‘ಸಾಂಸ್ಕೃತಿಕ ನಾಯಕ ಬಸವಣ್ಣ ವಾರ್ಷಿಕೋತ್ಸವ ಮರೆತ ಕನ್ನಡಿಗರು’

“ಸಾಂಸ್ಕೃತಿಕ ನಾಯಕ ವರ್ಷದ ಆಚರಣೆ ಇಡೀ ಕರ್ನಾಟಕದಲ್ಲಿ ಎಲ್ಲಿಯೂ ನಡೆಯುತ್ತಿಲ್ಲ.”

ಸಾಣೇಹಳ್ಳಿ

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ” ಎಂದು ಸರಕಾರ ಘೋಷಣೆ ಮಾಡಿ ಜನವರಿ 18ಕ್ಕೆ ಒಂದು ವರ್ಷವಾಯಿತು.

ಅದರ ಹಿನ್ನಲೆಯಲ್ಲಿ ಸಾಣೇಹಳ್ಳಿಯ ಎಸ್ ಎಸ್ ರಂಗಮಂದಿರದಲ್ಲಿ ವಾರ್ಷಿಕ ಸಮಾರಂಭವನ್ನು ಏರ್ಪಡಿಲಾಯಿತು. ಈ ಸಮಾರಂಭದ ಸಾನ್ನಿಧ್ಯವಹಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ ಯಾರೂ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲು ಚಿಂತನೆ ಮಾಡಿರಲಿಲ್ಲ. ಆದರೆ ಸಿದ್ಧರಾಮಯ್ಯನವರು ಆ ಕೆಲಸವನ್ನು ಮಾಡಿದರು.

ಈ ಸಂದರ್ಭದಲ್ಲಿ ಸಿದ್ಧರಾಮಯ್ಯನವರನ್ನು ಗೌರವಿಸಬೇಕಾಗಿತ್ತು, ಸರಕಾರವನ್ನು ಗೌರವಿಸಬೇಕಾಗಿತ್ತು. ಅನೇಕರಿಗೆ ನಾವು ಹೇಳಿದ್ವಿ; ಆದರೆ ಯಾರೂ ಆಸಕ್ತಿಯನ್ನು ತೋರಿಸದೇ ಇದ್ದಾಗ ನಮಗೆ ನಿರಾಸೆಯುಂಟಾಯಿತು.

ಸಾಂಸ್ಕೃತಿಕ ನಾಯಕ ಎಂದು ಘೋಷಣೆಯ ಹಿನ್ನಲೆಯಲ್ಲಿ ಅನೇಕ ಯೋಜನೆಗಳು, ಚಿಂತನೆಗಳು ಮಾಡದೇ ಇರುವುದು ನಿರಾಸೆಯುಂಟಾಯಿತು. ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದು ಖುಷಿ ಕೊಟ್ಟಿದೆ. ಆದರೆ ಬಸವಣ್ಣನವರ ತತ್ವಗಳನ್ನು ಜನಮಾನಸಕ್ಕೆ ಮುಟ್ಟಿಸುತ್ತಿದ್ದೇವೆಯೆ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕು.

ಬಸವಣ್ಣನವರು ಕಾಯಕತತ್ವ, ದಾಸೋಹ ತತ್ವ ಹಾಗೂ ಆತ್ಮಕಲ್ಯಾಣಕ್ಕಾಗಿ ಇಷ್ಟಲಿಂಗಪೂಜೆಯನ್ನು ಜಾರಿಗೆ ತಂದರು. ಸ್ತ್ರೀ ಸಮಾನತೆಯನ್ನು ಎತ್ತಿಹಿಡಿದವರು. ಸ್ತ್ರೀಯರಿಗೆ ಗೌರವ ತಂದಕೊಟ್ಟವರು. ದಲಿತ ವರ್ಗದವರಿಂದ ಅನುಭವ ಮಂಟಪದ ಶಕ್ತಿಯನ್ನು ಹೆಚ್ಚಿಸಿದರು. ಹೀಗೆ ಅಪರೂಪದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಂಥ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮರೆಯಲಿಕ್ಕೆ ಸಾಧ್ಯವಿಲ್ಲ.

ದುಡಿಮೆಗೆ ಘನತೆಯನ್ನು ತಂದುಕೊಟ್ಟು ಕಾಯಕದ ಮಹತ್ವದ ಅರಿವನ್ನುಂಟು ಮಾಡಿದರು. ಸರಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಎಷ್ಟು ಖುಷಿ ಕೊಡ್ತೋ ಆ ಸಾಂಸ್ಕೃತಿಕ ನಾಯಕ ವಿಚಾರಗಳನ್ನು ವಿದ್ಯಾರ್ಥಿ ವೃಂದಕ್ಕೆ ಮುಟ್ಟಿಸುವ ಕಾರ್ಯ ಜರೂರಾಗಬೇಕಾಗಿದೆ.

ಹೊಸದುರ್ಗದ ಶಾಂತವೀರ ಸ್ವಾಮೀಜಿ ಮಾತನಾಡಿ ಸಾಂಸ್ಕೃತಿಕ ನಾಯಕ ವರ್ಷದ ಆಚರಣೆ ಇಡೀ ಕರ್ನಾಟಕದಲ್ಲಿ ಎಲ್ಲಿಯೂ ನಡೆಯುತ್ತಿಲ್ಲ. ಅದು ಸಾಣೇಹಳ್ಳಿಯಲ್ಲಿ ಮಾತ್ರ ನಡೆಯುತ್ತಿದೆ. ವಾರ್ಷಿಕ ಸಮಾರಂಭವನ್ನು ತುಂಬಾ ಅರ್ಥಗರ್ಭಿತವಾಗಿ ಸಾಣೇಹಳ್ಳಿಯಲ್ಲಿ ಮಾತ್ರ ನಡೆಯುತ್ತಿರುವುದು ತುಂಬಾ ಸಂತೋಷ. ಪರಿಸರ ಚೆನ್ನಾಗಿದ್ದರೆ ಮನಸ್ಸು ಚೆನ್ನಾಗಿರುತ್ತದೆ. ಪಂಡಿತಾರಾಧ್ಯ ಶ್ರೀಗಳು ಜನಮಾನಸದಲ್ಲಿ ಉಳಿಯುವಂಥ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಬಸವಣ್ಣ ದೇವರು ಮತ್ತು ಭಕ್ತರ ಮಧ್ಯೆ ಇದ್ದ ದಲ್ಲಾಳಿಯನ್ನು ತೆಗೆದು ಹಾಕಿದರು. ಮಾನವ ಮತ್ತು ದೇವರು ಎನ್ನುವಂಥ ಕಂದಕವನ್ನು ದೂರ ಮಾಡಿದರು. ದಲ್ಲಾಳಿಯ ವ್ಯವಸ್ಥೆಯನ್ನು ದೂರ ಮಾಡಿದವರೇ ಬಸವಣ್ಣನವರು. ದಲ್ಲಾಳಿಯ ವ್ಯವಸ್ಥೆಯೇ ನಮ್ಮನ್ನು ಅಜ್ಞಾನಕ್ಕೆ, ಅಂಧಕಾರಕ್ಕೆ, ಶೋಷಣೆಗೆ ಒಳಪಡಿಸುತ್ತದೆ.

ಬಸವ, ಬುದ್ಧ, ಅಂಬೇಡ್ಕರ್‌ರ ತತ್ವಗಳಿಗೆ ಪೂರಕವಾಗಿ ಕೆಲವೇ ಕೆಲವು ಮಠಗಳು ಮಾಡುತ್ತಿವೆ. ಎಲ್ಲ ಜಯಂತಿಗಳು ಜಾತಿಯ ಆಧಾರದ ಮೇಲೆ ನಡೆಯುತ್ತಿರುವುದು ನೋವಿನ ಸಂಗತಿ. ಶರಣರ ಯಾವ ಉದ್ದೇಶವನ್ನಿಟ್ಟುಕೊಂಡು ಜಯಂತಿಗಳು ಪ್ರಾರಂಭವಾದವೋ ಅವುಗಳು ಈಗ ಜಾತಿ ಜಯಂತಿಗಳಾಗಿ ವಿಜೃಂಬಿಸುತ್ತಿವೆ. ಎಲ್ಲ ಕಡೆ ಜಾತಿ, ಮೌಢ್ಯ, ಮಾನವರ ಮಧ್ಯೆ ಕಂದಕಗಳು ಸೃಷ್ಟಿಯಾಗಿವೆ. ಸಂವಿಧಾನದ ಎಲ್ಲ ಆಶಯಗಳನ್ನು ಗಾಳಿಗೆ ತೂರುತ್ತಿದ್ದೇವೆ. ರಾಜಕಾರಣಿಗಳು ದೊಡ್ಡ ದೊಡ್ಡ ಸ್ವಾಮಿಗಳನ್ನಿಟ್ಟುಕೊಂಡೇ ದೊಡ್ಡ ದೊಡ್ಡ ಜಯಂತಿಗಳನ್ನು ಮಾಡುತ್ತಿದ್ದಾರೆ. ದೊಡ್ಡ ಸಮುದಾಯದ ಸ್ವಾಮಿಗಳನ್ನಿಟ್ಟುಕೊಂಡು ಜಯಂತಿ ಮಾಡುವುದಲ್ಲ. ಸಣ್ಣ ಸಮುದಾಯದ ಸ್ವಾಮಿಗಳನ್ನಿಟ್ಟುಕೊಂಡು ಜಯಂತಿ ಆಚರಿಸಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ; ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷವಾಯಿತು. ಸರಕಾರ ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದಷ್ಟೇ ಅಲ್ಲ, ಮನೆ ಮನಗಳಲ್ಲೂ ವಚನಗಳನ್ನು ತಲುಪಿಸಬೇಕು. ವಚನಗಳನ್ನು ಅರಿಯುವುದಷ್ಟೇ ಮುಖ್ಯವಲ್ಲ; ಆಚರಣೆಗೆ ತರಬೇಕು. ರಾಜಕೀಯ ನಾಯಕರು, ಸರಕಾರದ ಅಧಿಕಾರಿಗಳು, ಮಠಾಧೀಶರು ಶರಣರ ತತ್ವಗಳನ್ನು ಪಾಲಿಸಬೇಕು. ಆಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾಧ್ಯ. ಶರಣರು ಸಾಮಾಜಿಕ ಬದಲಾವಣೆ ತರಲು ಹಗಲಿರುಳು ಶ್ರಮಿಸಿದರು.

ಪಂಡಿತಾರಾಧ್ಯ ಶ್ರೀಗಳು ಹತ್ತು ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮತ್ತೆ ಕಲ್ಯಾಣದ ಮೂಲಕ ಇಡೀ ಕರ್ನಾಟಕದಲ್ಲಿ ಸಂಚಲನವನ್ನೇ ಸೃಷ್ಟಿಸಿದರು. ನೇರ ನಡೆ-ನುಡಿಯ ಸಂತ ನಮ್ಮ ಮಧ್ಯೆದಲ್ಲಿರುವುದೇ ನಮ್ಮೆಲ್ಲ ಸ್ವಾಮಿಗಳ ಪುಣ್ಯ ಎಂದರು.

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಇದೊಂದು ವಿಶೇಷ ಸಮಾರಂಭ. ಇಡೀ ನಾಡಿನಲ್ಲಿ ಶರಣರ ವಿಚಾರಗಳ ಬಗ್ಗೆ ಯಾರೂ ಚಕಾರೆತ್ತಲಿಲ್ಲ. ಯಾವಾಗಲೂ ಪಂಡಿತಾರಾಧ್ಯ ಶ್ರೀಗಳು ಬಸವಣ್ಣನವರ ವಿಚಾರಗಳನ್ನು ಜನಸಾಮಾನ್ಯರಿಗೆ ಮತ್ತೆ ಮತ್ತೆ ಮೆಲುಕು ಹಾಕಬೇಕು ಎನ್ನುವಂಥ ಅಭಿಲಾಷೆ ಇದೆ. ಶರಣರ ತತ್ವ, ವಿಚಾರಗಳನ್ನು ಎಲ್ಲ ಕಡೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಮಾಜದಲ್ಲಿ ಎಲ್ಲ ಕಡೆ ಜಾತಿಯ ಭೂತ ಹೆಚ್ಚಾಗಿದೆ. ಜಾತಿಯ ಶ್ರೇಷ್ಠತೆ ಇನ್ನೂ ಜೀವಂತವಾಗಿದೆ. ಜಾತಿಗಿಂತ ನೀತಿ ಮುಖ್ಯ ಎಂದು ಶರಣರು ಸಾರಿದರು. ಲೋಕಕಲ್ಯಾಣಕ್ಕಾಗಿ ಹೋರಾಟ ಮಾಡಿ ಮಾನವ ಕುಲವನ್ನು ಉತ್ತಂಗಕ್ಕೇರಿಸಿದರು. ಇವತ್ತು ನಮ್ಮ ಮಧ್ಯೆ ಪಟ್ಟಭದ್ರಹಿತಾಸಕ್ತರು ಇದ್ದಾರೆ. ಅವರಿಂದ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ವಚನ ಸಾಹಿತ್ಯ ಕನ್ನಡದಲ್ಲಿ ಇರುವುದರಿಂದ ಯಾರೂ ಓದಬೇಡಿ. ಸಂಸ್ಕೃತ ಓದಿದರೆ ಮಾತ್ರ ಸ್ವರ್ಗ ಸಿಗುತ್ತದೆ ಎನ್ನುವಂಥ ಮಾತು ಪೂಜಾರಿ ಪುರೋಹಿತರಿಂದ ಹೆಚ್ಚಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಚಟ್ನಳ್ಳಿ ಮಹೇಶ್ ಮಾತನಾಡಿ ಶರಣರು ಕಾಯಕ ದಾಸೋಹ ಕಲ್ಪನೆಯನ್ನು ಎಂಟು ನೂರು ವರ್ಷಗಳ ಹಿಂದೆ ಜಾರಿಗೆ ತಂದರು. ಅರಿವು ಆಚಾರಕ್ಕೆ ಹೆಚ್ಚು ಮಹತ್ವ ಕೊಟ್ಟರು. ಶರಣರು ಅರಿವನ್ನು ಮೂಡಿಸುವ ಕೆಲಸ ಮಾಡಿದರು. ವೈಚಾರಿಕ ಪ್ರಪಂಚವನ್ನು ನಡುಗುವಂತೆ ಪ್ರಶ್ನೆ ಮಾಡಿದರು. ಸತ್ಯಶುದ್ಧವಾದ ಕಾಯಕ ಮಾಡುತ್ತಿದ್ದರು. ಕಾಯಕದಿಂದ ಬಂದುದು ಮಾತ್ರ ಸತ್ಯಶುದ್ಧವಾದುದು ಎಂದು ಸಂದೇಶವನ್ನು ಕೊಟ್ಟರು. ೧೨ನೆಯ ಶತಮಾನದಲ್ಲಿ ಸುಂಕದ ಮೂಲಕ ದಾಸೋಹ ಪ್ರಜ್ಞೆಯನ್ನು ಮೂಡಿಸಿದರು. ಪರಿಸರ, ಆರೋಗ್ಯ, ಶಿಕ್ಷಣ, ರಾಜಕೀಯದ ಬಗ್ಗೆ ಪ್ರಜ್ಞೆಯುಳ್ಳವರಾಗಿದ್ದರು. ಮುಂದಿನ ವರ್ಷ ಬಸವಣ್ಣ ಜಾಗತಿಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಂತಾಗಲಿ. ಎಲ್ಲ ಸರಕಾರಿ ಕಚೇರಿಗಳಲ್ಲಿ ಸತ್ಯಕ್ಕನ ವಚನವನ್ನು ಹಾಕಬೇಕು ಎಂದರು.
ನಿರ್ದೇಶಕ ವೈ ಡಿ ಬದಾಮಿ ಮಾತನಾಡಿದರು.

ಆರಂಭದಲ್ಲಿ ಶಿವಕುಮಾರ ಕಲಾಸಂಘದ ಕಲಾವಿದರ “ಶಿವಯೋಗಿ ಸಿದ್ಧರಾಮೇಶ್ವರ” ನಾಟಕ ಪ್ರದರ್ಶನ ಮಾಡಿದರು. ನಾಗರಾಜ ಹೆಚ್ ಎಸ್ ಹಾಗೂ ಶರಣಕುಮಾರ ವಚನಗೀತೆಗಳನ್ನು ಹಾಡಿದರು. ಪ್ರದೀಪ ಎಂ. ಸ್ವಾಗತಿಸಿದರೆ ಶಿಕ್ಷಕಿ ದೀಪ ನಿರೂಪಿಸಿ ವಂದಿಸಿದರು.

Share This Article
1 Comment
  • ಲಿಂಗಾಯತ ಸಮಾಜ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಘೋಷಿಸಿದ ಸಂದರ್ಭದಲ್ಲೇ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲಿಲ್ಲ. ಇನ್ನು ವಾರ್ಷಿಕ ಆಚರಣೆ ದೂರವೇ ಉಳಿಯಿತು. ಅದೆಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ. ಜನರಲ್ಲಿ ಅರಿವಿನ ಕೊರತೆ ದೊಡ್ಡಮಟ್ಟದಲ್ಲಿ ಇದೆ. ಬರೀ ಸಾಣೇಹಳ್ಳಿ ಮಠ ಒಂದೇ ಆಚರಿಸಿದರೆ ಸಾಲದು. ಜನರು ಆಚರಿಸದಿದ್ದರೂ ಕೊನೇಪಕ್ಷ ಲಿಂಗಾಯತ ಮಠಗಳಾದರೂ ದೊಡ್ಡ ಮಟ್ಟದಲ್ಲಿ ಆಚರಿಸಿದ್ದರೆ ಅವರ ಮಠಗಳ ಅನುಯಾಯಿಗಳಾದರೂ ಅದರ ಪ್ರಾಮುಖ್ಯತೆಯನ್ನು ಅರಿಯುತ್ತಿದ್ದರು. ಬಸವಣ್ಣನ ಹೆಸರು ಹೇಳಿಕೊಂಡು ಮಠಗಳನ್ನು ಕಟ್ಟಿಕೊಂಡಿರುವ ಮಠಾಧೀಶರರುಗಳಲ್ಲಿಯೇ ಇಲ್ಲದ ಬಸವ ಪ್ರಜ್ಞೆ ಲಿಂಗಾಯತ ಸಮಾಜದಲ್ಲಿ ಹೇಗೆ ಬರಲು ಸಾಧ್ಯ? ವಿಪರ್ಯಾಸವೆಂದರೆ ಲಿಂಗಾಯತ ಸಮೂಹ ದೊಡ್ಡಮಟ್ಟದಲ್ಲಿ ಇರುವ ಊರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜೋರಾಗಿ ಸಂಭ್ರಮದಿಂದ ರಾಮನವಮಿ ಮತ್ತು ಹನುಮ ಜಯಂತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಾಂಸ್ಕೃತಿಕ ನಾಯಕ ಬಸವಣ್ಣನನ್ನು ಅವರ ಜಯಂತಿಯನ್ನು, ವಾರ್ಷಿಕ ಆಚರಣೆಗಳನ್ನು ನಮ್ಮ ಮಠಗಳು ಆಚರಿಸಲು ಇರುವ ತೊಂದರೆಗಳಾವು? ಬಸವಣ್ಣ ಮತ್ತು ಶರಣರು ಬರೀ ಲಿಂಗಾಯತರಿಗೆ ಮಾತ್ರವಲ್ಲ ಇಡೀ ಜನಸಮೂಹಕ್ಕೆ ಸೇರಿದವರು ಈ ಅರಿವು ಮತ್ತು ಆಚರಣೆ ಸಮಾಜದಲ್ಲಿ ಮೂಡುವಂತೆ ಲಿಂಗಾಯತ ಸಮಾಜ ಮತ್ತು ಮಠಾಧೀಶರುಗಳು ತಮ್ಮ ನಡೆ ನುಡಿ ಮತ್ತು ಆಚರಣೆಯಲ್ಲಿ ತರಬೇಕು. ಇನ್ನಾದರೂ ಇಂತಹ ಜಾಗೃತಿಯನ್ನು ಮೂಡಿಸುವ ಕೆಲಸ ಆಗಲಿ.

Leave a Reply

Your email address will not be published. Required fields are marked *