ಸಿಂಧನೂರು:
ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
ಅವರು ಸಿಂಧನೂರಿನ ಬಸವಕೇಂದ್ರದಲ್ಲಿ ನಡೆದ “ಸಂಸ್ಕಾರದ ಬದುಕಿಗಾಗಿ ವಚನ ಶ್ರವಣ” ಅಂಗವಾಗಿ ಅಗಸ್ಟ 30 ರಂದು “ಡಾ ಎಂ. ಎಂ. ಕಲಬುರ್ಗಿಯವರ ಸ್ಮರಣೆ” ಕುರಿತು ಉಪನ್ಯಾಸ ನೀಡುತ್ತ ಮಾತನಾಡುತ್ತಿದ್ದರು.
ಡಾ. ಎಂ. ಎಂ. ಕಲಬುರ್ಗಿ ಅವರ ಚಿಂತನೆ ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಂಕುಚಿತ ಭಾವದ ಸಂಪ್ರದಾಯವಾದಿಗಳಿಗೆ ರುಚಿಸಲಿಲ್ಲ, ಆಪಥ್ಯವೆನಿಸಿದವು. ಅಪಥ್ಯದ ಪರಣಾಮವೇ ಕಲಬುರ್ಗಿಯವರ ಹತ್ಯೆ ಎಂದು ಹೇಳಿದರು.
ಡಾ ಎಂ. ಎಂ. ಕಲಬುರ್ಗಿಯವರು ಒಬ್ಬ “ಲಿಂಗವ್ಯಸನಿ ಶರಣ’ರಾಗಿದ್ದರು. ಯಾಕೆಂದರೆ ಲಿಂಗವೆಂದರೆ ಸೃಷ್ಟಿಕರ್ತ, ಸೃಷ್ಟಿ, ಸೃಷ್ಟಿಕರ್ತನ ಕುರುಹು ಇಷ್ಟಲಿಂಗವಾಗಿದೆ. ಅವರು ಸೃಷ್ಟಿಕರ್ತನನ್ನು ಅರ್ಚಿಸಿದರು, ಸೃಷ್ಟಿಯನ್ನು ಆರಾಧಿಸಿದರು, ಸೃಷ್ಟಿಕರ್ತನ ಕುರುಹು ಇಷ್ಟಲಿಂಗದ ಮಹತ್ವ ಸಾರಿದರು, ಸೃಷ್ಟಿಯ ಹಿತಕ್ಕಾಗಿ ಶ್ರಮಿಸಿದರು ಮತ್ತು ಲಿಂಗಾಯತ ತತ್ವ ಸಿದ್ಧಾಂತಗಳನ್ನು ವ್ಯಾಪಕವಾಗಿ ಅಧ್ಯಯನ ಮತ್ತು ಸಂಶೋಧನೆ ಮಾಡಿದ ಅವರ ಜೀವನವೇ ಅಗಮ್ಯ ಅಪ್ರತಿಮ ಲಿಂಗಸ್ವರೂಪವಾಗಿದೆ.
ಡಾ ಎಂ. ಎಂ. ಕಲಬುರ್ಗಿಯವರು 77 ವರ್ಷದ ಜೀವಿತಾವಧಿಯಲ್ಲಿ 770 ವರ್ಷಗಳ ಲಿಂಗಾಯತ ಹಾದಿಯನ್ನು ಕಟ್ಟಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ‘ಸಮಗ್ರ ವಚನ ಸಂಪುಟ’ಗಳ ಪ್ರಧಾನ ಸಂಪಾದಕರಾಗಿದ್ದಾರೆ. ವಚನಸಾಹಿತ್ಯಕ್ಕೆ ಅವರು ಮಾಡಿದ ಕಾರ್ಯ ಅನುಪಮ. ಕೊಟ್ಟ ಕೊಡುಗೆ ಅನನ್ಯ. ಸ್ವಾವಲಂಬಿ, ಪರಿಶ್ರಮದಿಂದ ಕಟ್ಟಿಕೊಂಡ ಬದುಕಿನಲ್ಲಿ ಅವರು ಬಹುಶಿಸ್ತೀಯ ಅಧ್ಯಯನಕಾರರು, ಉನ್ನತಶ್ರೇಣಿಯ ಸಂಶೋಧಕರು, ಪಾಂಡಿತ್ಯ ಪರಂಪರೆಯ ಪ್ರಬುದ್ಧ ಬರಹಗಾರರು, ಗಂಭೀರ ಸಮಾಜ ಚಿಂತಕರು ಮತ್ತು ಕನ್ನಡ ನಾಡು-ನುಡಿ-ಸಾಹಿತ್ಯ-ಸಂಸ್ಕೃತಿಯ ಉತ್ಕಟ ಪ್ರೇಮಿಗಳಾಗಿದ್ದರು.
ಡಾ ಎಂ. ಎಂ. ಕಲಬುರ್ಗಿಯವರು ಒಟ್ಟು 116 ಕೃತಿಗಳನ್ನು ಮತ್ತು 893 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರ ಬರವಣಿಗೆಯ ವ್ಯಾಪ್ತಿ ಬಹು ವಿಸ್ತಾರವಾದುದಾಗಿದೆ. ಸೃಜನ-ಸೃಜನೇತರ ಉಭಯ ಕ್ಷೇತ್ರಗಳಲ್ಲಿ ಸಮರ್ಥ ಕೃಷಿ ಮಾಡಿದ್ದಾರೆ. ಸೃಜನ ಸಾಹಿತ್ಯದಲ್ಲಿ ಶಾಸ್ತ, ಸಾಹಿತ್ಯ, ಸಂಶೋಧನ ಸಾಹಿತ್ಯ, ಜಾನಪದ ಸಾಹಿತ್ಯ, ಲೇಖನ ಸಂಪುಟಗಳು, ವ್ಯಾಕರಣ, ಅಲಂಕಾರ, ಛಂದಸ್ಸು ಇತ್ಯಾದಿ ಶಾಸ್ತ್ರಗಳ ಗ್ರಂಥಗಳು ಮತ್ತು ಸೃಜನೇತರ ಸಾಹಿತ್ಯ (ಪ್ರಾಚೀನ ಸಂಪಾದಿತ ಕೃತಿಗಳಲ್ಲಿ) ಶಾಸನ ಸಾಹಿತ್ಯ, ದಾಖಲು ಸಾಹಿತ್ಯ, ವಚನ ಸಾಹಿತ್ಯ, ಕಾವ್ಯ ಸಾಹಿತ್ಯದಲ್ಲಿ ಗ್ರಂಥಗಳು ಪ್ರಕಟವಾಗಿವೆ.
ಕನ್ನಡ ಸಂಶೋಧನ ಕ್ಷೇತ್ರವನ್ನು ಸಂಪದ್ಭರಿತಗೊಳಿಸಿದ್ದಾರೆ. ಅದಕ್ಕೊಂದು ನೂತನ ಆಯಾಮ ಆವಿಷ್ಕಾರವನ್ನು ನೀಡಿದ್ದಾರೆ. ಕಲಬುರ್ಗಿ ಅವರ ಅಧ್ಯಯನದ ವೈವಿಧ್ಯತೆ ಬೆರಗುಗೊಳಿಸುತ್ತದೆ. ಶಾಸನ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ, ಚರಿತ್ರೆ, ಜಾನಪದ, ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನೆ, ನಾಮವಿಜ್ಞಾನ, ಛಂದಸ್ಸು, ವ್ಯಾಕರಣ, ಪ್ರಾಚ್ಯವಸ್ತುಶಾಸ್ತ್ರ, ಸಂಶೋಧನೆ, ವಿಮರ್ಶೆ, ನಾಡುನುಡಿ ಸಂಸ್ಕೃತಿ ಹೀಗೆ ಅದು ಅನಂತಮುಖಿಯಾಗಿದೆ. ಅವರ ಬಹುಮುಖಿ, ಬಹುವೈವಿಧ್ಯ ಸಾಹಿತ್ಯ ಕೃಷಿಯು ಅನನ್ಯವಾಗಿದೆ.
ಅನೇಕ ಮಠಮಾನ್ಯಗಳ ಬಸವಪೀಠಗಳ ಅಧ್ಯಕ್ಷರಾಗಿ, ಅನೇಕ ವಿನೂತನ ಯೋಜನೆಗಳ ಮಹಾಯೋಜಕರಾಗಿ, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನಿರ್ದೇಶಕರಾಗಿ ಹಲವಾರು ಸಾಂಸ್ಥಿಕ ಕಾರ್ಯಗಳು ಮಾದರಿಯವಾಗಿವೆ. ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಬಸವಪೀಠಗಳ ದಕ್ಷ ಅಧ್ಯಕ್ಷರಾಗಿ, ಕನ್ನಡ ಅಧ್ಯಯನಪೀಠ ಅಧ್ಯಕ್ಷರಾಗಿ, ಸಮಗ್ರ ವಚನ ಸಂಪುಟ ಪ್ರಧಾನ ಸಂಪಾದಕರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿಯ ಕುಲಪತಿಗಳಗಿ ಮಾಡಿದ ಸೇವೆ ಅದ್ಭುತವಾಗಿದೆ.
ಬಸವಣ್ಣನವರ ಗಡಿಪಾರು ಸಂದರ್ಭವನ್ನು; ಹರಳಯ್ಯ, ಶೀಲವಂತ ಮತ್ತು ಮಧುವರಸರು ಕಣ್ಣು ಕೀಳಿಸಿಕೊಂಡು ಎಳೆಹೂಟೆ ಶಿಕ್ಷೆ ಅನುಭವಿಸಿದ ಹುತಾತ್ಮರಾದದ್ದನ್ನು; ಮಡಿವಾಳ ಮಾಚಿದೇವರು, ಅಕ್ಕನಾಗಮ್ಮನವರ ಆದಿಯಾಗಿ ಸಾವಿರಾರು ಶರಣರು ಯುದ್ಧ ಮಾಡಿ, ಪಡಬಾರದ ಕಷ್ಟಗಳನ್ನು ಎದುರಿಸಿ ವಚನಸಾಹಿತ್ಯ ಉಳಿಸಿಕೊಟ್ಟಿದ್ದನ್ನು ಮತ್ತು ಕಲಬುರ್ಗಿಯವರ ಹತ್ಯೆಯನ್ನು ಎಂದೂ ಮರೆಯಬಾರದು. ಅವರು ಮಾಡಿದ ಕ್ರಾಂತಿಕಾರಿ ಕಾರ್ಯದಿಂದಾಗಿ ಇಂದು ಲಿಂಗಾಯತ ಉಳಿದಿದೆ, ಶರಣ ಶರಣೆಯರ ಜೀವನ ಚರಿತ್ರೆ ಉಳಿದಿದೆ. ಅವರು ಕೊಟ್ಟ ಈ ಸಾಮಾಜಿಕ ಕೊಡುಗೆಯನ್ನು ಉಳಿಸಿ ಆಚರಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಅವರೆಲ್ಲರ ಚೈತನ್ಯಶಕ್ತಿಯೇ ನಮ್ಮನ್ನು ನಡೆಸುತ್ತಿದೆ. ಭಯಪಡುವಂತಿಲ್ಲ. ಅವರ ಆಶಯಗಳನ್ನು ಪೂರೈಸುವುದೇ ನಮ್ಮ ಉದ್ದೇಶವಾಗಬೇಕು.
ನಮ್ಮ ಗುರಿ ಮತ್ತು ಜವಾಬ್ದಾರಿಗಳು : ವಚನಗಳನ್ನು ಅರ್ಥವರಿತು ಓದಬೇಕು, ಅವರ ತ್ಯಾಗಬಲಿದಾನಗಳನ್ನು ಮತ್ತು ಅವರ ಚರಿತ್ರೆಗಳನ್ನು ಓದಿ ಪಾಲಿಸಬೇಕು, ನಾವು ಲಿಂಗಾಯತರು ಮತ್ತು ನಾವು ಹೇಗಿರಬೇಕೆಂಬ ಜಾಗೃತಿ ಮೂಡಿಸಬೇಕು, ಪ್ರತಿ ಮನೆಯಲ್ಲಿ ವಚನಪಠಣ ನಡೆಯಬೇಕು, ಇಷ್ಟಲಿಂಗ ಜಾತಿಸೂಚಕವಲ್ಲ – ತತ್ವಸೂಚಕವೆಂದು ವ್ಯಾಪಕ ಪ್ರಾಸಾರ ಮಾಡಬೇಕು, ಜಗತ್ತಿನಲ್ಲಿ ಲಿಂಗಧರಿಸಿದವರೆಲ್ಲಾ ಒಂದೇ ಎಂಬ ಜಾಗೃತಿ ಮೂಡಿಸಬೇಕು, ಮುಖ ತೊಳೆದಾಗೊಮ್ಮೆ ವಿಭೂತಿ ಧರಿಸಬೇಕು, ರುದ್ರಾಕ್ಷಿ ಮಾಲೆಯನ್ನು ಧರಿಸಬೇಕು, ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಮತ್ತು ವಿಶೇಷವಾಗಿ ಮಕ್ಕಳಲ್ಲಿ ಈ ಎಲ್ಲ ಜಾಗೃತಿಗಳನ್ನು ಮೂಡಿಸಬೇಕು.
ಈ ಕರ್ತವ್ಯಗಳನ್ನು ನಾವು ಚಾಚೂ ತಪ್ಪದೇ ಪಾಲಿಸಿದಾಗ ಮಾತ್ರ ನಾವು ಬಸವಾದಿ ಶರಣರ ತ್ಯಾಗ ಬಲಿದಾನಗಳಿಗೆ ಮತ್ತು ಡಾ ಎಂ. ಎಂ. ಕಲಬುರ್ಗಿಯವರಿಗೆ ಸಲ್ಲಿಸುವ ನಿಜವಾದ ಸ್ಮರಣೆಯಾಗಿದೆ ಎಂದು ನುಡಿದರು.
ಸಿಂಧನೂರಿನ ವಕೀಲರಾದ ಶರಣ ಹೆಚ್. ಬಸವರಾಜ ಹುಲಿಹೈದರ ಇವರ ದಾಸೋಹದ ಪ್ರಾಯೋಜನೆಯಲ್ಲಿ ; ಕಾರ್ಯಕ್ರಮವನ್ನು ಸಿಂಧನೂರು ಬಸವಕೇಂದ್ರ, ಮಹಿಳಾ ಮತ್ತು ಯುವ ಬಸವಕೇಂದ್ರ, ಬಸವಚಾರಿಟೇಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಸಮಿತಿ ಇವರುಗಳು ತಿಂಗಳ ಪರ್ಯಂತ ಅನುಭಾವಗಳನ್ನು ಹಮ್ಮಿಕೊಂಡಿದ್ದರು.