ಬಸವಣ್ಣನವರ ಸಪ್ತಸೂತ್ರಗಳನ್ನು ಮಕ್ಕಳು ಪಾಲಿಸಲಿ
ಗದಗ:
ಶೇಕಡಾ 30ರಷ್ಟು ಮಕ್ಕಳಿರುವ ಈ ದೇಶದಲ್ಲಿ ಮಕ್ಕಳು ತುಂಬಾ ಅಲಕ್ಷತೆಗೆ ಒಳಗಾಗುತ್ತಿದ್ದಾರೆ. ಪಾಲಕರು ತಮ್ಮೆಲ್ಲ ಆಶೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಿ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಸಮ್ಮೇಳನ ಸರ್ವಾಧ್ಯಕ್ಷೆಯಾದ ಬಾಲ ಸಾಹಿತಿ ಕುಮಾರಿ ಪ್ರಣತಿ ಆರ್. ಗಡಾದ ಅವರು ನುಡಿದರು.
ಬಳಗಾನೂರು ಗ್ರಾಮದ ಚಿಕೇನಕೊಪ್ಪ ಶರಣರ ಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ವತಿಯಿಂದ, ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಭಾಷಣ ಮಾಡಿದರು.

ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರವನ್ನು ನೀಡುವುದರ ಜೊತೆಗೆ ಬಸವಾದಿ ಶರಣರ ವಚನ ಸಾಹಿತ್ಯದ ಪರಿಚಯ ಮಾಡಿಕೊಡಬೇಕು. ವಚನಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿವೆ. ಅದಕ್ಕಾಗಿ ಇಂಥ ಸಮ್ಮೇಳನಗಳು ಮೇಲಿಂದ ಮೇಲೆ ನಡೆಯುವುದು ತುಂಬಾ ಅವಶ್ಯಕತೆಯಿದೆ ಎಂದು ಹೇಳಿದರು.
ಸಮ್ಮೇಳನದ ಅಂಗವಾಗಿ ಮಠದ ಪ್ರಾಂಗಣದಲ್ಲಿ ಮುಂಜಾನೆ 9 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣದ ನಂತರ ಸಮ್ಮೇಳನವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಉದ್ಘಾಟಿಸಿ ಮಾತನಾಡಿದರು.

ಅವರು ಮಾತನಾಡುತ್ತ, ‘ಬಸವಣ್ಣನವರು ಮನುಕುಲಕ್ಕೆ ನೀಡಿದ ಸಪ್ತಸೂತ್ರಗಳು ನಮ್ಮ ನೈತಿಕ ಸಂವಿಧಾನವಾಗಿದೆ. ಈ ಸೂತ್ರಗಳನ್ನು ಇಂದಿನ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಂಡರೆ ಬರಲಿರುವ ದಿನಮಾನಗಳಲ್ಲಿ ಸಮೃದ್ಧ ಸಮಾಜವನ್ನು ಕಟ್ಟಬಹುದು’.
‘ಶರಣರ ವಚನಗಳಲ್ಲಿ ನಾವು ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ’. ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ದಿನಕ್ಕೆ ಒಂದಾದರೂ ವಚನವನ್ನು ಓದಿ ಅರ್ಥೈಸಿಕೊಳ್ಳುವ ರೂಢಿಯನ್ನು ಮಾಡಿಸುವ ಅಗತ್ಯವಿದೆಯೆಂದು ಹೇಳಿದರು.

ಅಧ್ಯಕ್ಷತೆಯನ್ನು ಶರಣ ಚಿಂತಕರು ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಅವರು ವಹಿಸಿ ‘ಶೈಕ್ಷಣಿಕ ಮೌಲ್ಯಗಳನ್ನು ಹೊಂದಿರುವ ಶರಣ ಸಾಹಿತ್ಯದ ರುಚಿಯನ್ನು ಮನೆಯಲ್ಲಿರುವ ಹಿರಿಯರು, ಶಾಲೆಯಲ್ಲಿರುವ ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡಬೇಕು’.
‘ನಾವು ಇಂದಿನ ಮಕ್ಕಳಿಗೆ ಏನನ್ನು ಬಿತ್ತುತ್ತೇವೆಯೋ, ಮುಂದಿನ ದಿನಮಾನಗಳಲ್ಲಿ ಅದನ್ನೇ ಕಾಣುತ್ತೇವೆ’. ‘ಮಕ್ಕಳ ಜೊತೆ ವರ್ತಿಸುವಾಗ ನಮ್ಮ ನಡೆ ನುಡಿ, ಆಚಾರ ವಿಚಾರ ತುಂಬಾ ಪರಿಶುದ್ಧವಾಗಿರಬೇಕು’ ಎಂದು ಮಾತನಾಡಿದರು.
ವೇದಿಕೆ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸೋಮಶೇಖರ ಗಾಂಜಿ, ವಿಶ್ರಾಂತ ಉಪನಿರ್ದೇಶಕರಾದ ಎ.ಎನ್. ನಾಗರಹಳ್ಳಿ, ಎ.ಓ. ಪಾಟೀಲ, ಎಸ್.ಡಿ. ಗಾಂಜಿ, ಬಸವರಾಜ ಕೊಟಗಿ, ಕೆ.ಎಸ್. ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗೇರ ರಚಿಸಿದ ಪ್ರತಿಭಾ ಧ್ವನಿ ಎಂಬ ಪುಟ್ಟ ಗ್ರಂಥವನ್ನು ಬಾಲಸಾಹಿತಿ ಸಾಕ್ಷಿ ದೇವರೆಡ್ಡಿ ಬಿಡುಗಡೆಗೊಳಿಸಿ ಮಾತನಾಡಿದರು.

‘ಬಾಲ ಶರಣಸಿರಿ’ ಪುರಸ್ಕಾರವನ್ನು ಡಾ. ವೈಧೃತಿ ನಾ.ಕೋರಿಶೆಟ್ಟರ, ಪುನೀತರೆಡ್ಡಿ ಎನ್.ಎ, ಸಿದ್ದಾರ್ಥ ಮು. ಬಡ್ನಿ ಅಪೂರ್ವ ಅ. ವಡ್ಡರ, ರಕ್ಷಿತಾ ಅಂ. ಚುರ್ಚಿಹಾಳ, ಥಲಕೇಶ ಮ. ಪಾಟೀಲ, ಕೃಷ್ಣಪ್ರಿಯ ಅ. ಬದಿ, ಪೂರ್ವಿ ಮಾ. ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು.

ಬೈರನಹಟ್ಟಿ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು, ಬಳಗಾನೂರು ಸುಕ್ಷೇತ್ರದ ಪೂಜ್ಯ ಶಿವಶಾಂತವೀರ ಶರಣರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆ.ಎ. ಬಳಿಗೇರ ಸ್ವಾಗತವನ್ನು, ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕ ನುಡಿಗಳನ್ನು, ಕುಮಾರಿ ನಯನಾ ಅಳವಂಡಿ ವಚನ ಪ್ರಾರ್ಥನೆಯನ್ನು, ಮುಂಡರಗಿ ಚೈತನ್ಯ ಡಾನ್ಸ್ ಅಕಾಡೆಮಿ ಹಾಗೂ ನರೇಗಲ್ಲದ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ವಚನ ನೃತ್ಯ ಕಾರ್ಯಕ್ರಮ ನೆರವೇರಿತು.
ಪ್ರಕಾಶ ಬರದೂರ, ಕಳಕಯ್ಯ ಸಾಲಿಮಠ ಕಾರ್ಯಕ್ರಮವನ್ನು ನಿರೂಪಿಸಿದರು. ನೂರಾರು ಮಕ್ಕಳು, ಪಾಲಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
