನೂರು, ಕೊಟ್ಟೂರು ತಾಲ್ಲೂಕು ಸಂಗಮೇಶ್ವರದವರೆಗೆ ಸರ್ವೋದಯ ಜಾಗೃತ ಜಾಥಾ ನಡೆಯಿತು.

ಬಳಿಗಾನೂರಲ್ಲಿ ನಡೆದ ಜನಜಾಗೃತ ಜಾಥಾದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು, ಇಡೀ ದೇಶ ಕೆಟ್ಟಿದೆ ಎಂದು ಮಾತನಾಡುವುದು ಸುಲಭ. ಆದರೆ ಅದನ್ನು ಸರಿ ಮಾಡುವುದು ಯಾರು? ದೇಶ ಕೆಟ್ಟಿಲ್ಲ. ದೇಶದಲ್ಲಿ ಬದುಕುವಂಥ ನಾವುಗಳು ಕೆಟ್ಟಿದ್ದೇವೆ. ನಾವು ಸರಿಯಾದರೆ ದೇಶ ಸರಿಯಾಗುತ್ತೆ. ಸರಿ ಮಾಡಬೇಕಾಗಿರುವುದು ನಮ್ಮ ಮನೆ, ಮಠ, ಸಮಾಜದಿಂದ.

ಮನೆಯ ಯಜಮಾನ ಹೇಡಿಯಾಗಬಾರದು. ಎಂತಹ ಸಂದರ್ಭ ಬಂದರೂ ಎದುರಿಸುವಂಥ ಗುಣ ಬೆಳೆಸಬೇಕು. ಒಂದು ಮಠದ ಗುರುವಾದವನು ಮೂಢನಾಗಿದ್ದರೆ, ಕೋಪಿಷ್ಠನಾಗಿದ್ದರೆ, ಸ್ವಾರ್ಥಿಯಾಗಿದ್ದರೆ ಸಮಾಜ ಉದ್ಧಾರ ಅಸಾಧ್ಯ. ತಾತ್ವಿಕರು ಈ ನಾಡಿನ ಚುಕ್ಕಾಣಿ ಹಿಡಿಯಬೇಕು. ಮತದಾರ ಸುಧಾರಣೆ ಆದರೆ ನೇತಾರ ಸುಧಾರಣೆ ಆಗುವನು.

ನೇತಾರನ ದುಷ್ಟಗುಣಗಳಿಗೆ ಕಾರಣ ಮತದಾರ. ಮನುಷ್ಯ ಮನಸ್ಸು ಮಾಡಿದರೆ ಎಂತಹ ಕೆಟ್ಟವಾತಾವರಣವನ್ನು ಸರಿಪಡಿಸಬಹುದು. ಅದಕ್ಕೆ ಮನೋಬಲ, ಛಲ ಇರಬೇಕು. ನಮ್ಮ ನಾಡು ಬಸವ, ಬುದ್ಧ, ಗಾಂಧಿಯ ನಾಡಾಗಬೇಕು.

ಜನರಿಗೆ ಹಸಿವು ಇದೆ. ಅದು ಕೇವಲ ಅನ್ನದ ಹಸಿವಲ್ಲ. ಜ್ಞಾನದ ಹಸಿವು, ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಹಸಿವು. ಸರ್ವೋದಯ ನಿಮ್ಮ ಹಸಿವನ್ನು ನೀಗಿಸುವಂಥ ಕೆಲಸ ಮಾಡುತ್ತದೆ. ಮೊದಲು ಅಂದುಕೊಂಡ ಹೆಜ್ಜೆಯನ್ನಿಟ್ಟರೆ ಗುರಿ ಮುಟ್ಟಲು ಸಾಧ್ಯ.

ಪ್ಲಾಸ್ಟಿಕ್ ಬಳಕೆ ಅತಿಯಾಗುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ಮರುಬಳಕೆಯಾಗುವಂತಹ ಪ್ಲಾಸ್ಟಿಕ್‌ನ್ನು ಉಪಯೋಗಿಸಬೇಕು. ನಾವು ಊಟ ಮಾಡುವ ಆಹಾರ ಪದಾರ್ಥಗಳನ್ನು ನಾವು ಬೆಳೆದುಕೊಳ್ಳಬೇಕು. ನಮ್ಮ ಮಕ್ಕಳನ್ನು ಕನಿಷ್ಠ ಏಳನೆಯ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲೇ ಓದಿಸಬೇಕು ಎಂದರು.

ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮಿಗಳು ಮಾತನಾಡಿ; ಜಗತ್ತು ಶಾಂತಿಯನ್ನು ಬಯಸುತ್ತದೆ. ಸಮಾಜ ಎತ್ತ ಕಡೆ ಸಾಗ್ತಾ ಇದೆ ಅನ್ನೋದನ್ನು ಆಲೋಚನೆ ಮಾಡಬೇಕು. ಒಂದು ಕುಟಂಬ ಉದ್ಧಾರ ಆಗುವುದು ಹಾಳಾಗುವುದು ಮಹಿಳೆಯರಿಂದ. ಇಡೀ ಜಗತ್ತನ್ನು ಬದಲಾವಣೆ ಮಾಡುವ ಶಕ್ತಿ ಇರುವುದು ತಾಯಿ ಮತ್ತು ಶಿಕ್ಷಕ. ಇವರಿಬ್ಬರಿಂದ ಇಡೀ ಜಗತ್ತು ಬದಲಾವಣೆ ಮಾಡುವ ಶಕ್ತಿ ಇದೆ. ತಾಯಿಯೇ ದೇವರೆಂದು ಹೆಮ್ಮೆಯಿಂದ ಹೇಳಿ ಬೇರೆ ದೇವರನ್ನು ಪೂಜೆ ಮಾಡುತ್ತಾರೆ.

ನಮ್ಮ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ರಾಜಕೀಯ ಉಳಿಯಬೇಕಾದರೆ ಜನ ಜಾಗೃತರಾಗಬೇಕು. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂಥ ಶಕ್ತಿ ಇರುವುದು ಜನರಿಗೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ನಮ್ಮ ನೈತಿಕತೆಯನ್ನು ಬೆಳೆಸಿಕೊಂಡು ಮತವನ್ನು ಯೋಗ್ಯ ವ್ಯಕ್ತಿಗೆ ಹಾಕಬೇಕು. ನಮ್ಮ ಮತವನ್ನು ದಾನ ಮಾಡಬೇಕು. ಕ್ರಯವಾಗಬಾರದು. ರಾಜಕೀಯ ವ್ಯವಸ್ಥೆ ಸರಿಯಾದರೆ ಎಲ್ಲ ವ್ಯವಸ್ಥೆಗಳು ಸರಿಯಾಗುತ್ತವೆ. ನಮ್ಮ ಭಾಷೆ, ನೆಲ, ಜಲ, ಕೃಷಿಯ ಬಗ್ಗೆ ಜಾಗೃತರಾಗಿ ಸುಧಾರಣೆಯಾಬೇಕು. ಇವತ್ತು ಮಾನವೀಯತೆ ಉಳಿದಿರುವುದು ಹಳ್ಳಿಯಲ್ಲಿ. ನಾವೆಲ್ಲರೂ ಸರ್ವೋದಯದೆಡೆಗೆ ಹೆಜ್ಜೆ ಹಾಕಬೇಕು ಎಂದರು.

ಪ್ರಾಸ್ತಾವಿಕವಾಗಿ ಸರ್ವೋದಯದ ಸಂಘಟಕ ಬಸವಲಿಂಗಪ್ಪನವರು ಮಾತನಾಡಿ, ಹಿಂದೆಲ್ಲಾ ಕೂಡುಕುಟುಂಬಗಳಿದ್ದವು. ಅದರಿಂದ ಆರೋಗ್ಯ, ಪರಿಸರ, ಕೃಷಿ ಉತ್ಕೃಷ್ಟವಾಗಿತ್ತು. ಈಗ ಕೂಡು ಕುಟುಂಬಗಳು ದೂರವಾಗಿದೆ‌, ಸ್ವಾರ್ಥ ಹೆಚ್ಚಾಗಿ ಮನುಷ್ಯ ಹಣದ ಹಿಂದೆ ಓಡುತ್ತಿದ್ದಾನೆ. ಕೂಡುಕುಟುಂಬಗಳಿಂದ ಸಂತೋಷಪಡುತ್ತಿದ್ದರು. ಆಗಿನ ಕಾಲದಲ್ಲಿ ಮನೆಮದ್ದಾಗಿತ್ತು. ಈಗ ಬೀದಿಗೊಂದು ಆಸ್ಪತ್ರೆಗಳು ಹುಟ್ಟಿಕೊಂಡಿವೆ.

ಗಾಂಧೀಜಿಯವರ ಸಪ್ತಪಾತಕಗಳು ಇಂದಿಗೂ ಪ್ರಸ್ತುತವಾಗಿವೆ. ಪ್ಲಾಸ್ಟಿಕ್ ಹಾವಳಿಯಿಂದ ಇಡೀ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಮಾತೃಭಾಷೆಯಲ್ಲಿ ಶಿಕ್ಷಣವಾಗಬೇಕು. ಭ್ರಷ್ಟಾಚಾರ ಹೆಚ್ಚಾಗಿ ರಾಜಕಾರಣಿಗಳ ಆಸ್ತಿ ಬರುಬರುತ್ತಾ ದುಪ್ಪಟ್ಟಾಗುತ್ತಿದೆ. ನೈತಿಕತೆಯ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಳ್ಳಬೇಕು. ನೀತಿ ಪ್ರೀತಿಯನ್ನಿಟ್ಟುಕೊಂಡು ಜೀವನ ಮಾಡಬೇಕು. ನಾನು ನನ್ನಿಂದ ಹೋಗಿ ನಾವು ನಮ್ಮೆಲ್ಲರಿಂದ, ಸರ್ವರಿಂದ ಎನ್ನುವ ಅರಿವು ನಮ್ಮದಾಗಬೇಕು. ಒಡೆದಾಳುವ ನೀತಿ ಬಿಟ್ಟು ಸಹಕಾರ, ಕರುಣೆ, ಪ್ರೀತಿಯನ್ನು ಕಟ್ಟಬೇಕು ಎಂದರು.

ಮುಖ್ಯ ಅತಿಥಿಗಳಾದ ಡಾ. ಗೋಪಾಲ ದಾಗೋಡು ಮಾತನಾಡಿ, ಈ ಜನಜಾಗೃತ ಯಾತ್ರೆ ನನ್ನ ಜೀವನದಲ್ಲಿ ಕಲಿತ ದೊಡ್ಡ ಪಾಠ. ಮಾನವನಿಗೆ ಬರುವ ರೋಗಗಳು ಸಹಜವಾಗಿ ವಾರದಲ್ಲೇ ಗುಣವಾಗುತ್ತವೆ. ಯಾವ ರೈತ ಸಾವಯವ ಕೃಷಿ ಮಾಡ್ತಾನೋ ಅವನು ಆರೋಗ್ಯವನ್ನು ಕಾಪಾಡಿಕೊಳ್ತಾನೆ. ಪರಿಸರ ಹಾಳು ಮಾಡಿ ತಾಪಮಾನ ಹೆಚ್ಚಾಗಿ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಒಂದು ದೇಶವನ್ನು ಹಾಳುಮಾಡಬೇಕಾದರೆ ಶಿಕ್ಷಣವನ್ನು ಕೊಡದೇ ಇದ್ದರೆ ಸಾಕು ಆ ದೇಶ ಕುಲಗೆಟ್ಟು ಹೋಗುತ್ತದೆ.

ಔಷಧಿಯ ಕಂಪನಿಯ ಲಾಭಕ್ಕಾಗಿ ಬಳ್ಳಾರಿ ಜಿಲ್ಲೆಯ ಅನೇಕ ಮಹಿಳೆಯರು ಮರಣ ಹೊಂದಲಿಕ್ಕೆ ಕಾರಣವಾಯಿತು. ಸರಕಾರ ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸಿ ಖಾಸಗಿಯವರ ಕೈಗೆ ಕೊಡುವ ಹುನ್ನಾರ ನಡೆಸುತ್ತಿದೆ. ಸರಕಾರ ನಮ್ಮೆಲ್ಲರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಸುತ್ತಿದೆ ಎಂದರು.

ರುದ್ರಪ್ಪನವರು ಮಾತನಾಡಿ; ಕರ್ನಾಟದಲ್ಲಿ ಸಾವಿರಾರು ಮಠಗಳಿವೆ. ಆದರೆ ಸಮಾಜಮುಖಿಯಾದ ಕಾರ್ಯಗಳನ್ನು ಮಾಡುತ್ತಿರುವವರು ಬೆರಳೆಣಿಕೆಯಷ್ಟಿವೆ. ಅದರಲ್ಲಿ ಪಂಡಿತಾರಾಧ್ಯ ಸ್ವಾಮಿಗಳು ಒಬ್ಬರು. ಸಮಾಜವನ್ನು ಎಚ್ಚರಿಸುವ ಮೂಲಕ ಜನಜಾಗೃತಿ ಮಾಡುತ್ತಿದ್ದಾರೆ. ಯಾರು ಎಷ್ಟೇ ವಿರೋಧಿಸಿದರೂ ತಗ್ಗದೆ ಬಗ್ಗದೆ ಮುನ್ನುಗ್ಗುತ್ತಿದ್ದಾರೆ. ಎಲ್ಲ ಕ್ಷೇತ್ರಗಳು ಕೆಟ್ಟುಹೋಗಿವೆ.

ಇಂತಹ ಕಾರ್ಯ ಸರಿಪಡಿಸುವಂಥ ಕೆಲಸಕ್ಕೆ ಕೈ ಹಾಕಿರುವುದು ನಮ್ಮೆಲ್ಲರಿಗೂ ಒಂದು ಪ್ರೇರಣಾದಾಯಕ ಜಾಗೃತಿ ಜಾಥಾ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಚಿಂತಕ ಎಸ್. ಜಿ. ಸಿದ್ಧರಾಮಯ್ಯ; ಸರ್ವೋದಯದ ಕಲ್ಪನೆಯನ್ನು ಕೊಟ್ಟವರು ಗಾಂಧೀಜಿಯರು. ಅನ್ ಟು ದಿ ಲಾಸ್ಟ್ ಕೃತಿಯಿಂದ ಗಾಂಧೀಜಿಯವರು ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಸರ್ವರ ಏಳ್ಗೆಗಾಗಿ ದುಡಿದರು. ಸರ್ವರ ಉದ್ಧಾರಕ್ಕಾಗಿ ದುಡಿಯದೇ ಹೋದರೆ ಆತ್ಮದ್ರೋಹಿಗಳಾಗುತ್ತೇವೆ ಎಂದು ಸಾರಿದರು. ಸತ್ಯ, ಅಹಿಂಸೆ, ಹೋರಾಟದ ಮುಖೇನ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಂಡರು.

ಅಂಬೇಡ್ಕರರದು ಶಿಕ್ಷಣ ಹೋರಾಟ, ಸಂಘಟನೆಯ ಮೂಲಕ ದಬ್ಬಾಳಿಕೆಯನ್ನು ಹೊಡೆದೋಡಿಸುವ ಕೆಚ್ಚು ಅವರದ್ದಾಗಿತ್ತು. ಗಾಂಧೀಜಿಯವರ ಹಾಗೂ ಅಂಬೇಡ್ಕರರ ಗುರಿ ಒಂದೇ ಆಗಿತ್ತು. ನಮಗೆ ರಾಜಕೀಯವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸಾಂಸ್ಕೃತಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ದಬ್ಬಾಳಿಕೆಗೆ ಗುರಿಯಾಗಿದ್ದೇವೆ. ನಮ್ಮ ಸಂಸ್ಕೃತಿ ಮತ್ತು ನಾಗರೀಕತೆಗಳಿಗೆ ಪಂಚ ವಿಷಯಗಳು ದಿವ್ಯ ಔಷಧಿಯಾಗಿದೆ. ಇವುಗಳಿಗೆ ಒಂದಕ್ಕೊಂದು ಸಂಬಂಧ ಇದೆ.

ಗಾಂಧೀಜಿಯವರಿಗೆ ಸರ್ವರಿಗೂ ಶಿಕ್ಷಣ ಸಿಗಬೇಕೆಂಬ ಸಂಕಲ್ಪ ಇತ್ತು. ಖಾಸಗಿ ಶಿಕ್ಷಣ ಬೆಳೆದ ಹಾಗೆ ಉಚಿತ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಕಣ್ಮರೆಯಾಗಿದೆ. ಕೊರೋನಾ ನಂತರ ಸರಿಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇವತ್ತು ಯಾರಿಗೂ ಆತ್ಮಸಾಕ್ಷಿ ಇಲ್ಲ. ಜನತೆಯ ಸಮಸ್ಯೆಗಳ ಬಗೆಗೆ ಯಾರೂ ಕಿಂಚಿತ್ತೂ ಯೋಚಿಸುವುದಿಲ್ಲ. ಕಳ್ಳ ಹಣ, ದರೋಡೆ ಮಾಡಿದ ರೀತಿಯೊಳಗೆ, ಶಿಕ್ಷಣವನ್ನು ಮಾರಾಟ ಮಾಡಿ ಹಣ ಚೆಲ್ಲಿ ಚುನಾವಣೆ ಮಾಡಿ ಗೆದ್ದು ರಾಜಕೀಯಕ್ಕೆ ಬರುತ್ತಿದ್ದಾರೆ. ರಾಜಕಾರಣಿಗಳನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ.

ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಬೋಧನೆ ಮಾಡುತ್ತಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಕನ್ನಡ ಸಂಪೂರ್ಣ ಕಣ್ಮರೆಯಾಗುತ್ತದೆ. ವಿದೇಶಕ್ಕೆ ಹೋದಾಗ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕಾಗಿ ಶಿಕ್ಷಣದಲ್ಲಿ ಕನ್ನಡ ಕಳೆದು ಹೋಗುತ್ತದೆ. ಕರ್ನಾಟಕದ ಬ್ಯಾಂಕ್‌ಗಳಲ್ಲಿ ಕನ್ನಡದ ವ್ಯವಹಾರವೇ ನಡೆಯದೇ ಇರುವುದು ಒಂದು ದೊಡ್ಡ ದುರಂತ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಶಿಕ್ಷಣದಲ್ಲಿ, ರಾಜಕೀಯದಲ್ಲಿ ಕಳೆದುಕೊಳ್ಳುತ್ತಿದೆ. ರಾಜಕಾರಣ ನೈತಿಕವಾಗಿ ದಿವಾಳಿ ಎದ್ದಿದೆ. ಇದರಿಂದ ಮುಕ್ತವಾಗಬೇಕೆಂದರೆ ಜನರು ನೈತಿಕವಾಗಿ ಎಚ್ಚರವಾಗಬೇಕು.
ಮತದಾನವನ್ನು ಮಾರಾಟ ಮಾಡಿಕೊಂಡರೆ ಜೀನವದುದ್ದಕ್ಕೂ ಗುಲಾಮಿತನದಿಂದ ಬದುಕುತ್ತೇವೆ.

ನಾವು ಮಾಡುವ ಕೃಷಿ ವಿಷಕಾರಿಯಾಗುತ್ತದೆ. ನಾವು ಹಾಕುವ ಗೊಬ್ಬರ ಜೈವೀಕರಣವನ್ನು ಕೊಲ್ಲುತ್ತಿದೆ. ಹಿಂದೆಲ್ಲಾ ರೈತರು ಪರಿಸರಕ್ಕೆ ಅಪಾಯವಾಗದ ರೀತಿಯಲ್ಲಿ ಬೆಳೆಯುತ್ತಿದ್ದರು. ವಾತಾವರಣಕ್ಕೆ ಅನುಗುಣವಾದ ಬೆಳೆಗಳನ್ನು ಬೆಳೆದು ಒಳ್ಳೆಯ ಲಾಭ ಪಡೆದು ನೆಮ್ಮದಿಯ ಬದುಕನ್ನು ನಡೆಸುತ್ತಿದ್ದರು.

ಮಹಿಮಾ ಪಟೇಲ್ ಮಾತನಾಡಿ; ಪ್ರಪಂಚದಾದ್ಯಂತ ಬಹಳಷ್ಟು ಜನ ಎಚ್ಚರಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಮೂರು ಸಾವಿರ ಮಠಗಳಿವೆ. ಸುಮಾರು ಎರಡು ಸಾವಿರ ಸ್ವಾಮಿಗಳನ್ನು ಭೇಟಿ ಮಾಡಿದ್ದೇನೆ. ಇದರಲ್ಲಿ ಸಮಾಜಮುಖಿ ಚಿಂತನೆ ಮಾಡುವಂಥವರು ಅಲ್ಪಜನ. ಸ್ವಾಮಿಗಳು ಸ್ವಾರ್ಥವನ್ನು ಬಿಟ್ಟು ಸಮಾಜದ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ನೈತಿಕತೆ ಹಾಗೂ ಜೀವನ ಮೌಲ್ಯಗಳ ಶಿಕ್ಷಣ ಬರಬೇಕು. ಯಾವುದೇ ಒಂದು ಒಳ್ಳೆಯ ಆಲೋಚನೆ ಒಂದು ಪ್ರದೇಶದಿಂದ ಪ್ರದೇಶಕ್ಕೆ ಪ್ರವಹಿಸುತ್ತದೆ. ನಮ್ಮ ನಡುವೆ ಇರುವ ವ್ಯತ್ಯಾಸ, ಭಿನ್ನಾಪ್ರಾಯವನ್ನು ಬದಿಗಿಟ್ಟು ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ನೋವಿನಲ್ಲಿ, ಚಿಂತನೆಯಲ್ಲಿ ನಮ್ಮ ಬದುಕು ಇರಬಾರದು. ಇಲ್ಲಿ ಸೇರಿರುವ ಸಾಧಕರು ದೇಶವನ್ನು ಕಟ್ಟುವ ಕನಸುಗಳನ್ನು ಕಾಣುವಂಥವರು. ಕನಸಿನಂತೆ ನಮ್ಮ ಬದುಕನ್ನು ನನಸನ್ನಾಗಿ ಮಾಡೋಣ ಎಂದರು.

ಭೂಮಿಮಿತ್ರ ಸಾವಯವ ಕೃಷಿಯ ಮುಖ್ಯಸ್ಥ ಅಳವಂಡಿ ಕೊಟ್ರೇಶ್, ಶಾರದ, ಹನಗವಾಡಿ ರುದ್ರಪ್ಪ ಮಾತನಾಡಿದರು.

ಚಂದ್ರಶೇಖರ ನಾರಾಣಪುರ, ಚಂದ್ರಶೇಖರಪ್ಪ, ಇಕ್ರೋ ಸಂಸ್ಥೆಯ ಮುಖ್ಯಸ್ಥೆ ವಿ. ಗಾಯಿತ್ರಿ ಹಾಗು ಇತರ ಸಾಧಕರು ಶ್ರೀಗಳ ಜೊತೆಗೆ ಜಾಗೃತಿ ಜಾಥಾದಲ್ಲಿ ಹೆಜ್ಜೆ ಹಾಕಿದರು.

ಜಾಥಾದುದ್ದಕ್ಕೂ ಶಿವಸಂಚಾರದ ಕಲಾವಿದರಾದ ನಾಗರಾಜ ಶರಣ ಜಾಗೃತಿ ಗೀತೆ, ಪರಿಸರ ಗೀತೆ ಹಾಗೂ ವಚನ ಗೀತೆಗಳನ್ನು ಹಾಡಿದರು.

ಜನವರಿ 27 ರಿಂದ 30 ರ ವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರಿನವರೆಗೆ ನಡೆದ ‘ನಮ್ಮ ನಡೆ ಸರ್ವೋದಯದೆಡೆಗೆ’ ಜಾಗೃತಿ ಜಾಥಾದಲ್ಲಿ ನಡೆದ ಉಪನ್ಯಾಸಕರ ಉಪನ್ಯಾಸಗಳ ಮಾತುಗಳನ್ನು ಪುಸ್ತಕ ರೂಪದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ‘ನಮ್ಮ ನಡೆ ಸರ್ವೋದಯದೆಡೆಗೆ’ ಎನ್ನುವ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಅದು ಈ ಸಂದರ್ಭದಲ್ಲಿ ಲೋಕರ್ಪಣೆಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *