ಸಿಂಧನೂರು
ಮನೆಯಲ್ಲಿ ತಾಯಿ ಇದ್ದಂತೆ ಊರಿಗೆ ಒಂದು ಮಠವಿರಬೇಕು. ಮಠಗಳು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳ ಕೇಂದ್ರಗಳಾಗಬೇಕು. ಒತ್ತಡದ ಬದುಕನ್ನು ನಿವಾರಿಸಿಕೊಂಡು ಆಧ್ಯಾತ್ಮದ ಬದುಕನ್ನು ಹೇಗೆ ಕಳೆಯಬೇಕು ಎಂಬುದನ್ನು ಮಠಗಳು ಹೇಳಿಕೊಡಬೇಕೆಂದು ಶರಣತತ್ವ ಚಿಂತಕ ಮಲ್ಲಿಕಾರ್ಜುನ ಕಮತಗಿ ಹೇಳಿದರು.
ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಜರುಗಿದ ಲಿಂಗೈಕ್ಯ ಪಾರ್ವತಮ್ಮ ಅಮ್ಮನವರ ಸ್ಮರಣೋತ್ಸವ ಹಾಗೂ ಅನುಭಾವ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಇಂದಿನ ಯುವಕರು ಮತ್ತು ಮಧ್ಯಮ ವಯಸ್ಸಿನವರು ಸಂಸ್ಕಾರ ಮತ್ತು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂತಹ ಮಠಗಳು ಯುವ ಪೀಳಿಗೆಯನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಸಹಾಯಕವಾಗುತ್ತವೆ.

ಮನುಷ್ಯನನ್ನು ಮಹಾದೇವನನ್ನಾಗಿ ಮಾಡುವ ಶಕ್ತಿ ಮಠಗಳಿಗೆ ಇದೆ. ಬಸವಾದಿ ಶರಣರ ವಿಚಾರಗಳ ಮೂಲಕ ಮಠಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠ ಸಮಾಜದಲ್ಲಿ ಜಾಗೃತಿ ಮೂಡಿಸುವುದರಲ್ಲಿ ಮುಂದೆ ಇದೆ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳಾಗಿರುತ್ತವೆ.
ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ಹಾಗೂ ಅವರ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ‘ಸಾಧನೆಗೆ ಸುಧೆ’ ಎಂಬ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಜಾತ್ರೆಗಳಲ್ಲಿ ಪ್ರಾಣಿಬಲಿ, ಹೋಮಹವನದಂತಹ ಅರ್ಥವಿಲ್ಲದ ಕಾರ್ಯಕ್ರಮಗಳು ನಡೆಯಬಾರದು. ಬದಲಾಗಿ ಶ್ರೀಮಠ ಹಮ್ಮಿಕೊಂಡಂತೆ ರೈತರಿಗಾಗಿ, ವಿದ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿರಬೇಕು.

ಹಿರಿಯರ ಸ್ಮರಣೆ ಮಾಡುವುದು ಎಂದರೆ ಅವರ ಆಶೀರ್ವಾದವನ್ನು ಪಡೆಯುವುದು. ಅವರು ಜೀವಂತವಾಗಿದ್ದಾಗ ಅವರನ್ನು ದೇವರಂತೆ ಪೂಜಿಸುವುದರ ಜೊತೆಗೆ ಪ್ರೀತಿಸಬೇಕು. ಅವರು ನಿಧನರಾದ ಮೇಲೆ ಅವರಿಗೆ ಬೇಕಾದ ಭಕ್ಷ ಭೋಜನಗಳನ್ನು ಇಡುವುದರಲ್ಲಿ ಅರ್ಥವಿಲ್ಲ.
ನಮಗಾಗಿ ನಮ್ಮ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ಹಿರಿಯ ಜೀವಿಗಳಿಗೆ ಗೌರವ ಕೊಡಬೇಕು, ಪ್ರೀತಿಯನ್ನು ತೋರಿಸಬೇಕು. ಇಂದು ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ ಅದೇ ಪ್ರಮಾಣದಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಿವೆ ಇದು ಖೇದದ ಸಂಗತಿ.

ಹಿಂದೆ ಅನಕ್ಷರತೆ ಇತ್ತು ಅಲ್ಲಿ ಮಾನವೀಯತೆ ಮನೆ ಮಾಡಿತ್ತು. ತಂದೆ ತಾಯಿಗಳನ್ನು ಹಿರಿಯರನ್ನು ಪ್ರೀತಿಸುತ್ತಿದ್ದರು. ಹಾರೈಕೆ ಮಾಡುತ್ತಿದ್ದರು ಆದರೆ ಇಂದು ಅದು ಕಣ್ಮರೆಯಾಗುತ್ತಿದೆ ಎಂದು ಕಮತಗಿ ವಿಷಾದಿಸಿದರು.
ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರ್ಲಿ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಇಂತಹ ಮಠಗಳಿಂದ ಸಂಸ್ಕಾರ ಉಳಿದಿದೆ. ಅದಕ್ಕೆ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಹಾಗೂ ಬಸವಾದಿ ಪ್ರಮಥರ ಪ್ರೇರಣೆಯಾಗಿದೆ. ಪರಮಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಬಸವತತ್ವ ನಿಷ್ಠರು ಅವರು ಬಸವಾದಿ ಶರಣರ ನಡೆ ನುಡಿ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು.
ಇವನಾರವ ಇವನಾರವ ಅನ್ನದೇ ಎಲ್ಲರೂ ನಮ್ಮ ಮಠದ ಭಕ್ತರೇ ಎಂದು ಅಪ್ಪಿಕೊಳ್ಳುವ ತಾಯಿ ಹೃದಯದವರು. ವರ್ಷವಿಡೀ ಅವರು ಶ್ರೀ ಮಠದ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿರುತ್ತವೆ. ಹಾಗೂ ರೈತರಿಗಾಗಿ ಸಾವಯವ ಪದ್ಧತಿ ಪರಿಚಯಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲ ಬಸವಾದಿ ಶರಣರ ಪರಮಪೂಜ್ಯ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ದಿನ ಶರಣೆ ಮಾತೋಶ್ರೀ ಪಾರ್ವತಮ್ಮ ಅಮ್ಮನವರನ್ನು ಸ್ಮರಿಸುವ ಮೂಲಕ ನಾವು ನೀವು ಎಲ್ಲರೂ ನಮ್ಮ ನಮ್ಮ ಹಿರಿಯರಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಿ ಕೊಡಬೇಕೆಂಬುದನ್ನು ಸಾದರಪಡಿಸಿದ್ದಾರೆ.

ಲಿಂಗಾಯತ ಎಂದರೆ ಅದು ಒಂದು ತತ್ವ, ಅದೊಂದು ಸಧ್ವಿಚಾರ. ಅಂತಹ ತತ್ವ ಹಾಗೂ ಸಿದ್ದಾಂತವನ್ನು ಅಳವಡಿಸಿಕೊಂಡವರು ಸದಾ ಈ ಭೂಮಿಯ ಮೇಲೆ ಶಾಶ್ವತವಾಗಿ ಇರುತ್ತಾರೆ. ಅದಕ್ಕೆ ಬಸವಾದಿ ಶರಣರೇ ಸಾಕ್ಷಿ. ಅವರು ನಮ್ಮನ್ನಗಲಿ ಒಂಬತ್ತು ನೂರು ವರ್ಷಗಳು ಕಳೆದರೂ ಇವತ್ತಿಗೂ ಜನ ಮಾನಸದಲ್ಲಿ ಇದ್ದಾರೆ. ನಾವು ಕೂಡ ಬಸವಾದಿ ಶರಣರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ನುಡಿದರು.
ಸಾನಿಧ್ಯವನ್ನು ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯದ್ದಲದೊಡ್ಡಿ ವಹಿಸಿದ್ದರು. ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾದ ಹೆಚ್. ಎಫ್. ಮಸ್ಕಿ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸೂಗಪ್ಪ ಧಣಿ ತೋರಣದಿನ್ನಿ, ಹನುಮಂತಪ್ಪ ವಕೀಲರು, ವಿಶಾಲಾಕ್ಷಮ್ಮ ಶರಣೆಗೌಡ ಜವಳಗೇರ, ದೊಡ್ಡಬಸವ ನಗನೂರ, ಸಂಗನಗೌಡ ಬಲ್ಲಟಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಉಪಸಿತರಿದ್ದರು.
ಚಂದ್ರೇಗೌಡ ಹರಟೆನೂರ ನಿರ್ವಹಿಸಿದರು. ಜ್ಯೋತಿ ಸ್ವಾಗತಿಸಿದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
