ವಿರಕ್ತರ ವಿಭಜನೆಯಿಂದ ಹುಟ್ಟಿದ ಪಂಚ ಸಮಯಭೇದ ಮಠಗಳು

ತುಮಕೂರು ನಗರದಲ್ಲಿ ಹೊರಪೇಟೆ ಎಂಬ ಬಡಾವಣೆಯಲ್ಲಿ ‘ಸಂಪಾದನೆ ಮಠ, ತುಮಕೂರು ಸ್ಲಂ ಶಾಖೆ’ ಎಂಬ ನಾಮಫಲಕವನ್ನು ಆಗಾಗ ನಾನು ನೋಡುತ್ತಲಿದ್ದೆ.

ಈಗ್ಗೆ ಐದಾರು ತಿಂಗಳ ಹಿಂದೆ ಒಂದು ಮಧ್ಯಾಹ್ನ ನಾನು ಮತ್ತು ನನ್ನ ಆತ್ಮೀಯ ಗೆಳೆಯ- ಸಾಮಾಜಿಕ ಕಾರ್ಯಕರ್ತರಾದ Srirangachari Ramapura ಅವರು ಈ ನಾಮಫಲಕವನ್ನು ನೋಡಿ, ”ಇಲ್ಲಿ ಸಂಪಾದನೆ ಮಠ ಅಂತಾ ಹೆಸರಿದೆ. ಈ ಮಠದವರು ಅದೇನು ಅದೆಷ್ಟು ಸಂಪಾದನೆ ಮಾಡಿದ್ದಾರೋ ಏನೋಪಾ ?!” ಎಂದು ಪರಸ್ಪರ ಮಾತಾಡಿಕೊಂಡಿದ್ದೆವು. ಅಲ್ಲಿರುವ ಸಂಪಾದನೆ ಮಠ ಯಾವುದು ? ಅದರ ಮಠಾಧಿಪತಿ ಯಾರು ? ಎಂಬ ಬಗ್ಗೆ ನಮಗೆ ತಿಳಿದುಕೊಳ್ಳುವಷ್ಟು ಬಿಡುವಿರದಿದ್ದ ಕಾರಣ ಸುಮ್ಮನೇ ವಾಪಸ್ಸಾಗಿದ್ದೆವು.

ಇತ್ತೀಚೆಗೆ ನನ್ನ ಮತ್ತೋರ್ವ ಆತ್ಮೀಯ ಗೆಳೆಯ, ಇತಿಹಾಸಜ್ಞರಾದ ಡಾ.ಎ.ಓ.ನರಸಿಂಹಮೂರ್ತಿ ಅವರೊಂದಿಗೆ ಈ ಜಾಗಕ್ಕೆ ಹೋದೆ. “ಸಂಪಾದನೆ ಮಠ, ಸ್ಲಂ ಶಾಖೆ, ಹೊರಪೇಟೆ- ಬಾರ್ ಲೈನ್” ಎಂಬ ನಾಮಫಲಕ ಮಾತ್ರ ಇಲ್ಲಿದೆಯೇ ಹೊರತು ಇಲ್ಲೆಲ್ಲಿಯೂ ಸಂಪಾದನೆ ಮಠ ಎಂಬ ಹೆಸರಿನ ಯಾವುದೇ ಮಠ ಇರುವುದಿಲ್ಲ.

ಬಸವೋತ್ತರ ಕಾಲಘಟ್ಟದಲ್ಲಿ ಕಲ್ಯಾಣದ ಅಲ್ಲಮಪ್ರಭು ಪ್ರಣೀತ ಅನುಭವ ಮಂಟಪ- ಶೂನ್ಯ ಸಿಂಹಾಸನದ ಲಿಂಗಾಯತ ವಿರಕ್ತ ಮಠ ಪರಂಪರೆಯಲ್ಲಿ, ಶೂನ್ಯ ಸಂಪಾದನಾ ತತ್ವದ ಆಧಾರದಲ್ಲಿ ಸ್ಥಾಪಿತವಾದ

1) ಸಂಪಾದನಾ ಸಮಯ
2) ಮುರುಘಾ ಸಮಯ
3) ಚಿಲಾಳ ಸಮಯ
4) ಕುಮಾರ ಸಮಯ ಹಾಗೂ
5) ಕೆಂಪಿನ ಸಮಯ ಎಂಬ

ಪಂಚ ಸಮಯಭೇದ ಮಠಗಳಿವೆ. ಇವು ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕೂಡಾ ಅಸ್ತಿತ್ವದಲ್ಲಿವೆ.

14 ನೇ ಶತಮಾನದಲ್ಲಿ ಶ್ರೀ ಗೋಸಲ ಸಿದ್ದೇಶ್ವರರ ಶಿಷ್ಯನಾಗಿ ಗುಬ್ಬಿಯಲ್ಲಿ ದೇಹತ್ಯಾಗ ಮಾಡಿದ ಶ್ರೀ ಗೋಸಲ ಗುಬ್ಬಿ ಚನ್ನಬಸವೇಶ್ವರರ ಶಿಷ್ಯನಾದ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಮೂಲಿಗ ತೋಂಟದ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರು, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಎಂಬ ತಪೋ ಭೂಮಿಯಲ್ಲಿ ತಪಸ್ಸಾಧನೆ ಗೈದು, ಏಳುನೂರೊಂದು ವಿರಕ್ತರನ್ನು ಮತ್ತು ಮೂರು ಸಾವಿರ ಜನ ಚರಮೂರ್ತಿಗಳನ್ನು ಒಳಗೊಂಡು ಮೊದಲಿಗೆ ಏಳುನೂರೊಂದು ಬುಡಕಟ್ಟಿನ ಸಮಯದ ಲಿಂಗಾಯತ ವಿರಕ್ತ ಪೀಠಗಳನ್ನು ಸ್ಥಾಪಿಸುತ್ತಾರೆ.

ಇವರೆಲ್ಲರೊಡಗೂಡಿ ಕುಣಿಗಲ್ ಕಗ್ಗೆರೆ ತಪೋಭೂಮಿಯಿಂದ ಕಾಲ್ನಡಿಗೆ ಹೊರಟು ಇಡೀ ದಕ್ಷಿಣ ಭಾರತವನ್ನು ಸಂಚರಿಸುತ್ತಾ ವಸ್ತಿಮಾಡಿದೆಡೆಗಳೆಲ್ಲಿ ಎಲ್ಲಾ ಧರ್ಮೀಯ ಸ್ಥಾನಿಕ ಅನುಭಾವಿಗಳನ್ನು ಆಕರ್ಷಿಸಿ ವಿರಕ್ತ ಬುಡಕಟ್ಟಿನ ಸಮಯದ ಪೀಠಗಳನ್ನು ಸ್ಥಾಪಿಸುತ್ತಾರೆ. ಮುಂದೆ ಈ ಬುಡಕಟ್ಟಿನ ವಿರಕ್ತರು ಪುರಾಣದ ಚರಂತಿಯರು ಮತ್ತು ಶಿವಾನುಭವ ಚರಂತಿಯರೆಂಬ ಸೀಳಿಕೆಗಳಿಂದ ಸಿಡಿದುಹೋಗುತ್ತಾರೆ. ಆಗ ಸೃಷ್ಟಿಯಾದದ್ದೇ ಸಂಪಾದನಾ ಸಮಯ, ಮುರುಘಾ ಸಮಯ, ಚಿಲಾಳ ಸಮಯ, ಕುಮಾರ ಸಮಯ ಹಾಗೂ ಕೆಂಪಿನ ಸಮಯ ಎಂಬ ಪಂಚ ಸಮಯಭೇದ ವಿರಕ್ತ ಮಠಗಳು.

ವಿರಕ್ತರ ಈ ಸೀಳಿಕೆಯ ರಾಜಕಾರಣವು ಪುರಾಣದ ಚರಂತಿಯರು ವಿರಕ್ತರಾಗುವಂತಿಲ್ಲವೆಂದೂ, ಶಿವಾನುಭವ ಚರಂತಿಯರು ಮಾತ್ರ ಅಲ್ಲಮಪ್ರಭು ಪ್ರಣೀತ ಶೂನ್ಯ ಸಿಂಹಾಸನವನ್ನೇರಲು ಬಾಧ್ಯರೆಂದೂ ಹಕ್ಕು ಸ್ಥಾಪಿಸುವ ಮಟ್ಟಕ್ಕೆ ತೀವ್ರವಾಗುತ್ತದೆ.

ಭಕ್ತಿ, ಜ್ಞಾನ ಮತ್ತು ವೈರಾಗ್ಯವೇ ಶ್ರೇಷ್ಠವೆಂದು ನಂಬಿದ ಶ್ರೀ ತೋಂಟದ ಚಿಲಾಳ ಸ್ವಾಮಿಗಳು‌ ಮಾತ್ರ ಸಂಪಾದನಾ ಸಮಯದ ಮಠಗಳ ಮುಖ್ಯಸ್ಥರಾಗಿ ‘ಬಸವ ಪುರಾಣ’, ‘ಚೆನ್ನಬಸವ ಪುರಾಣ’, ‘ಪ್ರಭುಲಿಂಗಲೀಲೆ’ ಹಾಗೂ ಷಟ್ ಸ್ಥಲ ತತ್ವಸಾರವನ್ನು ಬೋಧಿಸುವುದರಲ್ಲಿ ನಿರತರಾಗುತ್ತಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ತಪೋಭೂಮಿಗೆ ಸಮೀಪದಲ್ಲಿಯೇ ಶ್ರೀ ತೋಂಟದ ಸಿದ್ಧಲಿಂಗೇಶ್ವರರು ದೇಹ ವಿಸರ್ಜಿಸಿದ ಎಡೆಯೂರು ಗ್ರಾಮವಿದೆ. ಗದುಗಿನ ಡಂಬಳದಿಂದ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಎಡೆಯೂರಿಗೆ ಬಂದು, ದೇಹ ವಿಸರ್ಜಿಸಿದ ಸಮಾಧಿ ಸ್ಥಳ ಇಂದು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನವಾಗಿ ಪ್ರಖ್ಯಾತವಾಗಿದೆ. ಬಸವಾದಿ ಪ್ರಮಥ ಶರಣರ ವಚನಗಳನ್ನು ಸಂಪಾದನೆ ಮಾಡುವ ದೊಡ್ಡ ಕೆಲಸ ಮಾಡಿದ ಶ್ರೀ ಸಿದ್ಧಲಿಂಗೇಶ್ವರರು, ಏಳುನೂರೊಂದು ಶಿವಾನುಭವ ಬುಡಕಟ್ಟಿನ ಸಮಯದ ಚರಂತಿ- ವಿರಕ್ತ ಪೀಠಗಳನ್ನು ಸ್ಥಾಪಿಸುವ ಮೂಲಕ ಶಿವಾನುಭವ ಮಂಟಪಗಳಲ್ಲಿ ಎಲ್ಲಾ ಧರ್ಮೀಯರಿಗೆ ಅನ್ನ ದಾಸೋಹ, ಜ್ಞಾನ ದಾಸೋಹ ಹಾಗೂ ಕಾಯಕ ದಾಸೋಹ ನಡೆಸಿದ ಕೀರ್ತಿ ಸಲ್ಲುತ್ತದೆ.

ತುಮಕೂರು ನಗರದಲ್ಲಿ ‘ಸಂಪಾದನಾ ಮಠ’ ಎಂಬ ಸ್ಥಳವಿದೆಯೇ ಹೊರತು ಸಂಪಾದನಾ ಮಠ ಇರುವುದಿಲ್ಲ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಶ್ರೀ ಗುರು ಕರಿಬಸವೇಶ್ವರಸ್ವಾಮಿ ವಿರಕ್ತ ಮಠವಿದೆ. ಇದರ ಸ್ಥಾಪನೆಯು ಶ್ರೀ ಗೋಸಲ ಚಿಲಾಳ ಪ್ರಭುಗಳ ಕಡೆಗೆ ಬೊಟ್ಟು ತೋರಿಸುತ್ತಿರುವುದರಿಂದ ಈ ಮಠವು ಸಂಪಾದನಾ ಮಠವೇ ಆಗಿರುತ್ತದೆ. ಅಂದಹಾಗೆ ಸಂಪಾದನಾ ಸಮಯ ಪರಂಪರೆಯ ಲಿಂಗಾಯತ ವಿರಕ್ತ ಮಠಗಳು ಮಹಾರಾಷ್ಟ್ರದ ಗಡಿಂಗ್ಲಾಜ್ ಮತ್ತು ಸೊನ್ನಲಿಗೆ, ಕರ್ನಾಟಕದ ಗೋಕಾಕ್, ಹುಕ್ಕೇರಿ, ಚಿಕ್ಕೋಡಿ ಮುಂತಾದ ಕಡೆಗಳಲ್ಲಿ ಅತ್ಯಂತ ವಿರಳವಾಗಿ ಕಂಡುಬರುತ್ತವೆ.

Share This Article
1 Comment

Leave a Reply

Your email address will not be published. Required fields are marked *