ಪ್ರಾಚೀನವೇ ಶ್ರೇಷ್ಟವಾಗಿದ್ದರೆ ಹೊಸಧರ್ಮಗಳು ಹುಟ್ಟುವ ಆವಶ್ಯಕತೆ ಇರುತ್ತಿರಲಿಲ್ಲ.
ಬೆಳಗಾವಿ
ವೀರಶೈವ ಮತ್ತು ಲಿಂಗಾಯತ ಇಬ್ಬರಿಗೂ ಪಂಚಾಚಾರ, ಷಟ್‌ಸ್ಥಲ ಮತ್ತು ಅಷ್ಟಾವರಣಗಳು ತಾತ್ವಿಕ ಆಧಾರಗಳಾಗಿವೆ. ‘ಪಂಚಾಚಾರ’ಗಳು ಮನುಷ್ಯನಾಗಿ ನಡೆದುಕೊಳ್ಳಬೇಕಾದ ಐದು ಆಚಾರಗಳನ್ನು ತಿಳಿಸುತ್ತದೆ. ‘ಷಟ್‌ಸ್ಥಲಗಳು ಶಿವಯೋಗ ಸಾಧನೆಯ ಆರು ಹಂತಗಳಾಗಿವೆ. ಈ ಪಂಚಾಚಾರ ಮತ್ತು ಷಟ್‌ಸ್ಥಲಗಳ ಸಾಧನೆಗೆ ತಿಳಿದಿರಬೇಕಾದ ಎಂಟು ಪೂರಕ ಅಂಶಗಳ ವಿವರಣೆಯನ್ನು ‘ಅಷ್ಟಾವರಣ’ಗಳು ಹೊಂದಿವೆ.
ಆದರೆ ಇವುಗಳ ಅರ್ಥಗಳು ಇಬ್ಬರಿಗೂ ಒಂದೇ ರೀತಿಯಾಗಿಲ್ಲ. ಹೆಸರು ಒಂದೇ ಆಗಿದ್ದರೂ ತಾತ್ವಿಕ ಸಿದ್ಧಾಂತಗಳು ಬೇರೆ-ಬೇರೆಯಾಗಿವೆ. ಅವನ್ನು ತಿಳಿಯಲು ಪ್ರತ್ಯೇಕ ಕೋಷ್ಟಕವನ್ನು ನೋಡಿ.
ಏಕತೆ-ಪ್ರತ್ಯೇಕತೆಯ ವಾದ-ವಿವಾದ
ವೀರಶೈವರ ಏಕೀಕೃತವಾದ – ಸಿದ್ಧಾಂತ ಶಿಖಾಮಣಿಯ ಪ್ರಕಾರ, ಪರಶಿವ ಎಂದರೆ ಪರವಸ್ತು ಎಂದು ತಿಳಿಯಬೇಕು ಮತ್ತು ಈ ಪರವಸ್ತು ವ್ಯಕ್ತಿಯಲ್ಲ: ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಒಂದು ಶಕ್ತಿ. ಈ ಶಕ್ತಿಯು ರೇಣುಕರಿಗೆ ಆದೇಶವಿತ್ತು ವೀರಶೈವ ಧರ್ಮವನ್ನು ಪ್ರಚಾರ ಮಾಡಲು ಆದೇಶಿಸಿತು ಎನ್ನುತ್ತಾರೆ. ಅಂದರೆ ಪರಶಿವನಿಂದಲೇ ವೀರಶೈವ ಹುಟ್ಟಿದ್ದು: ವೀರಶೈವವು ಹಿಂದೂ ಧರ್ಮದ ಭಾಗವಾಗಿದ್ದು ಪ್ರಾಚೀನವಾಗಿದೆ: ಬಸವಾದಿ ಪ್ರಮಥರು ಕೇವಲ ಇದರ ಪ್ರಚಾರಕರು ಮತ್ತು ಸಮಾಜಸುಧಾರಕರು ಎನ್ನುತ್ತಾರೆ.
ಎಲ್ಲ ಧರ್ಮ ಸುಧಾರಕರಂತೆ ಬಸವಣ್ಣನವರು ಇದರ ಸುಧಾರಣೆ ಮಾಡಿದರು; ಹೀಗಾಗಿ ಲಿಂಗಾಯತವು ವೀರಶೈವದ ಒಂದು ಭಾಗವಾಗಿದ್ದು, ವೀರಶೈವ-ಲಿಂಗಾಯತ ಒಂದೇ ಎನ್ನುತ್ತಾರೆ. ಅಂದರೆ ‘ಇವನಾರವ, ಇವನಾರವನೆಂದೆನಿಸದೇ ಇವನಮ್ಮವ ಇವನಮ್ಮವನೆಂದೆನಿಸಯ್ಯಾ’ ಎಂದ ಬಸವಣ್ಣನ ಧರ್ಮ ಪ್ರಚಾರಕರೇ ಇಂದು ನಮ್ಮನ್ನು ‘ಇವನಮ್ಮವನಲ್ಲ, ಇವನಮ್ಮವನಲ್ಲ’ ಎನ್ನುವುದು ಸರಿಯೇ ಎಂದು ಕೇಳುತ್ತಾರೆ.
ಲಿಂಗಾಯತರ ಪ್ರತ್ಯೇಕತಾವಾದ
– ಬಸವಣ್ಣನ ‘ಇವನಾರವ’ ಎಂಬ ವಚನವು ಶರಣರ ತತ್ವಗಳನ್ನು ಒಪ್ಪಿ ಬಂದವರಿಗೆ ಮಾತ್ರ ಅನ್ವಯವಾಗುತ್ತದೆ. ಅವರ ತತ್ವಕ್ಕೆ ವಿರೋಧವಾಗಿ ವರ್ಗ, ವರ್ಣ, ಲಿಂಗಗಳ ಭೇದ ಹಾಗೂ ಮೌಢ್ಯ ಮತ್ತು ಕಂದಾಚಾರ ಆಚರಿಸುವವರಿಗೆ ಅನ್ವಯಿಸುವುದಿಲ್ಲ. ಅಂಥವರನ್ನು ಶರಣರು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸುತ್ತಿದ್ದರೆನ್ನುವುದು ಮುಖ್ಯವಾದ್ದರಿಂದ “ಇವನಾರವ’ ಎಂಬ ವಚನ, ವೈದಿಕ ಅಥವಾ ಆಗಮ ಪುರಾಣಗಳ ಹಿನ್ನೆಲೆ ಹೊಂದಿರುವವರಿಗೆ ಅನ್ವಯಿಸುವುದಿಲ್ಲ.
ಒಟ್ಟಿನಲ್ಲಿ ಅಂಥವರನ್ನು ವಿರೋಧಿಸಲಿಕ್ಕಾಗಿಯೇ ಶರಣರು ಜೀವಮಾನವಿಡೀ ಹೋರಾಡಿದ ಕಾರಣ, ಶರಣರು ಅಂಥವರಿಗೆ ‘ಇವ ನಮ್ಮವನಲ್ಲ’ ಎಂಬ ಅರ್ಥದಲ್ಲಿಯೇ ವಚನ ಬರೆದಿದ್ದಾರೆಂದು ಹೇಳುತ್ತಾರೆ.
ಯಾವ ರೀತಿ ಜೈನ, ಬೌದ್ಧ, ಸಿಖ್ಖಗಳು ತಮ್ಮದೇ ತತ್ತ್ವಸಿದ್ಧಾಂತಗಳಿಂದ ಪ್ರತ್ಯೇಕ ಧರ್ಮಗಳಾಗಿವೆಯೋ, ಅದೇ ರೀತಿ ಲಿಂಗಾಯತವೂ ಸಹ ಪ್ರತ್ಯೇಕ ಧರ್ಮವಾಗಿದೆ ಎಂಬುದು ಲಿಂಗಾಯತರ ವಾದ. ಲಿಂಗಾಯತರು ಪ್ರತ್ಯೇಕತಾವಾದವನ್ನು ಹೇಳುವುದು ಸರಿಯಲ್ಲ ಎಂಬ ವೀರಶೈವರ ವಾದವನ್ನು ಒಪ್ಪಿಕೊಂಡರೆ, ಇದೇ ವಾದವನ್ನು ಅನ್ಯ ಧರ್ಮವೂ ಮಂಡಿಸಬಹುದು. ಬಸವಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಕಾರಣ, ಬ್ರಾಹ್ಮಣರೂ ಸಹಿತ ಬಸವಣ್ಣನ ಮತವು ಸಹ ಹಿಂದೂ ಧರ್ಮದ ಭಾಗವೆನ್ನಬಹುದು. ಆಗ ಹಿಂದೂ ಧರ್ಮವನ್ನು ವಿರೋಧಿಸಿ ಪ್ರತ್ಯೇಕ ಸ್ಥಾನಮಾನ ಪಡೆದ ಜೈನ, ಬೌದ್ಧ, ಸಿಖ್ಖ ಧರ್ಮಗಳೂ ಹಿಂದೂ ಧರ್ಮಗಳೇ ಆಗುತ್ತವೆ ಅವುಗಳ ಸ್ವತಂತ್ರ ಮಾನ್ಯತೆ ಇಲ್ಲವಾಗುತ್ತದೆ. ಆದ್ದರಿಂದ ವೀರಶೈವವು ಪ್ರಾಚೀನವಾಗಿದೆ: ಲಿಂಗಾಯತವು ತದನಂತರ ಹುಟ್ಟಿದ ಎಂದಾದರೂ ಅದು ವೀರಶೈವದ ಭಾಗವಾಗಬೇಕಿಲ್ಲ.
ಯಾವ ಧರ್ಮದ ಆಚರಣೆಗಳ ವಿರುದ್ಧ ಶರಣರು ಹೋರಾಡಿದ್ದರೋ, ಅದೇ ಧರ್ಮದ ಭಾಗವಾಗುವುದನ್ನು ಲಿಂಗಾಯತರು ಒಪ್ಪುವುದಿಲ್ಲ. ಹಾಗೆ ಮಾಡಿದರೆ ಶರಣರ ಲಿಂಗಾಯತ ತತ್ವದ ಅಸ್ಮಿತೆಯೇ ನಾಶವಾಗುತ್ತದೆ. ಹಾಗೆ ನೋಡಿದರೆ, ಬಸವಣ್ಣನವರು ಕೇವಲ ವೀರಶೈವವನ್ನು ಮಾತ್ರ ಸುಧಾರಿಸಲಿಲ್ಲ. ಅವರು ತಮ್ಮ ಜೊತೆ ಸೇರಿದ ಬ್ರಾಹ್ಮಣ, ವೈಶ್ಯ, ಶೂದ್ರರನ್ನು ಸಹ ಸುಧಾರಿಸಿದ್ದು, ಅದರಂತೆ ‘ವೀರಶೈವ-ಧರ್ಮಸುಧಾರಕ’ರೂ ಹೌದು, ‘ಲಿಂಗಾಯತ ಧರ್ಮಸಂಸ್ಥಾಪಕರೂ ಹೌದು ಎನ್ನುವುದು ಸೂಕ್ತವೆನ್ನಬಹುದು.
ಪರಿಹಾರವೇನು?
ಏಕತೆಯ ಪರಿಹಾರ
ವೀರಶೈವ, ಲಿಂಗಾಯತದಲ್ಲಿ ಹಲವಾರು ಉಪಜಾತಿಗಳಿವೆ. ಅವನ್ನೆಲ್ಲ ಒಂದೇ ಧರ್ಮವೃಕ್ಷದಡಿಯಲ್ಲಿ ಸೇರಬೇಕು ಎಂಬ ಬೇಡಿಕೆ ಇದೆ. ಆದರೆ ಇವರನ್ನೆಲ್ಲ ಲಿಂಗಾಯತರೆಂದು ಕರೆಯಬೇಕು ಎಂದು ಲಿಂಗಾಯತರು ಹೇಳುತ್ತಾರೆ. ಇದೇ ಮಾತನ್ನು ವೀರಶೈವರೂ ಹೇಳುತ್ತಾ ಅವರನ್ನು ವೀರಶೈವ ಅಥವಾ ವೀರಶೈವ-ಲಿಂಗಾಯತ ಎಂದು ಕರೆಯಬೇಕೆನ್ನುತ್ತಾರೆ. ಒಟ್ಟಿನಲ್ಲಿ ವೀರಶೈವ-ಲಿಂಗಾಯತಗಳು ಒಂದಾಗಬೇಕಾದರೆ, ಎರಡೂ ಧರ್ಮಗುರುಗಳು ಮುಕ್ತ ಮನಸ್ಸಿನಿಂದ ಎರಡರಲ್ಲೂ ಇರುವ ಮಾನವೀಯ ಮೌಲ್ಯಗಳ ತತ್ವಗಳನ್ನು ಕ್ರೋಢೀಕರಿಸಿ, ಇಂದಿನ ಸಮಾಜಕ್ಕೆ ಅನ್ವಯಿಸುವಂತೆ ಏಕತ್ರ ಸೂತ್ರವನ್ನು ಹೊಸದಾಗಿ ಪ್ರತಿಪಾದಿಸಬೇಕು. ಅದರ ಹೆಸರು ವೀರಶೈವ, ಲಿಂಗಾಯತ, ವೀರಶೈವ-ಲಿಂಗಾಯತ ಅಥವಾ ಇನ್ನಾವುದೇ ಆಗಿರಬಹುದು.
ಪ್ರತ್ಯೇಕತೆಯ ಪರಿಹಾರ
ವೀರಶೈವರಿಗೆ ರೇಣುಕಾಚಾರ್ಯರೇ ಧರ್ಮ ಸಂಸ್ಥಾಪಕರು. ‘ಸಿದ್ಧಾಂತ ಶಿಖಾಮಣಿ’ಯೇ ಧರ್ಮಗ್ರಂಥ. ಲಿಂಗಾಯತಕ್ಕೆ ಬಸವಣ್ಣನವರು ಧರ್ಮಸಂಸ್ಥಾಪಕರಾಗಿದ್ದು, ವಚನಗಳು ಧರ್ಮಗ್ರಂಥಗಳು. ಲಿಂಗಾಯತರಿಗೆ ‘ಸಿದ್ಧಾಂತ ಶಿಖಾಮಣಿ’ ಮತ್ತು ‘ಪಂಚಪೀಠ’ಗಳು ತದ್ದಿರುದ್ಧವಾದ ಅಂಶಗಳು. ಆದ್ದರಿಂದ ವೀರಶೈವ ಮತ್ತು ಲಿಂಗಾಯತಗಳು ಬೇರೆ-ಬೇರೆ ಧರ್ಮಗಳು ಎಂಬುದನ್ನು ಇಬ್ಬರೂ ಪ್ರಾಮಾಣಿಕವಾಗಿ ಒಪ್ಪಿ ಗೊಂದಲಕ್ಕೆ ತೆರೆ ಎಳೆಯಬಹುದು.
ಹಾಗೆ ನಿರ್ಧಾರವಾದರೆ, ಪ್ರತಿಯೊಬ್ಬರೂ ತಮಗೆ ಪುರಾಣದ ಶಿವ, ರುದ್ರ ಅಥವಾ ವೀರಭದ್ರನು ಬೇಕೋ (ಶೈವ, ವೀರಶೈವ), ಅಥವಾ ವಿಶ್ವಚೈತನ್ಯವು (ಲಿಂಗಾಯತ) ಬೇಕೋ ಅಥವಾ ಇವೆಲ್ಲವನ್ನು ಸೇರಿಸಿಕೊಂಡು (ತಮ್ಮ-ತಮ್ಮೊಳಗೆ ಭಿನ್ನ ಅಥವಾ ವಿರುದ್ಧವಾಗಿದ್ದರೂ) ಮಿಶ್ರ ಧರ್ಮ ಬೇಕೋ ಎಂಬುದನ್ನು ತಾವೇ ನಿರ್ಧರಿಸಬೇಕು. ಅದೇ ಅವರ ಧರ್ಮವನ್ನು ತೀರ್ಮಾನಿಸುವ ಅಳತೆಗೋಲಾಗುತ್ತದೆ.
ಕಾನೂನಾತ್ಮಕ ಪರಿಹಾರ : ಸ್ವತಂತ್ರ ಧರ್ಮದ ಬೇಡಿಕೆ
ಒಂದು ಸೈದ್ಧಾಂತಿಕ ಘಟನೆಯು ಧರ್ಮ ಎನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಹನ್ನೊಂದು ಗುಣಲಕ್ಷಣಗಳಿರಬೇಕು. ಅವಾವೆಂದರೆ,
1) ಜೀವ, ಜಗತ್ತು, ಈಶ್ವರರ ಸಂಬಂಧವನ್ನು ವಿವೇಚಿಸುವ ಸಿದ್ಧಾಂತ
2) ಈ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಿಕ್ಕೆ ಬೇಕಾದ ಸಾಧನೆ
3) ಹೀಗೆ ಸಾಧನೆಯಿಂದ ಸಿದ್ಧಾಂತವನ್ನು ಸಾಕ್ಷಾತ್ಕರಿಸಿಕೊಂಡುದನ್ನು ತಿಳಿಸುವ ಅನುಭಾವ
4) ಅನುಯಾಯಿಯಾಗಬಯಸುವ ವ್ಯಕ್ತಿಗೆ ನೀಡಬೇಕಾದ ದೀಕ್ಷಾ ಸಂಸ್ಕಾರ,
5) ಅನುಯಾಯಿಯು ತನ್ನ ಹಾಗೂ ಅನ್ಯ ಸಮಾಜದೊಂದಿಗೆ ಹೇಗೆ ಬಾಳಬೇಕೆಂಬುದನ್ನು ತಿಳಿಸುವ ಸಮಾಜ ಶಾಸ್ತ್ರ
6) ತಾನು ಯಾವ ಕ್ರಿಯೆಯಿಂದ ಇತರರಿಗೆ ಹಿತವುಂಟು ಮಾಡಬಹುದು, ಆ ಕ್ರಿಯೆಗಳು ಹೇಗಿರಬೇಕು ಎಂದು ತಿಳಿಸುವ ನೀತಿಶಾಸ್ತ್ರ
7) ಸಮಾಜ-ರಾಷ್ಟ್ರದ ಅಭಿವೃದ್ಧಿಯಲ್ಲಿ ತಾನು ಹೇಗೆ ಭಾಗವಹಿಸಬೇಕೆಂದು ಹೇಳುವ ಅರ್ಥಶಾಸ್ತ್ರ
8) ಅನ್ಯ ಸಮಾಜದ ಆಚರಣೆಗಳಿಗಿಂತ ಭಿನ್ನವಾದ ಸಂಸ್ಕೃತಿ
9) ಈ ಎಲ್ಲಾ ತತ್ತ್ವಗಳನ್ನು ಅಳವಡಿಸಿಕೊಂಡು ಬಾಳಿದ ಪರಂಪರೆ
10) ಇಂಥ ತತ್ತ್ವಗಳುಳ್ಳ ಒಂದು ಪಥವನ್ನು ಹಾಕಿಕೊಟ್ಟ ಧರ್ಮಗುರು ಮತ್ತು
11) ಇವೆಲ್ಲವುಗಳನ್ನು ವಿವೇಚನೆ ಮಾಡುವ ಸಾಹಿತ್ಯ. ಈ ಹನ್ನೊಂದು ಲಕ್ಷಣಗಳು ಇದ್ದರೆ ಮಾತ್ರ ಅದು ಧರ್ಮ: ಇಲ್ಲವಾದರೆ ಅದು ಕೇವಲ ಜಾತಿ ಅಥವಾ ಮತ ಆಗಬಹುದು.
ಬಸವಧರ್ಮೀಯರ ಪ್ರಕಾರ, ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ: ಲಿಂಗಾಯತ ಸ್ವತಂತ್ರ ಧರ್ಮ ಎಂಬ ಸ್ಪಷ್ಟ ವಾದವಿದೆ. ಆದರೆ ಇದೇ ವಾದವನ್ನು ವೀರಶೈವರೂ ಮಂಡಿಸುತ್ತಾರೆ.
ಧರ್ಮದ ಹಿರಿಮೆ ಇರುವುದು ಅದರ ಸತ್ಯದಲ್ಲಿ; ಪ್ರಾಚೀನತೆಯಲ್ಲಿ ಅಲ್ಲ. ಹಾಗೇನಾದರೂ ಪ್ರಾಚೀನವೇ ಶ್ರೇಷ್ಟವಾಗಿದ್ದರೆ ಹೊಸಧರ್ಮಗಳು ಹುಟ್ಟುವ ಆವಶ್ಯಕತೆ ಇರುತ್ತಿರಲಿಲ್ಲ. ಪ್ರಾಚೀನವೆಂದು ವಾದಿಸುವ ವೀರಶೈವರು ಲಿಂಗಾಯತ-ವೀರಶೈವ ಎಂಬ ಗೊಂದಲ ಮೂಡಿಸುವ ಬದಲು, ತಮಗೆ ಬೇಕಾದರೆ ಕೇವಲ ವೀರಶೈವ ಧರ್ಮದ ಸ್ವತಂತ್ರ ಮಾನ್ಯತೆಗಾಗಿ ಪ್ರತ್ಯೇಕ ಹೋರಾಟ ಮಾಡಲಿ ಎಂದು ಸಲಹೆ ಮಾಡುತ್ತಾರೆ.
ಸರ್ವೋಚ್ಚ ನ್ಯಾಯಾಯಲದ ತೀರ್ಪುಗಳನ್ನು ಉದಾಹರಿಸುವುದಾದರೆ, 1966ರಲ್ಲಿ ಸ್ವಾಮಿನಾರಾಯಣ ಪಂಥದ ಪ್ರಕರಣದಲ್ಲಿ [AIR 1966 SC 1119] ‘ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ’ ಎಂದು ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಯಲ ಹೇಳಿದೆ. ಇದೇ ಮಾತನ್ನು ಮುಂದೆ ಹಲವಾರು ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯ ಉದಾಹರಿಸಿರುವುದು ಕಂಡುಬರುತ್ತದೆ. ಇತ್ತೀಚಿನ ಆದಿಶೈವ ಶಿವಾಚಾರ್ಯಗಳ ಪ್ರಕರಣದಲ್ಲಿ [AIR 2016 SC 209] ಸಹ ಇದೇ ವಿಚಾರವನ್ನು ಹೇಳಲಾಗಿದೆ.
1911 ರ ಗಣತಿಯ ಪ್ರಕಾರ, 30ಲಕ್ಷ ಲಿಂಗಾಯತರು ಭಾರತದಲ್ಲಿದ್ದು, ಅವರಲ್ಲಿ ಅರ್ಧದಷ್ಟು ಬಾಂಬೇ ಪ್ರೆಸಿಡೆನ್ಸಿಯಲ್ಲಿ ವಾಸವಾಗಿದ್ದಾರೆ ಎಂದು ಜೇಮ್ಸ್ ಹೇಸ್ಟಿಂಗ್ಸ್ ಎಂಬ ಸಂಶೋಧಕ ‘ಎನ್‌ಸೈಕ್ಲೋಪೀಡಿಯಾ ಆಫ್ ರಿಲಿಜನ್ ಆಂಡ್ ಎಥಿಕೃ’ [8ನೇ ಭಾಗ, ಪುಟ 69] ಪುಸ್ತಕದಲ್ಲಿ ಬರೆದಿರುವನು. ಅದನ್ನು ಶಕುಂತಲಾಬಾಯಿ ಎಂಬ ಪ್ರಕರಣದಲ್ಲಿ [AIR 1989 SC 1359] ಸರ್ವೋಚ್ಚ ನ್ಯಾಯಾಲಯ ಉಲ್ಲೇಖ ಮಾಡಿದೆ. ಕಮೀಟಿ ಆಫ್ ಮ್ಯಾನೇಜಮೆಂಟ್ ಎಂಬ ಪ್ರಕರಣದಲ್ಲಿ [AIR 2006 SC 2974] ಜೈನ ಧರ್ಮವು ಹಿಂದೂ ಧರ್ಮಕ್ಕೆ ಹೊರತಾದ ಪ್ರತ್ಯೇಕ ಧರ್ಮವೆಂದು ಸಾರಿ ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಹೀಗಾಗಿ ಲಿಂಗಾಯತರು ಹಿಂದೂ, ಶೈವ ಮತ್ತು ವೀರಶೈವ ಧರ್ಮಕ್ಕೆ ಹೊರತಾದ ಪ್ರತ್ಯೇಕ ಧರ್ಮವೆಂದು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ವೀರಶೈವದವರು ಕೂಡ ವೀರಶೈವ ಮತ್ತು ಲಿಂಗಾಯತ ಒಂದೇ ಧರ್ಮವೆಂಬ ತಮ್ಮ ವಾದಕ್ಕೆ ಸಾಕಷ್ಟು ಆಧಾರಗಳನ್ನು ಒದಗಿಸುತ್ತಾರೆ. ಅವುಗಳನ್ನು ಆಧಾರವಾಗಿಟ್ಟುಕೊಂಡು ಒಂದೇ ಧರ್ಮವೆಂದು ಪರಿಗಣಿಸಲು ಕೋರಿ ಪ್ರಕರಣ ದಾಖಲಿಸಬಹುದು.
ಅದೇ ರೀತಿ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ಕೂಡ ನ್ಯಾಯಾಲಯದ ಅನುಮತಿ ಪಡೆದು ಕನಿಷ್ಟ ಇಬ್ಬರು ಸಾರ್ವಜನಿಕ ತೊಂದರೆ [public nuisance] ಎಂಬ ಕಾಯ್ದೆಯಡಿ ಪ್ರತ್ಯೇಕ ಧರ್ಮದ ಆಚರಣೆಗಳ ಕುರಿತು ಘೋಷಣೆಗಾಗಿ ದಾವೆ ಹೂಡಬಹುದು.
ನಿಜವಾಗಿ ನೋಡಿದರೆ ಇದು ಗುರು ಮತ್ತು ವಿರಕ್ತ ಪೀಠಗಳ ನಡುವೆ ನಡೆಯುತ್ತಿರುವ ತಾರ್ಕಿಕ ಮತ್ತು ಸೈದ್ಧಾಂತಿಕ ಸಂಘರ್ಷವಾಗಿದೆ. ಆದ್ದರಿಂದ ಗುರು ಪೀಠದವರು ವೀರಶೈವ ಅಥವಾ ಪಂಚಾಚಾರ್ಯರ ಹೆಸರಿನಲ್ಲಿ ಮತ್ತು ವಿರಕ್ತ ಪೀಠದವರು [ವೀರಶೈವ ಮತ್ತು ಲಿಂಗಾಯತ ಪದಗಳನ್ನು ಬಿಟ್ಟು] ಬಸವಧರ್ಮ ಅಥವಾ ಶರಣಧರ್ಮದ ಹೆಸರಿನಲ್ಲಿ ಹೋರಾಟ ಮಾಡಿದರೆ ಗೊಂದಲ ನಿವಾರಣೆಯಾಗಬಹುದು. ಈ ವಿವಾದಕ್ಕೆ ರಾಜಕೀಯ ಅಥವಾ ಬೇರೆ ರೀತಿಯ ಹೋರಾಟಕ್ಕಿಂತ ಕಾನೂನಿನ ಹೋರಾಟದ ಮೂಲಕ ತೆರೆ ಎಳೆಯಬಹುದು.