ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ – ದಿನ – ೦೪
ವಿಷಯ: ಪಂಚಾಚಾರಗಳು
ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು
ಲಿಂಗಾಯತ ಧರ್ಮದಲ್ಲಿ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭ್ರತ್ಯಾಚಾರಗಳೆಂಬ ಪಂಚ ಆಚಾರಗಳಿವೆ. ಇವು ನಮ್ಮ ವ್ಯಕ್ತಿತ್ವ ವಿಕಾಸದ ಮೆಟ್ಟಿಲುಗಳಾಗಿವೆ. ಲಿಂಗಾಚಾರದಿಂದ ಅಂಗಶುದ್ಧಿಯನ್ನು, ಸದಾಚಾರದಿಂದ ಮನದ ಶುದ್ಧಿಯನ್ನು, ಶಿವಾಚಾರದಿಂದ ಧನದ ಶುದ್ಧಿ, ಗಣಾಚಾರದಿಂದ ನಡೆ ಶುದ್ಧಿಯನ್ನು, ಭೃತ್ಯಾಚಾರದಿಂದ ನುಡಿಯ ಶುದ್ಧಿ ಆಗುತ್ತದೆ. ಒಟ್ಟಾರೆ ಮನುಷ್ಯನ ಜಡದೇಹ ಶುದ್ಧಿಯಾಗಲು ಈ ಪಂಚಾಚಾರಗಳು ಅವಶ್ಯಕ.
ಧರ್ಮಶಾಸ್ತ್ರದಲ್ಲಿ ಪಂಚಾಚಾರಗಳು ಭಕ್ತರು ಅನುಸರಿಸಬೇಕಾದ ನೀತಿ ಸಂಹಿತೆಯನ್ನು ಸೂಚಿಸುತ್ತವೆ. ಭಕ್ತನು ತಾನು ಮಾಡುವ, ಯೋಚಿಸುವ ಅಥವಾ ಅನುಭವಿಸುವುದು ತನ್ನ ಕುಟುಂಬದ ಸಲುವಾಗಿ ಅಲ್ಲ ಎಂದು ಸ್ವತಃ ಮನವರಿಕೆ ಮಾಡಿಕೊಂಡಾಗ ಲಿಂಗಾಚಾರದ ಅತ್ಯುನ್ನತ ರೂಪ ಅರ್ಥವಾಗುತ್ತದೆ.
ಧರ್ಮ ಬೇರೆ, ಮತ ಪಂಥ ಬೇರೆ. ಧರ್ಮಕ್ಕೆ ಮೂಲಭೂತವಾಗಿ ತತ್ವ ಸಿದ್ಧಾಂತಗಳು ಇರುತ್ತವೆ. ಮತ್ತು ಧರ್ಮ ಸಾರ್ವತ್ರಿಕವಾಗಿರುತ್ತದೆ. ವಿಶ್ವಸಮುದಾಯದ ವಿಶ್ವಪ್ರಜ್ಞೆ ಒಳಗೊಂಡಿರುವುದು ಧರ್ಮ,ಸಿದ್ಧಾಂತವಾಗಿದೆ. ಮತಕ್ಕೆ ಮತೀಯವಾದ ಇರುತ್ತದೆ. ಮತ ಹೊಸತನವನ್ನು ಹೇಳುವುದಿಲ್ಲ, ಆದ್ದರಿಂದ ಧರ್ಮ ಮತ್ತು ಮತ ಬೇರೆ ಬೇರೆ ಆಗಿವೆ.
ಪಂಚಾಚಾರಗಳಲ್ಲಿ ಒಂದಾಗಿರುವ ಸದಾಚಾರ ನೈತಿಕ ಸಂಹಿತೆಗಳ ಗುಂಪನ್ನು ಒಳಗೊಂಡಿದೆ. ಸದಾಚಾರ ಹೊಂದಿರುವವರು ಭ್ರಷ್ಟಾಚಾರ ನಡೆಸಲು ಸಾಧ್ಯವಿಲ್ಲ. ಕಳ್ಳತನ ಮಾಡದಿರುವದು, ಸುಳ್ಳು ಹೇಳದಿರುವುದು, ಸಕಲ ಜೀವರಾಶಿಗಳ ಮೇಲೆ ಕರುಣೆ ತೋರುವುದೇ ಸದಾಚಾರ. ಶಿವಾಚಾರವು ಸಾಮಾಜಿಕ ಸಮಾನತೆಯನ್ನು ಸಾರಿ ಹೇಳುತ್ತದೆ. ಸರ್ವರು ಸಮಾನರು ಎಂಬುದನ್ನು ತಿಳಿಸಿಕೊಡುತ್ತದೆ.
ಹೀಗಾಗಿ ಬಸವ ಧರ್ಮವು ವಿಶ್ವಸಂದೇಶದ ಧರ್ಮವಾಗಿದೆ. ಶಿವಾಚಾರದ ನಿಂದೆಯನ್ನು ಕೇಳದಿರುವುದೇ ಗಣಾಚಾರ. ಅನ್ಯಾಯ ಸರಿಪಡಿಸುವುದು, ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಗಣಾಚಾರವಾಗಿದೆ.
ಪೂಜ್ಯ ಶ್ರೀ ಮಹಾಂತಸ್ವಾಮಿ
ವಿರಕ್ತಮಠ, ಬೇಲೂರು, ಹಾಸನ
ಪಂಚಾಚಾರಗಳಲ್ಲಿ ಶಿವಾಚಾರವು ಎಲ್ಲಾ ಮಾನವರ ಸಮಾನತೆ ಮತ್ತು ಯೋಗಕ್ಷೇಮ ಎತ್ತಿ ಹಿಡಿಯುವುದು. ಸದಾಚಾರವು ವೃತ್ತಿ ಮತ್ತು ಕರ್ತವ್ಯಕ್ಕೆ ಗಮನ ಕೊಡುವುದನ್ನು ಹೇಳುತ್ತದೆ. ಗಣಾಚಾರವು ಸಮುದಾಯದ ರಕ್ಷಣೆ ಮತ್ತು ಅದರ ತತ್ವಗಳನ್ನು ಹೇಳುತ್ತದೆ. ಭೃತ್ಯಾಚಾರವು ಎಲ್ಲಾ ಜೀವಿಗಳ ಕಡೆಗೆ ಸಹಾನುಭೂತಿ ತೋರಿಸುವ ಗುಣ ಬಿಂಬಿಸುತ್ತದೆ.
ಬಸವಾದಿ ಶರಣರು ನಮ್ಮನ್ನು ಸದಾ ವಾಸ್ತವದ ಕಡೆ ಕೊಂಡೊಯ್ಯುತ್ತಾರೆ. ಶರಣ ಸಿದ್ಧಾಂತ ಅರಿತುಕೊಂಡರೆ ಸ್ವಯಂ ನಾನು ಹೇಗಿದ್ದೇನೆ ಎನ್ನುವುದು ತಿಳಿಯುತ್ತದೆ. ಅದೇ ಪಂಚಾಚಾರವಾಗಿದೆ.