(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ ಶಾರದಮ್ಮ ಪಾಟೀಲ- ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 6 ನೆಯ ದಿವಸದ ವರದಿ. )
ಪ. ಪೂ. ಬಂಥನಾಳ ಶಿವಯೋಗಿಗಳ ಜೀವನಚರಿತ್ರೆಯನ್ನು ಶರಣ ವಿ. ಡಿ. ಐಹೊಳ್ಳಿ ಸರ್ ಅವರು ವಿವರವಾಗಿ ನಮ್ಮೊಂದಿಗೆ ಹಂಚಿಕೊಂಡರು.
ವಿದ್ಯಾರ್ಥಿಗಳೇ ದೇವರು ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದವರು ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು.
ನಾಡಿನಲ್ಲೆಡೆ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. 18ನೇ ಶತಮಾನದಲ್ಲಿ ವೃಷಭ ಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಮಠದ ಕೊಡುಗೆ ಅನನ್ಯ. ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶಿವಯೋಗಿಗಳು ಚನ್ನಬಸವ ಶಿವಯೋಗಿಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸಲು ಶ್ರಮಿಸಿದರು. ಬಸವಾದಿ ಪ್ರಮಥರ ದಾರಿ ಕ್ರಮಿಸಿದರು. ತದನಂತರ ಬಂದ ಪೀಠಾಧಿಪತಿ ಸಂಗನಬಸವ ಮಹಾ ಶಿವಯೋಗಿಗಳ ಸಮಾಜಮುಖಿ ಕಾರ್ಯಗಳಿಂದ ಮಠದ ಕೀರ್ತಿ ಮುಗಿಲೆತ್ತರಕ್ಕೇರಿದೆ ಎನ್ನುವುದನ್ನು ಅಭಿಮಾನದಿಂದ ಹೇಳಿದರು.
ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು, ಅವುಗಳು ಇಂದು ಶತಮಾನ ಸಂಭ್ರಮದಲ್ಲಿವೆ. ವಿಜಯಪುರ ಜಿಲ್ಲೆಯಲ್ಲಿ ಇಂದು ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ-ಕಾಲೇಜು ತಲೆ ಎತ್ತಲು ಕಾರಣ ಅವರು ಅಂದುಕೊಟ್ಟ ಸ್ಪೂರ್ತಿಯ ಕರೆ. ಶೈಕ್ಷಣಿಕ ಕ್ರಾಂತಿ ಮಾಡಿ, ಮಠಗಳ ಮೂಲಕ ರಾಷ್ಟ್ರ ಅಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿದ ವೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನಬಸವಬಸವಯೋಗಿಗಳು.
1923ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರಿಂದ ರಾಷ್ಟ್ರ ದೀಕ್ಷೆ ಪಡೆದರು. ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯಕ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣ ಮಾಡಲು ಪ್ರಾರಂಭಿಸಿದರು ಎನ್ನುವದನ್ನು ಸ್ಮರಿಸಿದರು.
1925ರಲ್ಲಿ ವಚನ ಪಿತಾಮಹ ಹಾಗೂ ಹಳಕಟ್ಟಿಯವರು ಕಟ್ಟಿದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾಗಿ ಶೈಕ್ಷಣಿಕ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950ರಲ್ಲಿ ಲಚ್ಯಾಣ ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 ಮತ್ತು 1963 ರಲ್ಲಿ ಮಂಟಪ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954 ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೆರವೇರಿಸಿದರು. ಈ ಮಹತ್ಕಾರ್ಯದ ಸ್ಮರಣಾರ್ಥ ಬೃಹತ್ ಲಿಂಗದ ಆಕಾರದ ಮಂದಿರದಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ.
ಈ ಲಿಂಗದ ಗುರಿ ಇಂದು ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ. ಲಚ್ಯಾಣದಲ್ಲಿ ಅಮರ ಗಣಾಧೀಶ್ವರ ಪೂಜೆ, ಲಕ್ಷ ದೀಪೋತ್ಸವದಂಥ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇಂದ್ರಗಳತ್ತ ಸೆಳೆದಿದ್ದಾರೆ .ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಸಿದ್ದಾರೆ, ಹಲವಾರು ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೋಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ.ಸ್ವಾತಂತ್ರ ಹೋರಾಟಗಾರರಿಗೆ ಶ್ರೀಮಠದಲ್ಲಿ ಆಶ್ರಯ ನೆಲೆ ನೀಡಿ ರಕ್ಷಿಸಿದ್ದಾರೆ. ಶ್ರೀಗಳು ದಾಸೋಹ ಶೈಕ್ಷಣಿಕ ರಾಷ್ಟ್ರಭಕ್ತಿ ಧರ್ಮ ಜಾಗೃತಿ ನಡೆಸಿದ್ದಾರೆ ಎನ್ನುವುದನ್ನು ತಿಳಿಸಿಕೊಟ್ಟರು.
ಕಡೆಯದಾಗಿ ಪ್ರವಚನದ ಮೂಲಕ ಧಾರ್ಮಿಕ ಸಾಮಾಜಿಕ ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಶ್ರೀಗಳು ಕೈಗೊಂಡರು. ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದರು. ಪರಿಣಾಮವಾಗಿ ವಿಜಯಪುರ ಜಿಲ್ಲೆಯಾದ್ಯoತ ಅನೇಕ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿ ನಿಂತವು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಬಡ ವಿದ್ಯಾರ್ಥಿಗಳು ನಾಡಿನ ನಾನಾ ಭಾಗದಲ್ಲಿ ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುತ್ತಾ ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ ಎನ್ನುವುದರ ಮಹತ್ವವನ್ನು ಅರುಹಿದರು.
ನಂತರ ಡಾ. ಶಶಿಕಾಂತ ಪಟ್ಟಣ ಸರ್ ಅವರು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಬಂಥನಾಳ ಶಿವಯೋಗಿಗಳು ಕಟ್ಟಿದ ಶಿಕ್ಷಣ ಸಂಸ್ಥೆಗಳ ಬಗೆಗೆ, ಸರ್ವ ಧರ್ಮ ಸಮ್ಮೇಳನ ಮಾಡಿದ್ದು, ಫ. ಗು. ಹಳಕಟ್ಟಿ ಅವರು ಮತ್ತು ಹರ್ಡೇಕರ ಮಂಜಪ್ಪನವರ ಜೊತೆಗಿದ್ದ ಶ್ರೀಗಳ ಒಡನಾಟ, ಗಂಜಿ ಕೇಂದ್ರ ಗಳನ್ನು ನಡೆಸಿದ್ದು, ಹೀಗೆ ಹಲವಾರು ವಿಷಯಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಿದರು.
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಶರಣೆ ಇಂದಿರಾ ಹೋಳ್ಕರ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ರತ್ನಕ್ಕ ಕಾದ್ರೊಳ್ಳಿ ಅವರ ಶರಣು ಸಮರ್ಪಣೆ, ಶರಣೆ ಜಯಶ್ರೀ ಪಾಟೀಲ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಕಾರ್ಯಕ್ರಮ ನಿರ್ವಹಣೆ ಯನ್ನು ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರು ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು.
ಶರಣ ವಿ. ಡಿ. ಐಹೊಳ್ಳಿ
ಉಪನ್ಯಾಸಕರು
ಜಂಗಮ ವಾಣಿ 9964376645