ವಿರೂಪಾಕ್ಷನೇ ಹಂಪಿಯ ನಿಜವಾದ ಅಧಿಪತಿ ಎಂದು ಅವನ ಭಕ್ತರು ನಂಬಿದ್ದರು. ಸಂಗಮ ವಂಶದ ರಾಜರು ಶಾಸನಗಳಲ್ಲಿ ತಮ್ಮ ಹೆಸರಿನ ಬದಲು ‘ಶ್ರೀ ವಿರೂಪಾಕ್ಷ’ ಎಂದು ರುಜು ಹಾಕುತ್ತಿದ್ದರು.
ಸಾಳುವ, ತುಳುವ ಅರಸರ ಕಾಲದಲ್ಲಿ ವೈಷ್ಣವ ಭಕ್ತಿ ಒಳ ಬಂದು, ಕೃಷ್ಣದೇವರಾಯನ ಕಾಲದಲ್ಲಿ ಅದು ತಿರುಪತಿ ವೆಂಕಟೇಶನ ಭಕ್ತಿಯಾಗಿ ತಿರುಗಿ ಹೆಮ್ಮರವಾಗಿ ಬೆಳೆಯಿತು.
ವಿರೂಪಾಕ್ಷನಿಗೆ ಸವಾಲಾಗಿ ಎನ್ನುವಂತೆ ಅವನು ಭವ್ಯವಾದ ಬಾಲಕೃಷ್ಣ, ವಿಜಯ ವಿಠಲ, ಉಗ್ರ ನರಸಿಂಹ, ಹಜಾರ ರಾಮ, ಅನಂತಶಯನ, ಕೋದಂಡ ರಾಮ ದೇವಸ್ಥಾನಗಳನ್ನು ನಿರ್ಮಿಸಿದ.
ವಿರೂಪಾಕ್ಷನ ರಥ ಬೀದಿಗಿಂತ ವಿಜಯ ವಿಠಲನ ಬೀದಿಯು ಆಕರ್ಷಕವಾಯಿತು. ವಿರೂಪಾಕ್ಷಪುರಕ್ಕಿಂತ ಜೋರಾಗಿ ಕೃಷ್ಣಪುರ, ವಿಠಲಾಪುರ ಬಡಾವಣೆಗಳು ಬೆಳೆದವು.
ತಿರುಪತಿಗೆ ೭ ಬಾರಿ ಹೋಗಿ ಅಪಾರ ದಾನ ಮಾಡಿದ ಅವನು ತನ್ನ ೧೬ ವರ್ಷದ ಆಳ್ವಿಕೆಯ ಕೊನೆಯ ಹದಿಮೂರು ವರ್ಷ ವಿರೂಪಾಕ್ಷನ ಕಡೆ ತಿರುಗಿಯೂ ನೋಡಲಿಲ್ಲ.
ಇದರಿಂದ ಕೆರಳಿದ ಶೈವರು ಹಂಪಿಯ ಮೂಲ ವಿರೂಪಾಕ್ಷ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಆದಿಲ್ ಶಾಹಿಗಳ ಜೊತೆ ಸೇರಿ ವೈಷ್ಣವ ಸಂಸ್ಕೃತಿಯ ಹೇರಿಕೆಯ ವಿರುದ್ಧ ತಿರುಗಿಬಿದ್ದರು.
ಯುದ್ಧದಲ್ಲಿ ವಿಜಯ ವಿಠ್ಠಲ, ಹಜಾರ ರಾಮ ಮುಂತಾದ ವೈಷ್ಣವ ದೇವಾಲಯಗಳು ಭಗ್ನಗೊಂಡರೆ, ವಿರೂಪಾಕ್ಷ, ಉದ್ದಾನ ವೀರಭದ್ರ, ಬಡವಿಲಿಂಗಗಳಂತಹ ಶೈವ ದೇವಾಲಯಗಳು ಸಂರಕ್ಷಿಸಲ್ಪಟ್ಟವು.
(‘ಕೃಷ್ಣದೇವರಾಯ: ತೆಲುಗು ಸಂಸ್ಕೃತಿಯ ಆಕ್ರಮಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)