ಮುರುಘ ಮಠದಲ್ಲಿ ಶರಣ ಬಿಬ್ಬಿ ಬಾಚಯ್ಯ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಹನ್ನೆರಡನೆಯ ಶತಮಾನದ ಶರಣರೆಲ್ಲರೂ ತತ್ವನಿಷ್ಠೆಯ ಕಟಿಬದ್ದ ಕಾಯಕದವರಾಗಿದ್ದರು. ಅವರು ಯಾವುದಾದರೊಂದು ಸತ್ಯವನ್ನು ನಂಬಿದರೆ ಅದನ್ನು ಮಾಡಿ ಪೂರೈಸುವುದು ಅವರ ಧ್ಯೇಯವಾಗಿತ್ತು.

ಅದರಂತೆ ಹಸಿದವರಿಗೆ ಅನ್ನ ನೀಡುವಂತಹ ಮಾದರಿ ಕೆಲಸವನ್ನು ಕಂತಿ ಭಿಕ್ಷೆಯ ಮೂಲಕ ಬೇಡಿ ತಂದು ಹಸಿವನ್ನು ನೀಗಿಸುವ ಉದಾತ್ತ ತತ್ವವನ್ನು 12ನೇ ಶತಮಾನದಲ್ಲಿ ಬಿಬ್ಬಿಬಾಚಯ್ಯ ಶರಣರು ಮಾಡಿ, ದಾಸೋಹ ತತ್ವದ ಮೌಲ್ಯವನ್ನು ನೀಡಿ ಹೋಗಿದ್ದಾರೆ ಎಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ
ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತೃವಿನ ಲೀಲಾ ವಿಶ್ರಾಂತಿ ಸ್ಥಾನದ ಆವರಣದಲ್ಲಿ ಶಿವಶರಣರಾದ ಬಿಬ್ಬಿ ಬಾಚಯ್ಯನವರ ಜಯಂತಿಯ ಸಾನಿಧ್ಯವಹಿಸಿ ಅವರ ಜೀವನ ಬಹುಮುಖ ವ್ಯಕ್ತಿತ್ವದ್ದಾಗಿದ್ದು. ಹಸಿವು ನೀಗಿಸುವುದರೊಂದಿಗೆ ಶಿವಾನುಭವ ಗೋಷ್ಠಿಗಳ ಮೂಲಕ ಅನುಭಾವ ಹಂಚುವ, ಹಾಸ್ಯ ಗೋಷ್ಠಿಗಳನ್ನು ನಡೆಸುತ್ತಾ ನಗಿಸುವ ಕಾಯಕವನ್ನು ಮಾಡುತ್ತಿದ್ದರು. ಇದರಿಂದ ಅವರು ಶರಣ ಗಣದಲ್ಲಿ ವಿಶಿಷ್ಟ ಎನ್ನಲಿಕ್ಕೆ ಸಾಧ್ಯ ಎನ್ನುವುದು ಅವರ ನಡೆಯಿಂದ ಗೊತ್ತಾಗುತ್ತದೆ ಎಂದು ನುಡಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಗುರುಮಠಕಲ್ಲನ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಬಿಬ್ಬಿಬಾಚಯ್ಯ ಶರಣರು ಪವಾಡ ಮಾಡದಿದ್ದರೂ ಆ ಕಾಲಕ್ಕೆ ಅಂದಿನ ಜನತೆ ಅವನ್ನು ಪವಾಡ ಎಂದೇ ನಂಬಿದ್ದರು. ಕಾರಣ ಶರಣರು ಮಾಡುತ್ತಿದ್ದದ್ದು ಸತ್ಯ, ಶುದ್ಧ ಕಾಯಕವಾಗಿದ್ದರಿಂದ ಅವರು ಮಾಡಿದ್ದೆಲ್ಲವೂ ಸಹ ಪರಿಣಾಮ ಮತ್ತು ಪ್ರಭಾವ ಬೀರುವಂತಹ ಕೆಲಸಗಳಾದಗಿದ್ದರಿಂದ ಅವು ಪವಾಡ ಸದೃಶ ಎಂದೇ ಬಿಂಬಿತವಾಗುತ್ತಿದ್ದವು.

ಕರ್ನಾಟಕದಲ್ಲಿ ಕಾಯಕ ಮತ್ತು ದಾಸೋಹ ಸಂಸ್ಕೃತಿ 12ನೇ ಶತಮಾನದ ಅಮೂಲ್ಯ ಕೊಡುಗೆಗಳು. ಆ ಸಂಸ್ಕೃತಿ ನಮಗೆ ಅದು ಸರ್ಕಾರ ಮಧ್ಯಾಹ್ನದ ಬಿಸಿಯೂಟದ ದಾಸೋಹ ಆಗಿರಬಹುದು, ಖಾಸಗಿ ಸಂಘ-ಸಂಸ್ಥೆಗಳಾಗಿರಬಹುದು ,ಮಠ, ಆಶ್ರಮಗಳಲ್ಲಿ ಆಗಿರಬಹುದು ದಾಸೋಹ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಅದು ಇನ್ನೂ ದೇದಿಪ್ಯಮಾನವಾಗಿ ಬೆಳಗಬೇಕೆಂದು ನುಡಿದ ಅವರು ಬಿಬ್ಬಿಬಾಚಯ್ಯ ಶರಣರು ಕಂತಿ ಭಿಕ್ಷೆಯನ್ನು ಸ್ವತಃ ಬಂಡಿಯಲ್ಲಿ ಪಾತ್ರೆಗಳನ್ನಿಟ್ಟುಕೊಂಡು ಅವರೇ ಎಳೆದುಕೊಂಡು ಹೋಗುವ ಮಾನವೀಯ ಅಂತಃಕರಣದವರು. ಯಾವುದೇ ಪ್ರಾಣಿಯನ್ನ ಅದಕ್ಕೆ ಬಳಸದ ಅಹಿಂಸಾವಾದಿ ತತ್ವ ಅವರಲ್ಲಿತ್ತು ಎಂದು ಬಣ್ಣಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಶಿರಸಂಗಿ ಬಸವ ಮಹಾಂತ ಸ್ವಾಮಿಗಳವರು ಮಾತನಾಡಿ, ಬುದ್ಧ ರಾಜ್ಯಭಾರ ತ್ಯಾಗ ಮಾಡಿದ ನಂತರ ಹಸಿವಿಗಾಗಿ ಭಿಕ್ಷೆ ಬೇಡಿದ ವಿಷಯ ಬರುತ್ತದೆ. ಕಾರಣ ಅನಿವಾರ್ಯ ಮತ್ತು ನಿರಹಂಕಾರ ನಿರಸನ ಭಾವದಿಂದ ಎಂದೇ ಹೇಳಬಹುದಾಗಿದೆ. ಹಾಗೆಯೇ ಬಸವಣ್ಣನವರು ಯಾತಕ್ಕಾಗಿ ದೊಡ್ಡವರು ಎಂದರೆ ಕಲ್ಯಾಣದಲ್ಲಿ ಬಂದವರ ಓಣಿ ಅಂತ ಇತ್ತಂತೆ. ಅಲ್ಲಿ ಬಂದವರಿಗೆ ದಾಸೋಹ ಮಾಡಿಸುವುದೇ ಬಸವಣ್ಣನವರ ಪ್ರಿಯ ಮತ್ತು ಅದು ಅವರಿಗೆ ಅಂತಃಕರಣದ ಭಾವದ ಕೆಲಸವಾಗಿತ್ತು. ಅದರಂತೆ ಕಂತಿ ಭಿಕ್ಷೆ ಮಾಡಿಕೊಂಡು ತಂದು ಶಿವಭಕ್ತ ಗಣಂಗಳಿಗೆ ಆರೋಹಣ ಮಾಡುವ ಸಮರ್ಪಣಾ ಭಾವ ಬಿಬ್ಬಿಬಾಚಯ್ಯ ಶರಣರಲ್ಲಿತ್ತು. ಈ ತತ್ವ ಸಾರ್ವತ್ರಿಕವಾದದ್ದು ಎಂದು ದಾಸೋಹದ ಮಹತ್ವವನ್ನು ತಿಳಿಸಿದರು.

ಸಮ್ಮುಖ ವಹಿಸಿದ್ದ ಸಾದರಹಳ್ಳಿಯ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ, ಬಿಬ್ಬಿಬಾಚಯ್ಯನವರು ತನ್ನ ಕಾಯಕವನ್ನು ಎದೆಯುಬ್ಬಿಸಿ ಬಿಬ್ಬಿರಿದು ಮಾಡುತ್ತಿದಿದ್ದಕ್ಕೆ ಅವರಿಗೆ ಬಿಬ್ಬಿಬಾಚಯ್ಯ ಎನ್ನುವ ಹೆಸರು ಬಂತು ಎಂಬ ಉಲ್ಲೇಖವನ್ನು ನೀಡಿದರು.

ಸಮಾರಂಭದಲ್ಲಿ ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದ ಉಸ್ತುವಾರಿ ತಿಪ್ಪೆರುದ್ರ ಸ್ವಾಮಿಗಳು ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಪ್ರಾಚಾರ್ಯ ಎಸ್. ವಿ. ರವಿಶಂಕರ್, ನಿವೃತ್ತ ಪ್ರಾಚಾರ್ಯ ಜ್ಞಾನಮೂರ್ತಿ, ಡಾ. ನವೀನ್ ಮಸ್ಕಲ್ ಎಸ್.ಜೆ.ಎಂ. ಬ್ಯಾಂಕಿನ ರಾಜಶೇಖರ್, ಪ್ರಾಧ್ಯಾಪಕಿ ಪ್ರತಿಮಾ.ಜೆ. ಕಾರ್ಯಕ್ರಮ ನಿರ್ವಹಿಸಿದ ಎಸ್ ಜೆ ಎಮ್ ಐಟಿಐ ತರಬೇತಿ ಕೇಂದ್ರದ ಕೇಂದ್ರದ ವೈ.ಎ. ಯುವರಾಜ್, ಎಸ್. ಕೊಟ್ರೇಶ್, ಎಂ. ಎಲ್. ರಾಘವೇಂದ್ರ, ಮಾರುತಿ ಮತ್ತು ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಶರಣರಾದ ಬಿಬ್ಬಿಬಾಚಯ್ಯನವರ ಆದರ್ಶ ಮೌಲ್ಯವೆಂದರೆ ಕಂತಿ ಭಿಕ್ಷೆ ಮಾಡಿ ದಾಸೋಹ ನೆರವೇರಿಸುತ್ತಿದ್ದರು. ಆ ಪದ್ಧತಿ ಕೆಲ ಕಡೆ ಜಾರಿಯಲ್ಲಿರಬಹುದು. ಇದರ ಅನುಸರಣೆ ಎಂಬಂತೆ ಈ ಸಂದರ್ಭದಲ್ಲಿ ಕೆಲ ಭಕ್ತರು, ಜೈ ಮುರುಘೇಶನ ಭಕ್ತ ಬಳಗ, ಜಮುರಾ ಮುದ್ರಣಾಲಯ ಸಿಬ್ಬಂದಿ ಸೇರಿದಂತೆ ಇತರ ಸ್ನೇಹಿತರೆಲ್ಲರು ನಾಲ್ಕಾರು ಬಗೆಯ ಉಪಹಾರ, ತಂಪು ಪಾನೀಯ ಮಾಡಿಸಿ ತಂದಿದ್ದರು. ಉಪ್ಪಿಟ್ಟು, ಅವಲಕ್ಕಿ, ಮೊಳಕೆ ಕಾಳು-ನರ್ಗೀಸ್- ಮಂಡಕ್ಕಿ, ಮೊಸರನ್ನ, ಕಡಲೆಕಾಳು ಉಸಳಿ, ಬೆಲ್ಲದ ಪಾನಕ ಸೇರಿದಂತೆ ಇತರೆ ಪದಾರ್ಥವನ್ನ ಸಮಾರಂಭದ ನಂತರ ಸೇರಿದ ನೂರಾರು ಭಕ್ತರು, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಲಾಗಿತ್ತು.

ಸಮಾರಂಭಕ್ಕೆ ಶ್ರೀಮಠದ ವಿದ್ಯಾರ್ಥಿಗಳು ವಚನದ ಮೂಲಕ ಭಜನೆ ಹಾಡಿದರು. ಜಮುರಾ ಸಂಗೀತ ಕಲಾವಿದ ಉಮೇಶ್ ಪತ್ತಾರ್ ಬಿಬ್ಬಿಬಾಚಯ್ಯನವರ ವಚನಗಳನ್ನು ಹಾಡಿದರು.

ಐಟಿಐ ಕಾಲೇಜಿನ ಎಂ. ವಿಶ್ವನಾಥ್ ಸ್ವಾಗತಿಸಿದರೆ, ಎಸ್. ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವನಜಾಕ್ಷಿ ಜಗದೀಶ್ ಶರಣು ಸಮರ್ಪಣೆ ಮಾಡಿದರು.

ಸುಂದರವಾದ ಆಹ್ವಾನ ಪತ್ರಿಕೆ ಇತರೆ ವಿನ್ಯಾಸ ಮಾಡುತ್ತಿರುವ ಎಸ್ ಜೆ ಎಂ ಮುದ್ರಣಾಲಯದ ಬಿ. ಲೋಕೇಶ್ ಹಾಗೂ ಹೆಚ್. ಎಸ್. ಕೊಟ್ರೇಶ್ ಅವರನ್ನು ಈ ಸಂದರ್ಭದಲ್ಲಿ ಶ್ರೀಗಳವರು ಸನ್ಮಾನಿಸಿ ಗೌರವಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *