ಹುಬ್ಬಳ್ಳಿ
ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದ್ದ ಮಾನ್ಯಾ ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನ ಬಂಧಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಗುರುಸಿದ್ಧಗೌಡ ಪಾಟೀಲ, ಫಕ್ಕೀರಗೌಡ ಪಾಟೀಲ ಹಾಗೂ ಕುಮಾರಗೌಡ ಪಾಟೀಲ ಎಂಬ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ದಿನವೇ ಮಾನ್ಯಳ ತಂದೆ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಪಾಟೀಲ್, ಅರುಣ್ ಗೌಡ ಪಾಟೀಲ್ ಎಂಬ ಮೂವರನ್ನ ಪೊಲೀಸರು ಬಂಧಿಸಿದ್ದರು.
ಒಟ್ಟು 14 ಜನರ ಮೇಲೆ ದೂರು ದಾಖಲಾಗಿದ್ದು, ಇಲ್ಲಿಯವರೆಗೆ ಒಟ್ಟು 6 ಜನರನ್ನು ಬಂಧಿಸಲಾಗಿದೆ ಎಂದು ಧಾರವಾಡ ಎಸ್.ಪಿ ಗುಂಜನ್ ಆರ್ಯ ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದರು. ಹುಬ್ಬಳ್ಳಿ ಗ್ರಾಮೀಣ ಪೊಲೀಸರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

“ಬಂಧಿತ ಆರೋಪಿಗಳೆಲ್ಲ ಹತ್ಯೆಯಾದ ಮಾನ್ಯಾಳ ತಂದೆಯ ಸಂಬಂಧಿಕರಾಗಿದ್ದಾರೆ. ಆರೋಪಿತರು ವಿವೇಕಾನಂದ ಅವರ ಇಡೀ ಕುಟುಂಬ ಮುಗಿಸುವ ಹುನ್ನಾರ ನಡೆಸಿದ್ದರು ಎಂಬ ವಿಷಯ ತಿಳಿದಿದೆ. ಪೂರ್ಣ ತನಿಖೆ ನಂತರವೇ ಎಲ್ಲ ವಿಷಯ ಗೊತ್ತಾಗಲಿದೆ,” ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಕರಣ
ಇನಾಂ ವೀರಾಪೂರ ಗ್ರಾಮದ ಮಾನ್ಯಾ ಎಂಬ ಲಿಂಗಾಯತ ಯುವತಿ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಕುಟುಂಬದ ವಿರೋಧದ ನಡುವೆಯೂ ಜೂನ್ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಪ್ರಾಣಭಯದಿಂದ ಹಾವೇರಿಯಲ್ಲಿ ನೆಲೆಸಿದ್ದ ದಂಪತಿ, ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಮರಳಿ ವೈವಾಹಿಕ ಜೀವನ ನಡೆಸುತ್ತಿದ್ದರು.
ಭಾನುವಾರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆಯ ಮೇಲೆ ಮಾನ್ಯಾಳ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬಳಿಕ ವಿವೇಕಾನಂದನ ಮನೆಗೆ ತೆರಳಿ ಮಾನ್ಯಾ, ತಾಯಿ ರೇಣವ್ವ ಸೇರಿದಂತೆ ಕುಟುಂಬದ ಇತರ ಸದಸ್ಯರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆ ಎಂಬ ಕಾರಣಕ್ಕೆ ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದರು.

ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ರೇಣವ್ವಳ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಐವರಿಗೆ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಘಟನೆ ಹಿನ್ನೆಲೆಯಲ್ಲಿ ಮಾನ್ಯಾಳ ಗಂಡ ವಿವೇಕಾನಂದ ಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಓರ್ವ ಗನ್ ಮ್ಯಾನ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಇನಾಂ ವೀರಾಪೂರ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿ ಇದೆ. ಆದರೆ ಪೊಲೀಸರು ಇಡಿ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿದ್ದು, ದಲಿತ ಸಂಘಟನೆಗಳು ಉಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಡ ಹೇರಿವೆ.
ಮಾನ್ಯಾ ಚಿತೆಗೆ ಅಗ್ನಿ ಸ್ಪರ್ಶ
ಮಂಗಳವಾರ ಮಾನ್ಯಳ ಪತಿ ವಿವೇಕಾನಂದ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಮಾನ್ಯಳ ಸಂಬಂಧಿಕರು ಯಾರೂ ಅಂತ್ಯಕ್ರಿಯೆಗೆ ಹೋಗಿಲ್ಲವೆಂದು ತಿಳಿದು ಬಂದಿದೆ.

ಬಸವ ತತ್ವ ಪಾಲಿಸುವ ಲಿಂಗಾಯತ ಸಮಾಜ ಮತ್ತು ಮಾತಾದೀಷರ ಇದರ ಬಗ್ಗೆ ಟಿಪ್ಪಣಿ ಏನು
*ಬಸವಣ್ಣರ ಹೆಸರು ಹೇಳುವ ಶರಣರು ಅಂತರಂಗ ಬಹಿರಂಗದಲ್ಲಿ ಮೊದಲು ಬದಲಾಗಬೇಕು ನುಡಿಯೊಂದಿದ್ದರೆ ಸಾಲದು ನಡೆಗೆ ಮೊದಲ ಆದ್ಯತೆ ನೀಡಬೇಕು ಸಂತ್ರಸ್ತರ ಮನೆಗೆ ಎಷ್ಟು ಜನ ಬಸವಭಕ್ತರು ಹೋಗಿಬಂದ್ರಿ ? ಯಾವ ರೀತಿ ಸಂತ್ೈಸಿದಿರಿ ? ಯಾವ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾದ್ರಿ ಎನ್ನುವ ವಿಚಾರಗಳು ಪತ್ರಿಕೆ ಹಾಗೂ ಟಿವಿಗಳ ಪ್ರತಿನಿತ್ಯದ ವಾರ್ತೆಗಳಾಗಿ ಬರುವಂತಿರಬೇಕು. ಆಗ ಮಾತ್ರ ಬಸವಣ್ಣನವರ ತತ್ವಗಳು ಅರ್ಥಪೂರ್ಣವಾಗಿ ಜೀವಂತಿಕೆ. ಪಡೆದುಕೊಳ್ಳಲು ಸಾಧ್ಯವಾಗುವುದು.
ಪರಮಪೂಜ್ಯ ವಿಶ್ಬಗುರು ಬಸವಣ್ಣರ ಭಕ್ತರು ಅಂತರಂಗ ಬಹಿರಂಗದಲ್ಲಿ ಮೊದಲು ಬದಲಾಗಬೇಕು ನುಡಿಯೊಂದಿದ್ದರೆ ಸಾಲದು ನಡೆಗೆ ಮೊದಲ ಆದ್ಯತೆ ನೀಡಬೇಕು ವಿಚಾರದೊಂದಿಗೆ ಅಚಾರವೂ ಎದ್ಸು ಕಾಣಬೇಕು ಸಂತ್ರಸ್ತರ ಮನೆಗೆ ಎಷ್ಟು ಶರಣರು ಹೋಗಿ ಬಂದ್ರಿ ? ಹೇಗೆ ಸಂತೈಸಿದಿರಿ ? ಸಮಾಜಕ್ಕೆ ಯಾವ ಕ್ರಾಂತಿಕಾರಿ ವಿಚಾರಗಳನ್ನು ಹೇಳಿದಿರಿ ಎಂಬುದು ಪತ್ರಿಕೆ ಹಾಗೂ ಟಿವಿಗಳ ಪ್ರತಿನಿತ್ಯದ ವಾರ್ತೆಗಳಾಗಿ ಬರುವಂತಿರಬೇಕು ಆಗ ಮಾತ್ರ ಬಸವಣ್ಣನವರ ಜೀವಪರ ತತ್ವಗಳು ಮತ್ತು ವಚನಗಳು ಜಡ ಸಮಾಜದ ಕಣ್ಣು ತೆರೆಸಬಲ್ಲವು
ಸರ್ ದಯಮಾಡಿ ಲಿಂಗಾಯತ ಎನ್ನುವ ಶಬ್ದ ಬಳಸಬೇಡಿ. ಆ ಹುಡುಗನೂ ಕೂಡ ಮಾದಿಗ ಲಿಂಗಾಯತರವನು. ಆ ಕೊಲೆಗಡುಕರದ್ದು ಯಾವದೋ ಒಂದು ಜಾತಿ ಇರತದೆ. ಆ ಜಾತಿಯನ್ನೇ ಬರೆಯಬೇಕು. ಲಿಂಗಾಯತ ಅನ್ನೋದು ಜಾತಿಯಲ್ಲ…. ಅದು ನಡೆಯುವ ಮಾರ್ಗ. ತಾವು ಬಸವ ಮೀಡಿಯಾದವರು ಅದನ್ನ ಗುರುತಿಸಿ ಅವರ ಒಳಪಂಗಡದ ಹೆಸರು ಬಳಸಿರಿ. ಅಂಥ ಕೊಲೆಗಡುಕರು ಬಸವಾದಿ ಶರಣರ ಲಿಂಗಾಯತ ಧರ್ಮದ ವಿರೋಧಿಗಳು
ಮಾನ್ಯ ಶ್ರೀ ನಾಗರಾಜ ಎಂ ಅನುಭಾವಿಗಳಿಗೆ
ಶರಣು ಶರಣಾರ್ಥಿಗಳು. ಲಿಂಗಾಯತ ಧರ್ಮದ ಯಾವುದೇ ಒಳಪಂಗಡಕ್ಕೆ (ಜಾತಿಗೆ)
ಸೇರಿದವರಾಗಿದ್ದರೂ ಇನಾಂ ವೀರಾಪೂರ ಪಾಟೀಲ ಸೋದರ ಸಂಬಂಧಿಗಳು ಮಾಡಿದ ಮಾನ್ಯಾಳ ಮರ್ಯಾದಾ ಹತ್ಯೆ ಅತ್ಯಂತ ಹೇಯ ಕೃತ್ಯ . ವಿವೇಕಾನಂದ ದೊಡ್ಡಮನಿ ಕುಟುಂಬದವರ ಮೇಲೆ ಆಕ್ರಮಣ ಮಾಡಿ ಹತ್ಯೆಗೆ ಯತ್ನಿಸಿದ್ದು ಮೂರ್ಖತನದ ಪರಮಾವಧಿ. ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ವಿವೇಕಾನಂದಗೆ ಪೊಲೀಸರು ರಕ್ಷಣೆ ಒದಗಿಸಿದ್ದು ಸ್ವಾಗತಾರ್ಹ ಕ್ರಮವಾಗಿದೆ.
ಈ ಹೇಯ ಕೃತ್ಯದಲ್ಲಿ ಪ್ರತ್ಯಕ್ಷ ಭಾಗಿಯಾಗಿರುವ ಆರೋಪಿತರಿಗೆ ಪ್ರಬಲವಾದ ಸಾಕ್ಷಾಧಾರಗಳನ್ನು ಒದಗಿಸಿ ಮರಣ ದಂಡನೆಗೆ ಗುರಿಪಡಿಸುವಂತಾಗಬೇಕು
ಎಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಮತ್ತು ಹಲ್ಲೆಗೊಳಗಾಗಿ ನೊಂದು ಅವಮಾನಕ್ಕೆ ಒಳಗಾದ ವಿವೇಕಾನಂದ ಕುಟುಂಬಕ್ಕೆ ಅವರಿಂದ ಪರಿಹಾರ ಒದಗಿಸಿ ಕೊಡಲು ಪ್ರಾರ್ಥಿಸುತ್ತೇನೆ 🙏🙏🇮🇳🙏🙏
ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಗುರು ಬಸವಣ್ಣನವರು ಮಾಡಿಸಿದ್ದು ಅಲ್ಲಮಾದಿ ಏಳನೂರಾ ಎಪ್ಪತ್ತು ಅಮರಗಣಂಗಳ ಸಾಕ್ಷಿಯಾಗಿ “ಲಿಂಗವಂತರ ಕಲ್ಯಾಣ ಮಹೋತ್ಸವ”. ಮೇಲು – ಕೀಳು , ಉಚ್ಚ – ನೀಚ , ಬಡವ – ಬಲ್ಲಿದ ಎಂಬ ಎಲ್ಲ ಭೇದಭಾವಗಳನ್ನು ಕಿತ್ತು ಹಾಕಿದ ಸಮಾನತೆಯ ಸದ್ಧರ್ಮದ ಮದುವೆ . ಅಲ್ಲಿ ಎರಡೂ ಕುಟುಂಬಗಳು ತಾವೇ ಒಪ್ಪಿಕೊಂಡು ಮದುವೆಗೆ ಸಿದ್ಧರಾಗಿ, ಅನುಭವ ಮಂಟಪದ ಬಸವಾದಿ ಶರಣರ ಕಾರುಣ್ಯ ಪಡೆದ ಕಲ್ಯಾಣ ಮಹೋತ್ಸವ ಸಮಾರಂಭ.
ಆದರೆ ಹುಬ್ಬಳ್ಳಿ ಗ್ರಾಮೀಣ ಭಾಗದ ಇನಾಂ ವೀರಾಪೂರ ಗ್ರಾಮದ ಈ ಮದುವೆ ಅಂತರ್ಜಾತಿಯದು . ಪಾಟೀಲ ಕುಟುಂಬ ಪರಿವಾರಕ್ಕೆ ಬಸವಣ್ಣನವರ ಕುರಿತಾಗಿ ಅಥವಾ ಲಿಂಗಾಯತ ಧರ್ಮದ ಕುರಿತು ಅಲ್ಪ ಸ್ವಲ್ಪ ತಿಳಿದಿದ್ದರೂ ಇಂತಹ ಕೃತ್ಯಕ್ಕೆ ಕೈಹಾಕುತ್ತಿರಲಿಲ್ಲ . ತನ್ನ ಕಾಲಲೇ ತಾ ಹೋಗ್ಯಾಳು, ನಮ್ಮ ಪಾಲಿಗೆ ಆಕೆ ಸತ್ತಳು ಅಂತ ತಿಳಿದು ಸುಮ್ಮನಾಗಿ ಇರಬೇಕಾಗಿತ್ತು .
೧೨ನೇ ಶತಮಾನ ಮರುಕಳಿಸಿ ೨೧ನೇ ಶತಮಾನವಾಗಿದೆ. ಅಂದು ಬಸವಣ್ಣ , ಇಂದು ಅಂಬೇಡ್ಕರ್
ಅಂದು ವಚನ ಗ್ರಂಥ, ಇಂದು ಸಂವಿಧಾನ ಗ್ರಂಥ . ನಾಗರಾಜ ಎಂ, ಸರ್, ದಯವಿಟ್ಟು
ಬಸವಾನುಯಾಯಿಗಳ ಮೇಲೆ ಗೂಬೆ ಕೂರಿಸಬೇಡಿ. ಶರಣಾರ್ಥಿಗಳು 🙏 🙏
ನಾಗರಾಜ್ ಎಂ ನೀವು ಹೇಳಿದ್ದು ಸರಿ. ಆದರೆ ಇದರಲ್ಲಿ ಒಂದೇ ಧರ್ಮದವರು ಹೋಗಬೇಕು ಎನ್ನುವಕಿಂತ ಮಾನವೀಯತೆ ಇರುವವರೆಲ್ಲ ಹೋಗಬೇಕು. ಎಲ್ಲ ಧರ್ಮದವರೂ, ಸಂಘಗಳೂ, ರಾಜಕಾರಣಿಗಳೂ ಹೋಗಬೇಕು. ಜಾತಿಯತೆ ಬೇಡವೆಂದು, ಹಿಂಸೆ ಕ್ರೂರತನ ಬೇಡವೆಂದು ಎಲ್ಲಾ ಮಹಾತ್ಮರು ಹೇಳಿದ್ದಾರೆ. ಮನುಷ್ಯ ಮನುಷ್ಯನನ್ನು ಕೊಂದಾಗ ಮಾನವೀಯತೆ ಇರುವವರೆಲ್ಲ ಹೋಗಬೇಕು. ಸಾಂತ್ವನ ಹೇಳಬೇಕು. ಇಂದು ಕಾನೂನು ಪ್ರಕಾರ ಆ ಕ್ರೂರಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು. ವಿವೇಕಾನಂದ ಬಹಳಷ್ಟು ನೊಂದಿದ್ದಾನೆ. ಅವರ ತಾಯಿಗಾಗಿಯೂ ಅವನಿಗೆ ಆತಂಕವಾಗಿದೆ. ಈ ವಿಷಯದಲ್ಲಿ ಮಾನ್ಯ ಪೋಲೀಸರನ್ನು ಮೆಚ್ಚಲೇಬೇಕು. ನಮ್ಮ ರಾಜಕೀಯ ಎತ್ತ ಸಾಗುತ್ತಿದೆ. ಕೊಲೆಗಳು ಹೆಚ್ಚುತ್ತಿವೆ . ಖಡಕ್ ಕಾನೂನು ಜಾರಿಗೆ ತರಬೇಕು. ಜನರು ಹೆದರುವಂತೆ ಆಗಬೇಕು.ದುಡ್ಡು ಕೊಟ್ಟರೆ ಎಂಥದ್ದೂ ಕೂಡ ಸಲೀಸಾಗಿ ಮುಚ್ಪಬಹುದು, ಬಚಾವಾಗಬಹುದು, ಎನ್ನುವಂತಾಗಿದೆ. ಕುಮ್ಮಕ್ಕು ಕೊಟ್ಟುವರಿಗೂ ಹಿಡಿದು ಒಳಗೆ ಹಾಕಬೇಕು.
ಸರಿಯಾಗಿ ಹೇಳಿದ್ದೀರಿ. ಯಾವುದ್ದಕ್ಕೆಲ್ಲಾ ಬಸವ ಮತ್ತು ಲಿಂಗಾಯತ ಶಬ್ದಗಳನ್ನು ಬಳಸಿ
ಟೀಕಿಸುವ ಚಾಳಿ, ಬಸವ ಸಂಸ್ಕೃತಿ ಅಭಿಯಾನದ ನಂತರ ಜೋರಾಗಿ ನಡೆಯುತ್ತಿದೆ . ನಮ್ಮ ರಾಜ್ಯದಲ್ಲಿರುವ ಜೈನ, ಬೌದ್ಧ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಈ ಧರ್ಮಾವಲಂಬಿಗಳಾರೂ ನಮ್ಮನ್ನು ಬೈಯುವದಾಗಲಿ, ಹೀಯಾಳಿಸುವುದಾಲಿ ಮಾಡುವುದಿಲ್ಲ .
ನಮ್ಮ ಲಿಂಗಾಯತ ಧರ್ಮದ ಹಲವು ಸಂಪ್ರದಾಯವಾದಿಗಳು ಈ ಹಿಂದೂ ಮುಖವಾಡ ಧರಿಸಿದ ಒಂದು ಧರ್ಮದವರ ಓಲೈಕೆಗಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಸಹಿಸಿಕೊಳ್ಳೋಣ . ಒಂದಿಲ್ಲೊಂದು ದಿನ ಸತ್ಯದ ಅರಿವಾಗಿ ನಮ್ಮವರು ನಮ್ಮವರಾಗುತ್ತಾರೆ. ಶರಣು ಶರಣಾರ್ಥಿಗಳು 🌹🙏🙏🇮🇳🙏🙏
ವಿಶ್ಸಗುರು ಬಸವಣ್ಣನವರು ಈ ಭೂಮಂಡಲಕ್ಕೆ ಸಿಕ್ಕ ಮಹಾ ಮಾನವತಾವಾದಿ ಮಹಾತ್ಮರು ಎನ್ನುವುದು ನನ್ನಂತಹ ಬಸವಭಕ್ತರಿಗೆ ಎಲ್ಲಾ ಕಾಲಕ್ಕೂ ಜಾಗೃತವಾಗಿರುವ ಚೈತನ್ಯ ಶಕ್ತಿ ಸ್ವತಃ ಬಸವಣ್ಣರವರ ಭಕ್ತನಾಗಿರುವ ನಾನು ಶರಣರ ಬಗ್ಗೆ ಅಪಾರವಿದ ಗೌರವವನ್ನು ಇಟ್ಟುಕೊಂಡಿದ್ದೇನೆ ಹೀಗಾಗಿ ಯಾರ ಮೇಲೂ ಅಪಾದನೆ ಮಾಡುವ ಸಣ್ಣತನಕ್ಕೆ ಇಳಿಯುವುದಿಲ್ಲ ಎಲ್ಲಾ ಕಡೆ ಇನ್ನೂ ಒಂದಿಷ್ಟು ಒಳ್ಳೆಯತನ ಕಾಣುತ್ತಿದೆ ಎಂದಾದರೆ ಅದಕ್ಕೆ ಬಸವ ಸಂಸ್ಕೃತಿಯ ಪ್ರಭಾವವೇ ಕಾರಣ ಎಂಬುದು ಸಾರ್ವಕಾಲಿಕ ಸತ್ಯ. ನಾನು ಹೇಳುತ್ತಿರುವುದು ಏನೆಂದರೆ ನಾವು ಮಂಚೂಣಿಯಲ್ಲಿ ನಿಂತು ಮಾಡಬಹುದಾದ ಮತ್ತಷ್ಟು ಸಾಧಿತ ಮಾನವೀಯ ಕೆಲಸಗಳ ಬಗ್ಗೆ ಅಷ್ಟೇ. ಇದನ್ನು ಅನ್ಯತಾ ಭಾವಿಸಬೇಡಿ ಶರಣು ಶರಣಾರ್ಥಿಗಳು 🙏🙏
ಮರ್ಯಾದೆ ಹತ್ಯೆ!
ಮಾಡಿದ್ದೀರಿ, ಮಾಡಿಸುತ್ತಲೇ ಇದ್ದೀರಿ.
ಅದರಿಂದ ಸಾಧಿಸಿದ್ದಾದರು ಏನು?
ಕರುಳು ಕುಡಿಗಳನು ಕೊಂದ,
ದುರಾಳ ಮನುಷ್ಯರು ನೀವು.
ಮಗಳಿಗೆ ಒಂದಿಷ್ಟು ಸಮಯ ಕೊಡು
ಪ್ರೀತಿ ವಾತ್ಸಲ್ಯದ ಧಾರೆಯರೆ.
ಮಗಳಿಗೆ, ನನ್ನಪ್ಪನೆಂದರೆ,
ನನ್ನ ಭವಿಷ್ಯದ, ಭರವಸೆ
ಎನ್ನುವದನು ಸ್ವಲ್ಪ ಅರ್ಥೈಸಿ
ಖಂಡಿತ ನಮ್ಮ ನಿಮ್ಮ ಮಗಳು.
ನಮ್ಮ ಪ್ರೀತಿಯ ಖಜಾನೆಯಲಿ ಭದ್ರ.
ಅಹಿಂದ ಹುಡಿಗಿಯನು,
ಸೊಸೆಯಾಗಿ ತರಲು, ಒಪ್ಪದ ಅಪ್ಪ
ಅಹಿಂದ ಹುಡುಗನಿಗೆ,
ಮಗಳು ಕೊಡಲು, ಒಪ್ಪದ ಅಪ್ಪ.
ಇಬ್ಬರು ಜೀವನವನ್ನು, ಅರ್ಥೈಸಿ
ಕೊಳ್ಳುವಲ್ಲಿ ವಿಫಲವಾದವರೆ.
ತಪ್ಪು ಮಾಡಿದ್ದಾರೆಂದಾಕ್ಷಣ
ಕೊಲೆ ಉತ್ತರವಲ್ಲ.
ಕ್ಷೇಮ ಉತ್ತರವಾಗ ಬೇಕು.
ಬಿಟ್ಟು ಬಿಡಿ ಅವರನ್ನು,
ಕಷ್ಟನೋ ಸುಖನೂ, ಅನುಭವಿಸಲಿ
ಜೀವನವೆನ್ನುವದು ಗೊತ್ತಾಗಲಿ
ಮನಸ್ಸು ನಿರ್ಮಳವಾಗಿ ಇದ್ದು ಬಿಡಿ.
ಬದುಕಲಿ ಬಡ ಜೀವಗಳೆರಡು.
ಬಸವನ ಕೃಪೆಯಿಂದ.