ರಥ ಎಳೆಯುವ ಮುನ್ನ ಮಾದಿಗ ಮಹಿಳೆಯರು ಆರತಿ ಬೆಳಗುವ ಸಂಪ್ರದಾಯವಿದೆ.
ವಿಜಯನಗರ
ಹರಪನಹಳ್ಳಿ ತಾಲೂಕಿನ ಕೊಟ್ಟೂರು ಗ್ರಾಮದಲ್ಲಿ ನಾಳೆಯಿಂದ ನಡೆಯಲಿರುವ ಶ್ರೀ ಗುರುಬಸವೇಶ್ವರರ ಜಾತ್ರೆಗೆ ಲಕ್ಷಾಂತರ ಜನ ಸೇರುತ್ತಾರೆ ಬರುತ್ತಾರೆ.
ಮೂಢನಂಬಿಕೆಗಳಿಗೆ ಸೆಡ್ಡು ಹೊಡೆದು, ಸಮಾನತೆ ಸಾರುವ ಬಸವ ತತ್ವದ ವಿಶಿಷ್ಟ ಜಾತ್ರೆಯಿದು. ಈ ಜನಪ್ರಿಯ ರಥೋತ್ಸವವು ಮೂಲಾ ನಕ್ಷತ್ರದಲ್ಲಿ ಎಳೆಯಲ್ಪಡುತ್ತದೆ ಎನ್ನುವುದು ಗಮನಾರ್ಹ. ಗುರುಬಸವೇಶ್ವರ ರಥ ಎಳೆಯುವ ಮುನ್ನ ಮಾದಿಗ ಸಮುದಾಯದ ಮಹಿಳೆಯರು ಆರತಿ ಬೆಳಗುವ ಸಂಪ್ರದಾಯವಿದೆ.
ಶರಣ ಪರಂಪರೆಯಲ್ಲಿ ಕೊಟ್ಟೂರಿಗೆ, ಬಸವಾದಿ ಶರಣರ ತತ್ವ ಸಿದ್ಧಾಂತಗಳ ಪ್ರತಿಪಾದಿಸಿದ ಕೊಟ್ಟೂರು ಗುರುಬಸವೇಶ್ವರರಿಗೆ, ಈ ರಥೋತ್ಸವಕ್ಕೆ ಐತಿಹಾಸಿಕ ಸ್ಥಾನವೂ ಇದೆ.
ಕಲ್ಯಾಣ ಕ್ರಾಂತಿ
ಕಲ್ಯಾಣ ಕ್ರಾಂತಿಯ ನಂತರ ಹಾಗೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪೂರ್ವಕಾಲದಲ್ಲಿ ಕೊಟ್ಟೂರು ಪ್ರದೇಶದಲ್ಲಿ ಲಿಂಗಾಯತ ತತ್ವ ಸಿದ್ಧಾಂತಗಳು ಜನಮನದಲ್ಲಿ ಪ್ರಚಲಿತದಲ್ಲಿದ್ದವು. ಈ ತತ್ವ ಸಿದ್ಧಾಂತಗಳ ಆಧಾರದ ಮೇಲೆಯೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು.
ಪ್ರೌಢ ದೇವರಾಯನ ಕಾಲಕ್ಕೆ ಲಿಂಗಾಯತ ಧರ್ಮಕ್ಕೆ ರಾಜಾಶ್ರಯ ಲಭಿಸಿ, ಆ ತತ್ವ ಸಿದ್ಧಾಂತಕ್ಕೆ ಪ್ರಾಮುಖ್ಯತೆ ದಕ್ಕಿತು. ಈ ಕಾರಣಕ್ಕಾಗಿ ಈ ಪ್ರದೇಶವನ್ನು ಮಂತ್ರಿ ಲಕ್ಕಣ್ಣ ದಂಡೇಶ ತನ್ನ ಶಿವತತ್ವ ಚಿಂತಾಮಣಿ ಕೃತಿಯಲ್ಲಿ ಈ ಪ್ರದೇಶವನ್ನು “ವಿಜಯ ಕಲ್ಯಾಣ” ಎಂದು ಕರೆದಿರುವುದು ಔಚಿತ್ಯಪೂರ್ಣ ಸಂಗತಿ.
ಎರಡನೇ ಪ್ರೌಢ ದೇವರಾಯನ ನಂತರದಲ್ಲಿ ಸಂಗಮ ವಂಶದ ಅರಸರು ದುರ್ಬಲರಾದಗ ಸಾಳ್ವ ಸಂತತಿ ಪ್ರಾಬಲ್ಯಕ್ಕೆ ಬಂದು ಈ ಕಾಲಘಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಲ್ಲಿ ಧಾರ್ಮಿಕ ಇಕ್ಕಟ್ಟು ಬಿಕ್ಕಟ್ಟುಗಳು ನಿರ್ಮಾಣವಾಗಿ ಲಿಂಗಾಯತ ಅನುಯಾಯಿಗಳಿಗೆ ನೆಲೆ ಇಲ್ಲದಂತಾಗಿ, ಧಾರ್ಮಿಕ ಸ್ಥಿತ್ಯಂತರಕ್ಕೆ ಒಳಗಾಗಿ ವಿಜಯನಗರದ ರಾಜಧಾನಿ ಹಂಪಿ ಪರಿಸರ ಪೂರ್ಣ ಪ್ರಮಾಣದಲ್ಲಿ ವೈಷ್ಣವೀಕರಣಗೊಂಡಿತು.
ಅಲ್ಲಿ ದೊಡ್ಡ ದೊಡ್ಡ ವೈಷ್ಣವ ಪಂಥದ ದೇವಾಲಯಗಳು ನಿರ್ಮಾಣವಾದವು, ದೇವರು ಮತ್ತು ಧರ್ಮದ ಹೆಸರಿನಲ್ಲಿ ಧಾರ್ಮಿಕ ಅಂಧಕಾರ ಬಿತ್ತಿದವು, ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಮಡಿಮೈಲಿಗೆ, ಮುಂತಾದ ವೈದಿಕ ಕರ್ಮಠ ಆಚರಣೆಗಳು ಅಸ್ತಿತ್ವಕ್ಕೆ ಬಂದವು.
ಇದರಿಂದ ಸಮಾಜದಲ್ಲಿ ಶ್ರೇಷ್ಠ, ಕನಿಷ್ಠ, ಮೇಲ ಕೀಳು, ಸ್ಪೃಶ್ಯ, ಅಸ್ಪೃಶ್ಯ ದೇವಾಲಯದ ಹೊರಗಿನಜನ, ದೇವಾಲಯದ ಒಳಗಿನಜನ ಎನ್ನುವ ಭೇದಪೂರಿತ ರಿವಾಜುಗಳು ಹುಟ್ಟು ಪಡೆದವು.
ದುಡಿಯುವ ಕಾಯಕ ವರ್ಗದಲ್ಲಿ ಜನರು ನಿರ್ಲಕ್ಷ್ಯಕ್ಕೆ ಒಳಗಾದರು. ಈ ತಾರತಮ್ಯಪೂರಿತ ತತ್ವ ಸಿದ್ಧಾಂತಗಳಿಗೆ ಸದಾ ವಿರೋಧ ಮಾಡಿಕೊಂಡೇ ಬರುತ್ತಿದ್ದ ಲಿಂಗಾಯತ ಧರ್ಮದ ಜನರು ಯಾವುದೇ ವಿಧಿ ಇಲ್ಲದೆ ರಾಜಧಾನಿಯಿಂದ ಹೊರ ನಡೆದು ಪಕ್ಕದ ಪಾಳೇಗಾರ ಆಡಳಿತದಲ್ಲಿ ನೆಲೆ ನಿಂತರು. ಆ ಕಾಲಮಾನದಲ್ಲಿ ಸ್ಥಿತ್ಯಂತರಕ್ಕೆ ಒಳಗಾದವರಲ್ಲಿ ಕೊಟ್ಟೂರಿನ ಶ್ರೀ ಗುರುಬಸವೇಶ್ವರರು ಒಬ್ಬರು.
ಕೊಟ್ಟೂರು ಗುರುಬಸವರು
ಕೊಟ್ಟೂರು ಗುರುಬಸವರು ಈ ಭಾಗದ ಪಂಚಗಣಾದೀಶ್ವರರಲ್ಲಿ ಒಬ್ಬರು ಎನ್ನುವ ನಂಬಿಕೆ ಇದೆ. ಇವರು 12ನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಾಯತ ತತ್ವ ಸಿದ್ಧಾಂತಗಳನ್ನು ಅನುಸರಿಸಿದ ಚಾರಿತ್ರಿಕ ಶರಣರಾಗಿದ್ದಾರೆ.
ಇವರ ಇತಿಹಾಸವನ್ನು ತಿಳಿಯುವುದಕ್ಕೆ ಅನೇಕ ಸಾಹಿತ್ಯಿಕ ಆಕರಗಳು, ಆ ಕಾಲದ ಸ್ಮಾರಕಗಳು ಮತ್ತು ಜನಪದೀಯ ಮೌಖಿಕ ಸಾಹಿತ್ಯದ ಸಾಕ್ಷಿಗಳು ಲಭಿಸುತ್ತವೆ.
ಅವುಗಳಲ್ಲಿ ಪ್ರಮುಖವಾದವುಗಳು ಎಂದರೆ:
೧. ಸಿದ್ದನಂಜೇಶನ ಗುರು ಬಸವರಾಜ ಚರಿತ್ರೆ (1530).
೨. ಬಸವಲಿಂಗ ಕವಿಯ ಶ್ರೀ ಕೊಟ್ಟೂರು ಬಸವೇಶ್ವರ ಚರಿತ್ರೆ (1678).
೩. ಚೀಲಾಲ ಸ್ವಾಮಿಯ ಷಟಸ್ಥಲ ಶಿವಾಯಣ (1700).
೪. ಮಲ್ಲಣಾರ್ಯರ ವೀರಶೈವ ಅಮೃತ ಮಹಾಪುರಾಣ, ಚನ್ನಬಸವ ಪುರಾಣ.
೫. ಚನ್ನಬಸವ ದೇವರ ಎಮ್ಮೆ ಬಸವನ ಕಾಲ.
೬. ಮಲ್ಲಿಕಾರ್ಜುನ ಪಂಡಿತಾರಾಧ್ಯರ ಸಂಸ್ಕೃತ ಕೃತಿ ಗುರುರಾಜ ಚರಿತೆ.

ಬಸವತತ್ವದ ಪ್ರತಿಪಾದನೆ
12ನೇ ಶತಮಾನದ ಬಸವಾದಿ ಶರಣರು, ಒಳ್ಳೆಯ ಸಮಯ, ಕೆಟ್ಟ ಸಮಯ, ವಾರ, ತಿಥಿ, ನಕ್ಷತ್ರ, ಹೀಗೆ ಸಮಯದ ಕುರಿತು ಭೇದಭಾವ ಮಾಡಲಿಲ್ಲ. ಹಾಗೂ ಎಲ್ಲಾ ಸಮಯವೂ ಒಳ್ಳೆಯದೇ ಎಂದು ಹೇಳಿದ್ದರು. ಈ ಕುರಿತು ಕೊಟ್ಟೂರು ಗುರುಬಸವೇಶ್ವರರು ಜನರಲ್ಲಿ ಜಾಗೃತಿ ಮೂಡಿಸಿದರು. ಅದಕ್ಕಾಗಿ ಶ್ರೀಮಠದ ರಥೋತ್ಸವವು ಮೂಲಾ ನಕ್ಷತ್ರದಲ್ಲಿ ಎಳೆಯಲ್ಪಡುತ್ತದೆ ಎನ್ನುವುದು ಗಮನಾರ್ಹ.
ಬಸವಾದಿ ಶರಣರು ಆ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಸಮಾಜದ ನಿರ್ಲಕ್ಷಿತ ತಳಸಮುದಾಯಗಳಿಗೆ ಮನ್ನಣೆ ನೀಡಿದರು. ಅದೇ ರೀತಿಯಲ್ಲಿ ಗುರುಬಸವೇಶ್ವರ ರಥ ಎಳೆಯುವ ಮುನ್ನ ಮಾದಿಗ ಸಮುದಾಯದ ಮಹಿಳೆಯರು ಆರತಿ ಬೆಳಗುವ ಸಂಪ್ರದಾಯವಿದೆ. ಇದು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಾಡಿದ ಬಹುದೊಡ್ಡ ಪ್ರಯತ್ನವಾಗಿದೆ.
ಅಂದು ಬಸವಣ್ಣ ನಾನು ಮಾದಾರ ಚೆನ್ನಯ್ಯನ ಮನೆಯ ಮಗ ಎಂದು ಹೆಮ್ಮೆಯಿಂದ ಹೇಳಿ ಸಮಾನತೆಗೆ ನಾಂದಿ ಹಾಡಿದ್ದರು. ಅದೇ ರೀತಿ ಕೊಟ್ಟೂರು ಗುರುಬಸವೇಶ್ವರರ ಮಠಕ್ಕೆ ಮಾದರ ಕೇರಿಯಿಂದ ಪ್ರಸಾದ ಬರುವ ಸಂಪ್ರದಾಯ ಇಂದಿಗೂ ಇದೆ. ಈ ಭಾಗದಲ್ಲಿ ಜಾತ್ಯಾತೀತವಾಗಿ ಎಲ್ಲಾ ಸಮಾಜದ ಕುಟುಂಬಗಳಲ್ಲಿ ಕೊಟ್ಟೂರೇಶ, ಗುರುಬಸವ, ಕೊಟ್ರುವ, ಕೊಟ್ರಪ್ಪ, ಗುರು ಬಸವರಾಜ ಎನ್ನುವ ಹೆಸರುಗಳಿವೆ.
ಅಕ್ಬರರ ಕೊಡುಗೆ
ಶ್ರೀಮಠಕ್ಕೆ ಮೊಘಲ್ ದೊರೆ ಅಕ್ಬರರು ಕೊಡುಗೆಯಾಗಿ ನೀಡಿದ ಖಡ್ಗ ಮತ್ತು ಮಂಚ ಇಲ್ಲಿನ ವಿಶೇಷ.
ಮೊಘಲ್ ದೊರೆ ಅಕ್ಬರ್ ಹಾಗು ಕೊಟ್ಟೂರಿನ ಗುರು ಬಸವೇಶ್ವರರ ನಡುವೆ ಸಂಪರ್ಕ ಸಾಧ್ಯವಾಗಿದ್ದು ಹೇಗೆ? ಕ್ರಿ.ಶ 1556 ರಿಂದ 1605 ರವರೆಗೆ ಆಳಿದ ಅಕ್ಬರ್ ಹಾಗೂ ಕೊಟ್ಟೂರು ಗುರುಬಸವೇಶ್ವರರು ಸಮಕಾಲೀನರು.
ಅಕ್ಬರನ ಧಾರ್ಮಿಕ ವಿಚಾರವನ್ನು ನೋಡುವುದಾದರೆ, ಅಂದಿನ ಕಾಲದಲ್ಲಿ ಧಾರ್ಮಿಕ ಸಂಘರ್ಷಗಳಿಗೆ ಕಡಿವಾಣ ಹಾಕಲು ಮತ್ತು ಧಾರ್ಮಿಕ ಸಮಾನತೆಯನ್ನು ತರಲು ಪತೇಪುರ ಸಿಕ್ರಿಯ ತನ್ನ ಅರಮನೆ ಪರಿಸರದಲ್ಲಿ ಹಿಬಾದತ್ ಖಾನಾ ಅಥವಾ ಆರಾಧನಾ ಮಂದಿರವನ್ನು ಕಟ್ಟಿಸಿ, ಅಲ್ಲಿಗೆ ಭಾರತದ ಎಲ್ಲಾ ಧರ್ಮದ ಪ್ರಮುಖರನ್ನು ಕರೆಯಿಸಿ, ಪ್ರತಿಯೊಂದು ಧರ್ಮದ ತತ್ವಗಳನ್ನು ತಾಳ್ಮೆಯಿಂದ ಆಲಿಸಿ ದೀನ್ – ಏ – ಎಲಾಹಿ ಎಂಬ ಹೊಸ ಧಾರ್ಮಿಕ ಪಂಥ ಸ್ಥಾಪಿಸಿದ್ದನು. ಈ ಪಂಥ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿತ್ತು.
ಕೊಟ್ಟೂರು ಗುರು ಬಸವೇಶ್ವರರು ಸಹ ಆಗ ಫತೆಪೂರ ಸಿಕ್ರಿಗೆ ಹೋಗಿದ್ದಿರಬಹುದು. ಗುರು ಬಸವರ ಜಾತ್ಯತೀತ ನಿಲುವನ್ನು ಕೇಳಿ ಭಕ್ತಿಯಿಂದ ಗುರುಬಸವೇಶ್ವರರಿಗೆ ಮಂಚ ಮತ್ತು ಖಡ್ಗವನ್ನು ಕೊಟ್ಟಿರಬಹುದು ಎಂಬ ಮಾತಿದೆ.
ಹೀಗೆ 12ನೇ ಶತಮಾನದ ಶರಣ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ 16ನೇ ಶತಮಾನದ ಕೊಟ್ಟೂರು ಗುರುಬಸವೇಶ್ವರರು ಲಿಂಗೈಕ್ಯರಾದ ನಂತರ ಅಲ್ಲಿನ ಜನರು ಅವರ ಗದ್ದುಗೆಯನ್ನು ಗೌರವ ಮತ್ತು ಭಕ್ತಿಯಿಂದ ಪೂಜಿಸುತ್ತ ಬರುತ್ತಿದ್ದಾರೆ.
ಗುರು ಬಸವೇಶ್ವರರ ಪೌರಾಣಿಕರಣ

ಕೊಟ್ಟೂರು ಗುರು ಬಸವೇಶ್ವರರು ಲಿಂಗೈಕ್ಯರಾದ ರನ್ನು ಚಾರಿತ್ರಿಕ ವ್ಯಕ್ತಿಯಾಗಿ ಚಿತ್ರಿಸದೆ ಪೌರಾಣಿಕರಿಸಿರುವುದು ದುರಂತದ ಸಂಗತಿಯಾಗಿದೆ. ಅವರನ್ನು ಪವಾಡ ಪುರುಷ, ದೇವರ ಅವತಾರ ಎಂದು ಬಿಂಬಿಸುತ್ತಿರುವುದು ವಿಷಾದಕರ ಸಂಗಾತಿಯಾಗಿದೆ.
ನೆಲಮೂಲ ಸಂಸ್ಕೃತಿಯ ಚಿಂತಕರಾದ ಎನ್. ಚಿನ್ನಸ್ವಾಮಿ ಸೋಸಲೆ ಅವರು ಬಸವೋತ್ತರ ಕಾಲದ ಅನೇಕ ಶರಣರ ಹೆಸರಿನಲ್ಲಿ ಮಂದಿರ ಅಥವಾ ಮಠ ಕಟ್ಟಿ ಭಕ್ತಿ ಗೌರವದಿಂದ ಪೂಜಿಸುತ್ತಾ, ಜನರು ತಮ್ಮ ಇಷ್ಟಾರ್ಥಗಳ ಪೂರೈಕೆಗೆ ಹರಕೆ ಹೊರುತ್ತಾರೆ.
ಆದರೆ ಬಸವಾದಿ ಶರಣರು, ಹಾಗೂ ಕೊಟ್ಟೂರು ಗುರು ಬಸವೇಶ್ವರರ ಸಮಾಧಿಗಳನ್ನು ಗದ್ದಿಗೆಗಳನ್ನಾಗಿ ಮಾಡಿ ಮೂಲತತ್ವ ಸಿದ್ಧಾಂತಗಳನ್ನು ಮರೆತು ದೇವಾಲಯ ಮತ್ತು ಮಠಗಳಲ್ಲಿ ಅವರನ್ನು ಸ್ಥಾವರವನ್ನಾಗಿ ಮಾಡಿ ಪೂಜಿಸುತ್ತಾ ಬರುತ್ತಿರುವುದು ಕಂಡುಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಅವರ ವಾರಸುದಾರರಾಗಿ ಗುರುಬಸವೇಶ್ವರರು 16ನೇ ಶತಮಾನದಲ್ಲಿ ಪ್ರತಿಪಾದಿಸಿ ಜಾತಿರಹಿತ ಸಮಸಮಾಜ ನಿರ್ಮಾಣ ಮಾಡುವ ಮೂಲಕ ಕಲ್ಯಾಣ ರಾಜ್ಯ ನಿರ್ಮಿಸುವ ಕಾರ್ಯ ಮಾಡಲು ಪ್ರಯತ್ನಿಸಿದ್ದಾರೆ.
ಈ ಕಾರಣಕ್ಕಾಗಿ ಇವರ ತತ್ವಗಳನ್ನು ಜನರು ಇಂದು ಅರ್ಥ ಮಾಡಿಕೊಂಡು ಅಳವಡಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
