ಬೆಂಗಳೂರು
ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗೆ ಜಿಲ್ಲಾಡಳಿತ ಧಾರವಾಡದಿಂದಲೂ ನಿರ್ಬಂಧ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.
ನವೆಂಬರ್ 5 ರಿಂದ ಜನೆವರಿ 3, 2026 ರವರೆಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ, ಎಂದು ಈದಿನ ವರದಿ ಮಾಡಿದೆ.
“ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ರ ಕಲಂ 163 (1), (2) ಮತ್ತು (3) ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಹಾರಾಷ್ಟ್ರ ಬೀಳೂರು ಗ್ರಾಮದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತತೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ನವೆಂಬರ್ 05, 2025 ರಿಂದ ಜನೆವರಿ 03, 2026 ರವರೆಗೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿ, ನವೆಂಬರ್ 4 ರಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ,” ಎಂದು ವರದಿ ವಿವರಿಸಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಇದೀಗ ಧಾರವಾಡ ಜಿಲ್ಲಾ ಪ್ರವೇಶಕ್ಕೂ ನಿರ್ಬಂಧಿಸಲಾಗಿದೆ, ಎಂದು TV 9 ವರದಿ ಮಾಡಿದೆ.
“ಕನ್ನೇರಿ ಶ್ರೀಗಳಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ. ನವೆಂಬರ್ 7ರಂದು ಅಣ್ಣಿಗೇರಿಯ ಕಾರ್ಯಕ್ರಮ ಸಂಬಂಧ ಕನ್ನೇರಿ ಶ್ರೀಗಳು ಧಾರವಾಡಕ್ಕೆ ಆಗಮಿಸಬೇಕಿತ್ತು. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಡಿಸಿ ಈ ಕ್ರಮ ಕೈಗೊಂಡಿದ್ದಾರೆ,” ಎಂದು TV9 ವಿವರಿಸಿದೆ.
ಮೊನ್ನೆಯಿಂದಲೇ ಕೆಲವು ಹಿಂದುತ್ವ ಮಾಧ್ಯಮಗಳು ನಿರ್ಬಂಧ ಆದೇಶ ಬಂದಿದೆ ಎಂದು ವರದಿ ಮಾಡುತ್ತಿವೆ. ನೆನ್ನೆ ಮಧ್ಯಾಹ್ನ “ಬಸವ ಸಂಘಟನೆಗಳ ಮನವಿಯನ್ನು ಡಿಸಿ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ,” ಎಂದು ಹಿರಿಯ ಅಧಿಕಾರಿಯೊಬ್ಬರು ಬಸವ ಮೀಡಿಯಾಗೆ ತಿಳಿಸಿದ್ದರು.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ನವೆಂಬರ್ 7 ಕನ್ನೇರಿ ಸ್ವಾಮಿ ಬರಲಿದ್ದಾರೆಂದು ತಿಳಿದು ಬಂದಿದೆ. ಅವರು ಜಿಲ್ಲೆಗೆ ಬಂದರೆ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆಯೆಂದು ಅಣ್ಣಿಗೇರಿ ಮತ್ತು ಧಾರವಾಡದಲ್ಲಿ ಬಸವ ಸಂಘಟನೆಗಳು ಸರಕಾರವನ್ನು ಎಚ್ಚರಿಸಿವೆ.
