ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, ಆಗಮಿಕ ಶೈವ ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು. ಇವು ಧರ್ಮ ಪ್ರಚಾರಕ್ಕೆ ತಮ್ಮ ಮೂಲ ಭಾಷೆಗಳಲ್ಲೇ ಸಾಹಿತ್ಯ ಸೃಷ್ಟಿಸಿದವು.
ಜೈನರು ಪ್ರಾಕೃತ ಬೆಳೆಸುವಲ್ಲಿ ವಿಫಲರಾಗಿ, ಸಂಸ್ಕೃತ, ಹಾಗೂ ಸಂಸ್ಕೃತ-ಭರಿತ ಕನ್ನಡದತ್ತ ತಿರುಗಿದರು. ಆದರೆ ವೈದಿಕರ ಸಂಸ್ಕೃತ ಸಾಹಿತ್ಯದ ಪ್ರಭಾವ ಬೆಳೆಯುತ್ತಲೇ ಹೋಯಿತು.
ತಮ್ಮ ಧಾರ್ಮಿಕ ಪಾವಿತ್ರ್ಯ ಕಾಪಾಡಿಕೊಳ್ಳಲು ವೈದಿಕರು ರಾಮಾಯಣದಂತಹ ಧಾರ್ಮಿಕ ಕೃತಿಗಳನ್ನು ಸಂಸ್ಕೃತದಲ್ಲಿ, ಪಂಚತಂತ್ರದಂತಹ ಲೌಕಿಕ ಕೃತಿಗಳನ್ನು ಕನ್ನಡದಲ್ಲಿ ಬರೆದರು.
ಜೈನರ, ವೈದಿಕರ ಕನ್ನಡ ಕೃತಿಗಳಲ್ಲೂ ತೀರ್ಥಂಕರ, ರಾಮ, ಕೃಷ್ಣರಂತಹ ಉತ್ತರ ಭಾರತದ ಕಥೆಗಳೇ ತುಂಬಿದ್ದವು. ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡಿಗರ ಅಸ್ಮಿತೆಯ ಬೆಳವಣಿಗೆ ಕುಂಠಿತವಾಗಿತ್ತು.
ಲಿಂಗಾಯತ ಧರ್ಮವನ್ನು ಕಟ್ಟಿದ ಶರಣರು ಉತ್ತರ ಭಾರತದ ಧರ್ಮ, ಭಾಷೆ, ಕಥೆಗಳನ್ನು ತಿರಸ್ಕರಿಸಿದರು. ನೇರವಾಗಿ ಕನ್ನಡದಲ್ಲೇ ಸ್ಥಳೀಯ ಮಹಾತ್ಮರ ಮೇಲೆ ಸಾಹಿತ್ಯ ಬರೆದರು.
ಕರ್ನಾಟಕದ ಜೈನರ ಮಾತೃಭಾಷೆ ಕನ್ನಡ, ಧರ್ಮ ಭಾಷೆ ಪ್ರಾಕೃತ. ಬ್ರಾಹ್ಮಣರ ಮಾತೃಭಾಷೆ ಕನ್ನಡ, ಧರ್ಮ ಭಾಷೆ ಸಂಸ್ಕೃತ . ಆದರೆ ಲಿಂಗಾಯತರ ಮಾತೃಭಾಷೆ, ಧರ್ಮ ಭಾಷೆ ಎರಡೂ ಕನ್ನಡ ಮಾತ್ರ.
(‘ಹರಿಹರ ಕವಿ ವಿರಚಿತ ಕನ್ನಡ ಶರಣರ ಕಥೆಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)