ಪ್ರಜೆಗಳಿಗಾಗಿ ಖಡ್ಗ ಹಿಡಿದು ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರು ರಾಣಿ ಚೆನ್ನಮ್ಮ- ಸುಮಾರು 200 ವರ್ಷಗಳ ಹಿಂದೆ ನಮ್ಮ ಈ ನೆಲದಲ್ಲಿ ಹುಟ್ಟಿ, ಬೆಳೆದು, ಈ ನೆಲಕ್ಕೊಂದು ಹೊಸ ಇತಿಹಾಸವನ್ನೇ ನಿರ್ವಿುಸಿ ಮರೆಯಾದ ದಿಟ್ಟೆ. ಆದರ್ಶ ಎನ್ನಬಹುದಾದ ಎಲ್ಲ ಗುಣಗಳನ್ನೂ ಒಳಗೊಂಡು, ಬದುಕಿದರೆ ಹೀಗೆ ಬದುಕಬೇಕು ಎಂದು ತೋರಿಸಿಕೊಟ್ಟ, ಅಗಣಿತ ಗುಣಗಳ ಸಾರವೇ ಆಗಿದ್ದ ಚೆನ್ನಮ್ಮ ನಮಗೆ ಬಿಟ್ಟು ಹೋದ ಆದರ್ಶಗಳಿಗೆ ಲೆಕ್ಕವೇ ಇಲ್ಲ. ತನ್ನ ನೆಲದ ಸ್ವಾಭಿಮಾನಕ್ಕೆ ಕೂದಲೆಳೆಯಷ್ಟೂ ಧಕ್ಕೆ ಬರದಂತೆ ಆಳುವುದೇ ಆಡಳಿತ ಎನ್ನುವ ಸಂದೇಶವನ್ನು ಸಾರಿ ಹೋದ ರಾಣಿ ಚೆನ್ನಮ್ಮ ಇಡೀ ಮನುಕುಲಕ್ಕೊಂದು ಆದರ್ಶ.

ಬೆಳಗಾವಿ ನಗರದಿಂದ 6 ಕಿ.ಮೀ. ಉತ್ತರದಲ್ಲಿರುವ ಕಾಕತಿ ಎನ್ನುವ ಸಣ್ಣ ಗ್ರಾಮದಲ್ಲಿ ದೇಸಾಯಿ ಧೂಳಪ್ಪಗೌಡ ಹಾಗೂ ಪದ್ಮಾವತಿಯ ಮಗಳಾಗಿ ಚೆನ್ನಮ್ಮ 1778ರಲ್ಲಿ ಹುಟ್ಟಿದಳು. (ಚೆನ್ನಮ್ಮನ ಜನ್ಮದಿನ ಅಕ್ಟೋಬರ್ 23 ಎಂದು ಹಲವೆಡೆ ಉಲ್ಲೇಖವಾಗಿದ್ದರೂ ನಿಜವಾದ ಜನ್ಮದಿನ ಅದಲ್ಲ. ಅಕ್ಟೋಬರ್ 23 ಚೆನ್ನಮ್ಮ ಬ್ರಿಟಿಷರ ವಿರುದ್ಧ ಮೊದಲ ಗೆಲುವು ಸಾಧಿಸಿದ ದಿನ. ಹಾಗಾಗಿ ಇಂದು ನಾವು ಅಕ್ಟೋಬರ್ 23ರಂದು ಕಿತ್ತೂರು ಚೆನ್ನಮ್ಮನ ವಿಜಯೋತ್ಸವವನ್ನು ‘ಕಿತ್ತೂರು ಉತ್ಸವ’ವಾಗಿ ಆಚರಿಸುತ್ತೇವೆ.)

ಲಿಂಗಾಯತ ಸಮುದಾಯಕ್ಕೆ ಸೇರಿದ ಆಕೆ ಚಿಕ್ಕಂದಿನಲ್ಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆ ತರಬೇತಿ ಪಡೆದಿದ್ದಳು. 1793ರಲ್ಲಿ ಅವಳ 15ನೇ ವಯಸ್ಸಿನಲ್ಲೇ ಕಿತ್ತೂರು ಸಂಸ್ಥಾನದ ದೇಸಾಯಿ ಮನೆತನದ ರಾಜ ಮಲ್ಲಸರ್ಜನಿಗೆ ವಿವಾಹ ಮಾಡಿಕೊಡಲಾಯಿತು. ಮಲ್ಲಸರ್ಜ ರಾಜನು ಪ್ರಯಾಣದ ಸಮಯದಲ್ಲಿ ಕಾಕತಿ ಗ್ರಾಮದ ಬಳಿ ನಿಂತನೆಂದೂ, ನರಭಕ್ಷಕ ಹುಲಿಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ರಾಜ ಮಲ್ಲಸರ್ಜನ ಶಿಬಿರವನ್ನು ನೋಡಿ ಸಹಾಯಕ್ಕಾಗಿ ವಿನಂತಿಸಿದರೆಂದೂ ಜಾನಪದ ಕಥೆ ಹೇಳುತ್ತದೆ, ಮಲ್ಲಸರ್ಜ ತಕ್ಷಣವೇ ಹುಲಿಯನ್ನು ಬೇಟೆಯಾಡಲು ಹೊರಟ. ಕಾಡಿನಲ್ಲಿ ಹುಲಿ ಕಂಡ ತಕ್ಷಣ ಬಾಣ ಬಿಟ್ಟನು. ರಾಜನು ಹತ್ತಿರ ಹೋಗಿ ನೋಡಿದಾಗ ಹುಲಿಗೆ ಒಂದಲ್ಲ, ಎರಡು ಬಾಣಗಳು ತಗುಲಿದ್ದವು. ಸ್ವಲ್ಪ ದೂರದಲ್ಲಿ ಹುಡುಗಿಯೊಬ್ಬಳು ಬಿಲ್ಲು ಹಿಡಿದು ನಿಂತಿರುವುದನ್ನು ಮಲ್ಲಸರ್ಜನು ನೋಡಿದನು. ಆ ಹುಡುಗಿಯೇ ಚೆನ್ನಮ್ಮ. ಚೆನ್ನಮ್ಮನೂ ಆ ಹುಲಿಯನ್ನು ಹುಡುಕಿಕೊಂಡು ಹೊರಟಿದ್ದಳು. ಮಲ್ಲಸರ್ಜ ರಾಜನು ಚೆನ್ನಮ್ಮನ ಧೈರ್ಯ ಮತ್ತು ಸೌಂದರ್ಯದಿಂದ ಆಕರ್ಷಿತನಾದನು. ಇಬ್ಬರೂ ಮದುವೆಯಾದರು. ಚೆನ್ನಮ್ಮ ರಾಜ ಮಲ್ಲಸರ್ಜನ ಕಿರಿಯ ರಾಣಿಯಾದಳು.

ರಾಜ ಮಲ್ಲಸರ್ಜನ ಮೊದಲ ಪತ್ನಿ ರಾಣಿ ರುದ್ರಮ್ಮ ಜತೆ ಚೆನ್ನಮ್ಮ ಸೌಹಾರ್ದ ಸಂಬಂಧ ಬೆಳೆಸಿದಳು. ರುದ್ರಮ್ಮನ ಮಕ್ಕಳಿಬ್ಬರಿಗೂ ಅದೇ ಪ್ರೀತಿಯನ್ನು ತೋರಿಸತೊಡಗಿದಳು. ಮೇಧಾವಿ ಚೆನ್ನಮ್ಮ ಶೀಘ್ರದಲ್ಲೇ ರಾಜ್ಯಕ್ಕೆ ಮಾರ್ಗದರ್ಶಿ ಪಾತ್ರವನ್ನು ವಹಿಸಿಕೊಂಡಳು. ಮಲ್ಲಸರ್ಜನ ಎರಡನೇ ಪತ್ನಿಯಾಗಿ ಹೋದ ಚೆನ್ನಮ್ಮ ಮೊದಲು ಅರಮನೆಯೊಳಗಿನ ಎಲ್ಲ ಸಂಬಂಧಗಳನ್ನು ಗೌರವಿಸುತ್ತ ಎಲ್ಲರ ಮನ ಗೆದ್ದಳು. ತನ್ನ ಎಲ್ಲ ಪ್ರಜೆಗಳನ್ನೂ, ಯಾವ ಭೇದಭಾವವಿಲ್ಲದೆ ಒಂದೇ ರೀತಿ ಪ್ರೀತಿಯಿಂದ ಕಾಣುವ ಮೂಲಕ ಅವರ ಮನಸ್ಸನ್ನೂ ಗೆದ್ದಳು. ನೈಸರ್ಗಿಕ ವಿಕೋಪಗಳು ಬಂದಾಗ ಪ್ರಜೆಗಳ ನೆರವಿಗೆ ಗಟ್ಟಿಯಾಗಿ ನಿಂತು ಗಟ್ಟಿಗಿತ್ತಿ ಎನಿಸಿದಳು.

ಈಸ್ಟ್ ಇಂಡಿಯಾ ಕಂಪನಿ ಪ್ರವೇಶ

ಅದು ಬ್ರಿಟಿಷರು ಭಾರತದಲ್ಲಿ ಕಾಲೂರುತ್ತಿದ್ದ ಸಮಯ. ಆಗ ಇಲ್ಲಿಯ ರಾಜಕೀಯ ಪರಿಸ್ಥಿತಿ ವಿಚಿತ್ರವಾಗಿತ್ತು. ದುರ್ಬಲವಾಗಿದ್ದ ಆಡಳಿತ ಪರಿಸ್ಥಿತಿಯ ದುರ್ಲಾಭ ಪಡೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇದೇ ಸುವರ್ಣಾವಕಾಶ ಎಂದು ನೆಲೆಯೂರಿತು. ಇಂತಹ ಸಮಯದಲ್ಲಿ ಮಲ್ಲಸರ್ಜ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ಕಿತ್ತೂರ ಸಂಸ್ಥಾನವನ್ನು ಭದ್ರಗೊಳಿಸಿದ್ದನು. 1809ರಲ್ಲಿ ಪೇಶ್ವೆಯವರಿಗೆ ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ, ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು 3 ವರ್ಷ ಕಾಲ ಬಿಸಿಲು, ಬೆಳಕು ಯಾವುದೂ ಕಾಣದಂತೆ ಸೆರೆಯಲ್ಲಿಟ್ಟರು. ಇನ್ನೇನು ಸಾಯುತ್ತಾನೆ ಎನ್ನುವ ಸಂದರ್ಭದಲ್ಲಿ, 1816ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಮಧ್ಯದಲ್ಲೇ ಮಲ್ಲಸರ್ಜನು ಕೊನೆಯುಸಿರೆಳೆದ. ಆ ನಂತರ ಅವನ ಮೊದಲ ಪತ್ನಿಯ ಮಗ ಶಿವಲಿಂಗ ರುದ್ರಸರ್ಜನಿಗೆ ಪಟ್ಟಕಟ್ಟಲಾಯಿತು.

ಆದರೆ ಆತನು ಸಹ ಬಹುಕಾಲ ಬದುಕುಳಿಯಲಿಲ್ಲ. 1824ರಲ್ಲಿ ಆತ ಕೊನೆಯುಸಿರೆಳೆದ. ಮರಣದ ಪೂರ್ವದಲ್ಲಿ ಕಲ್ಮಠ ಶ್ರೀಗಳು, ಚೆನ್ನಮ್ಮ ಮೊದಲಾದವರು ಸೇರಿ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ಶಿವಲಿಂಗ ರುದ್ರಸರ್ಜನಿಗೆ ದತ್ತು ತೆಗೆದುಕೊಂಡಿದ್ದರು.

ಸಂಪದ್ಭರಿತ ಕಿತ್ತೂರಿನ ಮೇಲೆ ಕಣ್ಣು

ಸಂಪದ್ಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟಿಷರ ಕಣ್ಣಿತ್ತು. ಇದೇ ಕಾರಣಕ್ಕೆ ಕಿತ್ತೂರಿನ ಮೇಲೆ ಬ್ರಿಟಿಷರು ನೇರ ನಿಯಂತ್ರಣ ಬಯಸಿದ್ದರು. ಶಿವಲಿಂಗ ರುದ್ರಸರ್ಜನ ಸಾವು ಬ್ರಿಟಿಷರಿಗೆ ವರವಾಯಿತು. ಹಾಗಾಗಿ, ಶಿವಲಿಂಗಪ್ಪನನ್ನು ದತ್ತು ಪಡೆದಿದ್ದನ್ನು ಧಾರವಾಡದ ಕಲೆಕ್ಟರ್ ಥ್ಯಾಕರೆ ತಿರಸ್ಕರಿಸಿದ. ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ತಾತ್ಕಾಲಿಕವಾಗಿ ಮಲ್ಲಪ್ಪ ಶೆಟ್ಟಿ ಹಾಗೂ ಹಾವೇರಿ ವೆಂಕಟರಾವ್ ಅವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡಿದ ಹಾಗೂ ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕಿದ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಚೆನ್ನಮ್ಮ. ಕಿತ್ತೂರು ಸಂಸ್ಥಾನವನ್ನು ಸಂಪೂರ್ಣ ವಶಪಡಿಸಿಕೊಳ್ಳಬೇಕು ಎನ್ನುವ ಬ್ರಿಟಿಷರ ಹುನ್ನಾರದ ವಿರುದ್ಧ ಸಿಡಿದೆದ್ದ ಚೆನ್ನಮ್ಮ, ‘ಯಾರನ್ನು ದತ್ತು ತೆಗೆದುಕೊಳ್ಳಬೇಕೆನ್ನುವುದನ್ನು ನಿರ್ಧರಿಸುವುದು ಬ್ರಿಟಿಷ್ ಸರ್ಕಾರವಲ್ಲ’ ಎಂದು ಸಾರಿದಳು. ಯಾರಿಗೆ ಪಟ್ಟಕಟ್ಟಬೇಕು ಎನ್ನುವುದು ಜನರಿಗೆ ಸಂಬಂಧಿಸಿದ್ದು, ನಮ್ಮ ಸಂಸ್ಥಾನದ ವಿಷಯದಲ್ಲಿ ಬ್ರಿಟಿಷರು ತಲೆ ಹಾಕಬಾರದು ಎಂದು ಗಟ್ಟಿ ನಿರ್ಧಾರ ತಳೆದ ಚೆನ್ನಮ್ಮ, ಚಾಣಾಕ್ಷ ನಡೆಯಿಂದ ಮುಂದಡಿ ಯಿಟ್ಟಳು. ಹಾಗಾಗಿ ಮೊದಲ ಯುದ್ಧದಲ್ಲಿ ಚೆನ್ನಮ್ಮ ದಿಗ್ವಿಜಯ ಸಾಧಿಸಿದಳು.

ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧಕೈದಿಗಳು ಬಿಡುಗಡೆ ಆಗುತ್ತಲೇ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಮೋಸದಿಂದ ಚೆನ್ನಮ್ಮನನ್ನು ಬಂಧಿಸಲಾಯಿತು. ಕುತಂತ್ರದಿಂದ ಪ್ರಜೆಗಳನ್ನು ಸಾಯಿಸಲಾಯಿತು. ತಾನೇ ನಂಬಿದವರ ಮೋಸದಿಂದ ಚೆನ್ನಮ್ಮ ಸೋಲೊಪ್ಪಬೇಕಾಯಿತು. 4 ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ಗೃಹಬಂಧನದಲ್ಲೇ ನಿಧನಹೊಂದಿದಳು (1829ರಲ್ಲಿ).

ಚೆನ್ನಮ್ಮನ ಮೌಲ್ಯಾಧಾರಿತ ಗುಣಗಳು

ಪ್ರಜೆಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಚೆನ್ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದಳು. ದತ್ತು ಸ್ವೀಕರಿಸುವುದು ಸೇರಿದಂತೆ ಯಾವುದೇ ಪ್ರಮುಖ ನಿರ್ಣಯಗಳು ಸ್ಥಳೀಯ ಜನರಿಂದಲೇ ಆಗಬೇಕು ಎನ್ನುವ ಚೆನ್ನಮ್ಮನ ನಿಲುವು ಪ್ರಜೆಗಳ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿತು. ಸಂಸ್ಥಾನ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿದಾಗ ತನ್ನ ವೈಯಕ್ತಿಕ ಕಷ್ಟಕಾರ್ಪಣ್ಯಗಳನ್ನು ಲೆಕ್ಕಿಸದೆ ಪ್ರಜೆಗಳಿಗೋಸ್ಕರ ಖಡ್ಗ ಹಿಡಿದು ಹೋರಾಡಿದ ಧೀರತನ ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಬಹುಮುಂಚೆಯೇ ಕಿತ್ತೂರಿನ ವೀರರಾಣಿ ಚೆನ್ನಮ್ಮ ಬ್ರಿಟಿಷರಿಗೆ (1824) ಪ್ರತಿರೋಧ ಒಡ್ಡಿದ್ದು, ಮೊದಲ ಹಂತದಲ್ಲಿ ಯಶ ಸಾಧಿಸಿದ್ದು, ಭಾರತದ ಇತಿಹಾಸದಲ್ಲಿ ಪ್ರೇರಣೆಯಾಗಿ ಉಳಿದಿದೆ. ಹಾಗಾಗಿ ಕಿತ್ತೂರು ಚೆನ್ನಮ್ಮನೊಂದಿಗೆ ಗಟ್ಟಿಯಾಗಿ ನಿಂತ ಸಂಗೊಳ್ಳಿ ರಾಯಣ್ಣ ಮತ್ತಿತರರು ನಮ್ಮ ನಡುವೆ ಬಾಳಿ ಹೋದ ಆದರ್ಶಗಳಾಗಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *

ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆ