ಬೀದರ:
ಬಸವಣ್ಣನವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತಿ ಉದ್ಧರಿಸಿದ್ದರು ಎಂದು ಬಸವ ತತ್ವ ಪ್ರಚಾರಕ ಸಿದ್ರಾಮಪ್ಪ ಕಪಲಾಪುರೆ ಹೇಳಿದರು.
ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಎರಡನೇ ದಿನ ಶನಿವಾರ ನಡೆದ ಬಸವ ಮಹಿಮೆ ಚಿಂತನ ಗೋಷ್ಠಿಯಲ್ಲಿ ಅವರು ಅನುಭಾವ ಹೇಳಿದರು.
ಜಗತ್ತಿಗೆ ಜೀವನ ಮಾರ್ಗ ತೋರಿದ ಬಸವಣ್ಣ ಕೇವಲ ವ್ಯಕ್ತಿಯಲ್ಲ, ಅದ್ಭುತ ಶಕ್ತಿ. ದೇಶ, ಕಾಲಗಳನ್ನು ಮೀರಿದವರು. ಜಗದ ಹಿತಕ್ಕಾಗಿ ಮರ್ತ್ಯಕ್ಕೆ ಅವತರಿಸಿದ ಪ್ರವಾದಿ ಎಂದು ಬಣ್ಣಿಸಿದರು.
ಭಕ್ತಿಯ ಭಂಡಾರಿ, ವಿನಯದ ಮೇರು ಪರ್ವತ, ಮಾನವೀಯತೆಯ ಆಗರ ಹೀಗೆ ಅವರನ್ನು ವರ್ಣಿಸಲು ಪದಗಳೇ ಸಾಲವು. ಅಂತೆಯೇ ಹರಿಹರ ಕವಿ ‘ಬಸವರಾಜ ನಿಮ್ಮ ಬಣ್ಣಿಸಲೆಮ್ಮಳವಲ್ಲ’ ಎಂದು ಉದ್ಗರಿಸಿದ್ದಾರೆ ಎಂದರು. ವಚನಗಳನ್ನು ಉದಾಹರಿಸುತ್ತ, ನಗೆ ಚಟಾಕಿಗಳನ್ನು ಹಾರಿಸುತ್ತ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಸಾನಿಧ್ಯವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕುರಿತು ಬಣ್ಣಿಸುವುದು ಸುಲಭವಲ್ಲ. ಅವರದು ಬಹುಮುಖ ವ್ಯಕ್ತಿತ್ವ. ಬಸವಣ್ಣನವರನ್ನು ವರ್ಣಿಸುವುದೆಂದರೆ ಸೂರ್ಯಪ್ರಕಾಶವನ್ನು ವರ್ಣಿಸಲು ಹೆಣಗಿದಂತೆ ಎಂದು ಹೇಳಿದರು.
ಬಸವಣ್ಣನವರು ಸಮಾಜದಲ್ಲಿ ನೆಲೆಯೂರಿದ್ದ ಅನಿಷ್ಟಗಳನ್ನು ತೊಡೆದು ಸರ್ವಾಂಗೀಣ ಸುಂದರ ಸಮಾಜ ಕಟ್ಟಲು ಹೋರಾಡಿದ್ದರು. ಆಧಾತ್ಮಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತಿತರ ಕ್ಷೇತ್ರಗಳಲ್ಲಿ ಅಪೂರ್ವ ಬದಲಾವಣೆ ತಂದರು ಎಂದು ತಿಳಿಸಿದರು.
ಬಸವಣ್ಣನವರ ಪರಿಶ್ರಮದಿಂದ ಕಲ್ಯಾಣ ಕೈಲಾಸವಾಯಿತು. ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ, ಸಕಲ ಜೀವರಾಶಿಗಳ ಕಲ್ಯಾಣವೇ ಅವರ ಗುರಿಯಾಗಿತ್ತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನೀಲಮ್ಮನ ಬಳಗದ ಮಹಾದೇವಿ ಆರ್. ಮಠಪತಿ ಮಾತನಾಡಿ, ಬಸವಣ್ಣ ಮಹಿಳೆಯರ ಉದ್ಧಾರಕ್ಕಾಗಿಯೇ ಮನೆ ಬಿಟ್ಟ ಮಹಾನುಭಾವರು ಎಂದು ತಿಳಿಸಿದರು.
ತನಗಿಂತ ದೊಡ್ಡವಳಾದ ಅಕ್ಕ ನಾಗಮ್ಮನಿಗಿಲ್ಲದ ಜನಿವಾರ ತನಗೂ ಬೇಡವೆಂದು, ಹೆಣ್ಣು-ಗಂಡು ಇಬ್ಬರಿಗೂ ಸಮಾನವಾದ ಧರ್ಮ ಸಂಸ್ಕಾರ ನೀಡಿದ್ದನ್ನು ಮಹಿಳಾ ಕುಲ ಎಂದೂ ಮರೆಯುವಂತಿಲ್ಲ ಎಂದರು.
ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಶೇರಿಕಾರ್ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಭಾರತಿ ಮಾಣಿಕಪ್ಪ ಖಂಡ್ರೆ, ಬಸವ ಸೇವಾ ಪ್ರತಿಷ್ಠಾನದ ಕಾಶಿನಾಥ ಪಾಟೀಲ, ಉದಯ ಪಾಟೀಲ, ಬೆಳಗು ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ಅನಿಲಕುಮಾರ ದೇಶಮುಖ ಉಪಸ್ಥಿತರಿದ್ದರು.
ಲಿಂಗಾಯತ ಸೇವಾ ದಳದ ಲಿಂಗಾನಂದ ಹಂಗರಗಿ ವಚನ ಪಠಣ ಮಾಡಿದರು. ಅನಿತಾ ರಾಜಕುಮಾರ ಪಾಟೀಲ ಭಕ್ತಿ ದಾಸೋಹಗೈದರು. ಗುರುಶ್ರೀ ಶಾಂತಲಿಂಗಯ್ಯ ನಿರೂಪಿಸಿದರು. ಡಾ. ಪ್ರಿಯಾ ಎಲಿ ಸ್ವಾಗತಿಸಿದರು.