ಎಡ್ಗನ್ ಥರ್ಸ್ಟನ್ ಅವರ ಪ್ರಸಿದ್ಧ ಪುಸ್ತಕದಲ್ಲಿ ಚಿಕ್ಕದೇವರಾಜ ಒಡೆಯರನ ಅಮಾನುಷ ವರ್ತನೆಯಿಂದ ಮೈಸೂರು ತೊರೆದು ಹೋದ ಲಿಂಗಾಯತರ ಬಗ್ಗೆ ಮಾಹಿತಿಯಿದೆ
ಬೆಂಗಳೂರು
ಸಮುದಾಯ ನಾಟಕ ತಂಡವು 1990 ರ ಪೂರ್ವಾರ್ಧದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಆವರಣದಲ್ಲಿರುವ ಸೆಂಟಿನರಿ ಹಾಲ್ ನಲ್ಲಿ ಪ್ರದರ್ಶಿಸಿದ್ದ “ಚಿಕ್ಕದೇವರಾಯ ಭೂಪ” ಎಂಬ ನಾಟಕವನ್ನು ನೋಡಿದ್ದೆ. ಅದು ನನ್ನ ಮನಸ್ಸಿನಲ್ಲಿ ಸ್ವಲ್ಪ ಗಲಿಬಿಲಿ ಹುಟ್ಟಿಸಿದ್ದ ನಾಟಕವಾಗಿತ್ತು. ಏಕೋ ಏನೋ ಇತ್ತೀಚೆಗೆ ನೆನಪಾಗಿ ಅದರ ಎಳೆಯನ್ನು ಹುಡಿದು ಹುಡುಕಲು ಪ್ರಾರಂಭಿಸಿದಾಗ ಸಿಕ್ಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಈ ಬರಹವು ನಮ್ಮ ಇತಿಹಾಸದಲ್ಲಿ ಘಟಿಸಿ ಹೋಗಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಲಿ ಎನ್ನುವ ಆಶಯ ಹೊಂದಿದೆ.
ಮದ್ರಾಸ್ ಪ್ರೆಸಿಡೆನ್ಸಿಗೆ ವಲಸೆ
ಬ್ರಿಟಿಷ್ ಸಂಶೋಧಕನಾದ ಮಾರ್ಕ್ ವಿಲ್ಕ್ಸ್ನ “ಹಿಸ್ಟಾರಿಕಲ್ ಸ್ಕೆಚಸ್ ಆಫ್ ದ ಸೌತ್ ಆಫ್ ದ ಇಂಡಿಯ” ಎಂಬ ಇತಿಹಾಸದ ಸಂಶೋಧನಾ ಪ್ರಬಂಧವನ್ನು ಆಧಾರವಾಗಿಟ್ಟುಕೊಂಡು ಇನ್ನೊಬ್ಬ ಮಾನವ ಶಾಸ್ತ್ರಜ್ಞ ಎಡ್ಗನ್ ಥರ್ಸ್ಟನ್ ಮತ್ತು ಅವರ ಸಹ ಲೇಖಕರು “ಕಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸೌತ್ ಇಂಡಿಯಾ” ಎಂಬ ಪುಸ್ತಕದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ನೆರೆ ರಾಜ್ಯಗಳ ವಲಸಿಗರ ಬಗ್ಗೆ ಬರೆಯುತ್ತಾ, ಕನ್ನಡ ಭಾಷೆ ಮಾತನಾಡುವ ವಲಸಿಗರನ್ನು ಗುರುತಿಸುತ್ತಾನೆ ಮತ್ತು ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂದು ದಾಖಲಿಸಿ, ಇವರ ವಲಸೆಯನ್ನು 17 ನೇ ಶತಮಾನದ ಅಂತ್ಯದಲ್ಲಿ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಚಿಕ್ಕದೇವರಾಜ ಒಡೆಯರ್ ಅವರ ಆಡಳಿತದಲ್ಲಿ ನಡೆದ ಕೆಲವು ಅಮಾನುಷ ಘಟನೆಗಳಿಗೆ ತಳುಕು ಹಾಕುತ್ತಾರೆ.
ಮೈಸೂರು ಸಂಸ್ಥಾನವನ್ನು ಚಕ್ಕದೇವರಾಜ ಒಡೆಯರ್ 1673-1704 ರಲ್ಲಿ ಮಹಾರಾಜರಾಗಿ ಆಡಳಿತ ನಡೆಸಿದ್ದರು. ತುಂಬಾ ಮಹಾತ್ವಾಕಾಂಕ್ಷಿಯಾಗಿದ್ದ ಚಿಕ್ಕದೇವರಾಜ ಒಡೆಯರ್ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಸುತ್ತಮುತ್ತಲಿನ ರಾಜರೊಟ್ಟಿಗೆ ಮಾಡಿದ ಯುದ್ಧಗಳಿಂದಾಗಿ ಆರ್ಥಿಕ ದಿವಾಳಿ ಹೊಂದಿದ್ದ ಅವನು ದೊಡ್ಡ ಮಟ್ಟದ ಆರ್ಥಿಕ ಸುಧಾರಣೆಗೆ ಮುಂದಾಗುತ್ತಾನೆ.

ತೆರಿಗೆಯ ಹೊರೆ
ಮೈಸೂರು ಸಂಸ್ಥಾನಕ್ಕೆ ಸೇರಿದ್ದ ನಂಜನಗೂಡು ಪ್ರದೇಶದ ನಿವಾಸಿಗಳು ಹೆಚ್ಚಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುತ್ತರೆ. ಅವರ ಪ್ರಮುಖ ಉದ್ಯೋಗ ಕೃಷಿ ಆಗಿರುತ್ತದೆ. ಚಿಕ್ಕದೇವರಾಜ್ ಒಡೆಯರ್ ಅವರ ಈ ಆರ್ಥಕ ನೀತಿಯಿಂದಾಗಿ ರೈತಾಪಿ ಕೆಲಸದಲ್ಲಿ ನಿರತರಾಗಿದ್ದ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಬೀಳುತ್ತದೆ. ಅವರ ಭೂಮಿ, ಅವರು ಬೆಳೆಯುವ ಬೆಳೆಗಳಿಗೆ ಹಾಕುತ್ತಿದ್ದ ತೆರಿಗೆಯೊಟ್ಟಿಗೆ ದನಗಳ ಮೇವಿಗೂ ತೆರಿಗೆ ವಿಧಿಸಲು ಆದೇಶ ಮಾಡಿದ್ದರು. ಅದರಿಂದಾಗಿ ಮೈಸೂರು ಸಂಸ್ಥಾನದಲ್ಲಿ ಕೃಷಿಯಲ್ಲಿ ತೊಡಗಿದ್ದ ಲಿಂಗಾಯತ ಸಮುದಾಯ ರಾಜಾಡಳಿತದ ಮೇಲೆ ದೊಡ್ಡ ಅಸಮಾಧಾನ ಹೊಂದಿತ್ತು.
ಜೊತೆಗೆ, ಲಿಂಗಾಯತ ಸಮುದಾಯದ ವ್ಯಾಪಾರಸ್ಥರಿಗೆ ಬರುವ ಲಾಭವೂ ಕಡಿಮೆಯಾಗಿ ಲಿಂಗಾಯತ ಪುರೋಹತಶಾಹಿಯೂ ಅಸಮಾಧಾನಗೊಂಡಿತ್ತು. ಈ ಸಂದರ್ಭದಲ್ಲಿ, ಲಿಂಗಾಯತ ಧಾರ್ಮಿಕ ಕೇಂದ್ರಗಳಾದ ಮಠಗಳ ಉಸ್ತುವಾರಿವಹಿಸಿಕೊಂಡಿದ್ದ ಜಂಗಮರನ್ನು ಜನರು, ವ್ಯಾಪಾರಿಗಳು ಸಂಪರ್ಕಿಸಿ ತಮ್ಮ ತೊಂದರೆಗಳನ್ನು ಚರ್ಚಿಸುತ್ತಾರೆ. ಇದರ ಪ್ರತಿಫಲವಾಗಿ ಜಂಗಮರು ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ತೊಂದರೆಗೊಳಾದ ಎಲ್ಲಾ ಸಮೂಹಗಳಿಗೂ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಾರೆ.
ಸಂಚಾರಿ ಜಂಗಮರು
ತಮ್ಮ ಧರ್ಮದ ಪ್ರಚಾರಕ್ಕಾಗಿ ಹಾಗೂ ದಾಸೋಹದ ಕೇಂದ್ರಗಳಿಗೆ ದವಸ ಧಾನ್ಯಗಳನ್ನು ಸಂಗ್ರಹಿಸುವ ಸಲುವಾಗಿ ಊರಿಂದೂರಿಗೆ ಸಂಚಿರಿಸುತ್ತಿದ್ದ ಜಂಗಮರು ಎಲ್ಲರಿಗೂ ಮತ್ತು ಸುತ್ತಮುತ್ತಲಿನ ಊರುಗಳಿಗೆ ಸಂಪರ್ಕ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತರುತ್ತಾರೆ. ಇದರ ಭಾಗವಾಗಿ ರಾಜರ ಆರ್ಥಿಕ ಸುಧಾರಣೆಯ ಭಾಗವಾಗಿದ್ದ ಅಧಿಕ ತೆರಿಗೆ ಕೊಡುವುದರ ವಿರುದ್ಧ ಜಂಗಮರ ನೇತೃತ್ವದಲ್ಲಿ ಜನರು ಪ್ರತಿಭಟನೆಗಿಳಿಯುತ್ತಾರೆ. ರೈತರು ನಾವು ಬೆಳೆಗಳನ್ನೇ ಬೆಳೆಯುವುದಿಲ್ಲ ಮತ್ತು ತೆರಿಗೆಯನ್ನೂ ಕಟ್ಟುವುದಿಲ್ಲ ಎಂಬ ನಿರ್ಧಾರ ತಳೆಯುತ್ತಾರೆ. ಪ್ರತಿಭಟನೆಯ ಭಾಗವಾಗಿ ಜನರು ಪ್ರತಿ ಊರಿನ ಹೊರಗೆ ಒಂದು ಮರಕ್ಕೆ ತಮ್ಮ ಬೇಸಾಯಕ್ಕೆ ಉಪಯೋಗಿಸುವ ನೇಗಿಲನ್ನು ತಲೆಕೆಳಗಾಗಿ ನೇತುಹಾಕುತ್ತಾರೆ, ಆ ನೇಗಿಲಿನ ನೆರಳು ಬೀಳುವ ಜಾಗದಲ್ಲಿ ರೈತರು ಸಭೆ ಸೇರುವ ಸ್ಥಳವೆಂದು ಗುರುತಿಸಿ ಎಲ್ಲರೂ ಅಲ್ಲಿ ಸಭೆ ಸೇರಿ ಪ್ರತಿಭಟನೆಯ ರೂಪುರೇಷೆಗಳನ್ನು ರೂಪಿಸುತ್ತಾರೆ.
ಜಂಗಮರ ನೇತೃತ್ವದಲ್ಲಿ ನಡೆಯುವ ಈ ಸಭೆಗಳ ತೀರ್ಮಾನದಂತೆ ತೆರಿಗೆ ಕೊಡುವುದನ್ನು ನಿಲ್ಲಿಸುವ ಮೂಲಕ ರಾಜಾಡಳಿತದ ಆದೇಶದ ವಿರುದ್ಧ ದೊಡ್ಡ ದಂಗೆಯನ್ನೇ ಸಾರುತ್ತಾರೆ. ಇದರಿಂದ ಕುಪಿತಗೊಂಡ ರಾಜ ತಮ್ಮ ಗೂಢಾಚಾರರ ಮೂಲಕ ಸಂಪೂರ್ಣ ವಿವರಗಳನ್ನು ಕಲೆಹಾಕಿ, ದಂಗೆಯ ಕೇಂದ್ರಸ್ಥಳವಾದ ನಂಜನಗೂಡಿನಲ್ಲಿ ದಂಗೆಯ ನೇತಾರರಾದ ಜಂಗಮರ ಸಭೆಯೊಂದನ್ನು ಏರ್ಪಡಿಸುತ್ತಾರೆ, ಮತ್ತು ರಾಜರ ಜೊತೆ ನೇರವಾಗಿ ನಡೆಯುವ ಆ ಸಭೆಗೆ ಎಲ್ಲಾ ಜಂಗಮರನ್ನೂ ಆಹ್ವಾನಿಸಲಾಗುತ್ತದೆ. ರಾಜರ ಮೊಕ್ಕಾಂಗಾಗಿ ಮತ್ತು ಜಂಗಮರೊಟ್ಟಿಗೆ ಸಭೆ ನಡೆಸುವ ನೆಪದಲ್ಲಿ ದೊಡ್ಡ ದೊಡ್ಡ ಬಿಡಾರಗಳನ್ನು ಹಾಕಿ, ಹಿಂದಿನ ದೊಡ್ಡ ಬಿಡಾರದಲ್ಲಿ ರಾಜರ ವಾಸ್ತವ್ಯಕ್ಕೆ ಮತ್ತು ಅದರಲ್ಲಿ ಸಭೆಗೆ ವ್ಯವಸ್ಥೆ ಮಾಡಿ, ಅದನ್ನು ತಲುಪಲು ಅದಕ್ಕಿಂತ ಮುಂಚೆ ಭದ್ರತೆಯ ಕಾರಣ ಹೇಳಿ ಸೈನಿಕರಿಂದ ಕಾಯಲ್ಪಟ್ಟ ಹಲವು ಬಿಡಾರಗಳನ್ನು ದಾಟಿ ಬರುವಂತೆ ಏರ್ಪಾಡು ಮಾಡಲಾಗಿರುತ್ತದೆ.
ಶಿರೋಬಾವಿ
ಒಮ್ಮೆಗೆ ಒಬ್ಬ ಜಂಗಮನಿಗೆ ಮಾತ್ರ ಪ್ರವೇಶವಿರುವಂತೆ ಮತ್ತು ಅವನು ಭದ್ರತೆಯ ಪರೀಕ್ಷೆಗಳನ್ನು ದಾಟಿ ರಾಜನಿರುವ ಬಿಡಾರಕ್ಕೆ ಪ್ರವೇಶಸುವ ಮುಂಚೆ ಆನೆಗಳನ್ನು ಹಿಡಿಯಲು ತೋಡುವ ದೊಡ್ಡ ಖೆಡ್ಡದಂತಹ ಗುಂಡಿಯನ್ನು ತೋಡಲಾಗಿರುತ್ತದೆ. ಮೊದಲ ಬಿಡಾರದಿಂದ ಗುಂಡಿಯಿರುವ ಬಿಡಾರವನ್ನು ಅಲ್ಲಿಂದ ಜೋರು ಕೂಗಿದರೂ ಕೇಳಿಸದಷ್ಟು ದೂರದಲ್ಲಿರುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರತಿ ಜಂಗಮನು ಮೊದಲ ಬಿಡಾರ ಪ್ರವೇಶಿಸಿ ಗುಂಡಿಯಿರುವ ಬಿಡಾರವನ್ನು ತಲುಪಿದ ತಕ್ಷಣ ಶಿರಚ್ಛೇದ ಮಾಡಿ ಆ ಗುಂಡಿಗೆ ದೂಡಲಾಗುತ್ತದೆ. ಅದೇ ರೀತಿ ಒಬ್ಬೊಬ್ಬರೇ ಜಂಗಮರನ್ನು ಆ ಗುಂಡಿಯಿರುವ ಬಿಡಾರವನ್ನು ತಲುಪಿದ ತಕ್ಷಣ ಅವರನ್ನು ಅದರೊಳಗೆ ಹಾಕಲಾಗುತ್ತದೆ ಮತ್ತು ಕೊನೆಯ ಜಂಗಮನ ಶಿರಚ್ಛೇದ ಮುಗಿದ ನಂತರ ಆ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿ ಏನೂ ನಡೆದೇ ಇಲ್ಲವೇನೋ ಎನ್ನುವ ರೀತಿಯಲ್ಲಿ ರಾಜರು ಹಿಂತಿರುಗುತ್ತಾರೆ.
ಇಷ್ಟಕ್ಕೇ ತೃಪ್ತಿ ಪಡದ ರಾಜ, ಅವನ ಕ್ರೌರ್ಯದ ವಿಷಯ ತಿಳಿದು ಅಳಿದುಳಿದ ಜಂಗಮರೇನಾದರೂ ರಾಜನ ವಿರುದ್ಧ ಪುನಹ ಜನರನ್ನು ಎತ್ತಿಕಟ್ಟಿ, ಪ್ರಚೋದಿಸಿ ಮತ್ತೆ ದಂಗೆ ಏಳಿಸುವ ಭೀತಿಯಿಂದ ನಂಜನಗೂಡು ಪ್ರದೇಶದಲ್ಲಿದ್ದ ಜಂಗಮರ ಮಠಗಳನ್ನು ಧ್ವಂಸ ಮಾಡಲು ಮತ್ತು ಅವರ ಅನುಯಾಯಿಗಳು ಹಾಗೂ ಕಾವಿ ಬಟ್ಟೆ ಧರಿಸಿರುವವರನ್ನು ಎಷ್ಟೇ ಜನಗಳ ಮಧ್ಯದಲ್ಲಿದ್ದರೂ ಅಲ್ಲಿಯೇ ಶಿರಚ್ಛೇದ ಮಾಡುವಂತೆ ಆದೇಶ ಹೊರಡಿಸುತ್ತಾನೆ. ಈ ಆದೇಶದಂತೆ ಸುಮಾರು 700 ಕ್ಕೂ ಅಧಿಕ ಜಂಗಮ ಮಠಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿ, ಕಾವಿ ಬಟ್ಟೆ ಧರಿಸಿದವರನ್ನೂ ಒಳಗೊಂಡು ಹಲವಾರು ಲಿಂಗಾಯತ ಅನುಯಾಯಿಗಳನ್ನೂ ಸಿಕ್ಕಸಿಕ್ಕಲ್ಲಿ ಶಿರಚ್ಛೇದ ಮಾಡಲಾಗುತ್ತದೆ.

ಕೇರಳಕ್ಕೆ ವಲಸೆ
ಮೈಸೂರು ರಾಜ ಚಿಕ್ಕದೇವರಾಜ ಒಡೆಯರ್ ಅವರು ರೂಪಿಸಿದ್ದ ಹೊಸ ಆರ್ಥಿಕ ಮತ್ತು ತೆರಿಗೆ ನೀತಿಗಳ ವಿರುದ್ಧ ನಂಜನಗೂಡು ಪ್ರದೇಶದಲ್ಲಿ ನಡೆದ ದಂಗೆಯನ್ನು ಹತ್ತಿಕ್ಕಲು ಲಿಂಗಾಯತ ಸಮುದಾಯ ಮತ್ತು ಅವರ ಗುರುಮಠ ಮತ್ತು ಜಂಗಮರ ಮೇಲಿನ ಹಿಂಸಾತ್ಮಕ ಮತ್ತು ಕ್ರೌರ್ಯದಿಂದ ಕೂಡಿದ ದಮನಕಾರೀ ನೀತಿಗೆ ಹೆದರಿ ಮದ್ರಾಸ್ ಪ್ರೆಸಿಡೆನ್ಸಿಗೆ ಕೆಲವು ಲಿಂಗಾಯತ ಸಮುದಾಯಗಳು ವಲಸೆ ಬಂದಿವೆ ಎನ್ನುವ ಅಭಿಪ್ರಾಯವನ್ನು ಎಡ್ಗರ್ ಥರ್ಸ್ಟನ್ ಮತ್ತು ಅವರ ಸಹ ಲೇಖಕರಾದ ರಂಗಾಚಾರಿಯವರು ಅಭಿಪ್ರಾಯ ಪಟ್ಟಿದ್ದಾರೆ.
ಬಹುಷಃ ಈಗ ಕೇರಳದಲ್ಲಿರುವ ಲಿಂಗಾಯತ ಸಮುದಾಯದವರು ಮದ್ರಾಸ್ಸಿಗೆ ಹೋಗುವ ಮಾರ್ಗ ಮಧ್ಯೆ ನೆಲೆಕಂಡುಕೊಂಡವರಿರಬೇಕು. ಮೈಸೂರನ್ನು ಆಳಿದ ಒಡೆಯರ್ ವಂಶಸ್ಥರು ಲಿಂಗಾಯತರಿಗೆ ಅವರ ಅಡುಗೆ ಕೋಣೆಯಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಾತಿನಿಧ್ಯ ಮತ್ತು ಬೆಂಬಲ ಕೊಟ್ಟು ರಾಜಾಡಳಿತದಲ್ಲಿ ಸ್ಥಾನ ಮಾನ ಒದಗಿಸುತ್ತಿದ್ದ ನೀತಿಯು ಮೇಲೆ ವಿವರಿಸಿರುವ ಘಟನೆಗಳನಂತರ ಬದಲಾಯಿತು ಅನ್ನುವ ಅಭಿಪ್ರಾಯಗಳೂ ಕೇಳಿಬಂದಿವೆ.
ಇತಿಹಾಸ ಕೆದಕುವ ಉದ್ದೇಶ
ಇತಿಹಾಸದಲ್ಲಿ ಆಗಿ ಹೋಗಿರುವ ಈ ಘಟನೆಗಳನ್ನು ಬರೆದ ತಕ್ಷಣ ಒಂದು ಗುಂಪು ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಪ್ರಯತ್ನ ಮಾಡಬಹುದು. ಆದರೆ, ಬರಹದ ಉದ್ದೇಶವು ರಾಜ ವಂಶಸ್ಥರನ್ನು ದೂರುವುದಕ್ಕಾಗಲೀ, ಇತಿಹಾಸದಲ್ಲಿ ಆಗಿರುವ ತಪ್ಪುಗಳನ್ನು ಹುಡುಕಿ ಸರಿಪಡಿಸಬೇಕು ಮತ್ತು ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಆಶಯಗಳನ್ನಿಟ್ಟುಕೊಂಡು ಬರೆದದ್ದಲ್ಲ. ಬದಲಾಗಿ ಲಿಂಗಾಯರಿಗೆ ಮತ್ತು ಇತರರಿಗೆ ಇತಿಹಾಸದಲ್ಲಿ ಘಟಿಸಿರುವ ಘಟನೆಗಳ ಪರಿಚಯವಿರಲಿ ಎನ್ನುವ ಆಶಯಗಳನ್ನಿಟ್ಟುಕೊಂಡ್ಯು ಬರೆಯಲಾಗಿದೆ.
ಭಾರತವು ಪ್ರಸ್ತುತ ಇತಿಹಾಸದ ಸಂಘರ್ಷದ ಅಲೆಗಳ ಆಧಾರದ ಮೇಲೆ ರಾಜಕೀಯದ ಅಭೂತಪೂರ್ವ ಅಲೆಗೆ ಸಾಕ್ಷಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಇಲ್ಲಿ, ನಾವು ’ಪರ’ ಮತ್ತು ’ವಿರುದ್ಧ’ ಎಂಬ ದೊಡ್ಡ ಸದ್ದುಗದ್ದಲದಲ್ಲಿ, ಐತಿಹಾಸಿಕ ಘಟನೆಗಳು ಮತ್ತು ಸಂಘರ್ಷಗಳು ಸಂಭವಿಸಿರಬಹುದಾದ ಸಾಮಾಜಿಕ ಸಂದರ್ಭವನ್ನು ಕಡೆಗಣಿಸುತ್ತಿದ್ದೇವೆ. ಇಂದಿನ ನಮ್ಮ ಸಮಾಜಿಕ ಸಂಘರ್ಷಕ್ಕೆ ಇತಿಹಾಸದ ಸರಿಯಾದ ಅರ್ಥೈಸುವಿಕೆಯಲ್ಲಿನ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ, ಇಂತಹ ಐತಿಹಾಸಿಕ ಘಟನೆಗಳು ಭಾರತದಂತಹ ವೈವಿದ್ಯಮಯ ದೇಶದಲ್ಲಿನ ಸಂಕೀರ್ಣ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಧರ್ಮ ಆಧಾರಿತ ಘರ್ಷಣೆಗಳ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಸಹಾಯ ಮಾಡುತ್ತದೆ.
ಬೇಲಿಯೇ ಹೊಲವನ್ನು ಮೇದಲ್ಲಿ ಇನ್ನಾರಿಗೆ ದೂರುವೆ …..?
ಎಂಬಾಂತಾಗಿದೆ….
Very very bad incident….😭😭
ಹೊಸ ಸಂಗತಿ ಇದನ್ನು ಓದಿ ತಿಳಿದುಕೊಂಡೆ.
ಇತಿಹಾದುದ್ದಕ್ಕೂ ಅಧಿಕಾರಸ್ಥರಿಂದ ಈ ರೀತಿಯ ಭಯಾನಕವೆನ್ನ ಬಹುದಾದ ಘಟನೆಗಳು ನಡೆಯುತ್ತಾ ಬಂದಿವೆ. ಯಾರು ಯಾರ ಮೇಲೆ ಇಂತಹ ಹಿಂಸೆಯನ್ನು ಎಸಗಿದರು ಎನ್ನುವ ಆಧಾರದ ಮೇಲೆ ಅವು ಇತಿಹಾಸದ ಭಾಗ ಆದ ಮತ್ತು ಆಗದಿರುವ ವಿದ್ಯಮಾನ ನಡೆಯುತ್ತಾ ಬಂದಿದೆ. ಕೆಲವೊಮ್ಮೆ ಇಂತಹ ಘಟನೆಗಳು ಮುಖ್ಯದಾರೆಯಿಂದ ಪಲ್ಲಟಗೊಂಡು ಜಾನಪದ ಅಥವಾ ಇನ್ಯಾವುದೋ ಆಚರಣೆಯ ಭಾಗವಾಗಿ ದಾಖಲಾಗುವುದೂ ಇದೆ. ಲೇಖನದಲ್ಲಿ ವ್ಯಕ್ತವಾದಂತೆ, ಇತಿಹಾಸದ ಮರು ಸೃಷ್ಟಿ ಅನಗತ್ಯ. ಆದರೆ ಅಧಿಕಾರ ನಿರಂತರ ಒಂದು ಕಡೆ ನೆಲೆ ನಿಂತರೆ ಅಧಿಕಾರ ರಹಿತರ ಬದುಕು ಯಾವಾಗಲೂ ಪ್ರಭುತ್ವದ ತೂಗು ಕತ್ತಿಯ ಕೆಳಗೆ ಭಯದ ನೆರಳಲ್ಲಿ ಇರುತ್ತದೆ. ಈ ಕಾರಣದಿಂದ ಎಲ್ಲ ಲೋಪ ದೋಷಗಳ
ಹೊರತಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಒಳ್ಳೆಯದು ಎನ್ನುವ ಸಂದೇಶವಿದೆ. ಜನ ಜಾತಿ, ವರ್ಗ, ಭಾಷೆ,ಧರ್ಮ ಮುಂತಾದ ವಿಸ್ಮೃತಿಗೆ ಬಲಿಯಾದರೆ ಅಪಾಯ ಕಟಿಟ್ಟ ಬುತ್ತಿ
12 ನಚ ಶತಮಾನದದಿಂದಲೂ ಲಿಂಗಾಯತರನ್ನ ತುಳಿದು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ.ಸದಾ ಜನಸಾಮಾನ್ಯರ ಧ್ವನಿಯಾಗಿರುವ ಲಿಂಗಾಯತ ತತ್ವಸಿದ್ದಾಂತಗಳನ್ನ ಒಳಗೊಂಡವರನ್ನ ಎಲ್ಲಾ ಕಾಲದಲ್ಲೂ ದಮನ ಮಾಡುವ ಹುನ್ನಾರ ನಡೆಯುತ್ತಿದೆ