ಬೀದರ
ವಚನ ಸಾಹಿತ್ಯ ಉಳಿಸಲು ಸಹಸ್ರಾರು ಶರಣರು ರುದ್ರಾಕ್ಷಿ ಕಂಕಣ ಕಟ್ಟಿದ ಕೈಗಳಲ್ಲಿ ಕತ್ತಿ ಹಿಡಿದು ಬಿಜ್ಜಳನ ಸೈನಿಕರೊಂದಿಗೆ ಸೆಣಸಾಡಿ ಪ್ರಾಣ ತೆತ್ತರು. ಶರಣರ ತ್ಯಾಗ, ಬಲಿದಾನದ ಸ್ಮರಣಾರ್ಥವಾಗಿ ವಿಜಯೋತ್ಸವ ಆಚರಿಸಲಾಗುತ್ತಿದೆ. 9 ದಿನ, 9 ವಿಷಯಗಳ ಮೇಲೆ ಅನುಭಾವ ಗೋಷ್ಠಿಗಳು ಜರುಗಲಿವೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ಇಲ್ಲಿಯ ಬಸವಗಿರಿಯ ಲಿಂಗಾಯತ ಮಠದಲ್ಲಿ ಗುರುವಾರ ನಡೆದ ಒಂಬತ್ತು ದಿನಗಳ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ವಿಶ್ವದ ಮೊದಲ ಅಂತರ್‍ಜಾತಿ ವಿವಾಹ ಮಾಡಿ ಸಮಾನತೆಯ ಕೇತನ ಬಾನೆತ್ತರಕ್ಕೆ ಹಾರಿಸಿದರು. ಹರಳಯ್ಯ, ಮಧುವರಸ, ಶೀಲವಂತರು ಎಳೆಹೊಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಲಿದಾನಗೈದರೆ ವಿನಃ ಸಂಪ್ರದಾಯವಾದಿಗಳ ಮಾತಿಗೆ ಮರುಳಾಗಲಿಲ್ಲ ಎಂದು ತಿಳಿಸಿದರು.
ಬಸವಣ್ಣ ಕಲ್ಯಾಣ ಕ್ರಾಂತಿಯ ನೇತಾರರು. ಅವರಿಗೆ ಹೆಗಲೆಣೆಯಾದವರು ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮೊದಲಾದ 770 ಅಮರ ಗಣಂಗಳು ಹಾಗೂ 1.96 ಲಕ್ಷ ಜಂಗಮರು ಎಂದು ಹೇಳಿದರು.
ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಅನೇಕ ಕ್ರಾಂತಿಗಳು ಜರುಗಿವೆ. ಸಾಮಾಜಿಕ ನ್ಯಾಯದ ಸ್ಥಾಪನೆ ಹಾಗೂ ಸ್ತ್ರೀಯರಿಗೆ ಪೂಜೆಯ ಹಕ್ಕು ನೀಡಲು ನಡೆದದ್ದು ಕಲ್ಯಾಣ ಕ್ರಾಂತಿ ಮಾತ್ರ
ಉದ್ಘಾಟನೆ ನೆರವೇರಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ಮಾತನಾಡಿ, ಮಾನವ ಕಲ್ಯಾಣಕ್ಕಾಗಿ ಕಲ್ಯಾಣ ಕ್ರಾಂತಿ ಜರುಗಿತು. ಸರ್ವ ಸಮಾನತೆಯ ಸಮಾಜ ಕಟ್ಟಲು ಅನೇಕ ಶರಣರು 12ನೇ ಶತಮಾನದಲ್ಲಿ ಬಲಿದಾನಗೈದರು. ಅವರ ಬಲಿದಾನದ ಸ್ಮರಣೆ ಎಲ್ಲರ ಆದ್ಯ ಕರ್ತವ್ಯ ಎಂದರು.
ಶರಣರು ತತ್ವಕ್ಕಾಗಿ ಪ್ರಾಣಾರ್ಪಣೆಗೈದದ್ದಕ್ಕಿಂತ ದೊಡ್ಡಹಬ್ಬ ಮತ್ತಾವುದೂ ಇಲ್ಲ. ಲಿಂಗಾಯತ ಮಹಾ ಮಠದಿಂದ ಪ್ರತಿ ವರ್ಷ ಮರಣವೇ ಮಹಾನವಮಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.
ಮುಖ್ಯ ಅನುಭಾವ ನೀಡಿದ ಶಿಕ್ಷಕ ಶಿವಲಿಂಗ ಹೇಡೆ ಅವರು, ಕಲ್ಯಾಣ ಕ್ರಾಂತಿ ಅಪೂರ್ವ ಚಳವಳಿ. ‘ಮಹಾನವಮಿ’ ಶರಣರ ತತ್ವಗಳನ್ನು ನೆನಪಿಸಿಕೊಳ್ಳುವ ಉತ್ಸವ. ಶರಣರು ನಾಳೆ ಬಪ್ಪುದು ನಮಗಿಂದೇ ಬರಲಿ ಎಂದು ಮರಣವನ್ನು ಮಹಾನವಮಿಯಾಗಿ ಸ್ವೀಕರಿಸಿದರು ಎಂದು ತಿಳಿಸಿದರು. ಇಂದಿನ ಅಭಿವೃದ್ಧಿಯ ತಳಹದಿ 12ನೇ ಶತಮಾನ. ಪ್ರಜಾಸತ್ತಾತ್ಮತೆ, ಸಂವಿಧಾನದ ಬೀಜಗಳು ವಚನದಲ್ಲಿವೆ ಎಂದು ಹೇಳಿದರು.
ಉದ್ಯಮಿ ಜೈರಾಜ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಾಂಖ್ಯಿಕ ಅಧಿಕಾರಿ ಎಸ್.ವಿ. ಬಿರಾದಾರ, ಮುಖಂಡ ಪರಮೇಶ ಪಾಟೀಲ ಮುಖ್ಯ ಅತಿಥಿಯಾಗಿದ್ದರು. ನೀಲಮ್ಮನ ಬಳಗದ ಜಗದೇವಿ ಚಿಮಕೋಡೆ ಹಾಗೂ ಉಮಾ ರಿಕ್ಕೆ ಸಮ್ಮುಖ ವಹಿಸಿದ್ದರು.
ಓಂಕಾರ ಬಿರಾದಾರ ವಚನ ಪಠಣ ಮಾಡಿದರು. ಉದ್ಯಮಿ ಪ್ರಕಾಶ ಮಲ್ಲಾಸೂರೆ ಪ್ರಸಾದ ದಾಸೋಹಗೈದರು. ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ನಿರೂಪಿಸಿದರು. ಪ್ರವೀಣ್ ಬಿರಾದಾರ ವಂದಿಸಿದರು.