ಸೇಡಂ ಉತ್ಸವ ವಿರೋಧಿಸಲು ಕಲಬುರಗಿಯಲ್ಲಿ ಮೂರು ದಿನಗಳ ಸೌಹಾರ್ದ ಸಮಾವೇಶ

ಕಲಬುರಗಿ

ಸೌಹಾರ್ದ ವೇದಿಕೆ ವತಿಯಿಂದ ಜನವರಿ 17ರಿಂದ 19ರವರೆಗೆ ಮೂರು ದಿನಗಳ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕಿ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.

ಈ ಮುಂಚೆ ನಗರದಲ್ಲಿ ರವಿವಾರ ನಡೆದ ಪ್ರಗತಿಪರ ಸಂಘ ಸಂಸ್ಥೆಗಳ ಸಭೆಯಲ್ಲಿ ಸೇಡಂನಲ್ಲಿ ಆಯೋಜಿತವಾಗಿರುವ ‘ಭಾರತೀಯ ಸಂಸ್ಕೃತಿ ಉತ್ಸವ’ವನ್ನು ವಿರೋಧಿಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. /

ಈ ಪ್ರತಿರೋಧದ ಅಂಗವಾಗಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಮೀನಾಕ್ಷಿ ಬಾಳಿ ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡದೆ ಕೋಮುವಾದಿ ಸಂಘಟನೆಗಳು ಧರ್ಮ, ಸಂಸ್ಕೃತಿ ರಕ್ಷಣೆ ಎಂಬ ಭ್ರಮೆ ಸೃಷ್ಟಿಸಿ ನಾಡಿನ ಶಾಂತಿ ಸೌಹಾರ್ದತೆಗೆ ಭಂಗ ತರುತ್ತಿದ್ದಾರೆ ಎಂದು ಆರೋಪಿಸಿದರು.

ತನ್ನ ಧರ್ಮವನ್ನು ಪ್ರೀತಿಸುತ್ತ, ಪಾಲಿಸುತ್ತ, ಇತರ ಧರ್ಮವನ್ನು ಗೌರವಿಸುವ, ಪ್ರೀತಿಸುವುದು ನಮ್ಮ ಸಂಸ್ಕೃತಿ. ಈ ನಮ್ಮ ನೆಲದ ಧರ್ಮ, ಸಂಸ್ಕೃತಿ ಕಾಪಾಡಿಕೊಳ್ಳುವುದನ್ನು ತಿಳಿ ಹೇಳುವುದಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕವು ಧರ್ಮ ಸಮನ್ವಯತೆಗೆ, ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ನಾಡು. ಕ್ರಿ.ಶ 9ನೇಶತಮಾನದಲ್ಲಿಯೇ ರಾಷ್ಟ್ರಕೂಟರ ಆಸ್ಥಾನದಲ್ಲಿದ್ದ ಶ್ರೀವಿಜಯನೆಂಬ ಕವಿ ತನ್ನ ಕೃತಿಯಾಗಿದ್ದ ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹನೆಯಿಂದ ಕಾಣುವುದು ಮತ್ತು ಪರಸ್ಪರ ಗೌರವಿಸುವುದೇ ನಿಜವಾದ ಬಂಗಾರ ಎಂದು ಹೇಳಿದ್ದಾನೆ. ಅಂದರೆ ಆ ಕಾಲಕ್ಕೂ ಕನ್ನಡ ನಾಡಿನಲ್ಲಿ ಬಹು ಧರ್ಮ, ಬಹು ಭಾಷೆ, ಹಲವು ಪಂಥ, ವಿವಿಧ ರೀತಿ, ನೀತಿ, ಉಡುಪು, ಊಟ, ಉಡುಗೆ, ತೊಡುಗೆಗಳೆಲ್ಲವೂ ಇದ್ದವು ಎಂದೇ ಅರ್ಥ. ಕರ್ಣಾಟಕ ಯಾವತ್ತೂ ಬಹುತ್ವಕ್ಕೆ ನೆಲೆವೀಡು. ಅನೇಕತೆಯ ವಿಶಿಷ್ಟ ಲಯದಲ್ಲಿ ಬಾಳನ್ನು ಹೂಡಿಕೊಂಡು ಬಂದಿದೆ ಎಂದರು.

ಕಾಲ ಕಾಲಕ್ಕೂ ಅನೇಕ ರಾಜ ಮನೆತನಗಳು, ಹಲವಾರು ದಾರ್ಶನಿಕ ಧಾರೆಗಳು ಇಲ್ಲಿ ಆಳ್ವಿಕೆ ನಡೆಸಿವೆ. ಕನ್ನಡಿಗರು ಪರಮತ ಸಹಿಷ್ಣುಗಳು ಮತ್ತು ಸ್ವಮತ ಅಭಿಮಾನಿಗಳು ಎಂಬುದಕ್ಕೆ ಇತಿಹಾಸದಲ್ಲಿ ವೆಗ್ಗಳ ಉದಾಹರಣೆಗಳು ಇವೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕವಂತೂ ಉನ್ನತ ದಾರ್ಶನಿಕ ಧಾರೆಗಳ ಪ್ರಯೋಗಭೂಮಿಯಾಗಿದೆ. ಘಟಿಕಾ ಸ್ಥಾನವಾಗಿದ್ದ ನಾಗಾವಿ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸುರಪೂರ, ಕಲೆಯ ಬಲೆಯಾಗಿದ್ದ ಕಾಳಗಿ, ಸಾಮ್ರಾಟ್ ಅಶೋಕನ ಬೌದ್ಧ ನೆಲೆಯಾಗಿದ್ದ ಸನ್ನತಿ, ಶೈವ, ಜೈನರ ಕನ್ನೆಲವಾಗಿದ್ದ ಮಾನ್ಯಖೇಟ, ಪ್ರಸಿದ್ಧ ಮಹಿಳೆಯರಿಗೂ ಇಲ್ಲಿ ಅಕ್ಷರ ನೀಡಿಲಾಗಿತ್ತು ಎಂಬುದನ್ನು ಸಾಕ್ಷಿಕರೀಸುತ್ತಿರುವ ಶಾಸನ, ಸುಂದರಿ ಶಿಲ್ಪವಿರುವ ಜಲಸಂಗಿ ಇತ್ಯಾದಿ ಅವಶೇಷಗಳು ಕಲ್ಯಾಣ ಕರ್ನಾಟಕದ ಭವ್ಯತೆಯನ್ನು ಅದರ ಮೌಲಿಕತೆಯನ್ನು ಎತ್ತಿ ತೋರಿಸುತ್ತಿವೆ ಎಂದು ವಿವರಿಸಿದರು.

ಒಂದು ಕಾಲಕ್ಕೆ ಬೌದ್ಧ ನೆಲೆಯಾಗಿದ್ದ ಈ ನಾಡು ಅನೇಕ ದಾರ್ಶನಿಕ ಹೊಳಹುಗಳಿಗೆ ಜನ್ಮ ನೀಡಿದೆ. 12 ನೇ ಶತಮಾನದಲ್ಲಿ ಸಂಭವಿಸಿದ ವಚನ ಕ್ರಾಂತಿ ಜಗತ್ತಿಗೆ ಕನ್ನಡಿಗರು ನೀಡಿದ ಬಹುದೊಡ್ಡ ಕೊಡುಗೆ ಎಂಬುದು ಕ್ಲೀಷೆಯೇನಲ್ಲ. ವೈಧಿಕ ಚಾತುರ್ವರ್ಣ ವ್ಯವಸ್ಥೆಯನ್ನು ಅದರ ದುಷ್ಟ ಹುನ್ನಾರುಗಳನ್ನು ಬಯಲು ಮಾಡಲೆಂದೆ ಅಂಗಾಯತ ಎಂಬ ನವೀನ ಧರ್ಮ ಸ್ಥಾಪಿಸಿದ ಬಸವಾದಿ ಶರಣರು, ದೇವ ಪ್ರೇಮವನ್ನು ಅಮರಗೊಳಿಸಿದ ಖಾಜಾ ಬಂದೇನವಾಜ, ರುಕ್ಮೋದ್ದೀನ್ ತೊಲಾ, ರಾಣೇಶಪೀರ್ ಮುಂತಾದ ಸೂಫಿಗಳು, ವೈದಿಕ ಚಿಂತನೆಗಳಲ್ಲಿದ್ದ ತಾರತಮ್ಯಗಳನ್ನು ನಿವಾರಿಸಿ ಮಾನವೀಯತೆಯನ್ನು ಕಸಿ ಮಾಡಲೆಂದು ಟೊಂಕಕಟ್ಟಿ ನಿಂತಿದ್ದ ಕನಕಾದಿ ದಾಸರು, ಎಲ್ಲ ಜೀವಪರ ತತ್ವ ಸಿದ್ಧಾಂತಗಳನ್ನು ಸಮನ್ವಯಗೊಳಿಸಿಕೊಂಡು ನಡೆದ ಕಡಕೋಳ ಮಡಿವಾಳಪ್ಪ ಮುಂತಾದ ತತ್ವ ಪದಕಾರರು, ಋಷಿಗಳು ಧರ್ಮವನ್ನು ನಗಣ್ಯಗೊಳಸಿ ಕೃಷಿ ಧರ್ಮವನ್ನು ಎತ್ತಿ ಹಿಡಿದ ಶರಣಬಸವಪ್ಪನವರು, ಅವಧೂತ ಪರಂಪರೆಯನ್ನು ಉಜ್ವಲಗೊಳಿಸಿದ ಚಳಕಾಪೂರ ಸಿದ್ಧಾರೂಢರು, ಸಿದ್ಧ ಪರಂಪರೆಯ ನೇತಾರ ರಟಗಲ್ ರೇವಣಸಿದ್ಧ, ಶರಣ ಪರಂಪರೆಯನ್ನು ಅಂದೇ ಉಸಿರಾಡಿದ್ದ ಕರುಣೇಶ್ವರ, ಹೆಬ್ಬಾಳದ ಅಣವೀರಪ್ಪ, ಅಬ್ಬೆತುಮಕೂರಿನ ವಿಶ್ವಾರಾಧ್ಯ, ನಾಲವಾರದ ಕೋರಿಸಿದ್ದ, ಗೊಟ್ಟಂಗೊಟ್ಟಿ ಬಕ್ಕಪ್ರಭು, ಚಿಣಮಗೇರಿ-ಚೌಡಾಪೂರದ ಮಹಾಂತೇಶ್ವರ, ನಾಥ ಸಿದ್ಧ ತತ್ವವನ್ನು ಅನುಸರಿಸಿ ಸರ್ವ ಮತಾಚಾರ್ಯ ಬಿರುದಾಂಕಿತವಾಗಿರುವ ಹುಮನಾಬಾದ ಮಾಣಿಕ ಪ್ರಭು ಮುಂತಾಗಿ ಈ ಪಟ್ಟಿ ಇನ್ನೂ ಉದ್ದ ಬೆಳೆಯುತ್ತದೆ ಎಂದು ಹೇಳಿದರು.

ಅನೇಕ ವಿಚಾರ ಧಾರೆಗಳನ್ನು ಸಮನ್ವಯಗೊಳಸಿಕೊಂಡೂ ತನ್ನದೆ ವಿಶಿಷ್ಟ ನಡೆಯೊಂದನ್ನು ಅಭಿವೃದ್ಧಿ ಪಡಿಸಿಕೊಂಡಿರುವ ಈ ನಾಡವರು ಪರಸ್ಪರ ಪ್ರೀತಿ, ಗೌರವದೊಂದಿಗೆ ಬಾಳನ್ನು ಹೂಡಿಕೊಂಡು ಬರುತ್ತಿದ್ದಾರೆ. ಸಾಮರಸ್ಯ, ಸೌಹಾರ್ದತೆಗೆ ಹೆಸರಾದ ಈ ನೆಲದಲ್ಲಿ ಇತ್ತೀಚೆಗೆ ಕೋಮುವಾದಿ ಶಕ್ತಿಗಳು ಇತಿಹಾಸವನ್ನು ತಿರುಚುವುದು ಮತ್ತು ಸುಳ್ಳು ಇತಿಹಾಸವನ್ನು ಸೃಷ್ಟಿಸುವ ಮೂಲಕ ನಮ್ಮ ಯುವಕರ ಧಿಕ್ಕುತಪ್ಪಿಸುತ್ತಿದ್ದಾರೆ. ಕೋಮುದ್ವೇಷಿಗಳು ಎಲ್ಲ ಧರ್ಮಗಳಲ್ಲಿ ಕಾಣಿಸಿಕೊಂಡಿದ್ದು ಅವರು ಮುಗ್ಧ ಅಮಾಯಕರನ್ನು ತಮ್ಮ ಕಾಲಾಳುಗಳನ್ನಾಗಿ ಮಾಡಿಕೊಂಡು ಕೋಮು ದಂಗೆಗಳನ್ನು ಎಬ್ಬಿಸುತ್ತಿದ್ದಾರೆ. ಶರಣರು. ದಾಸರು, ತತ್ವಪದಕಾರರು ಉದಿಸಿದ ನಾಡನ್ನು ಹಮಮನುದಿಸಿದ ನಾಡೆಂದು, ಬಸವಕಲ್ಯಾಣದ ಪೀರಭಾಷಾ ದರ್ಗಾದಲ್ಲಿ ಶರಣರ ಅನುಭವ ಮಂಟಪ ಇತ್ತೆಂದು ಪುರಾವೆ ಇಲ್ಲದೆ ಗಳಹುವುದು. ಧರ್ಮಗಳ ನಡುವೆ ಅಂತರ ಕಲ್ಪಸಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕರಲ್ಲಿ ಧರ್ಮ ದ್ವೇಷದ ಅಮಲನ್ನು ತುಂಬಿಸಿ ಅವರನ್ನು ಕ್ರಿಮಿನಲ್ ಗಳಾಗಿ ಮಾಡುತ್ತಿದ್ದಾರೆ. ಕರ್ನಾಟಕವನ್ನು ಉತ್ತರ ಪ್ರದೇಶ ಮಾಡುತ್ತೇವೆ ಎಂಬ ಅಸಹ್ಯ ವಿಚಾರಧಾರೆಯೊಂದನ್ನು ಪಠಿಸಲಾಗುತ್ತಿದೆ. ಹಿಂದೂತ್ವದ ಪ್ರತಿಪಾದಕರು ಮತ್ತುಇಸ್ಲಾಂನ ಕಟ್ಟರ್ ಪಂಥಿಗಳು ಮೇಲು ಸ್ಥರದಲ್ಲಿ ಒಂದೇ ಆಗಿದ್ದು ಸ್ಥಳೀಯ ಮಟ್ಟದಲ್ಲಿ ಜನಸಾಮಾನ್ಯರ ನಡುವೆ ದ್ವೇಷದ ಭಾವನೆ ಕೆರಳಿಸುತ್ತಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸುಲಭವಲ್ಲದ ನಮ್ಮ ನಾಡಿನಲ್ಲಿ ಬಡತನ ಕಿತ್ತು ತಿನ್ನುತ್ತಿದೆ. ಪದೇ ಪದೇ ಎದುರಾಗುವ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಗಳಲ್ಲಿ ನಲುಗುತ್ತಿರುವ ಕೃಷಿ ಕೃತ್ಯಗಳು, ಹೇಳಕೊಳ್ಳುವಂಥ ಯಾವುದೇ ಉದ್ದಿಮೆಗಳಿಲ್ಲದೆ ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿರುವ ಯುವಜನತೆ, ದಿನೇ ದಿನೇ ದುಬಾರಿಯಾಗುತ್ತಿರುವ ಜೀವನೋಪಾಯ ಇವೆಲ್ಲವುಗಳಿಂದಾಗಿ ಬದುಕನ್ನು ಅರಸಿ ಗುಳೆ ಹೋಗುವುದಂತೂ ಮಾಮೂಲಿಯಾಗಿದೆ. ಮಧ್ಯಮ ವರ್ಗದಿಂದ ಹಿಡಿದು ಕೂಲಿಕಾರರವರೆಗೆ ವಲಸೆ ಹೋಗುವುದು ಕಲ್ಯಾಣ ಕರ್ನಾಟಕ ಜನತೆಯ ಜೀವನ ವಿಧಾನವೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಕೆಆರ್ ಡಿಬಿ ಇಲಾಖೆಯೊಂದು ಸ್ಥಾಪಿತವಾಗಿ ಸಾವಿರಾರು ಕೋಟಿ ರೂ. ಅನುದಾನ ಬರುತ್ತಿದ್ದರೂ ಬಹುತೇಕ ಮೊತ್ತ ದಲ್ಲಾಳಿಗಳ ಜೇಬನ್ನು ಸೇರಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಪರಿಣಮಿಸಿದೆ. ಕಳೆದ ಸರಕಾರದ ಅವಧಿಯಲ್ಲಿ ಅಭಿವೃದ್ಧಿಗೆಂದು ಮೀಸಲಿಟ್ಟ ಬಹುಪಾಲು ಹಣ ಕೋಮುವಾದಿ ಸಂಘ, ಸಂಸ್ಥೆಗಳಿಗೆ ಹರಿದು ಹಂಚಿಹೋಗಿ ಇಲ್ಲಿ ಧರ್ಮ ದ್ವೇಷದ ಕೆಲಸಗಳು ನಡೆದಿವೆ ಎಂಬುದೇನೂ ಈಗ ಗುಟ್ಟಾಗಿ ಉಳಿದಿಲ್ಲ ಎಂದು ಕಿಡಿ ಕಾರಿದರು.

ಒಂದೆಡೆ ಒಕ್ಕಲುತನ ಮೂರಾಬಟ್ಟೆಯಾಗಿ ರೈತಾಪಿಗಳು ಸಂಪೂರ್ಣ ನೆಲಕಚ್ಚಿದರೆ, ಇನ್ನೊಂದೆಡೆ ಕೂಲಿ ಕಾರ್ಮಿಕರು ದಂಡಿ ದಂಡಿಯಾಗಿ ಗುಳೆ ಹೋಗುತ್ತಿದ್ದಾರೆ. ಹಾಗೇ ನೋಡಿದರೆ ಈಗ ಇಲ್ಲಿ ಶಿಕ್ಷಣ ವ್ಯಾಪಾರ ಭರದಿಂದ ಸಾಗಿದ್ದು ಎಲ್ಲ ಬಗೆಯ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ಸಿಕ್ಕಾಪಟ್ಟೆ ಹಣವನ್ನು ನೀಡಿ ಪದವಿಗಳನ್ನುಪಡೆದ ಯುವ ಜನತೆ ತಮ್ಮ ಪದವಿಗಳಿಗೆ ತಕ್ಕ ಹುದ್ದೆ ದೊರೆಯದೆ ಬೆಂಗಳೂರು, ಹೈದ್ರಾಬಾದ, ಮುಂಬೈ, ಚೆನ್ನೈಇತ್ಯಾದಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ದೊಡ್ಡ ಬಂಡವಾಳಶಾಹಿಗಳು ಎಲ್ಲ ಉದ್ಯಮಗಳಲ್ಲಿ ವಿಸ್ತರಿಸಿಕೊಂಡಿರುವುದರಿಂದ ಎಣ್ಣೆ ಮಿಲ್ ಗಳು ಸರ್ವನಾಶವಾಗಿ ದಶಕಗಳೇ ಸಂಭವಿಸಿವೆ. ಇದೀಗ ತೊಗರಿ ಬೇಳೆ ಮಿಲ್ ಗಳು ಶಾಶ್ವತವಾಗಿ ಬಂದ್ ಆಗಿದ್ದು ಮಾಲೀಕರು ಆತ್ಮಹತ್ಯೆಗೆ ಇಳಿಯುತ್ತಿದ್ದಾರೆ. ಮೈಕ್ರೋಫೈನಾನ್ಸಗಳ ಸಾಲದ ಸುಳಿಗೆ ಸಿಲುಕಿ ಮಹಿಳೆಯರು ದುರಂತ ಸಾವನ್ನು ಅಪ್ಪುತ್ತಿದ್ದಾರೆ. ಶಾಲಾ, ಕಾಲೇಜುಗಳ ಶುಲ್ಕಗಳು ಹೆಚ್ಚಳವಾಗಿ ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.

ದಿಕ್ಕು ತಪ್ಪಿರುವ ಕೃಷಿ, ವರ್ಷವಿಡೀ ದೊರೆಯದ ಕೂಲಿ, ಹೆಚ್ಚುತ್ತಿರುವ ಶಿಕ್ಷಣ ಶುಲ್ಕ, ದುಬಾರಿಯಾಗುತ್ತಿರುವ ಜೀವನ ನಿರ್ವಹಣೆ, ನಿರುದ್ಯೋಗ, ಇತ್ಯಾದಿಗಳ ಬಗ್ಗೆ ಚಕಾರವೆತ್ತದ ಧರ್ಮ, ಸಂಸ್ಕೃತಿ ರಕ್ಷಣೆ ಎಂಬ ಭ್ರಮೆ ಸೃಷ್ಟಿಸಿ ನಮ್ಮ ನಾಡಿನ ಅವಿಚ್ಛಿನ್ನ ಶಾಂತಿ ಕದಡುತ್ತಿದ್ದಾರೆ. ಪರಸ್ಪರ ಕಚ್ಚಾಟ ಬಡಿದಾಟಗಳಲ್ಲಿ ನಿರತರಾಗುವಂತೆ ಮಾಡುತ್ತಿದ್ದಾರೆ ಎಂದು ನೊಂದು ನುಡಿದರು.

ಈ ಮಾತನ್ನೆ ಅಲ್ಲಮಪ್ರಭುಗಳು “ದಾಳಿಕಾರಂಗೆ ಧರ್ಮವುಂಟೆ?” ಎಂದು 900 ವರ್ಷಗಳ ಹಿಂದೆ ಕೇಳಿದ್ದಾರೆ. ಸಂಸ್ಕೃತಿ ಎಂಬ ಪರಿಕಲ್ಪನೆ ತುಂಬಾ ಮೌಲಿಕವೂ ವಿಶಾಲವೂ ಆಗಿದೆ. ಸಕಲ ಜೀವಾತ್ಮರ ಲೇಸು ಬಯಸುವುದೇ ಸಂಸ್ಕೃತಿ, ಇನ್ನೊಬ್ಬರ ಕಣ್ಣೀರು ತೊಳೆಯುವುದೆ ಸಂಸ್ಕೃತಿ ಎಂಬುದನ್ನು ತಿಳಿ ಹೇಳಲೆಂದೆ ಸೌಹಾರ್ದ ಕರ್ನಾಟಕ ವೇದಿಕೆಯು ಜನೆವರಿ 17 ರಿಂದ 19 ರವರೆಗೆ ಸೌಹಾರ್ದಸಮಾವೇಶ” ಕಲಬುರಗಿಯಲ್ಲಿ ಹಮ್ಮಿಕೊಂಡಿದೆ ಎಂದರು.

ಪ್ರೊ. ಆರ್.ಕೆ. ಹುಡಗಿ, ಡಾ. ಕಾಶಿನಾಥ ಅಂಬಲಗಿ, ದತ್ತಾತ್ರೇಯ ಇಕ್ಕಳಕಿ, ಡಾ.‌ಪ್ರಭು ಖಾನಾಪುರೆ, ಆರ್.ಜಿ. ಶೆಟಗಾರ, ಮಹಾಂತೇಶ ಕೌಲಗಿ, ಮಹಾಂತೇಶ ಕಲಬುರ್ಗಿ, ಬಸವರಾಜ ಮೊರಬದ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಲವಿತ್ರಾ ವಸ್ತ್ರದ ಸೇರಿದಂತೆ ಅನೇಕರು ಇದ್ದರು.

Share This Article
1 Comment
  • ಒಳ್ಳೆಯ ನಿರ್ಧಾರ. ನಾವೂ ನಿಮ್ಮೊಟ್ಟಿಗೆ ಇರುತ್ತೇವೆ ಮತ್ತು ಕೈ ಜೋಡಿಸುತ್ತೇವೆ.

Leave a Reply

Your email address will not be published. Required fields are marked *