ಕಿತ್ತೂರು ಕರ್ನಾಟಕಕ್ಕೆ ಹರಡಿದ ಸಾವಿತ್ರಿ ಬಾ ಪುಲೆ ಅವರ ಶಿಕ್ಷಣ ಕ್ರಾಂತಿ

ಡೆಪ್ಯುಟಿ ಚೆನ್ನಬಸಪ್ಪನವರೂ ಸೇರಿದಂತೆ ಸಾವಿತ್ರಿ ಬಾ ಪುಲೆ ಅವರ ಸಾಮಾಜಿಕ ಕಾರ್ಯಗಳು ಕಿತ್ತೂರು ಕರ್ನಾಟಕದ ಅನೇಕರಿಗೆ ಪ್ರೇರಣೆಯಾಯಿತು. ಇದರ ಕುರಿತು ಯಾವುದೇ ಚಿಂತನೆಯಾಗದೆ ಇರುವುದು ಖೇದಕರ.

ಕಿತ್ತೂರು

1818ರಲ್ಲಿ ಮೂರನೇ ಆಂಗ್ಲೋ ಮರಾಠ ಯುದ್ಧದಲ್ಲಿ ಪೇಶ್ವಗಳು ಸಂಪೂರ್ಣವಾಗಿ ನೆಲ ಹಿಡಿದರು ಸಹಿತ ಅವರ ಆಡಳಿತದ ನೆರಳು ಇನ್ನೂ ಇತ್ತು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಊದಯಿಸಿದ ಜ್ಯೋತಿಬಾಪುಲೆ ಮತ್ತು ಸಾವಿತ್ರಿ ಬಾ ಪುಲೆ ದಂಪತಿಗಳ ಸಾಮಾಜಿಕ ಕ್ರಾಂತಿಗಳು ಇಡೀ ದಕ್ಷಿಣ ಭಾರತದ ಶಿಕ್ಷಣವಂಚಿತ ಸಮುದಾಯಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿ ನಿಂತವು.

ಪೇಶ್ವೆಗಳ ಆಡಳಿತದ ವ್ಯಾಪ್ತಿಯಲ್ಲಿ ಸಂಪ್ರದಾಯವಾದಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಸಮುದಾಯಕ್ಕೂ ಶಿಕ್ಷಣಕ್ಕೆ ಅವಕಾಶ ಇರಲಿಲ್ಲಾ. ಇದನ್ನು ಪ್ರತಿಭಟಿಸಿದ ಮಾತೆ ಸಾವಿತ್ರಿ ಬಾ ಪುಲೆ ಇಡೀ ಸಮಾಜವನ್ನು ಎದುರು ಹಾಕಿಕೊಂಡು ಶಿಕ್ಷಣ ಪಡೆದು ಮಹಿಳೆಯರಿಗಾಗಿಯೇ 1848 ಜನವರಿ ಒಂದರಂದು ಶಾಲೆಯನ್ನು ತೆರೆದಿರುವುದು ಭಾರತದ ಶೈಕ್ಷಣಿಕ ವ್ಯವಸ್ಥೆ ಸಾರ್ವತ್ರಿಕರಣಗೊಳ್ಳಲು ರಹ ದಾರಿಯನ್ನು ಮಾಡಿ ಕೊಟ್ಟಿತು. ಈ ಮೂಲಕ ದೇಶದ ಮೊದಲ ಮಹಿಳಾ ಶಿಕ್ಷಕಿ ಪಾತ್ರಕ್ಕೆ ಭಾಜನರಾದರು.

ಜ್ಯೋತಿ ಬಾಪುಲೆ ಅವರು ಮೊದಲ ಶಾಲೆ ತೆರೆದಿರುವುದು ಒಡಲಾಳದ ನೋವುಗಳಿಗೆ ಚಿಕಿತ್ಸೆ ನೀಡಿದಂತೆ ಇತ್ತು.ಕಾರಣ 1818ರ ಜನೇವರಿ 1 ರಂದು ನಡೆದ ಭೀಮ ಕೋರೆಗಾವ್ ಕದನದಲ್ಲಿ ಮಹರ್ ಸಮುದಾಯದ ದಿಗ್ವಿಜಯವನ್ನು ಶಾಶ್ವತವಾಗಿರಿಸುವ, ಸದಾ ಸ್ಮರಿಸುವ ಕಾರಣಕ್ಕಾಗಿ 1848 ಜನವರಿ ಒಂದರಂದು ಸಾವಿತ್ರಿ ಬಾ ಪುಲೆ ಮಹಿಳೆಯರಿಗೆ ಶಿಕ್ಷಣ ನೀಡುವ ಮೊದಲ ಕನ್ಯಾ ಶಾಲೆ ತೆರೆದರು.ಇದರ ಜೊತೆ ಒಟ್ಟು ಹದಿನೆಂಟು ಶಾಲೆ ತೆರದರು.

ಸಾವಿತ್ರಿ ಬಾ ಪುಲೆ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು ,ವಿದ್ಯಾರ್ಥಿ ವಸತಿ ನಿಲಯಗಳ ಪ್ರಾರಂಭಕ್ಕೆ ಪ್ರೇರಣೆ ಕೊಟ್ಟರು. ಶಾಲೆಗೆ ಗೈರು ಹಾಜರಾಗುವ ಮಕ್ಕಳ ಪಾಲಕರಿಗೆ ಶಿಕ್ಷೆಯನ್ನು ಕೊಡುವಂತ ವ್ಯವಸ್ಥೆಯನ್ನು ಜ್ಯೋತಿಬಾಪುಲೆ, ಸಾವಿತ್ರಿ ಬಾಪುಲೆ, ಮತ್ತು ಶಾಹು ಮಹಾರಾಜರು ದೇಶದಲ್ಲಿಯೇ ಮೊದಲ ಆಳವಡಿಸಿ ಶೈಕ್ಷಣಿಕ ವ್ಯವಸ್ಥೆಗೆ ಒಂದು ಕಟ್ಟುನಿಟ್ಟು ತಂದುಕೊಟ್ಟರು.

ಮಹಾರಾಷ್ಟ್ರದಲ್ಲಿ ಜ್ಯೋತಿ ಬಾಪುಲೆ ಮತ್ತು ಸಾವಿತ್ರಿ ಬಾ ಪುಲೆ ಅವರು ಹುಟ್ಟು ಹಾಕಿದ ಸಾಮಾಜಿಕ ಕಾರ್ಯಗಳು ತಳವರ್ಗದ ಸಮುದಾಯಗಳನ್ನು ಮೇಲೆತ್ತಬೇಕೆನ್ನುವ ಹಪಾಹಪಿತನ ಕಿತ್ತೂರು ಕರ್ನಾಟಕ ಭಾಗದ ಬಹಳಷ್ಟು ಸಮುದಾಯಗಳಿಗೆ ಮತ್ತು ಸಮುದಾಯದ ನಾಯಕರಿಗೆ ಪ್ರೇರಣೆಯಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ತಾಪಿಸಿ ಉತ್ತಮ ಬದುಕನ್ನು ತಮ್ಮ ಸಮುದಾಯಕ್ಕೆ ಕಟ್ಟಿಕೊಳ್ಳಲು ಪ್ರೇರಣೆ ಮತ್ತು ಸ್ಪೂರ್ತಿಯಾಗಿರುವದಂತು ಸತ್ಯ. ಆದರೆ ಇದರ ಕುರಿತು ಒಂದು ಚಿಂತನೆಯಾಗದೇ ಇರುವುದು ಖೇದಕರ.

ಸಾವಿತ್ರಿ ಬಾ ಪುಲೆ ಅವರಿಂದ ಪ್ರೇರೇಪಿತರಾಗಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಬ್ರಿಟಿಷ ಅಧಿಕಾರಿ ಅಲೆನ್ ರೆಸೆಲ್ ಕಿತ್ತೂರ ಕರ್ನಾಟಕದ ಧಾರವಾಡದಲ್ಲಿ 1856 ರಲ್ಲಿ ನಾರ್ಮಲ್ ಶಾಲೆಯನ್ನು ಪ್ರಾರಂಭ ಮಾಡಿದರು.

ಡೆಪ್ಯುಟಿ ಚೆನ್ನಬಸಪ್ಪನವರ ಕೃತತ್ವ ಶಕ್ತಿಯಿಂದ ನಾರ್ಮಲ್ ಶಾಲೆ ಗಂಡು ಮಕ್ಕಳ ತರಬೇತಿ ಶಾಲೆಯಾಗಿ 1864 ರಲ್ಲಿ ಮೇಲ್ದರ್ಜೆಗೆ ಏರಿಸಲಾಯಿತು. ಗಂಡು ಮಕ್ಕಳ ತರಬೇತಿ ಶಾಲೆ ಕನ್ನಡದ ಇತಿಹಾಸ ,ಕರ್ನಾಟಕ ಏಕೀಕರಣ, ಕನ್ನಡದ ಸಂಸ್ಕೃತಿಯ ರಾಯಭಾರಿಯಾಗಿ ಅದು ಮಾಡಿರುವ ಕಾರ್ಯ ವರ್ಣನಾತೀತ .

ಶಾಲೆಯಲ್ಲಿ ಕಲಿಯುವ ಮಕ್ಕಳು ಇಲ್ಲದೆ ಇರುವಂತ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿಸುವ ಶಿಕ್ಷಕರನ್ನು ತಯಾರು ಮಾಡುವ ಡೆಪ್ಯುಟಿ ಚೆನ್ನಬಸಪ್ಪನವರ ಕಾರ್ಯಕ್ಕೆ ಪ್ರೇರಣೆಯಾಗಿ ನಿಂತಿರುವುದೇ ಸಾವಿತ್ರಿ ಬಾಪುಲೆ ಅವರ ಸಾಮಾಜಿಕ ಕ್ರಾಂತಿಯ ಕಾರ್ಯಗಳು.

ಡೆಪ್ಯುಟಿ ಚೆನ್ನಬಸಪ್ಪನವರು ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 1867 ರಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಿಕ್ಷಣವನ್ನು ನೀಡಲು ಕೇಳ್ಕರ್ ಭಾಗದಲ್ಲಿ ವಿದ್ಯಾರ್ಥಿ ವಸತಿ ನಿಲಯ ಪ್ರಾರಂಭಿಸಿದರು. ಇದು ಲಿಂಗಾಯತ ವಿರಕ್ತಮಠಗಳಲ್ಲಿ ವಿದ್ಯಾರ್ಥಿ ವಸತಿ ನಿಲಯ ಅಥವಾ ಫ್ರೀ ಬೋರ್ಡಿಂಗ್ ಸಂಪ್ರದಾಯ ಬೆಳೆಯಲು ಕಾರಣವಾಗಿ, ಆ ವ್ಯವಸ್ಥೆಯ ಮೂಲಕ ಲಕ್ಷಾಂತರ ಯುವ ಜನಾಂಗ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿ ಬದುಕನ್ನು ಕಟ್ಟಿಕೊಳ್ಳಲು ಕಾರಣೀಭೂತವಾಯಿತು. ಇಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರ ಕಾರ್ಯದ ಹಿಂದೆ ಪ್ರೇರಣೆಯಾಗಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದು ಸಾವಿತ್ರಿಬಾಪುಲೆ ಯವರು ವಿಚಾರಗಳು ಎಂದರೆ ತಪ್ಪಾಗಲಾರದು.

ಈ ವಿರಕ್ತ ಮಠಗಳು ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಮಠಗಳು ಮಾಡಿ ಮುಗಿಸಿದವು. ಲಿಂಗಾಯತರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ ಮತ್ತು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ ಎಂದರೆ ಈ ಶಿಕ್ಷಣ ಸಂಸ್ಥೆಗಳ ಪಾತ್ರ ದೊಡ್ಡದಿದೆ .ಈ ಸಂಸ್ಥೆಗಳ ಸ್ಥಾಪನೆ ಹಿಂದೆ ಮಾತೆ ಸಾವಿತ್ರಿ ಬಾಪುಲೆ ಅವರ ಸಾಮಾಜಿಕ ಕ್ರಾಂತಿಗಳ ಪ್ರೇರಣೆ ಕಿತ್ತೂರ ಕರ್ನಾಟಕ ಭಾಗದ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕರಿಗೆ ಇದ್ದೇ ಇರುವುದು ಖಂಡಿತ.

1883 ರಲ್ಲಿ ಗಿಲುಗಂಚಿ ಗುರಿಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡ್ರು ಧಾರವಾಡದಲ್ಲಿ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ ಪ್ರಾರಂಭಿಸಿದರು .

1893 ರಲ್ಲಿ ಬೆಳಗಾವಿ ಮತ್ತು ಧಾರವಾಡದಲ್ಲಿ ಸ್ಥಾಪಿತವಾದ ಮರಾಠ ವಿದ್ಯಾ ಪ್ರಸಾರ ಮಂಡಳಿಯ ಸ್ಥಾಪನೆ ಹಿಂದೆ ಮಾತೆ ಸಾವಿತ್ರಿ ಬಾಪುಲೆ ಅವರ ಪ್ರೇರಣೆ ಸಾಕಷ್ಟಿದೆ

1917 ರಂದು ಅರಟಾಳ ರುದ್ರಗೌಡರಿಂದ ಧಾರವಾಡದ ಲ್ಲಿ ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆಯಾಯಿತು. ಇದು ಉತ್ತರ ಕರ್ನಾಟಕದ ಮೊದಲ ಉನ್ನತ ಶಿಕ್ಷಣ ಸಂಸ್ಥೆ. ಕರ್ನಾಟಕ ಮಹಾವಿದ್ಯಾಲಯ ಮುಂದೆ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಹಾನ್ ರಹದಾರಿ ಯನ್ನು ಹಾಕಿಕೊಟ್ಟಿತು.

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆಯ ಪ್ರೇರಕ ಶಕ್ತಿಯಾಗಿರುವ ಅರಟಾಳ ರುದ್ರ ಗೌಡರಿಗೆ ತಮ್ಮ ಸಮುದಾಯದ ಜನರ ಎದೆಗೆ ಅಕ್ಷರ ಬೀಜವನ್ನು ಬಿತ್ತಲು ಪ್ರೇರಣೆ ಯಾಗಿರುವುದು ಸಾವಿತ್ರಿ ಬಾಪುಲೆ ಅವರ ಸಾಮಾಜಿಕ ಕ್ರಾಂತಿಯ ಚಟುವಟಿಕೆಗಳು.

1917 ರಲ್ಲಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದರು. ಇದಕ್ಕೂ ಸಹಿತ ನಾಯಕತ್ವ ವಹಿಸಿಕೊಂಡಿದ್ದು ಅರಟಾಳ ರುದ್ರಗೌಡರು. ಕೆ ಸಿ ಡಿ ಮಹಾವಿದ್ಯಾಲಯ ಸ್ಥಾಪನೆಗೆ ಕೂಡಿಸಿದ್ದ ಹಣವನ್ನು ಪುನಾ ಸರಕಾರದಲ್ಲಿ ಪ್ರಾಮಿಜರಿ ನೋಟ್ನಲ್ಲಿ ಠೇವಣಿ ಮಾಡಿದಾಗ ಬಂದಿರುವ ಬಡ್ಡಿಯ ಜೊತೆಗೆ ತಮ್ಮದೊಂದಿಷ್ಟು ಹಣವನ್ನು ಸೇರಿಸಿ KLE ಸಂಸ್ಥೆಯನ್ನು ನೋಂದಣಿ ಮಾಡಿದರು. ಅದರ ಉದ್ದೇಶ ತಮ್ಮ ಸಮುದಾಯದ ಜನರ ಎದೆಗೆ ಅಕ್ಷರವನ್ನು ಬಿತ್ತಬೇಕೆಂಬ ಹಪಾಹಪಿತನ. ಇದರ ಹಿಂದೆ ಪ್ರೇರಕ ಶಕ್ತಿ ಪ್ರೇರಕರಾಗಿರುವುದೆ ಮಾತೇ ಸಾವಿತ್ರಿ ಬಾ ಪುಲೆ ಅವರ ವಿಚಾರಗಳು ಎಂದರೆ ತಪ್ಪಾಗಲಾರದು.

1929ರಲ್ಲಿ ಆರ್ಥಿಕ ಮಹಾಕುಸಿತ ಉಂಟಾದ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಥಾಮಸ್ ಎಂಬ ಹಿರಿಯ ಐಸಿಎಸ್ ಅಧಿಕಾರಿಯ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿ ಕಿತ್ತೂರು ಕರ್ನಾಟಕ ಭಾಗದ ಕರ್ನಾಟಕ ಮಹಾವಿದ್ಯಾಲಯ ಮತ್ತು ಗಂಡು ಮಕ್ಕಳ ತರಬೇತಿ ಶಾಲೆ ಧಾರವಾಡ ಗೆ ಕೊಡಮಾಡುತ್ತಿದ್ದ ಅನುದಾನವನ್ನು ತಡೆಹಿಡಿಯಲು ಸರಕಾರ ನಿರ್ಣಯಿಸಿತು. ಈ ಸಂದರ್ಭದಲ್ಲಿ ಮುಂಬೈ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮೊದಲ ಕನ್ನಡಿಗರಾದ ಸರ್ ಸಿದ್ಧಪ್ಪ ಕಂಬಳಿ ಅವರು ಬ್ರಿಟಿಷ್ ಸರ್ಕಾರಕ್ಕೆ ಸವಾಲನ್ನು ಹಾಕಿ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಮತ್ತು ಕರ್ನಾಟಕ ಮಹಾವಿದ್ಯಾಲಯಕ್ಕೆ ಕೊಡ ಮಾಡುತ್ತಿದ್ದ ಅನುದಾನವನ್ನು ಮುಂದುವರಿಸುವಂತೆ ಮಾಡಿದರು. ಇಲ್ಲಿ ಸಿದ್ದಪ್ಪ ಕಂಬಳಿಯವರು ಛತ್ರಪತಿ ಶಾಹು ಮಾಹಾರಾಜರು ಸಮಕಾಲಿನರು.

ಹಾಗಾಗಿ ಇಲ್ಲಿಯೂ ಸಹಿತ ಸಾವಿತ್ರಿ ಬಾಪುಲೆ ಅವರ ವಿಚಾರಧಾರೆಗಳು ಸಿದ್ದಪ್ಪ ಕಂಬಳಿ ಯವರ ಮೇಲಾಗಿದೆ..

1831 ಜನವರಿ 3ರಂದು ಮಹಾರಾಷ್ಟ್ರದಲ್ಲಿ ಜನ್ಮ ತಾಳಿದ ಮಾತೆ ಸಾವಿತ್ರಿ ಬಾಪುಲೆಯವರು 1848 ರಿಂದ 52ರ ವರೆಗೆ ಸಾಕಷ್ಟು ವಿರೋಧ ವೈರುಧ್ಯಗಳ ಮಧ್ಯೆ ಸಹಿತ 18 ಶಾಲೆಗಳನ್ನು ಪ್ರಾರಂಭ ಮಾಡಿ ಜನಸಾಮಾನ್ಯರ ಎದೆಗೆ ಅಕ್ಷರ ಬೀಜ ಬಿತ್ತುವಲ್ಲಿ ಇವರ ಪಾತ್ರ ಪ್ರೇರಣೆ ಬಹಳ ದೊಡ್ಡದಾಗಿದೆ. ಶೋಷಿತ ಮಹಿಳೆಯರಿಗೆ ಅಭಲಾಶ್ರಮ ,ಕೂಲಿಕಾರ್ಮಿಕರಿಗೆ ರಾತ್ರಿ ಶಾಲೆ, ದೀರ್ಘಕಾಲಿಕವಾಗಿ ಘೈರು ಆಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವ ಪದ್ಧತಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಪದ್ಧತಿ ಇವೆಲ್ಲವನ್ನು 1840 ಮತ್ತು 50ರ ದಶಕದ ಆಸು ಪಾಸಿನಲ್ಲಿ ಮಾಡುವುದರ ಮೂಲಕ ಭಾರತೀಯರ ಸ್ತ್ರೀ ಸಂಕುಲಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾತೆ ಸಾವಿತ್ರಿ ಬಾಪುಲೆ ಅವರು ಮಾಡಿದ್ದು ಅಬ್ದುತವಾದ ಕೆಲಸಗಳು.

ಕೇವಲ ಶಿಕ್ಷಣ ಸಂಸ್ಥೆಗಳ ಮೇಲೆ ಮಾತ್ರ ಸಾವಿತ್ರಿ ಬಾ ಪುಲೆಯವರ ಪ್ರಭಾವ ಆಗದೇ ಹಲವಾರು ಸಂಘ-ಸಂಸ್ಥೆಗಳ ಅವಿರ್ಭವಿಸಲಿಕ್ಕೆ, ಪತ್ರಿಕೆಗಳು ಹುಟ್ಟಿಕೊಳ್ಳಲಿಕ್ಕೆ, ಪರಿಷತ್ತು ಸಮ್ಮೇಳಗಳು ನಡೆಯಲಿಕ್ಕೆ ಜೊತೆಗೆ ಕಿತ್ತೂರ ಕರ್ನಾಟಕ ಭಾಗದಲ್ಲಿ ರಾಜಕೀಯ ಸಮೀಕರಣಕ್ಕೂ ಸಹಿತ ಸಾವಿತ್ರಿ ಬಾಪುಲೆ ಅವರ ಕಾರ್ಯ ಚಟುವಟಿಕೆಗಳು ಪ್ರಭಾವ ಬೀರಿವೆ. ಈ ನಿಟ್ಟಿನಲ್ಲಿ ಸಂಶೋಧನೆಯಾಗುವ ಅನಿವಾರ್ಯತೆ ಖಂಡಿತ ಇದೆ.

ಇಷ್ಟೆಲ್ಲಾ ಸಮಾಜ ಮುಖಿ ಕಾರ್ಯ ಮಾಡಿರುವ ಸಾವಿತ್ರಿ ಬಾಪುಲೆ ಅವರ ಚಟುವಟಿಕೆಗಳು ಕಿತ್ತೂರು ಕರ್ನಾಟಕ ಭಾಗದಲ್ಲಿ ಸ್ಥಾಪನೆಯಾಗಿರುವ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕರಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿರುವುದು ಈ ಭಾಗದಲ್ಲಿ ಇವತ್ತು ಶಿಕ್ಷಣ ಸಂಸ್ಥೆಗಳು ಎದ್ದು ನಿಲ್ಲಲು ಕಾರಣವಾಗಿದೆ.

ಜನೇವರಿ 3ರಂದು ಮಾತೆಸಾವಿತ್ರಿ ಬಾ ಪುಲೆ ಅವರ ಜನ್ಮದಿನದಂದು ಮಾತೆ ಸಾವಿತ್ರಿ ಬಾಪುಲೆಯವರನ್ನು ಸ್ಮರಿಸಲು ,ಮತ್ತು ಅವರ ಪ್ರೇರಣೆಯಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಆ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದವರಿಗೆ ಮಾತೆ ಸಾವಿತ್ರಿವಬಾ ಪುಲೆ ಅವರ ಕುರಿತು ಅರಿವಿಗೆ ಬರಲೆಂದು ಈ ಲೇಖನದ ಅರ್ಪಣೆ.

Share This Article
Leave a comment

Leave a Reply

Your email address will not be published. Required fields are marked *

ಮಹೇಶ ನೀಲಕಂಠ ಚನ್ನಂಗಿ, ಉಪಪ್ರಾಂಶುಪಾಲರು, SBM ಸರಕಾರಿ ಬಾಲಕಿಯರ ಪ್ರೌಢಶಾಲೆ. ಚನ್ನಮ್ಮನ ಕಿತ್ತೂರು. (9740313820)