ರೇವಣಸಿದ್ದರ ನಿಜ ಇತಿಹಾಸ 1-5
1) ರೇವಣಸಿದ್ಧರು: ನಾಥ ಗುರುವೋ ಅಥವಾ ವೀರಶೈವ ಆಚಾರ್ಯರೊ?
2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು
3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು
5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ
6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು
ಸಿದ್ಧರಾಮರು ಶರಣ ಚಳುವಳಿ ಸೇರಿಕೊಂಡರೂ, ಅವರ ಹಿರಿಯ ರೇವಣಸಿದ್ದರು ಪ್ರತ್ಯೇಕವಾಗಿಯೇ ಉಳಿದರು. ಹರಿಹರ, ರಾಘವಾಂಕರ ಕೃತಿಗಳಲ್ಲಿ ಅವರು ನಾಥ ಸಿದ್ಧರಾಗಿಯೇ ಚಿತ್ರಿತರಾಗಿದ್ದಾರೆ.
೧೩ನೇ ಶತಮಾನದ ನಂತರ ಮುನ್ನೂರು ವರ್ಷ ರೇವಣಸಿದ್ದರ ಮೇಲೆ ಯಾವುದೇ ಕೃತಿ ರಚನೆಯಾಗಲಿಲ್ಲ. ನಂತರ ಬಂದ ವೀರಶೈವ ಕೃತಿಗಳಲ್ಲಿ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡರು.
ವೀರಶೈವ ಮಹಾಪುರಾಣ (೧೫೩೦) ಅವರನ್ನು ಮೊದಲ ಬಾರಿಗೆ ಆಚಾರ್ಯರನ್ನಾಗಿ ಚಿತ್ರಿಸಿತು. ಗುರುರಾಜ ಚಾರಿತ್ರ, ಚತುರಾಚಾರ್ಯ ಪುರಾಣ ಕಾವ್ಯಗಳೂ ಅದೇ ಕಲ್ಪನೆಯನ್ನು ಮುಂದುವರೆಸಿದವು.
ರೇವಣಸಿದ್ದೇಶ್ವರ ಕಾವ್ಯ, ರೇವಣಸಿದ್ದೇಶ್ವರ ಪುರಾಣಗಳಂತಹ ವೀರಶೈವ ಕೃತಿಗಳಲ್ಲಿ ಅವರೇ ಕಥಾನಾಯಕರಾದರು. ನಿಧಾನವಾಗಿ ರೇವಣಸಿದ್ಧರು ರೇವಣಾಚಾರ್ಯ, ರೇಣುಕಾಚಾರ್ಯರಾಗಿ ಬದಲಾದರು.
ಕೊಲ್ಲಿಪಾಕೆಯ ಸೋಮೇಶ್ವರ ಲಿಂಗದಿಂದ ‘ಉದ್ಬವಿಸಿ’ ಪಂಚಾಚಾರ್ಯರಾದರು. ಕೆಳದಿ ಸಾಮ್ರಾಜ್ಯದ ಬಾಳೇಹಳ್ಳಿಯ ರಂಭಾಪುರಿ ಪೀಠದ ಸಂಸ್ಥಾಪಕರಾಗಿಯೂ ಬಿಂಬಿತರಾದರು.
ಶರಣರಿಂದ ದೂರವಿದ್ದ ರೇವಣಸಿದ್ಧರಿಗೆ ಇಷ್ಟಲಿಂಗ ಹಿಡಿಸಲಾಯಿತು. ಷಟ್ಸ್ಥಲದ ಮತ್ತೊಂದು ರೂಪವಾದ ಏಕೋತ್ತರಸ್ಥಲವನ್ನು ಅವರೇ ಅಗಸ್ತ್ಯ ಮುನಿಗೆ ಬೋಧಿಸಿದರು ಎಂಬ ಪುರಾಣವೂ ಸೃಷ್ಟಿಯಾಯಿತು.
(‘ಸಿದ್ದರಾಮ ಶಿವಯೋಗಿಯಾದ – ರೇವಣಸಿದ್ಧನನ್ನು ಶಿವಾಚಾರ್ಯ ಮಾಡಿದರು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)