ಜಯದೇವ ದಿಗ್ವಿಜಯ: ಜಗದ್ಗುರುಗಳ ಘನ ವ್ಯಕ್ತಿತ್ವದ ಸ್ಮರಣೆ

ಬೆಳಗಾವಿ

ಪೂಜ್ಯ ಶ್ರೀ ಜಯದೇವ ಜಗದ್ಗುರುಗಳು ಒಂದು ಲೋಕವಿಸ್ಮಯ. ಈ ನಾಡನ್ನು ಉದ್ಧರಿಸಬೇಕೆಂದು ಕೊಡಗಿನಿಂದ ಕೊಲ್ಲಾಪುರದವರೆಗೆ ಉಚಿತ ಪ್ರಸಾದ ನಿಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷ ಲಕ್ಷ ಬಡ ಮಕ್ಕಳ ಬಾಳಿನಲ್ಲಿ ಬೆಳಕು ತುಂಬಿದವರು. ಅಂತೆಯೆ ಅವರ ಬದುಕು ನಮಗೆ ಬೆಳಕು!

ಒಬ್ಬ ವ್ಯಕ್ತಿ ಜನಿಸಿ ನೂರೈವತ್ತು ವರ್ಷಗಳ ನಂತರವೂ ಜನಮಾನಸದ ಹೃದಯ ಸಿಂಹಾಸನದಲ್ಲಿ ಇಂದಿಗೂ ವಿರಾಜಮಾನವಾಗಿರುವಂತಹ ಜಯದೇವ ಜಗದ್ಗುರುಗಳ ಘನ ವ್ಯಕ್ತಿತ್ವ ನಿಜಕ್ಕೂ ಅನೂಹ್ಯವಾದುದು.

ಜಯದೇವ ಜಗದ್ಗುರುಗಳು ಜನಿಸಿ ಈ ವರ್ಷಕ್ಕೆ ನೂರೈವತ್ತು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಅವರ ದಿವ್ಯಸ್ಮೃತಿಯನ್ನು ಮತ್ತೆ ಸ್ಮರಿಸಿಕೊಳ್ಳುವಂತಹ ಒಂದು ಅಮೂಲ್ಯ ಬೃಹತ್ ಸಂಪುಟವೊಂದನ್ನು ಕೇವಲ ಒಂದು ತಿಂಗಳ ಕಾಲಾವಧಿಯಲ್ಲಿ ಪ್ರಕಟಿಸಿದ್ದು ಒಂದು ಸಾಹಸವೆಂದೇ ಹೇಳಬೇಕು. ಕನ್ನಡ ಮುದ್ರಣಲೋಕದಲ್ಲಿ ಗೌರಿಶಂಕರಷ್ಟು ಸಾಧನೆ ಮಾಡಿದ ಸ್ವ್ಯಾನ್ ಮುದ್ರಣಾಲಯದ ಮಾಲೀಕರಾದ ಶ್ರೀ ಕೃಷ್ಣಮೂರ್ತಿ ಅವರು ರಾತ್ರಿಯನ್ನೇ ಹಗಲು ಮಾಡಿಕೊಂಡು ದುಡಿದ ಪರಿಣಾಮವಾಗಿ ಮಹತ್ತಾದ ಮಹಾಕೃತಿಯೊಂದು ಕನ್ನಡ ಸಾರಸ್ವತ ಲೋಕಕ್ಕೆ ದೊರೆಯುವಂತಾದುದು ಸುಯೋಗವೆಂದೇ ಹೇಳಬೇಕು.

ಜಯದೇವ ಹಿನ್ನೋಟ, ಜಯದೇವ ಪ್ರಕಾಶ, ಜಯದೇವ ಚಿಂತನ, ಜಯದೇವ ಜಂಗಮ, ಜಯದೇವ ದರ್ಶನ, ಜಯದೇವ ಅನ್ವೇಷಣ, ಜಯದೇವ ವಿಚಾರಸಾರ, ಜಯದೇವ ಮಂಥನ, ಜಯದೇವ ಸಿರಿ, ಜಯದೇವ ಜಂಗಮ ಎಂಬ ಒಟ್ಟು ಹತ್ತು ಭಾಗದಲ್ಲಿ ಹಲವಾರು ಕೃತಿಗಳು, ನೂರಾರು ಲೇಖನಗಳನ್ನು, ಅಪರೂಪದ ಚಿತ್ರಗಳನ್ನು, ಮಹತ್ವದ ದಾಖಲೆಗಳನ್ನು ಅಳವಡಿಸಲಾಗಿದೆ.

ಜಯದೇವ ಹಿನ್ನೋಟ ಭಾಗದಲ್ಲಿ ಜಯದೇವ ಶ್ರೀಗಳನ್ನು ಕುರಿತು ಈ ವರೆಗೆ ಪ್ರಕಟವಾದ ಮಹತ್ವದ ಗ್ರಂಥಗಳನ್ನು ಸಮಗ್ರವಾಗಿ ಪ್ರಕಟಿಸಲಾಗಿದೆ. ಮುಖ್ಯವಾಗಿ ೧೯೪೦ರಲ್ಲಿ ಅಂದರೆ ಜಯದೇವ ಶ್ರೀಗಳು ಇನ್ನೂ ಬದುಕಿದ್ದಾಗಲೇ ಮುಳಗುಂದದ ಜಿ.ಎಚ್.ಹೊಸೂರ ಅವರು ಬರೆದ ‘ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘರಾಜೇಂದ್ರ ವಿಜಯ’ ಎಂಬ ಗ್ರಂಥ ಜಗದ್ಗುರುಗಳ ಕುರಿತು ಒಂದು ಅಧಿಕೃತ ಮಾಹಿತಿಯನ್ನು ನೀಡುವ ಮಹತ್ವದ ಕೃತಿಯಾಗಿದೆ.

೧೯೫೯ರಲ್ಲಿ ಸರ್ವದರ್ಶನ ತೀರ್ಥ ವೈ. ನಾಗೇಶಶಾಸ್ತ್ರಿಗಳು ೧೯೫೯ರಲ್ಲಿ ರಚಿಸಿದ ಶ್ರೀ ಜಯದೇವ ಲೀಲೆ ಕೃತಿಯು ಷಟ್ಪದಿ ಮಹಾಕಾವ್ಯವಾಗಿದೆ. ಜಗದ್ಗುರುಗಳ ಜೀವನದ ಯಶೋಗಾಥೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಾವ್ಯಮಾಧ್ಯಮದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಾಗೇಶ ಶಾಸ್ತ್ರಿಗಳು ಮಾಡಿದ್ದಾರೆ. ಪ್ರತಿಯೊಂದು ಷಟ್ಪದಿಯೂ ಓದುಗರಲ್ಲಿ ಮತ್ತೆ ಮತ್ತೆ ಕುತೂಹಲವನ್ನುಂಟು ಮಾಡುವ ಸಾಮರ್ಥ್ಯವಿರುವುದರಿಂದ ಇದೊಂದು ಆಧುನಿಕ ಮಹಾಕಾವ್ಯವೆಂದೇ ಹೇಳಬೇಕು.

ಜಯದೇವ ಜಗದ್ಗುರುಗಳು ಲಿಂಗೈಕ್ಯರಾಗಿ ಹತ್ತು ವರ್ಷಗಳ ತರುವಾಯ ಅವರನ್ನು ತುಂಬ ಹತ್ತಿರದಿಂದ ಕಂಡಿದ್ದ ಕಣ್ಣಕುಪ್ಪೆ ಕೊಟ್ಟೂರು ಬಸಪ್ಪ ಅವರು ಬರೆದ ‘ಶ್ರೀ ಜಗದ್ಗುರು ಜಯದೇವ ದಿಗ್ವಿಜಯ’ ಕೃತಿ ಗಮನ ಸೆಳೆಯುತ್ತದೆ. ಆ ಕಾಲದಲ್ಲಿ ಕೊಟ್ಟೂರು ಬಸಪ್ಪನವರು ಇಂಗ್ಲೆಂಡಿಗೆ ಹೋಗಿ ಪದವಿ ಪಡೆದು ಬಂದವರಾಗಿದ್ದರು. ಜಗದ್ಗುರುಗಳನ್ನು ತುಂಬ ಹತ್ತಿರದಿಂದ ಕಂಡು, ಅವರಿಂದ ಮಾಹಿತಿ ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ್ದಾರೆ. ಆನಂದಗಿರಿ ಬರೆದ ಶಂಕರ ದಿಗ್ವಿಜಯ ಮಾದರಿಯಲ್ಲಿ ಲಿಂಗಾಯತರ ಪಾಲಿಗೆ ಜ್ಞಾನಸೂರ್ಯರೆನಿಸಿದ ಜಯದೇವ ಶ್ರೀಗಳ ದಿಗ್ವಿಜಯ ಕಥನವನ್ನು ಇಲ್ಲಿ ನಿರೂಪಿಸಲಾಗಿದೆ.

ಈ ಕೃತಿಗೆ ರಾಷ್ಟ್ರನಾಯಕ ನಿಜಲಿಂಗಪ್ಪನವರು ಮುನ್ನುಡಿ ಬರೆದಿರುವುದು ಇನ್ನೂ ವಿಶೇಷವಾಗಿದೆ. ಆದರೆ ನಿಜಲಿಂಗಪ್ಪನವರು ತಮ್ಮ ಮುನ್ನುಡಿಯಲ್ಲಿ ‘ಆದರೆ ಇದರಲ್ಲಿ ಕೆಲವು ವಾದಗ್ರಸ್ತ ಸಂಗತಿಗಳಿವೆ. ವಿಷಯ ಪ್ರತಿಪಾದನೆಯಲ್ಲಿ ಕೆಲವು ಹೇಳತಕ್ಕ ತಿಳಿಸತಕ್ಕ ರೀತಿ ಸ್ವಲ್ಪ ವ್ಯತ್ಯಾಸ ಮಾಡಿದ್ದರೆ ಇನ್ನೂ ಚೆನ್ನಾಗಿತ್ತು. ಈ ಲೇಖಕರು ನನ್ನದೇ ಸರಿ ಎಂಬ ಹಟವಾದಿತನದ ಮನೋಭಾವವುಳ್ಳವರಾಗಿಲ್ಲವೆಂಬುದು ಈ ಗ್ರಂಥದಲ್ಲಿ ವ್ಯಕ್ತಪಡುತ್ತದೆ. ಇದು ಉದಾರಗುಣವನ್ನು ತೋರಿಸುತ್ತದೆ. ಮುಂದಿನ ಮುದ್ರಣದಲ್ಲಿ ಇವುಗಳನ್ನು ಸರಿಪಡಿಸಿಯಾರೆಂಬ ನಂಬಿಕೆ ನನಗಿದೆ.

ಈ ಗ್ರಂಥದಲ್ಲಿ ಅನೇಕ ಕಡೆ ಲೇಖನ ಚಿಹ್ನೆ, ಅಕ್ಷರ ಸಂಯೋಜನೆ, ವ್ಯಾಕರಣ, ಸಾಹಿತ್ಯ ಇವುಗಳ ಸಂಬಂಧ ದೋಷಗಳು ಕಂಡು ಬರುತ್ತವೆ’ ಎಂದು ಬರೆದಿದ್ದು ಗಮನಾರ್ಹವಾದುದು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ನಿಜಲಿಂಗಪ್ಪನವರು ಈ ಗ್ರಂಥವನ್ನು ಆದ್ಯಂತವಾಗಿ ಓದಿ, ಈ ಕೃತಿಯ ಗುಣದೋಷಗಳನ್ನು ಮುಕ್ತಮನದಿಂದ ಬರೆದಿರುವುದು ಅವರ ಅಪೂರ್ವ ವಿಚಕ್ಷಣತೆಗೆ ಸಾಕ್ಷಿಯಾಗಿದೆ. ನಿಜಲಿಂಗಪ್ಪನವರು ಹೇಳಿದಂತೆ, ಕೆಲವು ವಿಷಯಗಳು ವಾದಗ್ರಸ್ತವಾಗಿರುವುದರಿಂದಲೇ ಈ ಕೃತಿ ಉತ್ತರ ಕರ್ನಾಟಕದಲ್ಲಿ ಯಾರ ಕೈಗೂ ಲಭ್ಯವಾಗಿರಲಿಲ್ಲ. ಅದರಲ್ಲೂ ಚುನಾವಣೆ ವಿಷಯವಾಗಿ ಲೇಖಕರು ಬರೆದ ಭಾಷೆಯ ಬಗ್ಗೆ ಉತ್ತರ ಕರ್ನಾಟಕದಲ್ಲಿ ತಕರಾರು ಇದ್ದ ಕಾರಣಕ್ಕೆ, ಆ ಕಾಲದಲ್ಲಿ ತುಂಗಭದ್ರಾ ನದಿ ದಾಟಿ ಈ ಕೃತಿ ಬರಲಿಲ್ಲ ಎನ್ನುವುದು ಗಮನಿಸುವ ಅಂಶ. ಕೊಟ್ಟೂರು ಬಸಪ್ಪನವರು ಜಗದ್ಗುರುಗಳನ್ನು ತುಂಬ ಹತ್ತಿರದಿಂದ ಕಂಡು, ಅವರಿಂದ ಮಾಹಿತಿಗಳನ್ನು ಸಂಗ್ರಹಿಸಿ ಈ ಕೃತಿ ರಚಿಸಿರುವುದರಿಂದ ಈ ಕೃತಿಗೂ ಅದರದೇ ಒಂದು ಮಹತ್ವವೂ ಇದೆ. ಇಲ್ಲಿಯವರೆಗೆ ಅಲಭ್ಯವಾಗಿದ್ದ ಈ ಕೃತಿಯನ್ನು ಇಲ್ಲಿ ಸಮಗ್ರವಾಗಿ ಪ್ರಕಟಿಸಲಾಗಿದೆ.

ಜಯದೇವ ಪ್ರಕಾಶ ಭಾಗದಲ್ಲಿ ಬಿ. ಶಿವಮೂರ್ತಿ ಶಾಸ್ತ್ರಿಗಳು ೧೯೪೯ರಲ್ಲಿ ಪ್ರಕಟಿಸಿದ ಸ್ವತಂತ್ರ ಕರ್ನಾಟಕ ಪತ್ರಿಕೆಯ ವಿಶೇಷಾಂಕ ಮತ್ತು ದಾವಣಗೆರೆಯ ಶಾಮರಾವ್ ಅವರು ಪ್ರಕಟಿಸಿದ ಸಂಜಯ ವಿಶೇಷಾಂಕ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ವಿಷಯಗಳನ್ನು ಪ್ರಕಟಿಸಲಾಗಿದೆ.

ಜಯದೇವ ಚಿಂತನ ಭಾಗದಲ್ಲಿ ೧೯೭೫ರಲ್ಲಿ ಜಯದೇವ ಜಗದ್ಗುರುಗಳ ಶತಮಾನೋತ್ಸವ ಸಂದರ್ಭದಲ್ಲಿ ಜಿ. ಎಸ್. ಸಿದ್ಧಲಿಂಗಯ್ಯನವರ ಸಂಪಾದಕತ್ವದಲ್ಲಿ ಪ್ರಕಟಿಸಿದ ‘ಜಂಗಮಜ್ಯೋತಿ’ ಎಂಬ ಮಹತ್ವದ ಆಕರ ಸಂಪುಟದಲ್ಲಿ ಜಯದೇವ ಶ್ರೀಗಳ ಕುರಿತಾಗಿ ಪ್ರಕಟವಾದ ಲೇಖನ-ಕವನಗಳನ್ನು ಪ್ರಕಟಿಸಲಾಗಿದೆ. ೧೯೭೬ರಲ್ಲಿ ಧಾರವಾಡ ಮುರುಘಾಮಠದಿಂದ ಎಂ. ಎಸ್. ಸುಂಕಾಪುರ ಅವರು ಸಂಪಾದಿಸಿದ ಜಗಜ್ಯೋತಿ ಎಂಬ ಸ್ಮರಣ ಸಂಚಿಕೆಯಲ್ಲಿಯ ಎರಡು ಮಹತ್ವದ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ೨೦೦೪ರಲ್ಲಿ ಎಸ್. ವಿದ್ಯಾಶಂಕರ ಅವರು ತಮ್ಮ ಸ್ವಪ್ನಲೋಕ ಪತ್ರಿಕೆಯಲ್ಲಿ ಜಯದೇವ ಶ್ರೀಗಳ ಶೂನ್ಯಪೀಠಾರೋಹಣ ಸವಿನೆಪಿಗಾಗಿ ಪ್ರಕಟಿಸಿದ ಎರಡು ಮಹತ್ವದ ಲೇಖನಗಳೂ ಇಲ್ಲಿವೆ.

ಜಯದೇವ ದರ್ಶನ ಎಂಬ ಭಾಗದಲ್ಲಿ ಜಿ.ಎನ್.ಮಲ್ಲಿಕಾರ್ಜುನಪ್ಪ ಅವರು ಬರೆದ ‘ಜಯದೇವ ಸಿರಿ ಬೆಳಗು’ ಎಂಬ ನಾಟಕವನ್ನೂ ಇಲ್ಲಿ ಅಳವಡಿಸಿಲಾಗಿದೆ. ಒಟ್ಟಾರೆ ಜಯದೇವ ಶ್ರೀಗಳ ಕುರಿತು ಪ್ರಕಟವಾದ ಪುಸ್ತಕ, ಕಾವ್ಯ, ನಾಟಕ, ವಿಶೇಷಾಂಕಗಳನ್ನು ಒಂದೆಡೆ ದಾಖಲಿಸಿರುವುದು ಅತ್ಯಂತ ಔಚಿತ್ಯಪೂರ್ಣವಾದುದು.

ಜಯದೇವ ಅನ್ವೇಷಣ ಭಾಗದಲ್ಲಿ ಜಯದೇವ ಶ್ರೀಗಳನ್ನು ಕುರಿತು ೧೯೨೦ರಿಂದ ಇಲ್ಲಿಯವರೆಗೆ ಹಳೆಯ ಪುಸ್ತಕಗಳಲ್ಲಿ ಪ್ರಕಟವಾದ ಅಪರೂಪದ ಲೇಖನಗಳನ್ನು ಸಂಗ್ರಹಿಸಿಕೊಡಲಾಗಿದೆ. ಕೆಲವು ಮರಾಠಿ-ಇಂಗ್ಲಿಷ ಭಾಷೆಯಲ್ಲಿದ್ದ ಮಹತ್ವಪೂರ್ಣ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ. ಒಟ್ಟು ೨೨ ಲೇಖನಗಳು ಈ ಭಾಗದಲ್ಲಿ ಪ್ರಕಟವಾಗಿವೆ.

ಜಯದೇವ ವಿಚಾರಸಾರ ಎಂಬ ಭಾಗದಲ್ಲಿ ಜಯದೇವ ಶ್ರೀಗಳ ಜೀವನದ ಬಹುಮಹತ್ವದ ಘಟನೆಗಳನ್ನು ದಾಖಲಿಸುವ ಕೆಲವು ಮಹತ್ವದ ಕೃತಿಗಳಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಲೇಖನರೂಪದಲ್ಲಿ ಸಂಗ್ರಹಿಸಿ ವಿದ್ವಾಂಸರಿಂದ ಬರೆಸಿರುವುದು ಒಂದು ಹೊಸ ಉಪಕ್ರಮವೆನಿಸಿದೆ.

ಜಯದೇವ ಮಂಥನ ಭಾಗದಲ್ಲಿ ೧೪ ಹೊಸ ಲೇಖನಗಳನ್ನು ಪ್ರಕಟಿಸಲಾಗಿದೆ. ಈ ಭಾಗದಲ್ಲಿ ನಾನು ಬರೆದ ಮೂರು ಮಹತ್ವದ ಲೇಖನಗಳು ಪ್ರಕಟವಾಗಿವೆ. ಇದೊಂದು ನನ್ನ ಜೀವನದ ಸೌಭಾಗ್ಯವೆಂದು ಭಾವಿಸಿರುವೆ. ಹೊರನಾಡಿನಲ್ಲಿ ದಿಗ್ವಿಜಯ ಪರ್ವ, ಜಗದ್ಗುರುಗಳ ಬೆಳಗಾವಿ ಜಿಲ್ಲೆಯ ನಂಟು, ವಿದ್ವಜ್ಜನರ ದೃಷ್ಟಿಯಲ್ಲಿ ಜಗದ್ಗುರುಗಳು ಎಂಬ ಮೂರು ಲೇಖನಗಳನ್ನು ಬರೆಯುವ ಅವಕಾಶ ನನಗೆ ದೊರೆತದ್ದು ನನ್ನ ಜೀವನದಲ್ಲಿ ಮರೆಯಲಾರದ ಘಟನೆಯೆನಿಸಿದೆ.

ಜಯದೇವ ಸಿರಿ ಎಂಬ ಭಾಗದಲ್ಲಿ ಜಯದೇವ ಜಗದ್ಗುರುಗಳನ್ನು ತುಂಬ ಹತ್ತಿರದಿಂದ ಕಂಡ ಕೆಲವು ಮಹತ್ವದ ವ್ಯಕ್ತಿಗಳು ಬರೆದ ಲೇಖನಗಳು ಇಲ್ಲಿವೆ. ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರು ಬಾಲ್ಯದಲ್ಲಿ ಶ್ರೀಗಳನ್ನು ತುಂಬ ಹತ್ತಿರದಿಂದ ಕಂಡವರು. ಅಂತೆಯೇ ಅವರ ಕುರಿತು ತುಂಬ ಆಪ್ತವಾದ ಲೇಖನ ಇಲ್ಲಿದೆ. ಇನ್ನೂ ವಿಶೇಷವೆಂದರೆ ೯೨ ವರುಷದ ಡಾ. ಎಸ್. ಆರ್. ಗುಂಜಾಳ ಅವರು ಜಯದೇವ ಜಗದ್ಗುರುಗಳನ್ನು ತುಂಬ ಹತ್ತಿರದಿಂದ ಕಂಡವರು, ಶ್ರೀಗಳು ಸ್ಥಾಪಿಸಿದ ಬ್ಯಾಡಗಿ, ಹಾವೇರಿ, ಧಾರವಾಡ ಮೂರು ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು.

ಅಂತೆಯೇ ಈ ಪುಸ್ತಕ ಲೋಕಾರ್ಪಣೆ ದಿನ ಡಾ. ಗುಂಜಾಳ ಅವರು ಮಾತನಾಡುತ್ತ- ‘ಈ ನನ್ನ ದೇಹ ಜಯದೇವ ಜಗದ್ಗುರುಗಳ ಪ್ರಸಾದವನ್ನು ಉಂಡು ಬೆಳೆದ ಪ್ರಸಾದ ಕಾಯ. ಜಗದ್ಗುರುಗಳು ನನಗೆ ಆಶ್ರಯ ನೀಡಿದ ಕಾರಣಕ್ಕಾಗಿ ಶರಣ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಲು, ವಚನ ಪದಪ್ರಯೋಗಕೋಶಗಳಂತಹ ಮೊದಲ ಪ್ರಯೋಗಗಳನ್ನು ಕನ್ನಡ ಸಾಹಿತ್ಯಲೋಕದಲ್ಲಿ ಮಾಡಲು ನನ್ನಿಂದ ಸಾಧ್ಯವಾಯಿತು. ಕಲಬುರ್ಗಿಯಂತಹ ಶಿಕ್ಷಣ ವಂಚಿತ ಪ್ರದೇಶದಲ್ಲಿ ಅಲ್ಲಿಯ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಲು ಸಾಧ್ಯವಾಯಿತು. ಇದು ಜಯದೇವ ಜಗದ್ಗುರುಗಳ ಕೃಪಾಕಾರುಣ್ಯಕ್ಕೆ ಒಳಗಾದ ಪ್ರಸಾದ ಕಾಯ’ ಎಂದು ಹೃದಯ ತುಂಬಿ ಹೇಳಿದರು.

ಜಯದೇವ ಜಂಗಮ ಎಂಬ ಕೊನೆಯ ಭಾಗದಲ್ಲಿ ಜಗದ್ಗುರುಗಳನ್ನು ಕುರಿತು ಭಾಷಣಗಳು, ಜಗದ್ಗುರುಗಳ ಭಾಷಣಗಳು, ಜಗದ್ಗುರುಗಳ ಹೆಸರನ್ನು ಬೆಳಗಿಸಿದ ಮಹಾನುಭಾವರ ಕುರಿತು ರೋಚಕವೆನಿಸುವ ಘಟನೆಗಳ ಲೇಖನಗಳಿವೆ. ಈ ಭಾಗದಲ್ಲಿಯೂ ಕೂಡ ನಾನು ಬರೆದ ಜಯದೇವ ಜಗದ್ಗುರುಗಳ ಕೃಪಾ ಬೆಳಕನ್ನು ಪ್ರತಿಬಿಂಬಿಸಿದ ಎನ್. ಟಿ. ಸಿದ್ದರಾಮಣ್ಣನವರ್ ಎಂಬ ಲೇಖನ ಪ್ರಕಟವಾಗಿದೆ.

ಈ ಕೃತಿಯ ಮತ್ತೊಂದು ವಿಶೇಷವೆಂದರೆ- ಮೈಸೂರು ಮಹಾರಾಜರು, ಕೊಲ್ಲಾಪುರ ಮಹಾರಾಜರು ಬರೆದ ಪತ್ರಗಳ ಮೂಲ ದಾಖಲೆಗಳು, ಬ್ರಿಟಿಷ್ ದಾಖಲೆಗಳು, ಕೆಲವು ಅಪರೂಪದ ಪತ್ರಗಳನ್ನು ಇದ್ದಂತೆ ಸ್ಕ್ಯಾನ್ ಮಾಡಿ ಪ್ರಕಟಿಸಿರುವುದು ಬಂಗಾರಕ್ಕೆ ಕುಂದಣವಿಟ್ಟಂತಾಗಿದೆ. ಜಯದೇವ ಶ್ರೀಗಳ ಕುರಿತಾದ ಬಹು ಮಹತ್ವದ ಚಿತ್ರಗಳು ಇಲ್ಲಿವೆ, ಜಯದೇವ ಶ್ರೀಗಳು ಕಟ್ಟಿದ ಸಂಸ್ಥೆಗಳ ಚಿತ್ರಗಳಿವೆ. ಒಟ್ಟಾರೆ ಜಯದೇವ ಜಗದ್ಗುರುಗಳ ಕುರಿತು ಸಮಗ್ರವಾದ ಸಮೃದ್ಧ ಮಾಹಿತಿಯನ್ನು ನೀಡುವ ಈ ಶತಮಾನದ ಸರ್ವಶ್ರೇಷ್ಠ ಗ್ರಂಥವಾಗಿ ಹೊರಹೊಮ್ಮಿದೆ. ಅಂತೆಯೇ ಇದನ್ನು ಶತಕ ಸುಕೃತದ ಸಾಹಿತ್ಯ ಸಂಪುಟವೆಂದು ಕರೆಯಲು ಸಂತೋಷವೆನಿಸುತ್ತದೆ.

ಈ ಬೃಹತ್ ಸಂಪುಟದ ಪ್ರಕಟಣೆಯ ಸಂದರ್ಭದಲ್ಲಿ ನನಗೆ ದೊರೆತ ಕೆಲವು ಮಹತ್ವದ ದಾಖಲೆಗಳನ್ನು, ಮಾಹಿತಿಗಳನ್ನು ಸ್ವ್ಯಾನ್ ಮಾಲೀಕರಾದ ಕೃಷ್ಣಮೂರ್ತಿ ಅವರ ಗಮನಕ್ಕೆ ತಂದೆ, ಆಗ ಅವರು ತುಂಬ ಸಂತೋಷಪಟ್ಟರು. ಈ ಬೃಹತ್ ಸಂಪುಟದ ಸಂಪಾದಕ ಸಲಹಾ ಸಮಿತಿಯಲ್ಲಿ ನನ್ನನ್ನು ಒಬ್ಬ ಸದಸ್ಯನನ್ನಾಗಿ ಆಯ್ಕೆ ಮಾಡಿದರು. ಹಾಗೆ ನೋಡಿದರೆ ಉತ್ತರ ಕರ್ನಾಟಕದಿಂದ ಆ ಸಮಿತಿಯಲ್ಲಿ ಸ್ಥಾನಪಡೆದ ಏಕೈಕ ವ್ಯಕ್ತಿ ನಾನಾಗಿರುವುದು ನಿಜಕ್ಕೂ ನನ್ನ ಜೀವನದ ಒಂದು ಸೌಭಾಗ್ಯವೆಂದು ಭಾವಿಸಿದ್ದೇನೆ. ಸೆಪ್ಟೆಂಬರ್ ೮ ರಂದು ಚಿತ್ರದುರ್ಗದಲ್ಲಿ ಸಂಪಾದಕ ಸಲಹಾ ಸಮಿತಿಯ ಸಭೆ ಕರೆದಿದ್ದರು, ಅಕ್ಟೋಬರ್ ೮ರಂದು ಈ ಬೃಹತ್ ಸಂಪುಟ ಲೋಕಾರ್ಪಣೆಯಾದುದು ಒಂದು ಲೋಕಸೋಜಿಗವೆಂದೇ ಹೇಳಬೇಕು.

ಈ ಕೃತಿ ಪ್ರಕಟಣೆಯ ಬೆನ್ನ ಹಿಂದಿನ ಶಕ್ತಿಯಾಗಿ ನಿಂತವರು ಸ್ವ್ಯಾನ್ ಮಾಲೀಕರಾದ ಕೃಷ್ಣಮೂರ್ತಿ ಅವರು. ಜಯದೇವ ಜಗದ್ಗುರುಗಳ ಬಗ್ಗೆ ಅವರಲ್ಲಿರುವ ಅವ್ಯಕ್ತವಾದ ಅಮೂರ್ತವಾದ ಮಹಾ ಭಕ್ತಿ ಶ್ರದ್ಧೆಗಳೇ ಇಲ್ಲಿ ಅವರಿಂದ ಈ ಕೆಲಸವನ್ನು ಮಾಡಿಸಿವೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಮುರುಘರಾಜೇಂದ್ರಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಕಳಸದ ಮತ್ತು ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರ ಪ್ರಯತ್ನ ಪ್ರೇರಣೆ ಪ್ರೋತ್ಸಾಹ ಈ ಕೃತಿ ಇಷ್ಟು ಬೇಗ ಬೆಳಕು ಕಾಣಲು ಕಾರಣವಾಗಿವೆ.

ಇನ್ನೂ ವಿಶೇಷವೆಂದರೆ, ಲೋಕಾರ್ಪಣೆಯಾದ ದಿನವೇ ಈ ಬೃಹತ್ ಸಂಪುಟದ ನಾಲ್ಕು ನೂರು ಪ್ರತಿಗಳು ಮಾರಾಟವಾದುದು, ಇನ್ನೇನು ಈ ವಾರದಲ್ಲಿ ಮತ್ತೆ ಎರಡನೆಯ ಮುದ್ರಣದ ಭಾಗ್ಯವನ್ನು ಕಾಣುತ್ತಿರುವುದು ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಪವಾಡವೆಂದೇ ಹೇಳಬೇಕು.

ಜಯದೇವ ದಿಗ್ವಿಜಯ : ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ೧೫೦ನೇ ಜಯಂತ್ಯುತ್ಸವ ಸಂಸ್ಮರಣ ಗ್ರಂಥ
ಗೌರವ ಸಂಪಾದಕರು : ಶ್ರೀ ಶಿವಯೋಗಿ ಕಳಸದ ಮತ್ತು ಡಾ. ಬಸವಕುಮಾರ ಸ್ವಾಮಿಗಳು
ಪ್ರಧಾನ ಸಂಪಾದಕರು : ಡಾ. ಬೈರಮಂಗಲ ರಾಮೇಗೌಡ
ಸಂಪಾದಕರು : ಸ್ವ್ಯಾನ್ ಕೃಷ್ಣಮೂರ್ತಿ
ಪ್ರಕಾಶಕರು : ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ೧೫೦ನೇ ಜಯಂತ್ಯುತ್ಸವ ಸಮಿತಿ, ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ, ೨೦೨೪
ಪುಟಗಳು : ೧೨೫೦ ಬೆಲೆ: ೧೫೦೦

Share This Article
Leave a comment

Leave a Reply

Your email address will not be published. Required fields are marked *