‘ಚನ್ನಬಸವ ಪಟ್ಟದ್ದೇವರ ಸಮಾಜಪರ ಕಾರ್ಯ ಮಠಾಧೀಶರಿಗೆ ಮಾದರಿ’

ಬಸವ ಮೀಡಿಯಾ
ಬಸವ ಮೀಡಿಯಾ

ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ಮಹೋತ್ಸವ

ಭಾಲ್ಕಿ:

ಶತಾಯಷಿ ಡಾ. ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಜೀವಪರ, ಸಮಾಜಪರ ಕಾರ್ಯಗಳು ಮಠಾಧೀಶರಿಗೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಬಿಕೆಐಟಿ) ಆವರಣದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶತಾಯುಷಿ ಡಾ. ಚನ್ನಬಸವ ಪಟ್ಟದೇವರ 136ನೇ ಜಯಂತಿ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟದ್ದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ. ಪಟ್ಟದ್ದೇವರು ಮತ್ತು ಡಾ. ಭೀಮಣ್ಣ ಖಂಡ್ರೆ ಅವರು ಸೇರಿ ಕಲ್ಲು ಮಣ್ಣು ಹೊತ್ತು ಮರೆಯಾಗಿದ್ದ ಅನುಭವ ಮಂಟಪವನ್ನು ಪುನರ್ ನಿರ್ಮಾಣ ಮಾಡಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಡಿ ಮಹಿಳಾ ಶಾಲಾ-ಕಾಲೇಜು ತೆರೆದು ಎಲ್ಲ ಮಹಿಳೆಯರಿಗೂ ಶಿಕ್ಷಣ ಸಿಗುವಂತೆ ಮಾಡಿದ್ದರು. ಅನಂತರ ಶಿಕ್ಷಣ ಸಂಸ್ಥೆ ಜವಾಬ್ದಾರಿ ವಹಿಸಿದ ಡಾ. ಭೀಮಣ್ಣ ಖಂಡ್ರೆ ಅವರು 1982ರಲ್ಲಿ ಗ್ರಾಮೀಣ ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆದು ಈ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸು ನನಸು ಮಾಡಿದ್ದಾರೆ.

ಈ ಸಂಸ್ಥೆಯಡಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆಸಲ್ಲಿಸುತ್ತ ನಾಡನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶತಾಯಷಿ ಡಾ. ಚನ್ನಬಸವ ಪಟ್ಟದೇವರ ಎಲ್ಲ ಕಾರ್ಯಗಳಿಗೆ ಡಾ. ಭೀಮಣ್ಣ ಖಂಡ್ರೆ ಅವರು ಬಲಗೈಯಾಗಿ ಕೆಲಸ ಮಾಡಿದ್ದರು. ಅನುಭವ ಮಂಟಪ ಪುನರ್ ನಿರ್ಮಾಣ, ಶಿಕ್ಷಣ, ಕನ್ನಡ ಸೇವೆ ಸೇರಿ ಮುಂತಾದ ವಿಧಾಯಕ ಕಾರ್ಯಗಳಲ್ಲಿ ಈ ಇಬ್ಬರ ಕೊಡುಗೆ ದೊಡ್ಡದಿದೆ ಎಂದರು.

ಬಸವಣ್ಣನವರ ಕಾರ್ಯಗಳನ್ನು ಡಾ. ಚನ್ನಬಸವ ಪಟ್ಟದ್ದೇವರು ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಡಿ ತೆರೆದ ಎಲ್ಲ ಶಾಲಾ-ಕಾಲೇಜುಗಳಿಗೆ ಬಸವಾದಿ ಶರಣರ ಹೆಸರಿಟ್ಟು ಮಹಾತ್ಮರ ಕೊಡುಗೆ ಸಾರಿದ್ದರು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಮೇಹಕ‌ -ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು, ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಬೆಲ್ದಾಳ ಸಿದ್ದರಾಮ ಶರಣರು, ಡಾ. ರಾಜಶೇಖ‌ರ ಶಿವಾಚಾರ್ಯ, ಡಾಕುಳಗಿ ಪೂಜ್ಯರು ಮಾತನಾಡಿದರು.

ಈ ಸಂದರ್ಭ ಸಂಸದ ಸಾಗ‌ರ ಖಂಡ್ರೆ, ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ, ಬಿಕೆಐಟಿ ಪ್ರಾಚಾರ್ಯ ಡಾ. ಉದಯಕುಮಾರ ಕಲ್ಯಾಣೆ ಸೇರಿದಂತೆ ಹಲವರು ಇದ್ದರು. ಮೇಘನಾ ವಚನ ಗಾಯನ ನಡೆಸಿಕೊಟ್ಟರು. ಬಸವರಾಜ ಕಾವಡಿ ಕಾರ್ಯಕ್ರಮ ನಿರೂಪಿಸಿದರು.

ಕೃಪೆ: ವಾರ್ತಾ ಭಾರತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *