ಪ್ರಾಣಕ್ಕಿಂತ ಮಿಗಿಲಾಗಿ ಕಾಯಕ ಪ್ರೀತಿಸಿದ ಮೇದಾರ ಕೇತಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಮೇದಾರ ಕೇತಯ್ಯ ಶರಣರು ಬಸವಯುಗದ ಧ್ರುವತಾರೆ. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕಜೀವಿ ಎಂದು ಬೀದರ ಬಸವ ಸೇವಾ ಪ್ರತಿಷ್ಠಾನ ಬಸವಗಿರಿ ಅಧ್ಯಕ್ಷೆ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಬಸವ ಸೇವಾ ಪ್ರತಿಷ್ಠಾನ ಬಸವಗಿರಿ ಬೀದರ ವತಿಯಿಂದ ಇಲ್ಲಿನ ಶರಣ ಉದ್ಯಾನದಲ್ಲಿ ನಡೆದ ಶರಣ ಸಂಗಮ ಕನ್ನಡ ರಾಜ್ಯೋತ್ಸವ ಹಾಗೂ ಶರಣ ಮೇದಾರ ಕೇತಯ್ಯನವರ ಜಯಂತಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಕೇತಯ್ಯನವರು ಬಸವಣ್ಣನವರ ಪ್ರಭಾವದಿಂದ ಗುರು ಲಿಂಗ ಜಂಗಮದಲ್ಲೇ ತನ್ನ ನಿಜ ಸುಖ ಕಂಡವರು. ಶರಣ ತತ್ವಗಳಾದ ದಯೆ, ಕರುಣೆ, ಕಾಯಕ ದಾಸೋಹ ತತ್ವಗಳನ್ನು ಅನುಷ್ಠಾನದಲ್ಲಿ ತಂದವರು. ಇವರ ಜೀವನವೇ ಸತ್ಯ ಶುದ್ಧ ಕಾಯಕ ಸಂದೇಶವಾಗಿದೆ ಎಂದು ನುಡಿದರು.

ಬೀದರ ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಸಿ.ಎಸ್. ರಗಟೆ ಉದ್ಘಾಟಿಸಿ ಮಾತನಾಡಿ, ಶರಣರ ವಚನಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು. ಬಸವ ಧ್ಯಾನ ಮಾಡಿ ಅವರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ತಾಯಂದಿರು ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜುಕುಮಾರ ಅತಿವಾಳೆ ಮಾತನಾಡಿ, ಬಸವಾದಿ ಶರಣರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ. ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ ಎಂದರು.

ಕಲಬುರಗಿ ಶರಣ ಬಸವೇಶ್ವರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಶಿಲ್ಪಾ ನರೇಶಕುಮಾರ ಅನುಭಾವ ನೀಡಿ, ಕಾಯಕವೇ ಕೈಲಾಸವಾದ ಶರಣನಿಗೆ ಕಾಯಕದಿಂದಲೇ ಜೀವನ್ಮುಕ್ತಿ. ಕೈಲಾಸಕ್ಕಿಂತಲೂ ಕಾಯಕವೇ ಮೇಲೆಂದು ಸಾರಿದವರು ಮೇದಾರ ಕೇತಯ್ಯನವರು ಎಂದರು.

ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ಶರಣ-ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *