ಹಾವೇರಿ
ನಗರದ ಹುಕ್ಕೇರಿಮಠದ ಅಂಗಳದಲ್ಲಿ ಚಟ ಹೋಮ ನೆರವೇರಿಸುವ ಮೂಲಕ ಸದಾಶಿವ ಸ್ವಾಮೀಜಿ ಜೋಳಿಗೆಯಲ್ಲಿ ಸಂಗ್ರಹವಾಗಿದ್ದ ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಸಾರಾಯಿ ಪಾಕೀಟುಗಳನ್ನು ದಹಿಸಲಾಯಿತು.
ಈ ವೇಳೆ ಮಾತನಾಡಿದ ಸದಾಶಿವ ಸ್ವಾಮೀಜಿ, ಕಲ್ಯಾಣ ರಾಜ್ಯ ನಿರ್ಮಾಣದ ಸಣ್ಣ ಪ್ರಯತ್ನವೇ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ. ವ್ಯಸನಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ತಾಲೂಕಿನ ೭೦ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಹಾವೇರಿ ನಗರದಲ್ಲಿ ಪಾದಯಾತ್ರೆ ಮೂಲಕ ಸಂಚರಿಸುವ ವೇಳೆ ಜೋಳಿಗೆಯಲ್ಲಿ ಚಟಗಳ ಪಾಕೀಟುಗಳು ಸಂಗ್ರಹವಾಗಿದ್ದವು.
ಪಾದಯಾತ್ರೆ ಸಂದರ್ಭದಲ್ಲಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೋಳಿಗೆಯಲ್ಲಿದ್ದ ಚಟಗಳ ಪಾಕೀಟುಗಳನ್ನು ಹೋಮ ಮಾಡುವ ಮೂಲಕ ಸುಡಲಾಯಿತು. ಒಂದು ಬತ್ತಿ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವಂತೆ ಚಟ ಬಿಟ್ಟವರ ಚೀಟುಗಳು ಸುಟ್ಟು ಜನರು ತಮ್ಮ ಮನೆಗಳಿಗೆ ಬೆಳಕಾಗಬೇಕು ಎಂಬುದೇ ನಮ್ಮ ಸಂಕಲ್ಪ, ಅದು ಈಡೇರಿದೆ ಎಂದರು.

ಚಟ ಹೋಮದ ವಿಧಿ ವಿಧಾನ ನೆರವೇರಿಸಿದ ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ನಮ್ಮ ನಾಡಿನಲ್ಲಿ ಯುವಕರು ಚಟ ಬಿಟ್ಟು ಆರೋಗ್ಯವಂತರಾಗಬೇಕು. ದುಶ್ಚಟಗಳಿಗೆ ಅಂಟಿಕೊಂಡು ಅಪರಾಧ ಕೃತ್ಯ ಮಾಡುತ್ತಿರುವರು. ವ್ಯಸನಗಳಿಂದ ವಿಚಲಿತರಾಗಿ ಮನಸ್ಸುಗಳು ಕದಡುತ್ತಿವೆ. ಇಂಥ ಸಂದರ್ಭದಲ್ಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಿರುವ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರ ಜೋಳಿಗೆಯಲ್ಲಿ ದುಶ್ಚಟಗಳ ಪಾಕೀಟುಗಳಿದ್ದವು. ಅವುಗಳನ್ನು ಸುಡುವ ಮೂಲಕ ಚಟ ಹೋಮ ನೆರವೇರಿಸಲಾಗಿದೆ. ಜನರು ಇನ್ಮುಂದೆ ಚಟ ಬಿಟ್ಟು ಸದ್ಗುಣ ಅಳವಡಿಸಿಕೊಳ್ಳಲಿ ಎಂದರು.
ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಉದ್ಯಮಿ ಪಿ.ಡಿ. ಶಿರೂರ ಇದ್ದರು.
