ಸೇಡಂ:
ಸಮುದಾಯದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಇರುವುದರ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಜೀವನದಲ್ಲಿ ಉನ್ನತ ಸ್ಥಾನಗಳಿಸಲು ಶ್ರಮಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬಸವಾದಿ ಶರಣ ಮಾದಾರ ಚನ್ನಯ್ಯ ಜಯಂತ್ಯುತ್ಸವ ಸಮಿತಿಯ ವತಿಯಿಂದ ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಾದಾರ ಚನ್ನಯ್ಯ ಪುತ್ಥಳಿ ಅನಾವರಣ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾದಾರ ಚನ್ನಯ್ಯನವರು ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ವಚನಕಾರರು, ಹೀಗಾಗಿ ಅವರು ನಡೆದಂತಹ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಮಾದಿಗ ಮಹಾಸಭಾವನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರು ಮಹಾಸಭಾದ ಸದಸ್ಯರಾಗಿ ಸಮುದಾಯದ ಏಳಿಗೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವ ತಿಮ್ಮಾಪೂರ ಅವರು, ಮಾದಾರ ಚನ್ನಯ್ಯ ಅವರು ಸಮಾಜದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತ ವರ್ಗಗಳ ಉದ್ಧಾರಕ್ಕಾಗಿ ನಡೆಸಿದ ಹೋರಾಟದ ಪ್ರತೀಕವಾಗಿದ್ದಾರೆ. ಅವರ ಮೂರ್ತಿ ಸ್ಥಾಪನೆಯು ಹೊಸ ಪೀಳಿಗೆಗೆ ಪ್ರೇರಣೆಯಾಗಲಿದೆ. ಸರ್ಕಾರದಿಂದ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಮಾದಾರ ಚನ್ನಯ್ಯನವರು ಕೇವಲ ಮಾದಿಗ ಸಮುದಾಯಕ್ಕೆ ಸೀಮಿತವಲ್ಲದೆ, ಇಡೀ ಮನುಕುಲದ ತಿಲಕವಾಗಿದ್ದಾರೆ ಎಂದ ಅವರು, ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ರಾಜಕುಮಾರ ಪಾಟೀಲ ಸಹ ಮಾತನಾಡಿದರು.
ಶ್ರೀ ಶಿವಶಂಕರಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಪೂಜ್ಯ ಹವಾ ಮಲ್ಲಿನಾಥ ಮಹಾರಾಜ, ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸಂಸ್ಥಾನ ಮಠದ ಡಾ. ಬಸವಮೂರ್ತಿ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿ, ಪೂಜ್ಯ ಬಸವ ಹರಳಯ್ಯಾ ಸ್ವಾಮಿ, ಮಳಖೇಡ ದರ್ಗಾದ ಶ್ರೀ ಹಜರತ್ ಸೈಯದ ಶಹಾ ಮುಸ್ತಾಫಾ ಖಾದ್ರಿ ಸಾನಿಧ್ಯ ವಹಿಸಿದ್ದರು.

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ವಿಜಯಕುಮಾರ ರಾಮಕೃಷ್ಣ, ವಿಜಯಲಕ್ಷ್ಮಿ ದೇಶಮಾನೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಪಂಚ ಗ್ಯಾರಂಟಿಗಳ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಬಿಜೆಪಿ ಮುಖಂಡ ಸಂತೋಷ ಪಾಟೀಲ ತೆಲ್ಕೂರ, ಶಿವಕುಮಾರ ಪಾಟೀಲ ತೆಲ್ಕೂರ,
ಸಮುದಾಯದ ಹಾಗೂ ಜಯಂತ್ಯೋತ್ಸವ ಸಮಿತಿಯ ಸದಸ್ಯರಾದ ಬಸವರಾಜ ಕಾಳಗಿ, ಶಂಭುಲಿಂಗ ನಾಟೀಕಾರ, ಮಾರುತಿ ಕೊಡಂಗಲಕರ್, ವಿಜಯಕುಮಾರ ಆಡಕಿ, ಜಗನ್ನಾಥ ಚಿಂತಪಳ್ಳಿ, ಮಾರುತಿ ಮುಗುಟಿ, ರಾಮು ಕಣೇಕಲ್, ಸಂತೋಷ ಇಂಜಳ್ಳಿ, ನಾಗರಾಜ ನಂದೂರ್, ಜಗು ಬಿಜನಳ್ಳಿ ಜಗದೀಶ, ರಾಮ ನಾಟೀಕರ್, ರಾಜು ಕಾಳಗಿ, ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ನೂರಾರು ತಮಟೆಗಳ ಮೂಲಕ ಮಾದಾರ ಚನ್ನಯ್ಯನವರ ಮೂರ್ತಿಯ ಭವ್ಯ ಮೆರವಣಿಗೆ ಘೋಷಣೆಗಳೊಂದಿಗೆ ನಡೆಸಲಾಯಿತು.
