ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಬೀದರ ಜಿಲ್ಲೆ, ಭಾಲ್ಕಿ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರ ಸ್ತಬ್ಧಚಿತ್ರ ಮಾದರಿ ಆಯ್ಕೆಯಾಗಿದೆ.
ಬೀದರ ಜಿಲ್ಲಾ ಪಂಚಾಯತ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಈ ಸ್ತಬ್ಧಚಿತ್ರ ನಿರ್ಮಿಸಲಾಗಿದೆ.
ಸ್ತಬ್ಧಚಿತ್ರದಲ್ಲಿ ಮೊದಲಿಗೆ ಪಟ್ಟದೇವರು ಆಸೀನರಾಗಿರುವ ಭಾವಚಿತ್ರ, ಹಿಂದುಗಡೆ ಹಿರೇಮಠ ಸಂಸ್ಥಾನ ಭಾಲ್ಕಿ ಚಿತ್ರವಿದೆ. ನಂತರ ಪಟ್ಟದ್ದೇವರು ಕೋಲು ಹಿಡಿದು ನಿಂತಿರುವ ಚಿತ್ರ, ಕೊನೆಯಲ್ಲಿ ಸಂಗಮ ಪಾಠಶಾಲೆಯ ಚಿತ್ರವಿದೆ.
ಗಡಿ ಭಾಗದಲ್ಲಿ ಡಾ.ಚನ್ನಬಸವ ಪಟ್ಟದೇವರು 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆಸಿದವರು. ಅವರು ಬಡವರು, ನಿರ್ಗತಿಕರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಅವರ ಸ್ಥಬ್ಧ ಚಿತ್ರ ಮೈಸೂರು ಜಂಬೂಸವಾರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಮಗೆ ಹೆಮ್ಮೆತರಿಸಿದೆ.
ಚಂದ್ರಕಾಂತ ನಿರ್ಮಳೆ ಅವರಿಂದ ಲಿಂಗೈಕ್ಯ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರ ಪರಿಚಯ
ಕನ್ನಡದ ಮಹಾನ್ ಸಂತ ಶತಾಯುಷಿ ಲಿಂಗೈಕ್ಯ ಡಾ.ಮ.ಘ.ಚ. ಚನ್ನಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿಯ ಪರಮ ಪೂಜ್ಯರು. ನಿಜಾಮಶಾಹಿ ಆಡಳಿತದಲ್ಲಿ ಉರ್ದು ಭಾಷೆಗೆ ಮೊದಲ ಆದ್ಯತೆ, ಕನ್ನಡ ಭಾಷೆ ಬಯಲ ಬಿರುಗಾಳಿಯಲ್ಲಿಟ್ಟ ದೀಪದಂಥ ಸ್ಥಿತಿ. ಕಲ್ಪನೆ ಮಾಡಿದ್ರೆ ಮೈ ರೋಮಾಂಚನವಾಗುತ್ತೆ.
ಅಂದಿನ ಆಡಳಿತ ವ್ಯವಸ್ಥೆಗೆ ಎದೆಮೆಟ್ಟು ಹೊರಗಡೆ ಉರ್ದು ನಾಮಫಲಕ ಹಾಕಿ, ಒಳಗಡೆ ಕನ್ನಡದ ನಂದಾದೀಪ ಬೆಳಗಿಸಿದ ಮಹಾಸಂತ.
ಮುಷ್ಠಿಫಂಡ ಅಂದ್ರೆ ಭಕ್ತರ ಮನೆಗಳಲ್ಲಿ ಜೋಳಿಗೆ ನೇತುಹಾಕಿ, ಅಂದು ತಾಯಂದಿರು ನಸುಕಿನ ಜಾವ ಜೋಳ, ರಾಗಿ, ಗೋಧಿ ಬೀಸುವ ಕಲ್ಲಿನ ಸಹಾಯದಿಂದ ಬೀಸುವಾಗ, ಒಂದು ಮುಷ್ಠಿ ಕಾಳನ್ನು ಜೋಳಿಗೆಯಲ್ಲಿ ಹಾಕಿ ಗುರುನಾಮ ಸ್ಮರಣೆ ಮಾಡುತ್ತ ಬೀಸುತಿದ್ದರು. ಪೂಜ್ಯರು ವಾರಕೊಮ್ಮೆ ಭಕ್ತರ ಮನೆಯ ಜೋಳಿಗೆಯಲ್ಲಿದ್ದ ದವಸಧಾನ್ಯಗಳನ್ನು ಶ್ರೀಮಠಕ್ಕೆ ಕುದುರೆ ಮೇಲೆ ಹೊತ್ತುಕೊಂಡು ಬಂದು, ಮಠದಲ್ಲಿನ ದೀನರ, ದಲಿತರ, ಅಲ್ಪ ಸಂಖ್ಯಾತರ, ಬಡವರ ಮಕ್ಕಳಿಗೆ ಗಂಜಿ ಕುಡಿಸಿ ಕನ್ನಡ ಕಲಿಸಿದ ಪುಣ್ಯಾತ್ಮರಿವರು. ಹೀಗೆ ಕನ್ನಡವನ್ನು ಜಗದಗಲ ಬಿತ್ತಿಬೆಳೆಸಿದ ಕನ್ನಡದ ಶ್ರೇಷ್ಠ ಕಣ್ಮಣಿ.
(ಚಂದ್ರಕಾಂತ ನಿರ್ಮಳೆ, ಮುಶಿ ಸರಕಾರಿ ಪ್ರೌಢ ಶಾಲೆ ಭಂಡಾರಕುಮಟ, ತಾ.ಔರಾದ (ಬಿ ).