ಪುಸ್ತಕ ಪರಿಚಯ: ತೋಂಟದಾರ್ಯ ಶ್ರೀಗಳ ಸಾಧನೆಗೆ, ಅನುಭವಿಸಿದ ನೋವಿಗೆ ಕನ್ನಡಿ ಹಿಡಿಯುವ ಉರಿಯ ಗದ್ದುಗೆ

ಪುಸ್ತಕ ಪರಿಚಯ: ತೋಂಟದಾರ್ಯ ಶ್ರೀಗಳ ಸಾಧನೆಗೆ, ಅನುಭವಿಸಿದ ನೋವಿಗೆ ಕನ್ನಡಿ ಹಿಡಿಯುವ ಉರಿಯ ಗದ್ದುಗೆ

ನನ್ನ ಗುರುಗಳು, ದೈವಸ್ವರೂಪಿಗಳಾದ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳ ಕುರಿತು ಬರೆದ ಕಾದಂಬರಿ ಈ ‘ಉರಿಯ ಗದ್ದುಗೆ’.

ಖ್ಯಾತ ಸಾಹಿತಿಗಳು, ನಮ್ಮ ನಡುವಿನ ಬಹುದೊಡ್ಡ ಚಿಂತಕರಾದ ಬನಹಟ್ಟಿಯ ಪ್ರೊ.ಬಿ. ಆರ್. ಪೋಲೀಸ್ ಪಾಟೀಲ್ ಅವರ ಈ ಕಾದಂಬರಿ ಒಂದೇ ಓದಿಗೆ ಅಂದರೆ ನಾಲ್ಕು ತಾಸಿನಲ್ಲಿ ಮುಗಿಸಿದಾಗ ಮನಸು ಆರ್ಧ್ರವಾಯಿತು.

ಒಬ್ಬ ವ್ಯಕ್ತಿ ಇತಿಹಾಸ ನಿರ್ಮಿಸುವ ಬಗೆ ಎಂದರೆ ಇದೇ! ತೋಂಟದಾರ್ಯ ಶ್ರೀಗಳ ಅವರ ಕಾಲಾನಂತರ ನಾಲ್ವತ್ತಕ್ಕೂ ಹೆಚ್ಚು ಕೃತಿಗಳು, ವಿವಿಧ ಪ್ರಕಾರಗಳಲ್ಲಿ ಪ್ರಕಟಗೊಂಡಿವೆ, ಇನ್ನೂ ಪ್ರಕಟಗೊಳ್ಳುತ್ತಲೇ ಇವೆ. ಕರ್ನಾಟಕದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಇದೊಂದು ದಾಖಲಾರ್ಹ ಸಂಗತಿ.

ಕನ್ನಡ ನಾಡಿನ ಸಾಂಸ್ಕೃತಿಕ ಪ್ರಜ್ಞೆಯಾಗಿದ್ದ ಪೂಜ್ಯ ಅಜ್ಜಾ ಅವರು ಅನುಭವಿಸಿದ್ದು ಬರೀ ನೋವು, ಆತಂಕ. ಒಳಗಿನ ಮತ್ತು ಹೊರಗಿನ ಕೆಲವು ಅವಿವೇಕಿ, ಸ್ವಾರ್ಥ ಮನಸುಗಳ ವೈಯಕ್ತಿಕ ಅಹಮಿಕೆಯನ್ನು ಅವರು ಕ್ಷಮಿಸುತ್ತಲೇ ಬಂದರು. ಅದೇ ಅವರ ಟ್ರ್ಯಾಜಿಕ್ ಫ್ಲಾ ಆದರೆ ದೌರ್ಬಲ್ಯ ಅಲ್ಲ.

ಪ್ರತಿಯೊಬ್ಬ ಹಿರಿಯ ಚೇತನಗಳಿಗೆ ಒಂದು ಅಳಿಸಲಾಗದ ಸಕಾರಾತ್ಮಕ ದೌರ್ಬಲ್ಯವಿರುತ್ತದೆ. ಅಂತೆಯೇ ಅಜ್ಜಾ ಅವರಿಗಿದ್ದ ಅಂತಹ ದೌರ್ಬಲ್ಯವೆಂದರೆ “ಮಾತೃಹೃದಯ”, ಅವರ ತಾಯ್ತನದ ಕ್ಷಮಾ ಗುಣದಿಂದ ಪಾಪಿಗಳು ಪಾಪಿಗಳಾಗುತ್ತಲೇ ಹೋದರು. ಅವರ ಅನೇಕ ಸಾಧನೆಗಳಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿದೆಯಾದರೂ, ಅವರಿಗೆ ದಕ್ಕಬೇಕಾದ ನೆಮ್ಮದಿ ಮಾತ್ರ ಸಿಗಲೇ ಇಲ್ಲ, ಅದಕ್ಕೆ ಕಾರಣ ನಮ್ಮಂತಹ ಸೋ ಕಾಲ್ಡ್ ಸೋಗಲಾಡಿಗಳು. ಇರಲಿ, ಅದು ಏನೇ ಇರಲಿ ಅವರು ನೋವುಂಡ ನಂಜುಂಡ, ಅದಕ್ಕಾಗಿಯೇ ಕಾದಂಬರಿಕಾರರು ಅವರನ್ನು ಉರಿಯ ಗದ್ದುಗೆ ಮೇಲೆ ಪ್ರತಿಷ್ಟಾಪನೆ ಮಾಡಿದ್ದಾರೆ.

ಇಂತಹ ಸತ್ಯ ಸಂಕಷ್ಟಗಳನ್ನು ಅನುಭವಿಸಿದ್ದ ಡಾ.ಎಂ.ಎಂ.ಕಲಬುರ್ಗಿ, ಇಲಕಲ್ಲ ಮಠದ ಮಹಾಂತಪ್ಪಗಳ ಸಾಲಿನಲ್ಲಿ ಅಜ್ಜಾ ಅವರು ನೆಲೆಗೊಂಡಿದ್ದಾರೆ.

ನಾವು ಕಂಡ, ನಮ್ಮ ಕಾಲದ ವ್ಯಕ್ತಿಗಳನ್ನು ಕಾದಂಬರಿ ಮೂಲಕ ಕಟ್ಟಿ ಕೊಡುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಕಾದಂಬರಿ ಎಂದ ಮೇಲೆ ನಾಯಕನಿರುತ್ತಾನೆ, ಖಳನಾಯಕನೂ ಇರುತ್ತಾನೆ. ಆದರೆ ಹಲವಾರು ಕಾರಣಗಳಿಂದ ಬಯೋಪಿಕ್ ಬರೆಯುವಾಗ, ಖಳನಾಯಕ ಲೇಖಕನ ಪೆನ್ನಿನಿಂದ ತಪ್ಪಿಸಿಕೊಂಡು ಬಿಡುತ್ತಾನೆ. ಪೂಜ್ಯರ ಇಡೀ ಬದುಕನ್ನು ಕಂಡವರಿಗೆ ಮಾತ್ರ ಈ ಅನುಭವ ಉಂಟಾಗುತ್ತದೆ. ಆದರೆ ಅಜ್ಜಾ ಅವರನ್ನು ಹತ್ತಿರದಿಂದ ಕಾಣದವರ ದೃಷ್ಟಿಯಿಂದ ಖಳನಾಯಕ ಬಚಾವ್. ಈ ಒಂದು ಅಂಶವನ್ನು ಬದಿಗಿಟ್ಟು ಈ ಕಾದಂಬರಿ ಓದಿದಾಗ ಅದ್ಭುತ ಅನುಭವ ದಕ್ಕುತ್ತದೆ. ಪೂಜ್ಯರ ಬದುಕಿನ ಬಹುಪಾಲು ಮಹತ್ವದ ಘಟನೆಗಳನ್ನು ದಾಖಲಿಸಲು ಪ್ರೊ. ಪೋಲಿಸ್ ಪಾಟೀಲ್ ಸರ್ ಯಶ ಸಾಧಿಸಿದ್ದಾರೆ.

ಸಾಗರವನ್ನು ಅಂಗೈಯಲ್ಲಿ ಹಿಡಿದಿಡಿವುದು ಕಷ್ಟ ಎಂಬ ಸತ್ಯ ಅರಿತು, ಕಾದಂಬರಿ ಚೌಕಟ್ಟು ಉಳಿಸಿಕೊಂಡು, ಹೊಸ ತಂತ್ರದ ಮೂಲಕ ಇಡೀ ಕತೆಯನ್ನು ರಸವತ್ತಾಗಿ ನಿರೂಪಿಸಿದ್ದಾರೆ.

ಕಾವ್ಯ, ಕತೆ,ನಾಟಕ ಹಾಗೂ ಕಾದಂಬರಿ ಪ್ರಕಾರಗಳಲ್ಲಿ ಸಿದ್ಧ ಹಸ್ತರಾದ ಇವರು ಇಲ್ಲಿಯೂ ಗೆಲುವು ಸಾಧಿಸಿದ್ದಾರೆ. ಅಜ್ಜಾ
ಅವರನ್ನು ಕೊನೆಗೆ ಕರೆದುಕೊಂಡು ಹೋಗಲು ಬರುವ ‘ಕಾಲಪುರುಷ’ ಇವರ ಬದುಕನ್ನು ಅರಿಯಲು ಬಯಸುತ್ತಾನೆ. ನಾವೆಲ್ಲ ಈ ಕಾಲಪುರುಷನ ಹಾಗೆ ಕತೆಯನ್ನು ಕೇಳುತ್ತಲೇ ಹೋಗುತ್ತೇವೆ. ಹಾಗೆ ಕೇಳುವಾಗ ಅಳುತ್ತೇವೆ, ಆಗಾಗ ನಗುತ್ತೇವೆ ಆದರೆ ಕತೆ ಕೇಳುವುದನ್ನು ಮಾತ್ರ ನಿಲ್ಲಿಸಲಾಗುವುದಿಲ್ಲ.

ಅನೇಕ ಕೃತಿಗಳು ಓದಿಸಿಕೊಂಡು ಹೋಗುವುದೇ ಇಲ್ಲ. ಆದರೆ ಇಲ್ಲಿನ ಭಾಷೆ, ತಂತ್ರ ಮತ್ತು ನಿರೂಪಣಾ ಶೈಲಿ ಓದುಗರನ್ನು ಕಟ್ಟಿ ಹಾಕುತ್ತವೆ. ಕಾದಂಬರಿಯ ಅನೇಕ ಪ್ರಸಂಗಗಳು, ಮುಖ್ಯವಾಗಿ ಸಿಂದಗಿ ಪಟ್ಯಾಧ್ಯಕ್ಷರು ಹಾಗೂ ಪೂಜ್ಯರ ಸಂಬಂಧ, ಗದುಗಿನ ಮಠದ ಜಗದ್ಗುರುಗಳಾಗಿ ಬರುವ ಮೊದಲಿನ ಸಂಘರ್ಷವನ್ನು ಕಾದಂಬರಿಕಾರರು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ‘ ಅಯ್ಯೊ ನಮ್ಮ ಅಜ್ಜಾರು ಗದುಗಿನ ಮಠಕ್ಕ ಬರಾಕ ಇಷ್ಟು ತ್ರಾಸ ಪಟ್ರಾ’ ಎಂದು ಅನಿಸೋದು ಸಹಜ.

ಮಗನಿಗೆ ಇಷ್ಟವಾದ ತಿನಿಸು ತಂದ ಅವ್ವನ ತಳಮಳ ಮತ್ತು ಅಜ್ಜಾ ಅವರ ವಿರಕ್ತ ಭಾವ ನಮ್ಮ ಕರುಳು ಬಗೆಯುತ್ತದೆ. ‘ಪೂರ್ವಾಶ್ರಮದ ಸಂಬಂಧ ಕಡಿದುಕೊಳ್ಳುವುದು ಎಂದರೆ ಹಿಂಗೇನು?’ ಅನಿಸುವುದು ಸಹಜ. ಸ್ವತಃ ಮಾತೃ ಹೃದಯದ ಅಜ್ಜಾ ಅವರು ಹಿಂಗ ನಡಕೋ ಬಾರದಿತ್ತು ಅನಿಸಬಹುದಲ್ಲ.

ಲಂಬಾಣಿ ತಾಂಡಾದ ಪರಿವರ್ತನೆಗಾಗಿ ಜಗದ್ಗುರುಗಳು ಅನಿರೀಕ್ಷಿತ ನಿರ್ಣಯಗಳ ಮೂಲಕ ಬಹುದೊಡ್ಡ ಕ್ರಾಂತಿ ಪುರುಷರಾಗುತ್ತಾರೆ. ಪೀಠ, ಸಿಂಹಾಸನದ ಅಹಮಿಕೆಯ ಆಚೆಗಿನ ತಾಯಿಯ ಕರುಳು ಮಿಗಿಲೆನಿಸುತ್ತದೆ.
ಡಾ. ಕಲಬುರ್ಗಿ ಮತ್ತು ಅಜ್ಜಾ ಅವರ ಸಂಬಂಧದ ಗಾಢತೆಗೆ ಅವರ ಸಾವಿನ ರಾತ್ರಿ ಬಿದ್ದ ಭಯಾನಕ ಕನಸು ಸಾಕ್ಷಿಯಾಗಿ ನಿಲ್ಲುತ್ತದೆ. ಗುರು- ಶಿಷ್ಯ ಮತ್ತು ಶಿಷ್ಯ- ಗುರು ಎಂಬ ಸಂಕೀರ್ಣ ಸಂಬಂಧ ಇವರೀರ್ವರ ಮಧ್ಯೆ ಇತ್ತು. ವಿದ್ಯಾಗುರುಗಳು ಮತ್ತು ಧಾರ್ಮಿಕ ಗುರುಗಳಲ್ಲಿ ದೊಡ್ಡವರು ಯಾರು? ಎಂಬ ಪ್ರಶ್ನೆಗೆ ಉತ್ತರ ತುಂಬಾ ಕಷ್ಟ.

ಕನ್ನಡ ಪ್ರೇಮ, ಕೃಷಿ ಚಿಂತನೆ, ಜನಪರ ಹೋರಾಟಗಳು, ಬಸವಾದಿ ಶರಣರ ಆದರ್ಶ ಹೀಗೆ ಹತ್ತಾರು ಪ್ರಬೇಧಗಳ ಅಜ್ಜಾ ಅವರ ವ್ಯಕ್ತಿತ್ವದ ಯಶಸ್ಸು ಅನನ್ಯ, ಅನುಕರಣೆ ಆದರೂ, ಆದರೆ ? ಎಂಬ ಪ್ರಶ್ನೆ ನಮ್ಮನ್ನು ಈಗಲೂ ಕಾಡುತ್ತಲೇ ಇದೆ.

ದೀನ ದಲಿತರ, ಮಹಿಳೆ ಮಕ್ಕಳ ಒಳಿತಿಗಾಗಿ ಆಲೋಚನಾ ಲಹರಿ ಮತ್ತು ಅವರು ಕಂಡು ಕೊಂಡಿದ್ದ ನಿವಾರಣಾ ಮಾರ್ಗ ಸದಾ ಸ್ಮರಣೀಯ.

ಮನುಷ್ಯನಿಗೆ ಯೋಜನೆಗಳು, ಯೋಚನೆಗಳು ಬೆಟ್ಟದಷ್ಟಿರುತ್ತವೆ ಆದರೆ ಅವುಗಳನ್ನು ಸಾಕಾರಗೊಳಿಸಲು ಅಷ್ಟೇ ಮಾನವೀಯ ನೆಲೆ ಹೊಂದಿದ ಮನಸುಗಳೂ ಬೇಕು. ಒಂದು ಹಂತದಲ್ಲಿ ಅಂತಹ ಮನಸುಗಳು ದೂರಾದಾಗ ಅಥವಾ ಹತ್ತಿರವಿದ್ದ ಮನಸುಗಳು ಕುಬ್ಜವಾದಾಗ ಮನುಷ್ಯ ಸೋತು ಹೋಗಿ ನಿಟ್ಟುಸಿರು ಬಿಡುತ್ತಾನೆ. ಆ ನಿಟ್ಟುಸಿರಿನ ಆಂಕ್ರಂದನ ಕಾಲಪುರುಷನಿಗೆ ಮತ್ತು ನಮಗೂ ಕೇಳಿಸುತ್ತದೆ.

ಪೂಜ್ಯರ ಬಯೋಪಿಕ್ ಅಥವಾ ಕಾದಂಬರಿ ಮೇಲೆ ವಿವರಿಸಿದ ಕಾರಣಗಳಿಂದ ಹೆಚ್ಚು ಆಪ್ತವಾಗುತ್ತದೆ. ವೈಭವೀಕರಣ ಮತ್ತು ನಿಂದನೆಗಳನ್ನು ಪ್ರಜ್ಞಾಪೂರ್ವಕವಾಗಿ ತಡೆ ಹಿಡಿದದ್ದು ಇಂದಿನ ಕಾಲದ ಅಗತ್ಯವೂ ಆಗಿದೆ, ಏಕೆಂದರೆ ಒಂದು ಕೃತಿಯ ಕಾವ್ಯಾತ್ಮಕ ಗುಣ ಇತರರಿಗೆ ಪ್ರೇರಣೆ ನೀಡಬೇಕು. ಆಧುನಿಕ Poetic justice ಆಲೋಚನಾ ಮಾದರಿಯಲ್ಲಿ ನಮಗೆ ವಿಲನ್ ಗಳು ಬೇಡ. ಅವರು ಓದುಗರ ಮನಸನ್ನು ವಿಚಲಿತಗೊಳಿಸಬಹುದು ಎಂಬ ಎಚ್ಚರವನ್ನು ಪ್ರೊ. ಬಿ.ಆರ್. ಪೋಲಿಸ್ ಪಾಟಲ್ ಕಾಪಾಡಿಕೊಂಡು ಒಂದು ಗುಣಾತ್ಮಕ ಕಾದಂಬರಿಯನ್ನು ಕನ್ನಡ ಲೋಕಕ್ಕೆ ನೀಡಿದ್ದಾರೆ, ಕಾರಣರಾದ ಎಲ್ಲರನ್ನೂ ಅಭಿನಂದಿಸುವೆ.

Share This Article
Leave a comment

Leave a Reply

Your email address will not be published. Required fields are marked *