ಶಿವಾಚಾರ್ಯರ ಹೇಳಿಕೆ ಸತ್ಯಕ್ಕೆ ದೂರ, ಬಸವಣ್ಣನವರೇ ಇಷ್ಟಲಿಂಗದ ಜನಕರು: ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಶ್ರೀ ಧಡ್ಡೇಶ್ವರರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗೋರ್ಟಾ ಮಠದ ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು ಇಷ್ಟಲಿಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಶಿವಲಿಂಗ ಆರಾಧನೆ ಪುರಾತನವಾದದ್ದು. ಪೌರಾಣಿಕ ಶಿವನ ಪ್ರತೀಕವಾಗಿ ಶಿವಾಲಯಗಳಲ್ಲಿ ಸ್ಥಾವರ ಲಿಂಗದ ಸ್ಥಾಪನೆ ಮಾಡಲಾಗುತ್ತದೆ. ಭಾರತ ದೇಶದಲ್ಲಿ ಪ್ರಾಚೀನ ಶಿವಾಲಯಗಳಿವೆ. ಅವೆಲ್ಲ ಶಿವಾಲಯಗಳಲ್ಲಿ ಸ್ಥಾವರಲಿಂಗ ಸ್ಥಾಪಿಸಲಾಗಿದೆ. ಸ್ಥಾವರ ಲಿಂಗ ಪೂಜೆ ಮಾಡುವ ಪರಂಪರೆ ನಡೆದು ಬಂದಿದೆ.

ಪ್ರವಾಸದಲ್ಲಿ ಪೂಜೆಗಾಗಿ ಸ್ಥಾವರಲಿಂಗದ ಸಣ್ಣ ರೂಪವನ್ನು ಜೊತೆಗೆ ಇಟ್ಟುಕೊಂಡು ಪೂಜಿಸುವ ಪರಂಪರೆ ಇದೆ. ಶಿವಾಲಯಗಳಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಅವಕಾಶ ಇರಲಿಲ್ಲ. ಅದಕ್ಕಾಗಿ ೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ಬಹಿಷ್ಕರಿಸಿ, ವಿನೂತನವಾಗಿರತಕ್ಕಂತಹ ಇಷ್ಟಲಿಂಗ ಎಲ್ಲರ ಕರಸ್ಥಲಕ್ಕೆ ನೀಡಿದರು. ಅದಕ್ಕಾಗಿ ಬಸವಣ್ಣನವರನ್ನು ಇಷ್ಟಲಿಂಗ ಜನಕರೆಂದು ಕರೆಯುತ್ತಾರೆ.

ಬಸವಯುಗದ ಹಾಗೂ ಬಸವೋತ್ತರ ಯುಗದ  ಅನೇಕ ಶರಣರ ನೂರಾರು ವಚನಗಳಲ್ಲಿ ಇದಕ್ಕೆ ಆಧಾರವಿದೆ. ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಇಷ್ಟಲಿಂಗ ಬಸವಣ್ಣನವರಿಂದಲೇ ನಿರ್ಮಾಣವಾದದ್ದು ಎಂದು ಈ ರೀತಿ ಸ್ಪಷ್ಟಪಡಿಸಿದ್ದಾರೆ.

‘ಆದಿ ಬಸವಣ್ಣ, ಅನಾದಿ ಲಿಂಗವೆಂದೆಂಬರು ಹುಸಿ ಹುಸಿ, ಈ ನುಡಿಯ ಕೇಳಲಾಗದು, ಆದಿ ಲಿಂಗ, ಅನಾದಿ ಬಸವಣ್ಣನು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ’

ಇಂತಹ ನೂರಾರು ವಚನಗಳ ಆಧಾರ ನೀಡಬಹುದು. ೧೨ನೇ ಶತಮಾನದಿಂದ ಇತ್ತೀಚಿನವರೆಗೆ ವಚನ ಸಾಹಿತ್ಯದ ಅಧ್ಯಯನ ನಡೆಸಿದ ಸಂಶೋಧಕರು ಬಸವಣ್ಣನವರಿಂದಲೇ ಇಷ್ಟಲಿಂಗ ಆವಿಷ್ಕಾರ ಆಯಿತು ಎಂದು ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ.

ಈ ಸತ್ಯವನ್ನು ಅರಿಯದ ಡಾ.ರಾಜಶೇಖರ ಶಿವಾಚಾರ್ಯರು ಹೇಳಿರುವ ನುಡಿಗಳು ಬಸವತತ್ವಕ್ಕೆ ಅಪಚಾರ ಬಗೆಯುತ್ತವೆ. ಅದಕ್ಕಾಗಿ ಪೂಜ್ಯರು ಇನ್ನು ಮುಂದೆ ಆದರೂ ಈ ರೀತಿಯ ಹೇಳಿಕೆ ನೀಡಿ ಬಸವಭಕ್ತರ ಭಾವನೆಗೆ ಧಕ್ಕೆ ತರಬಾರದು ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment

Leave a Reply

Your email address will not be published. Required fields are marked *