ಗದಗ
“ಗದಗ ಜಿಲ್ಲೆಯ ಜೀವನಾಡಿ, ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಕಪ್ಪತಗುಡ್ಡ ಹೆಸರು ಹೊಂದಿದೆ. ಏಷ್ಯಾದಲ್ಲಿಯೇ ಅತ್ಯುತ್ತಮ ಹವಾಮಾನ, ಶುದ್ಧಗಾಳಿ ಇರುವ ಎರಡು ಜಿಲ್ಲೆಗಳಲ್ಲಿ ಗದಗ ಜಿಲ್ಲೆಯೂ ಒಂದು. ಇದಕ್ಕೆ ಕಾರಣ ಆಗಿರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಬಾರದು. ನೀಡಿದರೆ ಹೋರಾಟ ಮಾಡುತ್ತೇವೆ” ಎಂದು ಸಾಮಾಜಿಕ ಕಾರ್ಯಕರ್ತ, ಸಾಹಿತಿ ಬಸವರಾಜ ಸೂಳಿಬಾವಿ ಎಚ್ಚರಿಕೆ ನೀಡಿದ್ದಾರೆ.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಉತ್ತರ ಕರ್ನಾಟಕದ ಸಸ್ಯಕಾಶಿ ಕಪ್ಪತಗುಡ್ಡದಲ್ಲಿ ಕರ್ನಾಟಕ ಸರಕಾರ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡುವುದನ್ನು ಖಂಡಿಸಿ ಮಾತನಾಡಿದರು.
“ಬಯಲುಸೀಮೆಯ ಜೀವಾಳ ಕಪ್ಪತಗುಡ್ಡ ಕೇವಲ ಸಸ್ಯಕಾಶಿ ಅಷ್ಟೇ ಅಲ್ಲ. ಇಲ್ಲಿರುವ ಮಳೆಬೆಳೆಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಕಪ್ಪತಗುಡ್ಡದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಹಿಂದೆ ಕಣ್ಣು ಹಾಕಿ ಸೋತಿವೆ. ಆದರೆ ಈಗಲೂ ಪ್ರಯತ್ನಗಳು ನಡೆದಿವೆ. ಈ ದೇಶದ ಕಂಪನಿಗಳಷ್ಟೇ ಮಾತ್ರವಲ್ಲ, ವಿದೇಶೀ ಕಂಪನಿಗಳು ಈ ನೆಲೆದ ಮೇಲೆ ಕಣ್ಣು ಹಾಕಿದ್ದವು ಎಂಬುದು ಗೊತ್ತಿರುವ ಸಂಗತಿ” ಎಂದು ಹೇಳಿದರು.
2011ರಲ್ಲಿ ಪೋಸ್ಕೊ ಕಂಪನಿ ಈ ನೆಲಕ್ಕೆ ಬರುವ ಹಿನ್ನಲೆಯಲ್ಲಿ ಕರ್ನಾಟಕದ ಆಗಿನ ಸರಕಾರದ ಜೊತೆಗೆ ಎಮ್.ಒ.ಎಮ್. ಮಾಡಿಕೊಂಡಿದ್ದು, ಇದನ್ನು ರದ್ದು ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಗದಗ ನೆಲದಲ್ಲಿ ಹೋರಾಟ ನಡೆದಿತ್ತು. ಆಗ ಪೋಸ್ಕೊ ಇಲ್ಲಿಂದ ಕಾಲ್ಕಿತ್ತಿತು. ನಂತರದಲ್ಲಿ ಕಪ್ಪತ್ತಗುಡ್ಡದ ಮೇಲೆ ಕಣ್ಣಿಟ್ಟಿದ್ದ ಜಿಂದಾಲ್‌ನಂತ ಬೇರೆ ಬೇರೆ ಕಂಪನಿಗಳು ಗಣಿಗಾರಿಕೆ ಮಾಡಲು ಒಳಗಿಂದ ಒಳಗೆ ದೊಡ್ಡ ಪ್ರಯತ್ನ ಮಾಡುತ್ತಿದ್ದವು.
ಕರ್ನಾಟಕ ಸರಕಾರ 2017ರಲ್ಲಿ ಈ ಪ್ರದೇಶವನ್ನು ಸಂರಕ್ಷಣಾ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿತು. 2019ರಲ್ಲಿ ಮರು ಮಾರ್ಪಡು ಮಾಡಿ, ಈ ಪ್ರದೇಶವನ್ನು ವನ್ಯಜೀವಿಗಳಧಾಮ ಎಂದು ಘೋಷಿಸಿತು. ಅಷ್ಟೇ ಅಲ್ಲದೇ, ಕಪ್ಪತಗುಡ್ಡದ ಒಂದು ಕಿ. ಮೀ. ವ್ಯಾಪ್ತಿಯೊಳಗೆ ಕಲ್ಲು, ಮಣ್ಣು ಯಾವುದೇ ರೀತಿಯ ಗಣಿಗಾರಿಕೆ ಮಾಡುವಂತಿಲ್ಲ ಎಂಬ ಆದೇಶವನ್ನು ಸರಕಾರ ಹೊರಡಿಸಿತ್ತು. ಈ ಆದೇಶವನ್ನು ಬೇರೆ ಬೇರೆ ಕಂಪನಿಗಳು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದವು. ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು” ಎಂದು ನೆನಪಿಸಿಕೊಂಡರು.
ಆದರೆ, ಈಗ ಕಪ್ಪತಗುಡ್ಡದ ಗಣಿಗಾರಿಕೆ ಮಾಡಲು ಅನುಮತಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ವನ್ಯಜೀವಿಗಳ ಮಂಡಳಿಗೆ 28 ಪ್ರಸ್ತಾವಳಿಗಳು ಬಂದಿವೆ. ಆದರೆ ಮುಖ್ಯಮಂತ್ರಿಯವರು ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳದೆ ಮುಂದೂಡಿದರು. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಸಿದ್ದರಾಮಯ್ಯನವರು 2011ರಲ್ಲಿ ಪೋಸ್ಕೊ ಹೋರಾಟದಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಬೆಂಬಲಿಸಿದವರು, ಈ ವನ್ಯಜೀವಿ ಮಂಡಳಿಗೆ ಬಂದಿರುವ ಪ್ರಸ್ತಾವನೆಗಳನ್ನು ನೇರವಾಗಿ ತಿರಸ್ಕಾರ ಮಾಡಬೇಕಿತ್ತು. ಮುಂದೂಡುವ ಅಗತ್ಯವಿರಲಿಲ್ಲ. ಯಾಕೆಂದರೆ ವನ್ಯಜೀವಿ ಸಂರಕ್ಷಣಾ ಪ್ರದೇಶದ ಮೇಲೆ ಪರಿಣಾಮ ಆಗುತ್ತಿವೆ. ಒಂದು ವೇಳೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದರೆ ಹೋರಾಟ ಮಾಡುತ್ತೇವೆ ಎಂದು ಬಸವರಾಜ ಸೂಳಿಬಾವಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರರಾದ ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಸಾಹಿತಿ ಜಿ.ಬಿ. ಪಾಟೀಲ, ಕನ್ನಡ ಪರ ಹೋರಾಟಗಾರ ಚಂದ್ರಕಾಂತ ಚವ್ಹಾಣ, ಡಿಎಸ್‌ಎಸ್ ಮುಖಂಡರಾದ ಬಾಲರಾಜ ಅರಬರ, ನಾಗರಾಜ ಗೋಕಾವಿ, ಲಿಂಗಾಯತ ಮಹಾಸಭಾದ ಶೇಖಣ್ಣ ಕವಳಿಕಾಯಿ, ಆನಂದ ಶಿಂಗಾಡಿ, ಅನಿಲ ಕಾಳೆ, ಪರಶು ಕಾಳೆ, ಬಸವರಾಜ ಬಿಳಿಯಲಿ, ಕಾಶೀನಾಥ ಬಗಲಿ ಮತ್ತೀತರರು ಉಪಸ್ಥಿತರಿದ್ದರು.