ಮುಳಗುಂದ
‘ವಚನ ಸಾಹಿತ್ಯಕ್ಕೆ ಮನಸ್ಸುಗಳನ್ನು ಪರಿಶುದ್ಧಗೊಳಿಸುವ ಶಕ್ತಿಯಿದೆ. ಪ್ರತಿಯೊಬ್ಬರ ಬದುಕು ಬೆಳಕಾಗಲು ಮನೆಮನಗಳಲ್ಲಿ ವಚನ ಸಾಹಿತ್ಯ ಪಠಿಸುವಂತಾಗಬೇಕು’ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮನೆ-ಮನದಲ್ಲಿ ಶರಣರ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಾದಿ ಶರಣರ ವಚನ ಸಾಹಿತ್ಯ ಬದುಕಿಗೆ ದಾರಿ ದೀಪವಾಗಿದೆ. ವಚನ ಸಾಹಿತ್ಯ ಅರಿತು ನಿಜಜೀವನದಲ್ಲಿ ಅಳವಡಿಸಿಕೊಂಡಾಗ ಸಮಾನತೆ ಸಮಾಜ ಕಟ್ಟಲು ಸಾಧ್ಯವಾಗುತ್ತದೆ’ ಎಂದರು.
ಎಸ್.ಸಿ. ಚವಡಿ ಮಾತನಾಡಿ, ‘ಶರಣರು ಕಾಯಕ ತತ್ವ ಪರಿಪಾಲಕರಾಗಿದ್ದರು. ಕಾಯಕ ನಿಷ್ಠೆಯಲ್ಲಿಯೇ ದೇವರನ್ನು ಕಂಡವರು. ಶರಣರ ಚಿಂತನೆ, ಬೋಧನೆಯನ್ನು ನಿತ್ಯ ಜೀವನದಲ್ಲಿ ಪರಿಪಾಲಿಸಬೇಕು’ ಎಂದರು.

ಕದಳಿ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ ಮಟ್ಟಿ, ಕಾರ್ಯದರ್ಶಿ ಬೂದಪ್ಪ ಅಂಗಡಿ, ಪ್ರಕಾಶ ಮದ್ದಿನ, ಸುಮನ್ ಚವಡಿ, ಹರ್ಷಲತಾ ದೇಶಪಾಂಡೆ, ಶೋಭಾ ಪಾಟೀಲ, ಶ್ವೇತಾ ದೋಟಿಕಲ್ಲ ಇದ್ದರು. ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.
