ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ
ಡಂಬಳ
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬ ಮಾತಿನಂತೆ ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ ಹುಟ್ಟಿನಿಂದ ಸಾವಿನವರೆಗೆ ಸಮಾಜಕ್ಕೆ ಬೆಳಕಾಗುವ ಕೆಲಸಗಳನ್ನು ಮಾಡಿ, ಕಾಯಕ ಜೀವಿಗಳಾಗಿ ಮಠಾಧೀಶರಾಗುವ ಮೂಲಕ ಅನ್ನ ದಾನ ಜ್ಞಾನ ದಾಸೋಹ ಸೇರಿದಂತೆ ಮಹಾತ್ಮ ಬಸವಣ್ಣನವರ ಸಂಸ್ಕಾರಗಳನ್ನು ಜೀವಿತಾವಧಿಯಲ್ಲಿ ಚಾಚು ತಪ್ಪದೇ ಪಾಲಿಸಿದವರು ಲಿಂಗೈಕ್ಯ ಪರಮಪೂಜ್ಯ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು.
ಲೋಕದಂತೆ ಬಾರರು ಲೋಕದಂತೆ ಇರರು ಲೋಕದಂತೆ ಹೋಗರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ ಉರಿಲಿಂಗದೇವಾ ನಿಮ್ಮ ಶರಣರು ಉಪಮಿಸಬಾರದ ಉಪಮಾತೀತರು ಎಂಬ ಶರಣರ ವಾಣಿಯಂತೆ ಜನಮಾನಸದಲ್ಲಿ ಅಚ್ಚಳಿಯದಂತೆ ಛಾಪು ಮೂಡಿಸಿದವರು.
ಲಿಂಗೈಕ್ಯ ಡಾ॥ ತೋಂಟದ ಸಿದ್ದಲಿಂಗ ಸ್ವಾಮಿಜಿಯವರು. ಶೂನ್ಯ ಪರಂಪರೆಯ 19ನೇ ಪೀಠಾಧಿಪತಿಗಳಾಗಿ 1974 ಜುಲೈ 29ರಂದು ಅಧಿಕಾರ ವಹಿಸಿಕೊಂಡರು. ವೈಚಾರಿಕ ಚಿಂತನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಪೂಜ್ಯರು ಕೋಮುಸೌಹಾರ್ದತೆಯ ಹರಿಕಾರರು.
ಮೂಡನಂಬಿಕೆಯ ವಿರುದ್ಧ ಹೋರಾಡುವುದರ ಜೊತೆಗೆ ಕಾಯಕದ ಮಹತ್ವವನ್ನು ತಿಳಿಸುವಲ್ಲಿ ಸ್ವತ: ತಾವೇ ಕೃಷಿ ಕಾರ್ಯದಲ್ಲಿ ತೊಡಗಿದವರು. ಸಮಾಜದ ಏಳ್ಗೆಗಾಗಿ ನಾಡು ನುಡಿಯ ಉಳುವಿಗಾಗಿ ಅವಿರತವಾಗಿ ಶ್ರಮಿಸಿದವರು. ಹತ್ತಾರು ಚಳುವಳಿಯಲ್ಲಿ ನಾಯಕತ್ವ ವಹಿಸಿಕೊಳ್ಳುವುದರ ಜೊತೆಗೆ ಅವರ ದಿಟ್ಟ ನುಡಿ ಗಟ್ಟಿ ಹೆಜ್ಜೆಯ ಮೂಲಕ ನಾಡಿಗೆ ನ್ಯಾಯ ದೊರಕಿಸಿಕೊಟ್ಟವರು. ಸಾಮಾನ್ಯರ ನೋವು ನಲಿವಿನೊಂದಿಗೆ ಸ್ಪಂದಿಸುವುದರ ಮೂಲಕ ಸಾಮಾನ್ಯರ ಸ್ವಾಮಿಜಿ ಎನಿಸಿಕೊಂಡವರು.
ಗೋಕಾಕ ಚಳುವಳಿ
ಗೋಕಾಕ ಚಳುವಳಿಯ ಜಾರಿಗಾಗಿ ಅಖಿಲ ಕನಾ೯ಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಧಾರವಾಡದಲ್ಲಿ 1982 ಎಪ್ರೀಲ್ 4ರಂದು ಹೋರಾಟವನ್ನು ಆರಂಬಿಸಿದರು. ಆದರೆ ಈ ಹೋರಾಟದ ಪೂರ್ವದಲ್ಲಿ ಅಂದರೆ 15/2/1982 ರಲ್ಲಿ ಪೂಜ್ಯರು ಗೋಕಾಕ ವರದಿ ಜಾರಿಗೆ ತರುವಂತೆ ಹೋರಾಟಕ್ಕೆ ಸಿದ್ದರಾಗಲು ಕರೆಕೊಟ್ಟವರು. ಅಲ್ಲದೆ ಕನಾ೯ಟಕದ ಸಮಗ್ರ ಅಭಿವೃದ್ಧಿಗೆ ಡಾ.ನಂಜುಂಡಪ್ಪ ವರದಿ ಒಂದೇ ದಾರಿ ಎಂದು ಪ್ರಬಲವಾಗಿ ಪ್ರತಿಪಾದಿಸಿದವರು.

ಶಿಕ್ಷಣ ಪ್ರೀತಿ
ಸಮಾಜದ ಸುಧಾರಣೆಯಾಗಬೇಕಾದರೆ ಶಿಕ್ಷಣವೆಂಬುವುದು ಬ್ರಹ್ಮಾಸ್ತ್ರ ಎಂಬುದನ್ನು ಮನಗಂಡಿದ್ದ ಶ್ರೀಗಳು ಅನೇಕ ಶಾಲೆಗಳನ್ನು ತೆರೆದರು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗದ ಹೊರತು ದೇಶದ ಸುಧಾರಣೆ ಸಾದ್ಯವಿಲ್ಲ ಎಂಬ ಗಾಂಧೀಜಿಯವರ ಮಾತಿನಂತೆ ಪೂಜ್ಯರು ಪ್ರಮುಖವಾಗಿ ರಾಜ್ಯದ ನಾನಾ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಶಿಕ್ಷಣ ಕೇವಲ ಜ್ಞಾನವನ್ನು ಮಾತ್ರವಲ್ಲದೆ ಉದ್ಯೋಗವನ್ನು ಒದಗಿಸಬೇಕೆಂಬ ಅವರ ದೂರದೃಷ್ಟಿತ್ವದ ಕಾರಣದಿಂದ 1983ರಲ್ಲಿ ಡಂಬಳದಲ್ಲಿ ತಾಂತ್ರಿಕ ಶಿಕ್ಷಣ ಕೇಂದ್ರ (ITI)ವನ್ನು ಪ್ರಾರಂಭಿಸಿವುದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉದ್ಯೋಗಸ್ಥರಾಗಲು ಮುನ್ನುಡಿ ಬರೆದವರು. ಇಂದು ಅನೇಕ ಗ್ರಾಮೀಣ ಪ್ರದೇಶದಲ್ಲಿ ತೋಂಟದಾರ್ಯ ಶಿಕ್ಷಣ ಸಂಸ್ಥೆಗಳು ಆ ಭಾಗದ ವಿದ್ಯಾಕೇಂದ್ರಗಳಾಗಿವೆ. ಅಲ್ಲದೆ ಎಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮಾ, ಸ್ನಾತಕೋತ್ತರ ಪದವಿಯವರೆಗೂ ನಿರಂತರ ಶಿಕ್ಷಣ ದಾಸೋಹದ ರೂವಾರಿಗಳಾಗಿದ್ದಾರೆ.
ಪ್ರಗತಿಪರ ಚಿಂತಕರು
ಮಠಕ್ಕೆ ಬಂದಾಗ ಅದು ಹೂವಿನ ಹಾದಿ ಆಗಿರಲಿಲ್ಲ, ಹೀನಾಯ ಸ್ಥಿತಿಯಲ್ಲಿ ಇದ್ದ ಮಠ ಹಾಗೂ ಮಠದ ಭಕ್ತರನ್ನು ವೈಚಾರಿಕ ಹಿನ್ನೆಲೆಯಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಸೆಯುವಲ್ಲಿ ಪೂಜ್ಯರು ಕೈಗೊಂಡ ಅಮವ್ಯಾಸೆಯಂದು ಗದುಗಿನಿಂದ ಡಂಬಳದವರೆಗಿನ ಪಾದಯಾತ್ರೆ. ತಾವೆ ಖುದ್ದಾಗಿ ಬಾವಿ ತೋಡುವುದರ ಮೂಲಕ ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಮಣ್ಣನ್ನು ಹೊನ್ನಾಗಿಸುವುದರ ಮೂಲಕ ಜಗದ್ಗುರುಗಳು ಕೇವಲ ಪ್ರವಚನ ಹೇಳುವವರಲ್ಲ ಸಮಾಜಸುದಾರಕರೆಂದು ಸಾಭಿತುಪಡಿಸಿದರು. ದಲಿತರು ರೈತರಿಗಾಗಿ ಭೂದಾನ ಮಾಡಿದರು. ತಾಂಡಾದ ಲಂಬಾಣಿ ಜನರ ಸುಧಾರಣೆಗೆ ಶ್ರಮಿಸಿದರು. ಹೀಗೆ ಅವರ ವಿಚಾರ ಕೈಗೊಂಡ ಕಾರ್ಯ ಸ್ವಾಮಿತ್ವಕ್ಕೆ ಹೊಸ ಆಯಾಮವನ್ನು ತೋರಿದವರು.
ಶಿವಾನುಭವ
ಭಕ್ತರನ್ನು ಒಗ್ಗೂಡಿಸಿ ಪ್ರಗತಿಪರ ಚಿಂತನೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾಡಿನ ಅನೇಕ ಕಲಾವಿದರನ್ನು ಸಾಹಿತಿಗಳು ಪತ್ರಕರ್ತರು ರಾಜಕಾರಣಿಗಳು ಹಾಗೂ ಪ್ರತಿಬಾವಂತರನ್ನು ಗುರುತಿಸಿ ಸನ್ಮಾಯಿಸಿ ಅನೇಕ ಸಂತ ಶರಣರ ದಾಶ೯ನಿಕ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಿದ್ದು, ಶಿವಾನುಭವ ಕಾರ್ಯಕ್ರಮ ಗಳು ದಾಖಲೆಯನ್ನು ನಿಮಿ೯ಸುವುದರ ಮೂಲಕ ಸಮಾಜದಲ್ಲಿ ಸೌಹಾರ್ದತೆಯನ್ನು ಮರೆಯುವಲ್ಲಿ ಕಾರಣಿಭೂತರಾದವರು.

ಪುಸ್ತಕ ಪ್ರೇಮಿ
ಒಂದು ಪುಸ್ತಕ ನೂರು ಸ್ನೇಹಿತರ ಸಮ ಎಂಬಂತೆ ಪೂಜ್ಯರಿಗೆ ಪುಸ್ತಕಗಳೆಂದರೆ ಅಧಿಕ ಪ್ರೀತಿ, ಒಂದು ವಿಶ್ವವಿದ್ಯಾನಿಲಯಗಳು ಪ್ರಕಟಿಸಲು ಸಾದ್ಯವಾಗದಷ್ಟು ಪುಸ್ತಕಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಮೂಲಕ ಪ್ರಕಟಿಸಿದವರು.
ಪರಿಸರ ಕಾಳಜಿ
ಉತ್ತರ ಕನಾ೯ಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಉಳುವಿಗಾಗಿ ಅವಿರತವಾಗಿ ಶ್ರಮಿಸಿದವರು. ಪರಿಸರವಾದಿಗಳಾದ ಮೇದಾ ಪಾಟ್ಕರ್ ಅವರೊಂದಿಗೆ ರಾಜ್ಯದ ಅನೇಕ ಪರಿಸರವಾದಿಗಳು ರಾಜಕಾರಣಿಗಳು ಪ್ರಗತಿಪರ ಚಿಂತಕರು ಹಾಗೂ ಸ್ಥಳಿಯ ಜನರನ್ನು ಒಗ್ಗೂಡಿಸಿ ಪೂಜ್ಯರು ನಡೆಸಿದ ಹೋರಾಟಕ್ಕೆ ಅಂತರರಾಷ್ಟ್ರೀಯ ಕಂಪನಿ ಬಲ್ಡೊಟಾ, ಪೊಸ್ಕೊ ಕಂಪನಿಗಳಿಗೆ ಸಿಂಹಸ್ವಪ್ನವಾಗಿ ಕೊನೆಗೂ ಹೋರಾಟದ ತೀವ್ರತೆಗೆ ಸರಕಾರ ಮಣಿದು ಕಂಪನಿಯನ್ನು ಹಿಮ್ಮೆಟ್ಟಿಸಲು ಕಾರಣರಾದವರು. ಕಪ್ಪತ್ತಗಿರಿಯನ್ನು ಸಂರಕ್ಷಿತ ಪ್ರದೇಶವಾಗಿಸಿ ಪರಿಸರವನ್ನು ಉಳಿಸಿದವರು.
ಜಾತ್ರೆ
ಪೂಜ್ಯರು ಪೀಠವನ್ನು ಅಲಂಕರಿಸಿದ ನಂತರ ಅಡ್ಡಪಲ್ಲಕ್ಕಿಯನ್ನು ಏರದೆ ತೇರಿನ ಗಾಲಿಯ ಅಡಿಯಲ್ಲಿ ಪ್ರಸಾದ ಸ್ವರೂಪ ಅನ್ನವನ್ನು ಇಡವುದನ್ನು ತಿರಸ್ಕರಿಸುವುದರ ಮೂಲಕ ಮೌಡ್ಯತೆಯ ವಿರುದ್ಧ ಜನರಿಗೆ ತಿಳುವಳಿಕೆಯನ್ನು ಮೂಡಿಸುವುದರ ಮೂಲಕ ಜಾತ್ರೆಯಲ್ಲಿ ರುಚಿಕರ ವಿಭಿನ್ನ ಪ್ರಸಾದಗಳನ್ನು ತಯಾರಿಸಿ ಭಕ್ತರಿಗೆ ಉಣಬಡಿಸುವುದರ ಮೂಲಕ ಅನ್ನದ ಮಹತ್ವವನ್ನು ತಿಳಿಸಿದವರು. ಬಸವಣ್ಣ ಆದಿಯಾಗಿ ಅನೇಕ ಶರಣರ ಅನುಭಾವವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅವರ ತತ್ವ ಪ್ರಚಾರದ ಮೂಲಕ ಬಸವದಳ, ಬಸವಕೇಂದ್ರಗಳ ಸ್ಥಾಪನೆಗೆ ರೂವಾರಿಗಳಾಗಿ ವಿಶ್ವ ಮಾನವತಾವಾದಿ ಬಸವಣ್ಣನವರ ಕಟ್ಟಾ ಅನುಯಾಯಿಗಳಾದವರು.
ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಎಂದೆನಿಸುವುದರ ಮೂಲಕ ಎಲ್ಲಾ ಜನಾಂಗದವರಿಗೆ ಶ್ರೀ ಮಠದಲ್ಲಿ ಪ್ರವೇಶ ನೀಡುವುದರ ಮೂಲಕ ಭಾವಕ್ಯತೆಯನ್ನು ಮೆರೆದವರು. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂದು ತಿಳಿಸುವುದರ ಮೂಲಕ ಅನ್ನದಾಸೋಹ ಜ್ಞಾನದಾಸೋಹ ಪುಸ್ತಕ ದಾಸೋಹಗಳ ಮೂಲಕ ತ್ರಿವಿಧ ದಾಸೋಹಿಗಳು ಎನಿಸಿಕೊಂಡವರು. ರಾಷ್ಟ್ರೀಯ ಕೋಮು ಸೌಹಾರ್ದತೆಯ ಪ್ರಶಸ್ತಿ ಪುರಸ್ಕ್ರತರು, ಸಾಮಾನ್ಯರ ಸ್ವಾಮಿಗಳಾಗಿ ಕನ್ನಡ ಜಗದ್ಗುರುಗಳಾಗಿ ಇಂದಿಗೂ ಜನಮಾನಸದಲ್ಲಿ ಉಳಿದ ಕಾರುಣ್ಯ ಮೂತಿ೯ಗಳು. ವಾತ್ಸಲ್ಯ ಮೂರ್ತಿ ಮಾತೃಹೃದಯಿಗಳಾದ ಪೂಜ್ಯರ ಅಗಲುವಿಕೆಯು ಇಂದಿಗೂ ಮರೆಯಲಾರದ ಕಹಿಯಾಗಿದೆ. ಅವರ ಮಾರ್ಗದರ್ಶನ ನಡೆದು ಬಂದ ಹಾದಿ ಸದಾ ಸ್ಮರಣೀಯ.
ದಿನಾಂಕ 21/2/2025ರಂದು ಪೂಜ್ಯರ ಜನ್ಮದಿನದ ನಿಮಿತ್ಯ ಜರಗುವ 76 ನೇ ಭಾವೈಕ್ಯತಾ ದಿನವನ್ನು ಆಚರಿಸುವುದರ ಮೂಲಕ ಪೂಜ್ಯ ಸ್ವಾಮಿಜಿಯವರಿಗೆ ಅನಂತ ನಮನಗಳನ್ನು ಸಮಪಿ೯ಸೋಣ. ಶರಣರನ್ನು ಮರಣದಲ್ಲಿ ಕಾಣು ಎಂಬಂತೆ ಶರಣರಿಗೆ ಮರಣವೆ ಮಹಾನವಮಿ ಎಂಬಂತೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬನ್ನಿ ಹಬ್ಬದಂದು ದೇಹ ತ್ಯಜಿಸಿದರು, ಆದರೆ ಶ್ರೀಗಳ ದೇಹಕ್ಕೆ ಸಾವು ಬಂದಿರಬಹುದು ಅವರ ಆಚಾರ ವಿಚಾರಕ್ಕಲ್ಲ, ಈಗಲೂ ಅವರು ಸೂರ್ಯ ಚಂದ್ರರಂತೆ ಅವರ ವಿಚಾರಗಳು ಜೀವಂತವಾಗಿವೆ.
ಶ್ರೀಗಳ ಮರೆಯಲಾಗದ ಮಾತುಗಳು
ಮಠಗಳು, ಸ್ವಾಮೀಜಿಗಳೆಂದರೆ ಬರಿ ಪೂಜೆ ಪುರಸ್ಕಾರಗಳಿಗೆ ಸೀಮಿತವಾಗಬಾರದು ಎನ್ನುತ್ತಿದ್ದ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಮನುಷ್ಯ ಎಂಬುದು ಒಂದೆ ಜಾತಿ, ಜಾತಿ ಹೋಗಲಾಡಿಸಲು ಮಠಗಳು ಸ್ವಾಮೀಜಿಗಳು ಶ್ರಮಿಸಬೇಕು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಸ್ವಾಮೀಜಿಗಳ ಕರ್ತವ್ಯ ಎನ್ನುತ್ತಿದ್ದರು.
ಮೌಡ್ಯ ಕಂದಾಚಾರಗಳು ಸಾಮಾಜಿಕ ಕಂಟಕವಾಗಿ ನೀರಲ್ಲಿ ಮುಳುಗುವ ಹಡಗಿನಂತೆ ಎನ್ನುತ್ತಿದ್ದ ಶ್ರೀಗಳು ಮೌಡ್ಯ ಕಂದಾಚಾರಗಳು ಸಮಾಜದಿಂದ ದೂರ ಹೋದಾಗ ಸುರಕ್ಷಿತ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎನ್ನುತ್ತಾರೆ.
ಜಾತಿ ಧರ್ಮದ ಹೆಸರಿನಲ್ಲಿ ಅಡ್ಡಗೊಡೆ ಕಟ್ಟುವವರು ಸ್ವಾಮಿಜಿಗಳಲ್ಲ ಎನ್ನುತ್ತಿದ್ದ ಶ್ರೀಗಳು. ಜಾತಿ ಪದ್ದತಿ ದೇಶದ ಅಭಿವೃದ್ಧಿಗೆ ಮಾರಕ, ಭಯೋತ್ಪಾದನೆ ದೇಶಕ್ಕೆ ಮಾರಕವಾಗಿದ್ದು. ಮಠಗಳು ಸ್ವಾಮೀಜಿಗಳು ಇದರ ಕುರಿತು ಗಂಭೀರ ಚಿಂತನೆ ಮಾಡಿ ಶಿಕ್ಷಣವಂತ ಸುರಕ್ಷಿತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎನ್ನುತ್ತಿದ್ದರು.
ಮಠಗಳು ಸ್ವಾಮಿಗಳಾದವರು ಕೇವಲ ಬಸವಣ್ಣ ಹಾಗೂ ಲಿಂಗಾಯತ ಸಮಾಜಕ್ಕೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಬಸವಣ್ಣ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಅಕ್ಕಮಹಾದೇವಿ, ಕನಕದಾಸರು, ಮಹಮ್ಮದ ಪೈಗಂಬರರು, ಏಸು, ಬುದ್ಧ, ಮಹಾವೀರ ಅನೇಕ ಶರಣ ಶರಣೆಯರು ಎಲ್ಲ ಜಾತಿ ಧರ್ಮಿಯರು ಗೌರವಿಸಬೇಕು ಎನ್ನುತ್ತಿದ್ದರು.
ಭಾವೈಕ್ಯತೆಯನ್ನು ಉಸಿರಾಗಿಸಿಕೊಂಡೇ ಬದುಕಿದವರು , ನಮ್ಮೆಲ್ಲರ ರಕ್ತ ಒಂದೇ ,ನೋವು,ನಿಟ್ಟುಸಿರು, ಸಂತೋಷ ಒಂದೇ ಎಂದು ಹೇಳಿ ಮಾನವೀಯತೆಯೇ ಮಹಾಮಾರ್ಗ ಎಂದು ಕಲಿಸಕೊಟ್ಟು, ನಮ್ಮ ಮನದಲ್ಲಿ ಆರದಂತಹ ಅರಿವಿನ ಜ್ಯೋತಿ ಹಚ್ಚಿದ ಪೂಜ್ಯರಿಗೆ ನಮ್ಮ ಆಚರಣೆ ನಡೆ ನುಡಿ ಮೂಲಕವೇ ನಮನ ಸಲ್ಲಿಸೋಣ