ಹಾವೇರಿ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಶುರುವಾದರೆ, ಸಮಾಜಕ್ಕೆ ಸಂಸ್ಕಾರ ಕೊಟ್ಟಿರುವ ಶ್ರೇಯಸ್ಸು ಮಠ ಪರಂಪರೆಗಳಿಗೆ ಸಲ್ಲುತ್ತದೆ. ಮಠಗಳಲ್ಲಿ ಅಧ್ಯಯನ ಮಾಡಿದವರು ಉತ್ತಮ ಪ್ರಜೆಗಳಾಗಿ ಗುರುತಿಸಿಕೊಂಡಿರುವುದು ಅಭಿನಂದನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮನೆಗಳಲ್ಲಿಯೂ ಮಹಿಳೆಯರು ಧಾರಾವಾಹಿಗಳಿಗೆ ಅಂಟಿಕೊಂಡಿದ್ದಾರೆ. ತಾವು ಟಿವಿ ನೋಡುತ್ತ ಮಕ್ಕಳು ಚೆನ್ನಾಗಿ ಓದಲಿ ಎಂದು ಬಯಸುತ್ತಾರೆ. ಒಂದೆಡೆ ಟಿವಿ. ಇನ್ನೊಂದೆಡೆ ಅಭ್ಯಾಸ. ಹೀಗಾದಾಗ ಮಕ್ಕಳಿಗೆ ಏಕಾಗ್ರತೆ ಬರುವುದಾದರೂ ಹೇಗೆ?
ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದ ಎಷ್ಟೋ ಸಾಧಕರು ನಮ್ಮ ಕಣ್ಣೆದುರು ಇದ್ದಾರೆ. ಇಂಗ್ಲಿಷ್ ಮೋಹ ಹಾಗೂ ಮಕ್ಕಳು ಪ್ರಥಮ ರ‍್ಯಾಂಕ್ ಪಡೆಯಬೇಕು ಎಂಬ ಹಪಾಹಪಿ ಬಿಟ್ಟು ಅವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡಬೇಕು. ಜಾತ್ರೆ ಎಂಬುದು ಏಕತೆಯ ಪ್ರತೀಕ. ಹುಕ್ಕೇರಿಮಠದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದವರು ಬಹುತೇಕರು ಸಾಧಕರಾಗಿದ್ದಾರೆ. ಮಠದ ಸಂಸ್ಕಾರ ಅವರನ್ನು ಸಾಧಕರನ್ನಾಗಿಸಿದೆ ಎಂದರು.
ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ ಎಂಬ ಅಪವಾದವಿದೆ. ಟಿವಿ ಹಾಗೂ ಮೊಬೈಲ್ ಯುಗದಲ್ಲಿ ಮನೆ ಬಿಟ್ಟು ಮೈದಾನಕ್ಕೆ ಬಂದು ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಾವೇರಿ ಜನತೆ ಅಭಿನಂದನಾರ್ಹರು.
ದುಸ್ತರದ ದಿನಗಳಲ್ಲಿ ಜನರನ್ನು ಜಾತ್ರೆಯಡೆಗೆ ಸೆಳೆದಿರುವ ಸದಾಶಿವ ಸ್ವಾಮೀಜಿ ಸರಳ ಹಾಗೂ ಸವ್ಯಸಾಚಿ ವ್ಯಕ್ತಿತ್ವದವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಮಹಾಸ್ವಾಮೀಜಿ ಮಾತನಾಡಿ, ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಯವರ ದೂರದೃಷ್ಟಿಯಿಂದ ಕನ್ನಡ ನಾಡಿನ ಇತಿಹಾಸದಲ್ಲಿ ಹುಕ್ಕೇರಿಮಠ ತಪಸ್ವಿ ಮಠವಾಗಿ ಗುರುತಿಸಿಕೊಂಡಿದೆ. ಶ್ರೀಮಠದ ಸದಾಶಿವ ಸ್ವಾಮೀಜಿಯವರು ಶಿವಯೋಗ ಮಂದಿರದ ಉಪಾಧ್ಯಕ್ಷರಾಗಿ ಜನಮುಖಿ ಕೆಲಸ ಮಾಡುತ್ತಿರುವರು ಎಂದರು.
ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಉತ್ಸವಗಳು ಕೇವಲ ಮನೋರಂಜನೆ ಅಷ್ಟೇ ಆಗದೇ ದೇಶದ ಪರಂಪರೆ ಮುನ್ನಡೆಸುತ್ತವೆ.
ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಹುಕ್ಕೇರಿಮಠದ ಶ್ರೀಗಳ ಪಾತ್ರ ಹಿರಿದು. ಮಹಿಳಾ ಗೋಷ್ಠಿಯ ಈ ದಿನದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಬೇಕು. ಮಹಿಳೆ ಮಮತೆಯ ಮಡಿಲಾಗಿ, ಕರುಣೆಯ ಕರುಳಾಗಿ ಶಕ್ತಿ ಸ್ವರೂಪಿಯಾಗಿರುವಳು. ಅವಳಿಗೆ ಶಿಕ್ಷಣ ನೀಡಿ ಸಾಮಾಜಿಕವಾಗಿ ಸಬಲೀಕರಣಗೊಳಿಸಬೇಕು ಎಂದರು.
ಶಿರಸಿ ಬಣ್ಣದ ಮಠದ ಅಟವಿ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ, ಕೂಡಲದ ಷ.ಬ್ರ. ಗುರುಮಹೇಶ್ವರ ಸ್ವಾಮೀಜಿ, ಹರಸೂರು ಬಣ್ಣದಮಠದ ಷ.ಬ್ರ. ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ್ ಎಸ್.ಖಾದ್ರಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ರಾಜಣ್ಣ ಮಾಗನೂರು, ಪಿ.ಡಿ. ಶಿರೂರ, ಶ್ರೀಮಠದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿಯವರ ಪ್ರವಚನ ಮಂಗಲಗೊಂಡಿತು. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ಬಿಗ್ ಬಾಸ್ ಖ್ಯಾತಿಯ ಹನುಮಂತ ಲಮಾಣಿ ಸಂಗಡಿಗರಿಂದ ಮನೋರಂಜನಾ ಕಾರ್ಯಕ್ರಮ ಜರುಗಿದವು. ಮಹೇಶ ಚಿನ್ನಿಕಟ್ಟಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.
