ಚನ್ನಬಸವಣ್ಣ ಚರಿತ್ರೆ 24: ಕಲಬುರ್ಗಿ ಸಂಪಾದಿಸಿದ ಚನ್ನಬಸವಣ್ಣನವರ ವಚನ ಸಂಕಲನಗಳು

[ಕನ್ನಡ ನಾಡು ಕಂಡ ಶ್ರೇಷ್ಠ ಸಂಶೋಧಕರಾಗಿದ್ದ ಡಾ.ಎಂ. ಎಂ. ಕಲಬುರ್ಗಿ ಅವರು ಲಿಂಗೈಕ್ಯರಾಗಿ ಒಂಬತ್ತು ವರುಷಗಳೇ ಕಳೆದವು. ದಿನಾಂಕ 30-8-2024ರಂದು ಅವರ 9ನೇ ಪುಣ್ಯಸ್ಮರಣೆ . ತನ್ನಿಮಿತ್ತ ಅವರು ಚನ್ನಬಸವಣ್ಣನವರ ವಚನ ಸಂಕಲನಗಳ ಪ್ರಕಟಣೆಗಾಗಿ ಮಾಡಿದ ಪ್ರಯತ್ನದ ಫಲವಾಗಿ ಚನ್ನಬಸವಣ್ಣನವರ ಆರು ಮಹತ್ವದ ಸಂಕಲನಗಳು ಪ್ರಕಟಗೊಂಡವು. ಈ ಕೃತಿಗಳ ಸಮೀಕ್ಷೆ ಮೂಲಕ, ಅವರಿಗೆ ಈ ನುಡಿನಮನ ಸಲ್ಲಿಸುತ್ತಿರುವೆ.]

ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ ಆಡಳಿತ ಕಾರಣವಾಗಿ ನಾಡಿನ ತುಂಬ ಶೈಕ್ಷಣಿಕ ಚಟುವಟಿಕೆಗಳು ವಿಸ್ತಾರಗೊಂಡ ಕಾರಣವಾಗಿ ವಚನಗಳು ಮತ್ತೆ ಪುಸ್ತಕರೂಪದಲ್ಲಿ ಪ್ರಕಟವಾಗುವ ಭಾಗ್ಯ ಕಂಡವು. ಆದರೆ ಮತಾಂತರದ ಉದ್ದೇಶ ಇಟ್ಟುಕೊಂಡು ಬಂದ ಕ್ರೈಸ್ತ ಪಾದ್ರಿಗಳು ನಿಜಗುಣರ ವೇದಾಂತ ಕೃತಿಗಳನ್ನು ಪ್ರಕಟಿಸಿದಂತೆ, ಒಂದೂ ವಚನ ಸಂಕಲನ ಪ್ರಕಟಿಸಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ. ಆದರೂ ಬಳ್ಳಾರಿಯ ಶಿವಲಿಂಗಶೆಟ್ರ ಮುದ್ರಣಾಲಯದಲ್ಲಿ ‘ಶಿಖಾರತ್ನ ಪ್ರಕಾಶ’ ಎಂಬ ಮೊದಲ ವಚನ ಸಂಕಲನ ಪುಸ್ತಕರೂಪದಲ್ಲಿ ಪ್ರಕಟಗೊಂಡಿತು. ಬಳ್ಳಾರಿ ಶೆಟ್ಟರ ಪ್ರಯತ್ನವಾಗಿ ಅಂಬಿಗರ ಚೌಡಯ್ಯನ ವಚನಗಳು, ಉರಿಲಿಂಗಪೆದ್ದಿ ವಚನಗಳು ಮೊದಲಾದ ಬೆರಳಣಿಕೆಯ ಕೃತಿಗಳು ಮಾತ್ರ ಪ್ರಕಟಗೊಂಡವು.

ವಚನ ಸಾಹಿತ್ಯ ಪ್ರಕಟನೆಯ ಇತಿಹಾಸದ ಘಟ್ಟಗಳನ್ನು ಗುರುತಿಸಿದ ಡಾ. ಕಲಬುರ್ಗಿ ಅವರು ಬಳ್ಳಾರಿ ಶೆಟ್ಟರ ಪ್ರಯತ್ನವನ್ನು ಆರಂಭದ ಘಟ್ಟವೆಂದು ಪರಿಭಾವಿಸುತ್ತಾರೆ. ಎರಡನೆಯ ಘಟ್ಟ ಡಾ. ಫ.ಗು.ಹಳಕಟ್ಟಿಯವರ ಶಿವಾನುಭವ ಗ್ರಂಥಮಾಲೆ, ಮತ್ತು ಶಿವಾನುಭವ ಪತ್ರಿಕೆಗಳ ಮೂಲಕ ೮೦ಕ್ಕೂ ಮಿಕ್ಕಿ ವಚನ ಕೃತಿಗಳನ್ನು ಪ್ರಕಟಿಸಿ ಒಂದು ದಾಖಲೆಯನ್ನೇ ನಿರ್ಮಿಸಿದರು. ಹಳಕಟ್ಟಿಯವರ ಯುಗವನ್ನು ಎರಡನೆಯ ಘಟ್ಟವೆಂದು ಡಾ. ಕಲಬುರ್ಗಿ ಅವರು ಕರೆದರು. ಮೂರನೆಯ ಘಟ್ಟ ಡಾ. ಆರ್.ಸಿ. ಹಿರೇಮಠ ಅವರ ನೇತೃತ್ವದಲ್ಲಿ ಸಾಂಘಿಕ ಪ್ರಯತ್ನವಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬಂದ ‘ವಚನ ವಾಙ್ಮಯ ಯೋಜನೆ’ಯಾಗಿದೆ. ಮೂರನೆಯ ಘಟ್ಟ ಪ್ರಾರಂಭವಾಗುವ ಸಂದರ್ಭದಲ್ಲಿ ಡಾ. ಕಲಬುರ್ಗಿ ಅವರು ಆರ್.ಸಿ.ಹಿರೇಮಠರ ಶಿಷ್ಯರಾಗಿ ಈ ಯೋಜನೆಯ ಸಹಾಯಕ ಸಂಪಾದಕರಾಗಿ ಆಯ್ಕೆಯಾದರು.

ಈ ಯೋಜನೆಯ ಮೊದಲ ಪ್ರಯತ್ನವಾಗಿ ‘ಚನ್ನಬಸವಣ್ಣನವರ ವಚನಗಳು’ ಕೃತಿ ಪ್ರಕಟವಾಯಿತು. ಚನ್ನಬಸವಣ್ಣನವರ ವಚನಗಳು ಬೇರೆ ಬೇರೆ ಸಂಗ್ರಹಗಳಲ್ಲಿ ಉಪಲಬ್ಧವಾಗಿದ್ದವು. ಮೊದಲು ಅಧಿಕೃತ ಹಸ್ತಪ್ರತಿಗಳನ್ನು ಆಯ್ಕೆ ಮಾಡಿ, ಅಲ್ಲಿ ದೊರೆಯುವ ಚನ್ನಬಸವಣ್ಣನವರ ವಚನಗಳನ್ನು ಪ್ರತಿ ಮಾಡಿ, ಒಂದೇ ವಚನ ಬೇರೆ ಬೇರೆ ಕಡೆ ದೊರೆವಲ್ಲಿ ಅವೆಲ್ಲವುಗಳನ್ನು ತುಲನೆ ಮಾಡಿ ಅವುಗಳ ಸ್ವೀಕೃತ ರೂಪ ನಿಷ್ಕರ್ಷಿಸಿ ಮಿಕ್ಕ ರೂಪಗಳನ್ನು ಅಡಿಟಿಪ್ಪಣಿಯಲ್ಲಿ ಕೊಡುವ ಕಾರ್ಯ ಮಾಡಿದವರು ಡಾ. ಕಲಬುರ್ಗಿ ಅವರು.

ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನಗಳಿಗೆ ಲಿಂಗಾಯತ ಧಾರ್ಮಿಕ ಇತಿಹಾಸದಲ್ಲಿ ಅನನ್ಯವಾದ ಗೌರವವಿದೆ. ಬಸವಣ್ಣನವರ ವಚನಗಳು ಸಾಮಾಜಿಕ ಸಿದ್ಧಾಂತವನ್ನು ಕುರಿತು ಪ್ರತಿಪಾದಿಸಿದರೆ, ಪ್ರಭುದೇವರ ವಚನಗಳು ಶುದ್ಧ ಅಧ್ಯಾತ್ಮಜ್ಞಾನ ಕುರಿತು ಪ್ರತಿಪಾದಿಸುತ್ತವೆ. ಚನ್ನಬಸವಣ್ಣನವರ ವಚನಗಳು ಲಿಂಗಾಯತ ವ್ಯಕ್ತಿಯೊಬ್ಬ ಪರಶಿವನೊಡನೆ ತಾದಾತ್ಮö್ಯ ಹೊಂದಲು, ಸಮರಸವಾಗಲು ಬೇಕಾದ ಅಂಶಗಳನ್ನು ನಮಗೆ ತೋರಿಸಿಕೊಟ್ಟಿವೆ. ಹೀಗಾಗಿ ಲಿಂಗಾಯತ ಧಾರ್ಮಿಕ ಚರಿತ್ರೆಯಲ್ಲಿ ಚನ್ನಬಸವಣ್ಣನವರ ವಚನಗಳಿಗೆ ಮಹತ್ವದ ಸ್ಥಾನವಿದೆ. ಹೀಗಾಗಿ ಅವರ ವಚನಗಳು ಪಾಠಾಂತರ ದೋಷಗಳಿಗೆ ಒಳಗಾಗಿವೆ. ಅನೇಕರು ಚನ್ನಬಸವಣ್ಣನವರ ಹೆಸರಿನಲ್ಲಿ ಏನೆಲ್ಲ ಸೇರಿಸಿರುವ ಸಾಧ್ಯತೆಗಳಿವೆ.

೮೦೦ ವರುಷಗಳ ಅವಧಿಯಲ್ಲಿ ಚನ್ನಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ಕೃತಿಗಳು ಹುಟ್ಟಿದ್ದು ವಿರಳವೆಂದೇ ಹೇಳಬೇಕು. ಹರಿಹರ ೨೫ಕ್ಕೂ ಮಿಕ್ಕಿ ಪ್ರಮುಖ ಶರಣರ ಕುರಿತು ರಗಳೆ ರಚಿಸಿದ್ದಾನೆ. ಆದರೆ ಚನ್ನಬಸವಣ್ಣನವರ ವಿಷಯದಲ್ಲಿ ಮೌನವಹಿಸಿದ್ದಾರೆ. ರಾಘವಾಂಕ ‘ಸಿದ್ಧರಾಮ ಚಾರಿತ್ರ’ ಬರೆದಿದ್ದಾನೆ. ಅವನೂ ಚನ್ನಬಸವಣ್ಣನವರ ವಿಷಯವಾಗಿ ಏನೂ ಹೇಳಿಲ್ಲ. ೧೫೮೪ರಲ್ಲಿ ಮೊದಲ ಬಾರಿಗೆ ವಿರೂಪಾಕ್ಷ ಪಂಡಿತ ‘ಚನ್ನಬಸವ ಪುರಾಣ’ ಎಂಬ ಕೃತಿಯನ್ನು ರಚಿಸಿದ್ದಾನೆ. ಹೆಸರಿಗೆ ಮಾತ್ರ ಚೆನ್ನಬಸವ ಪುರಾಣ; ಅದರಲ್ಲಿ ಚೆನ್ನಬಸವಣ್ಣನವರ ವಿಷಯ ತುಂಬ ಕ್ವಚಿತ್ತಾಗಿ ಬಂದಿದೆ. ಹೀಗಾಗಿ ಚನ್ನಬಸವಣ್ಣನವರ ವಿಷಯವಾಗಿ ಧಾರ್ಮಿಕ ಜಗತ್ತಿನಲ್ಲಿ ಅನೇಕ ಗೊಂದಲಗಳು ಉಳಿದುಕೊಂಡಂತೆ ಅವರ ವಚನಗಳು ಕೂಡ ಸಂದೇಹಕ್ಕೆ ಎಡೆ ಮಾಡಿಕೊಟ್ಟಿವೆ.

ಚನ್ನಬಸವಣ್ಣನವರ ಷಟ್ ಸ್ಥಲ ವಚನ ಮಹಾಸಂಪುಟ

ಚನ್ನಬಸವಣ್ಣನವರ ವಚನಗಳ ಷಟ್ಸ್ಥಲ ಕಟ್ಟುಗಳು ಮೂರು ವಿಧವಾಗಿ ದೊರೆಯುತ್ತವೆ. ೧. ಚೆನ್ನಬಸವರಾಜದೇವರ ಷಡುಸ್ಥಲ ವಚನ, ೨. ಚೆನ್ನಬಸವಣ್ಣನವರು ನಿರೂಪಿಸಿದ ಅನುಭಾವ ಷಟ್ಸ್ಥಲದ ವಚನಂಗಳು, ೩. ಚೆನ್ನಬಸವಣ್ಣನವರ ಷಡುಸ್ಥಲದ ನಿರ್ಣಯ.

ಈ ಮೂರೂ ಕೃತಿಗಳನ್ನು ಕೂಡಿಸಿ ಡಾ. ಕಲಬುರ್ಗಿಯವರು ಷಟ್ಸ್ಥಲ ವಚನ ಮಹಾಸಂಪುಟವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ಮೊದಲಿನ ಕಟ್ಟಿನಲ್ಲಿ ೮೭೧ ವಚನಗಳಿವೆ. ಇದರಲ್ಲಿ ೮೧ ಹೊಸ ವಚನಗಳು ದೊರೆತಿವೆ.

ಎರಡನೆಯ ಕೃತಿಯಲ್ಲಿ ೩೨೩ ವಚನಗಳಿವೆ. ಈ ಕೃತಿಯನ್ನು ಈ ಮೊದಲು ಡಾ. ಹಳಕಟ್ಟಿಯವರು ತಮ್ಮ ಶಿವಾನುಭವ ಗ್ರಂಥಮಾಲೆಯಲ್ಲಿ ಪ್ರಕಟಿಸಿದ್ದರು. ಇದನ್ನು ಪರಿಷ್ಕರಿಸಿ ಇಲ್ಲಿ ನೀಡಲಾಗಿದೆ.

ಮೂರನೆಯ ಕೃತಿಯಲ್ಲಿ ೧೨೨ ವಚನಗಳಿವೆ. ಇದು ವಿಶೇಷ ಕೃತಿಯಾಗಿದೆ. ಈ ಮೂರು ಕೃತಿಗಳನ್ನು ಅತ್ಯಂತ ಶ್ರಮವಹಿಸಿ ಶೋಧಿಸಿ ಸಂಪಾದಿಸಿದ್ದಾರೆ ಡಾ. ಕಲಬುರ್ಗಿಯವರು. ಇಷ್ಟಾಗಿಯೂ ಈ ಸಂಪುಟ ಪಾಠಾಂತರ ದೋಷಕ್ಕೆ ಒಳಗಾಗಿದೆ ಎಂಬುದನ್ನು ಹೀಗೆ ಸ್ಪಷ್ಟಪಡಿಸಿದ್ದಾರೆ.

‘ವಚನಸಾಹಿತ್ಯದಲ್ಲಿ ಸಿದ್ಧರಾಮನ ಹೆಸರಿನಲ್ಲಿ ಪ್ರಕ್ಷಿಪ್ತ ವಚನಗಳ ಪ್ರಮಾಣ ಅಧಿಕವಾಗಿದ್ದರೆ, ಚೆನ್ನಬಸವಣ್ಣನವರ ವಚನಗಳಿಗೆ ಪಾಠಾಂತರ ಪ್ರಮಾಣ ಹೇರಳವಾಗಿದೆ. ಸಿದ್ಧರಾಮ ಶೈವರಿಂದ ವೀರಶೈವಕ್ಕೆ ಬಂದ ವಿಷಯವಾಗಿ ಇತಿಹಾಸದುದ್ದಕ್ಕೂ ಬೆಳೆದು ಬಂದಿರಬಹುದಾದ ವಾದ-ಪ್ರತಿವಾದಗಳ ಸಮರ್ಥನೆಗಾಗಿ ಪಕ್ಷ-ಪ್ರತಿಪಕ್ಷದವರು ಕೂಟವಚನಗಳನ್ನು ಹೇರಳ ಸಂಖ್ಯೆಯಲ್ಲಿ ಹುಟ್ಟಿಸಿದರೆಂದು ತೋರುತ್ತದೆ. ಚೆನ್ನಬಸವಣ್ಣನವರ ವಚನಗಳಿಗೆ ಕೂಟ ವಚನಗಳಿಗಿಂತ ಹೇರಳ ಭಿನ್ನಪಾಠ ಹುಟ್ಟಲು ಬೇರೆ ಕಾರಣವಿದೆ. ಚನ್ನಬಸವಣ್ಣನವರ ವಚನಗಳ ಮುಖ್ಯವಸ್ತು ಧಾರ್ಮಿಕತತ್ವ. ಧರ್ಮದ ವಾರಸುದಾರರು ಕಾಲಕ್ಕೆ ತಕ್ಕಂತೆ ಮತ್ತು ತಮ್ಮ ತತ್ವಾಭಿರುಚಿಗೆ ತಕ್ಕಂತೆ ಇಲ್ಲಿಯ ಪಾಠಗಳನ್ನು ಲೋಪ-ಆಗಮ-ಆದೇಶ ರೂಪದಲ್ಲಿ ಮಾರ್ಪಾಡುಗೊಳಿಸುತ್ತ ಬಂದುದೇ ಇದಕ್ಕೆ ಕಾರಣವಾಗಿರಬಹುದು. ಆದುದರಿಂದ ಚೆನ್ನಬಸವಣ್ಣನವರ ವಚನಗಳು ಸಂಕ್ಷಿಪ್ತ ಪಾಠಸಂಪ್ರದಾಯ, ವಿಸ್ತಾರಪಾಠಸಂಪ್ರದಾಯ ಇತ್ಯಾದಿ ರೀತಿಗಳಲ್ಲಿ ರೂಪಗೆಡುತ್ತ ಬಂದವು. ಮೇಲಾಗಿ ಎಲ್ಲರ ವಚನಗಳಿಗಿಂತ ಚೆನ್ನಬಸವಣ್ಣನವರ ವಚನಗಳು ಧಾರ್ಮಿಕ ಸಂದರ್ಭದಲ್ಲಿ ಹೆಚ್ಚು ಪ್ರಯೋಜಕವೆನಿಸುವುದರಿಂದ, ಅವುಗಳ ಲಿಪಿಕರಣ ಕಾರ್ಯವೂ ಪದೇ ಪದೇ ನಡೆದಿದೆ. ಈಗ ಲಿಪಿಕಾರರ ಅಜ್ಞಾನ, ಅನ್ಯಥಾಜ್ಞಾನ, ಅನವಧಾನ ಗಳಿಂದಾಗಿಯೂ ಈ ಪಾಠಾಂತರ ಕ್ರಿಯೆ ವರ್ಧಿಸಿದೆ.’

ಪ್ರಸ್ತುತ ಸಂಪುಟದಲ್ಲಿ ಹೇರಳವಾಗಿ ಬಳಕೆಯಾದ ಸಂಸ್ಕೃತ ಶ್ಲೋಕಗಳಿಗೆ ಮೂಲ ಪಠ್ಯ ಹುಡುಕಿ ಪರಿಷ್ಕರಿಸುವ ಪ್ರಯತ್ನ ಮಾಡಿದ್ದು ಡಾ. ಕಲಬುರ್ಗಿಯವರ ಸಂಯಮಕ್ಕೆ ಸಾಕ್ಷಿಯಾಗಿದೆ. ಈ ಸಂಪುಟದ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಮುದ್ರಿಕೆ ಪಲ್ಲಟ. ಬಸವಣ್ಣ ಮತ್ತು ಚನ್ನಬಸವಣ್ಣನವರ ವಚನಗಳು ಪರಸ್ಪರ ಪಲ್ಲಟಗೊಂಡಿರುವುದನ್ನು ತಮ್ಮ ಸೂಕ್ಷ್ಮ ಸಂಪಾದನಾ ಚಾತುರ್ಯದಿಂದ ಕಂಡು ಹಿಡಿದು ಸರಿಪಡಿಸಿದ್ದಾರೆ.

ವಚನ ಸಂಕಲನ ಸಂಪುಟ-೪

ಚಿಕ್ಕ ಚಿಕ್ಕ ವಚನ ಸಂಕಲನಗಳು ದೊರೆತರೆ, ಅವುಗಳನ್ನು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ರೂಪಿಸಿದವರು ಡಾ. ಎಂ. ಎಂ. ಕಲಬುರ್ಗಿಯವರು. ನಾಲ್ಕನೆಯ ಸಂಪುಟವನ್ನು ಅವರೇ ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಚನ್ನಬಸವಣ್ಣನವರ ಮಿಶ್ರಷಟ್ಸ್ಥಲದ ವಚನ ಕೃತಿಯನ್ನು ಡಾ. ಕಲಬುರ್ಗಿಯವರು ಪರಿಷ್ಕರಿಸಿ ಸಂಪಾದಿಸಿದ್ದಾರೆ.

ಚೆನ್ನಬಸವೇಶ್ವರ ಷಟ್ಸ್ಥಲ ವಚನ ಮಹಾಸಂಪುಟ ಪ್ರಕಟಿಸಿದಾಗಲೇ ಅವರು ‘ಮುಂದೆ ಆಗಬೇಕಾದ ಕಾರ್ಯ’ವೆಂದು ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದರು. ಚನ್ನಬಸವಣ್ಣನವರ ಇನ್ನೂ ಮೂರು ರೀತಿಯ ಮಿಶ್ರಷಟ್ಸ್ಥಲ ಹಸ್ತಪ್ರತಿಗಳು ಪರಿಷ್ಕರಣವಾಗಬೇಕಿದೆ ಎಂದು ಸೂಚಿಸಿದ್ದರು. ಒಂದು ಮಿಶ್ರಷಟ್ಸ್ಥಲ ವಚನದ ಹಸ್ತಪ್ರತಿ ಲಂಡನ್ನಿನ ಬ್ರಿಟಿಷ್ ಲೈಬ್ರರಿ ರೆಫರನ್ಸ್ ಡಿವಿಜನ್ ಸಂಸ್ಥೆಯಲ್ಲಿರುವುದನ್ನು ಶೋಧಿಸಿದ್ದರು. ಉಳಿದ ಮೂರು ಕೃತಿಗಳು ಪ್ರಕಟಗೊಂಡರೆ ಚನ್ನಬಸವಣ್ಣನವರಿಗೆ ಸಂಬಂಧಿಸಿದ ಕರ್ಯ ಪೂರ್ಣಗೊಳ್ಳುವುದೆಂದು ಅವರು ಭಾವಿಸಿದ್ದರು.

‘ಸಂಯೋಜನ ಸಾಹಿತ್ಯ’ಯೆಂಬುದು ಸ್ವತಂತ್ರ ಸೃಷ್ಟಿಯಲ್ಲ. ವಚನವೆಂಬ ಸ್ವತಂತ್ರಸೃಷ್ಟಿಯನ್ನು ಬಳಸಿಕೊಂಡು ಹುಟ್ಟಿದ ಪುನಃಸೃಷ್ಟಿಯಾಗಿದೆ. ಇದರಲ್ಲಿ ಸಂಗ್ರಹ, ಸಂಕಲನ, ಸಂಪಾದನ ಎಂಬ ಮೂರು ಪ್ರಕಾರಗಳನ್ನು ಕಾಣುತ್ತೇವೆ. ಸಂಗ್ರಹಕ್ಕೆ ಶ್ರಮ ಸಾಕು, ಸಂಕಲನಕ್ಕೆ ಹೆಚ್ಚಿನದಾಗಿ ಪಾಂಡಿತ್ಯಬೇಕು, ಸಂಪಾದನೆಗೆ ಇನ್ನೂ ಹೆಚ್ಚಿನದಾಗಿ ಪ್ರತಿಭೆ ಬೇಕು. ಇವುಗಳಿಗೆ ಕ್ರಮವಾಗಿ ಸಕಲ ಪುರಾತನರ ವಚನಕಟ್ಟುಗಳು, ಲಿಂಗಲೀಲಾವಿಲಾಸ ಚಾರಿತ್ರ, ಶೂನ್ಯಸಂಪಾದನೆ ಉದಾಹರಣೆಯೆನಿಸಿವೆ. ಪ್ರಸ್ತುತ ‘ಮಿಶ್ರಷಟ್ಸ್ಥಲದ ವಚನ’ ಇವುಗಳಲ್ಲಿ ‘ಸಂಕಲನ’ ಪ್ರಕಾರಕ್ಕೆ ಸೇರುತ್ತದೆ.

ಪ್ರಸ್ತುತ ಕೃತಿಯಲ್ಲಿ ೪೭ ವಚನಗಳಿವೆ. ಇಲ್ಲಿ ಒಟ್ಟು ೩೬ ಸ್ಥಲಗಳಿವೆ. ೧೮ ಸ್ಥಲ ಸಾಕಾರಸ್ಥಲಕ್ಕೆ ಸಂಬಂಧಿಸಿದರೆ, ೧೮ ನಿರಾಕಾರಸ್ಥಲಕ್ಕೆ ಸಂಬಂಧಿಸಿವೆ. .

ವಚನ ಸಂಕಲನ ಸಂಪುಟ-೬

ಡಾ. ಎಂ. ಎಂ. ಕಲಬುರ್ಗಿಯವರು ಒಂದು ವಿಷಯದ ಬೆನ್ನು ಹತ್ತಿದರೆ, ಅದು ಪೂರ್ಣಗೊಳ್ಳುವವರೆಗೆ ವಿರಮಿಸುವವಲ್ಲ. ಚನ್ನಬಸವಣ್ಣನವರ ವಚನ ಸಂಕಲನದ ನಾಲ್ಕು ಕೃತಿಗಳನ್ನು ಶೋಧಿಸಿ ಪ್ರಕಟಿಸಿದ ಅವರಿಗೆ ಇನ್ನೆರಡು ಕೃತಿಗಳನ್ನು ಶೋಧಿಸಿ ಪ್ರಕಟಿಸಬೇಕೆಂಬ ತವಕ. ಈ ತವಕ ಕಾರಣವಾಗಿ ಅವರು ಹಸ್ತಪ್ರತಿಗಳನ್ನು ಶೋಧಿಸುತ್ತಲೇ ಇದ್ದರು.

ಮದ್ರಾಸ್ ಓರಿಯಂಟಲ್ ರಿಸರ್ಚ ಲೈಬ್ರರಿಯಿಂದ ಶೋಧಿಸಿದ ‘ಚನ್ನ ದಣ್ಣಾಯಕರ ವಚನ’ ಎಂಬ ತಾಳೆ ಪ್ರತಿಯನ್ನು ಪ್ರಸ್ತುತ ಸಂಪುಟದಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ೧೮೦ ವಚನಗಳಿವೆ. ಇದರಲ್ಲಿ ೨೧ ಹೊಸ ವಚನಗಳು ದೊರೆತಿರುವುದು ವಿಶೇಷ. ಹಸ್ತಪ್ರತಿ ಖಿಲವಾಗಿದ್ದರೂ ಇದ್ದ ಒಂದು ಹಸ್ತಪ್ರತಿಯೂ ಕಳೆದು ಹೋಗಬಾರದೆಂಬ ಕಾರಣಕ್ಕೆ ಇಲ್ಲಿ ಪರಿಷ್ಕರಿಸಿ ಸಂಪಾದಿಸಿದ್ದಾರೆ.

ಇಡೀ ಹಸ್ತಪ್ರತಿ ಖಿಲವಾಗಿತ್ತು. ಎಲ್ಲ ಗರಿಗಳು ದುಸ್ಥಿತಿಯಲ್ಲಿದ್ದವು. ಹಾಗೆಯೇ ಅನೇಕ ವಚನಗಳ ಪಾಠಾಂತರ ಗೊತ್ತಾಗದ ಸಂದರ್ಭದಲ್ಲಿ ತುಂಬ ಕಷ್ಟಪಟ್ಟು ಡಾ. ಕಲಬುರ್ಗಿಯವರು ವಚನಪಾಠ ನಿರ್ಣಯ ಮಾಡಿರುವುದು ಅವರ ವಚನ ಅಧ್ಯಯನದ ಅಪಾರ ಜ್ಞಾನಕ್ಕೆ ಸಾಕ್ಷಿಯಾಗಿದೆ.

‘ಚೆನ್ನಬಸವೇಶ್ವರ ದೇವರ ಮಿಶ್ರಷಟ್ಸ್ಥಲದ ವಚನ’ ಇದೂ ಕೂಡ ಒಂದು ಅಪರೂಪದ ಕೃತಿ. ಈ ಕೃತಿಯಲ್ಲಿ ೨೫೦ ವಚನಗಳಿವೆ. ಕವಿಚರಿತೆಯಲ್ಲಿ ಉಕ್ತವಾಗಿದ್ದ ಈ ಕೃತಿ ಈವರೆಗೆ ವಿದ್ವಾಂಸರ ಕಣ್ಣುತಪ್ಪಿಸಿ ಅಲೆದಾಡುತ್ತಿತ್ತು. ಈ ಕೃತಿಯ ಹಸ್ತಪ್ರತಿ ದೊರೆತದ್ದು ಮೈಸೂರು ಮಹಾರಾಜಾ ಸಂಸ್ಕೃತ ಮಹಾಪಾಠಶಾಲೆಯ ಸರಸ್ವತಿ ಭಂಡಾರದಲ್ಲಿ.

ಹೀಗೆ ಶರಣಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಹಸ್ತಪ್ರತಿ ಇರಲಿ. ಅವುಗಳನ್ನು ಹುಡುಕಿ ಶೋಧಿಸಿ ಪರಿಷ್ಕರಿಸಿ ಸಂಪಾದಿಸಿ ಪ್ರಕಟಿಸಿದ ಶ್ರೇಯಸ್ಸು ಡಾ. ಕಲಬುರ್ಗಿ ಅವರದು. ಲಿಂಗಾಯತ ಅಧ್ಯಯನ ಸಂಸ್ಥೆಯೊಂದರಿಂದಲೇ ನೂರಕ್ಕೂ ಮಿಕ್ಕಿ ವಚನ ಸಂಕಲನಗಳು ಪ್ರಕಟವಾಗುವಂತೆ ನೋಡಿಕೊಂಡರು. ಹೆಸರು ಕೆಲಸದ ವೈರಿ ಎಂದು ಭಾವಿಸಿ ತಮ್ಮ ಶಿಷ್ಯರಿಂದ ಕೆಲವು ಹಸ್ತಪ್ರತಿಗಳನ್ನು ಪರಿಷ್ಕರಿಸಿ ತಮ್ಮ ಮೇಲು ಉಸ್ತುವಾರಿಯಲ್ಲಿ ಕೆಲವು ಕೃತಿಗಳನ್ನು ಪ್ರಕಟಿಸಿದರು.

ಗ್ರಂಥಸಂಪಾದನೆ ಒಂದು ಶಾಸ್ತ್ರವೂ ಹೌದು. ಆದರೆ ಎಲ್ಲ ಗ್ರಂಥಗಳಿಗೂ ಒಂದೇ ತತ್ವ ಅನ್ವಯವಾಗದು. ಮ್ಯಾಕ್ಸಮ್ಮುಲ್ಲರ, ಬ್ಲೂಮಫೀಲ್ಡ್, ಬ್ರುಕ್ನರ್ ಮೊದಲಾದ ವಿದೇಶಿ ಪಂಡಿತರು ಋಗ್ವೇದವನ್ನು ಪರಿಷ್ಕರಣ ಮಾಡುವಾಗ ಅನುಸರಿಸಿದ ತತ್ವ ಇಂಗ್ಲಂಡಿನಲ್ಲಿ ವಿದೇಶಿ ಪಂಡಿತರು ಶೇಕ್ಸ್ಪಿಯರ್ನ ನಾಟಕಗಳನ್ನು ಪರಿಷ್ಕರಿಸುವಾಗ ಸಂಪೂರ್ಣವಾಗಿ ಅನ್ವಯವಾಗಲಿಲ್ಲ. ಅವರು ಮತ್ತೆ ಕೆಲವು ಹೊಸ ನಿಯಮಗಳನ್ನು ಕಲ್ಪಿಸಿಕೊಳ್ಳಬೇಕಾಯಿತು. ಡೆಕ್ಕನ್ ಕಾಲೇಜಿನಲ್ಲಿ ಎಜರಟನ್ ಮೊದಲಾದವರು ಮಹಾಭಾರತವನ್ನು ಸಂಪಾದಿಸುವಾಗ ಅದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಗುರುತಿಸಿಕೊಂಡು ಪ್ರಕ್ಷಿಪ್ತ ಭಾಗಗಳನ್ನು ಹೊರಗಿರಿಸಿದರು. ವಚನಸಾಹಿತ್ಯದಲ್ಲಿ ಕೆಲಸ ಮಾಡಿದವರು ಶರಣರು. ನುಡಿದಂತೆ ನಡೆಯುವುದು ಶರಣಧರ್ಮ. ಶರಣರ ವಚನಗಳಲ್ಲಿ ಇವರೇ ಪ್ರಕ್ಷಿಪ್ತಭಾಗಗಳನ್ನು ಸೇರಿಸಿರಲು ಸಾಧ್ಯವಿಲ್ಲ. ಏಕೆಂದರೆ, ಅದು ಅವರ ತತ್ವಕ್ಕೆ ವಿರುದ್ಧವಾದುದು. ಈ ಕಾರಣಕ್ಕಾಗಿ ಈಗ ಪ್ರಕಟವಾಗಿದ್ದ ಕೆಲವು ವಚನಗಳ ಶೈಲಿಗೆ ಹೊಂದದಂತಹ ವಚನಗಳನ್ನು ಪ್ರಕ್ಷಿಪ್ತವೆಂದು ಘೋಷಿಸುವುದು ಸಾಹಸದ ಮಾತಾದೀತು. ಮೊದಲು ಉಪಲಬ್ಧವಿದ್ದ ವಚನಸಾಹಿತ್ಯ ಪ್ರಕಟವಾಗಲಿ, ನಂತರ ಇಡೀ ಚಿತ್ರವನ್ನು ಮುಂದಿಟ್ಟುಕೊಂಡು ಸಮಗ್ರ ದೃಷ್ಟಿಯಲ್ಲಿ ಆಯಾ ವಚನಕಾರರ ಶೈಲಿಯ ಲಕ್ಷಣವನ್ನು ಜೀವನ ಸಿದ್ಧಾಂತ, ದೃಷ್ಟಿಕೋನಗಳನ್ನು ನಿರ್ಣಯಿಸಿ ಪ್ರಕ್ಷಿಪ್ತ ಭಾಗಗಳನ್ನು ತೆಗೆಯಬಹುದೆಂಬುದು ಡಾ. ಆರ್. ಸಿ. ಮತ್ತು ಡಾ. ಕಲಬುರ್ಗಿ ಅವರ ವಿಚಾರವಾಗಿತ್ತು. ‘ಚನ್ನಬಸವಣ್ಣನವರ ವಚನಗಳು’ ಕೃತಿ ಪ್ರಕಟನೆಯ ತರುವಾಯ, ಅಲ್ಲಮಪ್ರಭುದೇವರ ವಚನಗಳು, ಇಪ್ಪತ್ತೇಳು ಶರಣೆಯರ ವಚನಗಳು, ಬಸವಣ್ಣನವರ ವಚನಗಳು, ಸಿದ್ಧರಾಮೇಶ್ವರ ವಚನಗಳು, ಆಮುಗೆ ರಾಯಮ್ಮನ ಮತ್ತು ಅಕ್ಕಮ್ಮನ ವಚನಗಳು’ ‘ಶೂನ್ಯಸಂಪಾದನೆ’ ‘ಸಕಲ ಪುರಾತನರ ವಚನಗಳು’ ‘ಬ್ರಹ್ಮಾದ್ವೈತ ಸಿದ್ಧಾಂತ- ಷಟ್ಸ್ಥಲಾಭರಣ’ ‘ವಿಶೇಷಾನುಭವ ಷಟ್ಸ್ಥಲ’ ಮೊದಲಾದ ಮೂವತ್ತಕ್ಕೂ ಹೆಚ್ಚು ವಚನಸಂಕಲನಗಳು ಪ್ರಕಟಗೊಂಡವು. ಇಡೀ ನಾಡಿಗೆ ನಾಡೇ ಹೆಮ್ಮೆ ಪಟ್ಟಿತು. ಇಂಥ ಸಂದರ್ಭದಲ್ಲಿ ೧೯೭೧ರಲ್ಲಿ ಮುಕ್ತಿಕಂಠಾಭರಣ ಎಂಬ ಸಂಕಲನವೊಂದನ್ನು ಡಾ. ಆರ್. ಸಿ. ಹಿರೇಮಠ ಅವರು ಪ್ರಕಟಿಸಿದರು. ಶರಣರ ಚಾರಿತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಸ್ವಜಾತಿಯ ಜನರೇ ಅವರ ವಿರುದ್ಧ ಹೋರಾಟ ಮಾಡಿದರು. ಈ ವಿಷಯವಾಗಿ ಡಾ. ಕಲಬುರ್ಗಿ ಅವರು ಹೇಳುವ ಮಾತುಗಳು ಮೌಲಿಕವಾಗಿವೆ:

‘ವಚನಸಾಹಿತ್ಯದ ಬಗ್ಗೆ ಡಾ. ಆರ್.ಸಿ.ಹಿರೇಮಠ ಅವರಿಗೆ ಇದ್ದ ಅತಿಯಾದ ಭಕ್ತಿ, ವ್ಯಾಮೋಹಗಳೇ ಅವರಿಂದ ಇಷ್ಟು ಕೆಲಸ ಮಾಡಿಸಿದವು. ಆದರೆ ಜನತೆ ಇದೆಲ್ಲವನ್ನು ಮರೆಯಿತು. ಕಾರ್ಯಬಾಹುಳ್ಯದಲ್ಲಿ ನುಸುಳಿಬಂದ ಒಂದು ದೋಷವನ್ನು ದೊಡ್ಡದು ಮಾಡಿ ವ್ಯಕ್ತಿಗಳು, ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಸೇರಿ ಅವರ ಇಡೀ ಸೇವೆ-ಶ್ರಮಗಳಿಗೆ ಏನೂ ಅರ್ಥವಿಲ್ಲವೇನೋ ಎಂಬಂತೆ ವ್ಯವಸ್ಥಿತವಾಗಿ ವಿರೋಧ ವ್ಯಕ್ತಪಡಿಸಿದವು. ಸಾಲದುದಕ್ಕೆ ಈ ಕೆಲಸ ಶಾಶ್ವತವಾಗಿ ನಿಂತುಹೋಗುವ ಸಲುವಾಗಿ ವಿಶ್ವವಿದ್ಯಾಲಯ, ಕರ್ನಾಟಕ ಸರಕಾರ, ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ ಗಳಲ್ಲಿಯೂ ವಿರೋಧ ಹುಟ್ಟುವಂತೆ ನೋಡಿಕೊಂಡವು. ಇದರಿಂದಾಗಿ, ಸಣ್ಣ ದೋಷವನ್ನು ಮುಂದುಮಾಡಿಕೊಂಡು ದೊಡ್ಡ ಕೆಲಸವನ್ನು ಹೇಗೆ ತಡೆದು ನಿಲ್ಲಿಸಬಹುದೆಂಬುದಕ್ಕೆ ಮುಂದಿನವರಿಗೆ ಒಂದು ದಾರಿಯನ್ನೇ ತೋರಿಸಿ ಕೊಟ್ಟಂತಾಯಿತು. ಹುಬ್ಬಳ್ಳಿ-ಧಾರವಾಡ ಪ್ರದೇಶ ಬಿಟ್ಟು, ಹಳಕಟ್ಟಿಯವರಂತೆ ಬೇರೆ ಪ್ರದೇಶದಲ್ಲಿ ಈ ಕಾರ್ಯ ನಡೆದಿದ್ದರೆ ಇದಕ್ಕೆ ಸರಿಯಾದ ಪ್ರಚಾರ ಸಿಗಬಹುದಾಗಿತ್ತೇನೋ. ಬೇರೊಬ್ಬರು ಮಾಡಿದ್ದರೆ ಬೇರೆ ರೀತಿಯ ದೋಷಗಳು ಉಳಿಯಬಹುದಿತ್ತೆಂಬುದನ್ನು ಮರೆತು, ವಿಮರ್ಶೆಯ ದಾರಿಯನ್ನು ಬಿಟ್ಟು ಜನತೆ ಪ್ರತಿಭಟನೆಯ ದಾರಿ ಹಿಡಿದ ಕಾರಣ, ಕನ್ನಡ ಅಧ್ಯಯನ ಪೀಠದಲ್ಲಿ ಈ ಕೆಲಸ ಅರ್ಧಕ್ಕೆ ನಿಂತುಬಿಟ್ಟಿತು. ಕನ್ನಡ ಅಧ್ಯಯನ ಪೀಠದಲ್ಲಿ ಜರುಗುವ ಪ್ರಾಮಾಣಿಕ ದುಡಿಮೆಗೆ, ಮಹತ್ವದ ಕೆಲಸಕ್ಕೆ ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಸಿಗುವುದಿಲ್ಲವೆಂಬುದಕ್ಕೆ ಇದು ಮೊದಲ ಉದಾಹರಣೆಯಾಯಿತು. (ವಚನ ಸಾಹಿತ್ಯ ಪ್ರಕಟನೆಯ ಇತಿಹಾಸ – ಅಧ್ಯಕ್ಷೀಯ ಮಾತು)

ಹೀಗೆ ಕನ್ನಡ ಅಧ್ಯಯನ ಪೀಠದ ತೃತೀಯ ಘಟ್ಟ ಅವನತಿ ಹೊಂದಿದ ಸಂದರ್ಭದಲ್ಲಿ ಅದನ್ನು ಕಣ್ಣಾರೆ ಕಂಡಿದ್ದ ಡಾ. ಕಲಬುರ್ಗಿ ಅವರ ಮನಸ್ಸು ಬಹಳ ನೊಂದಿತು. ಡಾ. ಕಲಬುರ್ಗಿ ಅವರೇ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿ ಬಂದ ನಂತರ ಸಾಂಸ್ಥಿಕ ಯೋಜನೆಗಳು ಅನುಷ್ಠಾನಗೊಳ್ಳುವುದು ಕಷ್ಟವೆನಿಸತೊಡಗಿತು. ನಂತರ ಸರಕಾರದ ತಪ್ಪು ನಿರ್ಧಾರ ಕಾರಣವಾಗಿ ಎರಡು ವರ್ಷಗಳಿಗೊಮ್ಮೆ ಮುಖ್ಯಸ್ಥರು ಬದಲಾಗುವ ಪ್ರಕ್ರಿಯೆ ಕಾರಣವಾಗಿ ಅಲ್ಲಿ ಯಾವ ಯೋಜನೆಗಳನ್ನು ರೂಪಿಸುವುದಕ್ಕೆ ಸಾಧ್ಯವಾಗದೇ ಹೋಯಿತು. ಅದಕ್ಕಾಗಿ ಅವರು ಸರಕಾರಿ ಸಂಸ್ಥೆಗಳಿಗಿಂತ ಬೇರೆ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು. ಆಗ ಅವರು ಆಯ್ಕೆ ಮಾಡಿಕೊಂಡಿದ್ದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠವನ್ನು.

ತೋಂಟದಾರ್ಯಮಠದ ಲಿಂಗಾಯತ ಅಧ್ಯಯನ ಸಂಸ್ಥೆ ಡಾ. ಕಲಬುರ್ಗಿ ಅವರ ನಿರ್ದೇಶನದಲ್ಲಿ ವಚನಸಾಹಿತ್ಯ ಪ್ರಕಟನೆಯ ನಾಲ್ಕನೆಯ ಘಟ್ಟ ತಲುಪಿ, ಅಂತಿಮ ನಿರ್ಣಯ ಕಂಡಿತು.

ತ್ರಿವಿಧ ದಾಸೋಹಮೂರ್ತಿಗಳು, ಕನ್ನಡ ಕುಲಗುರುಗಳು, ಪುಸ್ತಕದ ಸ್ವಾಮೀಜಿ ಎಂದೇ ಖ್ಯಾತರಾದ ಪೂಜ್ಯ ಶ್ರೀ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ತೋಂಟದಾರ್ಯಮಠ ಎಡೆಯೂರು ಡಂಬಳ ಗದಗ ಅವರ ಸಂಕಲ್ಪ ಕಾರಣವಾಗಿ, ನಾಡಿನ ಖ್ಯಾತ ಸಂಶೋಧಕರೂ ವಚನ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದವರೂ, ಪ್ರಖರ ಚಿಂತಕರೂ ಆದ ಡಾ. ಎಂ. ಎಂ. ಕಲಬುರ್ಗಿ ಅವರ ಕ್ರಿಯಾಶೀಲ ಯೋಜನಾ ಮನಸ್ಸು ಕಾರಣವಾಗಿ ೧೯೭೫ರಲ್ಲಿ ‘ಲಿಂಗಾಯತ ಅಧ್ಯಯನ ಸಂಸ್ಥೆ’ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯ ಮೂಲಕವೇ ಚನ್ನಬಸವಣ್ಣನವರ ಬಹಳ ಪ್ರಮುಖವಾದ ಷಟ್ ಸ್ಥಲ ವಚನ ಸಂಕಲನಗಳು, ಮಿಶ್ರಷಟ್ ಸ್ಥಲ ವಚನ ಸಂಕಲನಗಳು ಪ್ರಕಟವಾದವು. ಅಂತೆಯೆ ಸಮಸ್ತ ಲಿಂಗಾಯತ ಸಮುದಾಯ ಗದುಗಿನ ಜಗದ್ಗುರು ಮಹಾಸನ್ನಿಧಿಯವರಿಗೆ ಮತ್ತು ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಸದಾ ಋಣಿಯಾಗಿರಬೇಕು.

Share This Article
Leave a comment

Leave a Reply

Your email address will not be published. Required fields are marked *