ಸಾಣೇಹಳ್ಳಿ
ಇಲ್ಲಿನ ಎಸ್. ಎಸ್. ರಂಗಮಂದಿರದಲ್ಲಿ ನಡೆದ ಬಸವ ಜಯಂತಿ ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೧೧೧ನೆಯ ಜಯಂತಿಯ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದru.
ಇದು ಇಬ್ಬರು ಮಹಾನ್ ಚೇತನಗಳ ನೆನಪು ಮಾಡಿಕೊಳ್ಳುವ ದಿನ. ಒಂದು ಪೀಠದ ಗುರುವಾಗಿ ಹೇಗೆ ಸಮಾಜವನ್ನು ಮುನ್ನೆಡೆಸಬೇಕೆಂದು ತೋರಿಸಿಕೊಟ್ಟವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು. ಬಸವಣ್ಣನವರ ಹಾದಿಯಲ್ಲೇ ಶ್ರೀ ಶಿವಕುಮಾರ ಶ್ರೀಗಳು ನಡೆದವರು. ಶ್ರೀಗಳು ಮುಳ್ಳಿನ ಹಾಸಿಗೆಯನ್ನೇ ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡವರು. ಎಲ್ಲ ದುಷ್ಟಶಕ್ತಿಗಳನ್ನು ಧೈರ್ಯದಿಂದ, ತಾಯ್ತನದಿಂದ ಎದುರಿಸಿದವರು. ಅವರ ಬದುಕಿಗೆ ಶಕ್ತಿ ತುಂಬಿದ್ದು ಬಸವಾದಿ ಶರಣರ ವಚನ ಸಾಹಿತ್ಯ. ಅವರು ಯಾವ ಕೆಲಸವನ್ನೂ ಪ್ರದರ್ಶನಕ್ಕಾಗಿ ಮಾಡಿದವರಲ್ಲ. ಆತ್ಮದರ್ಶನಕ್ಕಾಗಿ ಮಾಡಿಕೊಂಡವರು.

ಬಸವಣ್ಣನವರನ್ನು ಎಲ್ಲರೂ ಗೌರವಿಸುತ್ತಾರೆ. ಆದರೆ ಶಿವಕುಮಾರ ಶ್ರೀಗಳು ಬಸವಣ್ಣನವರನ್ನು ‘ಆದರ್ಶ ಗೃಹಸ್ಥ ಜಗದ್ಗುರು’ ಎಂದು ಗೌರವಿಸುತ್ತಿದ್ದರು. ಬಸವಣ್ಣನವರು ಬಹುದೇವತಾರಾಧನೆಯನ್ನು ನಿರಾಕರಿಸಿ ಏಕದೇವನಿಷ್ಠೆಯನ್ನು ಬೆಳೆಸಿದವರು. ಅದೇ ತತ್ವವನ್ನು ಶಿವಕುಮಾರ ಶ್ರೀಗಳು ಮುನ್ನಡಿಸಿಕೊಂಡು ಹೋದವರು. ಶ್ರೀ ಶಿವಕುಮಾರ ಸ್ವಾಮಿಗಳು ಮಲ್ಲಿಗೆಯಂತಹ ಮನಸ್ಸುಳ್ಳವರಾಗಿದ್ದರು. ಶಿಷ್ಟರಿಗೆ ಕಾಮಧೇನು ದುಷ್ಟರಿಗೆ ಯಮರಾಗಿದ್ದರು. ಅವರಂಥ ಗುರುಗಳನ್ನು ಮತ್ತೆ ಪಡೆದುಕೊಳ್ಳುವುದು ದುರ್ಲಭ.
ಶಿವಕುಮಾರ ಶ್ರೀಗಳ ವ್ಯಕ್ತಿತ್ವದಿಂದ ನಮ್ಮೆಲ್ಲರ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಅವರ ಸಾಮಾಜಿಕ ಕಳಕಳಿಯ ಮೂಲಕ ಇನ್ನು ಚಿರಂಜೀವಿಗಳಾಗಿದ್ದಾರೆ. ಶಿವಕುಮಾರ ಸ್ವಾಮಿಗಳು ಇದ್ದದ್ದನ್ನು ಇದ್ದ ಹಾಗೆ ಹೇಳುವಂಥವರು. “ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ” ಎನ್ನುವ ಮಾತಿಗೆ ಅನುಗುಣವಾಗಿ ಬಾಳಿ ಬದುಕಿ ಸಮಾಜವನ್ನು ಬಹು ಎತ್ತರಕ್ಕೆ ಬೆಳೆಸಿದವರು. ಕರ್ನಾಟಕದಲ್ಲೇ ಕ್ರಾಂತಿ ಮಾಡಿದ ಗುರುಗಳೆಂದು ಹೆಸರಾದವರು.

ಶ್ರೀಗಳು ಪಟ್ಟಾಧಿಕಾರವಾದಾಗ ಸಿರಿಗೆರೆ ಮಠ ದುಗ್ಗಾಣಿ ಮಠ ಎಂದು ಕರೆಯುತ್ತಿದ್ದರು. ಇವರ ಪರಿಶ್ರಮದಿಂದ ೪೦ ವರ್ಷಗಳ ಅವಧಿಯಲ್ಲಿ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದ್ದಷ್ಟೇ ಅಲ್ಲ; ಮಠದ ಭಕ್ತರು ದುಡಿಯುವಂತೆ ಮಾಡಿದವರು. ಅದಕ್ಕೆ ಮೊದಲು ನಮ್ಮ ಜನರಿಗೆ ಶಿಕ್ಷಣ ಕೊಡಬೇಕೆಂದು ಹಳ್ಳಿ ಹಳ್ಳಿಗಳಲ್ಲೂ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡಿದರು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಿದರು.
ನಮ್ಮ ಗುರುಗಳಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಬಸವಣ್ಣ. ಬಸವಣ್ಣನವರಿಗಾಗಿ ತಮ್ಮ ತನು, ಮನ ಎಲ್ಲವನ್ನು ಸವೆಸಿಕೊಳ್ಳುವ ಗುಣ ಅವರಲ್ಲಿತ್ತು. ಯಾವಾಗಲೂ ಬಸವತತ್ವವನ್ನು ಪ್ರಚಾರ ಮಾಡಲಿಕ್ಕಾಗಿ ಅನೇಕ ರೀತಿಯ ಪ್ರಯೋಗಗಳನ್ನು ಮಾಡಿದರು. ಅಣ್ಣನ ಬಳಗ, ಅಕ್ಕನ ಬಳಗ, ಕಲಾಸಂಘ, ಪುಸ್ತಕ ಪ್ರಕಟಣೆ, ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡಿದರು. ಅಂತಹ ಪೂಜ್ಯರು ನಮ್ಮ ಸಮಾಜಕ್ಕೆ ಸಿಕ್ಕಿದ್ದು ನಮ್ಮ ಸೌಭಾಗ್ಯ.
ಗೋವಿಂದ ಕಾರಜೋಳ ಅವರಿಗೆ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುವಂಥ ಮನಸ್ಥಿತಿ ಇದೆ. ಎಲ್ಲ ರಾಜಕಾರಣಿಗಳು ಗೋವಿಂದ ಕಾರಜೋಳರ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಯಾವುದೇ ಪರಿವರ್ತನೆ ಆಗ್ಬೇಕಾದರೆ ಮೊದಲು ನಮ್ಮ ರೈತರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಬೇಕು. ‘ಒಕ್ಕಲಿಗ ಒಕ್ಕದಿರೆ ಜಗವೆಲ್ಲ ಬಿಕ್ಕುವುದು’ ಅಂತ ಹೇಳ್ತಾರೆ. ಒಕ್ಕಲಿಗ ಒಕ್ಕಬೇಕು ಅಂದರೆ ಮೊದಲು ನೀರು ಬೇಕು. ಎರಡನೆಯದು ವಿದ್ಯುತ್ ಬೇಕು. ಒಳ್ಳೆಯ ಬೀಜಬೇಕು. ನಂತರ ರೈತನು ಬೆಳೆದ ಬೀಜಗಳಿಗೆ ಸೂಕ್ತವಾದ ಬೆಂಬಲ ಬೆಲೆ ಸಿಗಬೇಕು. ಇಷ್ಟೆಲ್ಲಾ ಆದಾಗ ರೈತ ಸರಕಾರಕ್ಕೇ ಸಾಲ ಕೊಡುವ ಮಟ್ಟಕ್ಕೆ ಬೆಳೆಯುತ್ತಾನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಾಣೇಹಳ್ಳಿಯಲ್ಲಿ ಬಸವತತ್ವದ ಹಿನ್ನಲೆಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿರುವುದು ತುಂಬಾ ಸಂತೋಷ. ಸಿರಿಗೆರೆ ಹಾಗೂ ಸಾಣೇಹಳ್ಳಿಮಠ ಬಸವಣ್ಣನವರ ವಿಚಾರಧಾರೆಗಳನ್ನು ಒಂಬೈನೂರು ವರ್ಷಗಳ ನಂತರವೂ ನಿರಂತರವಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡ್ತಾ ಇವೆ. ಜನರ ಕಲ್ಯಾಣಕ್ಕಾಗಿ ಸ್ಥಾಪನೆಗೊಂಡಿರುವ ಮಠ ಇದು. ಕರ್ನಾಟಕದಲ್ಲಿ ಅನೇಕ ಮಠಗಳಿವೆ. ಆದರೆ ನಮ್ಮ ಸಿರಿಗೆರೆ ಹಾಗೂ ಸಾಣೇಹಳ್ಳಿ ಮಠ ಬಸವಣ್ಣನವರು ಬಯಸಿದಂತಹ ಸುಂದರ ಸಮಾಜ ನಿರ್ಮಾಣ ಮಾಡುವಂಥ ಗುರಿಯನ್ನಿಟ್ಟುಕೊಂಡು ನಿರಂತರವಾಗಿ ಮುನ್ನಡೆಸಿಕೊಂಡು ಹೋಗ್ತಾ ಇವೆ. ‘ಮನುಷ್ಯ ಜಾತಿ’ ಒಂದು ಎನ್ನುವ ತತ್ವ ಸಿದ್ಧಾಂತಗಳನ್ನಿಟ್ಟುಕೊಂಡು ಎಲ್ಲ ವರ್ಗದವರಿಗೂ ಅನ್ನ, ಅಕ್ಷರ, ಆಶ್ರಯ ದಾಸೋಹವನ್ನು ನೀಡುವಂಥ ಶ್ರೇಷ್ಠ ಮಠಗಳಿವು. ಈ ಮಠಗಳಲ್ಲಿ ನಡೆಯುವಂಥ ಕಾರ್ಯಕ್ರಮಗಳಿಗೆ ಹೆಚ್ಚು ಬೆಂಬಲ ನೀಡುವುದರ ಜೊತೆಗೆ ವರ್ಣರಹಿತ, ವರ್ಗರಹಿತ, ಜಾತಿರಹಿತ ಸುಂದರ ಸಮಾಜಕ್ಕೆ ನಾವೆಲ್ಲವೂ ಕೈಜೋಡಿಸೋಣ ಎಂದರು.

ಈಗಾಗಲೇ ಪಂಡಿತಾರಾಧ್ಯ ಶ್ರೀಗಳ ಜೊತೆಗೆ ಮಾತನಾಡಿದಂತೆ ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಂಡು ನೀರಾವರಿ ಯೋಜನೆಗೆ ನಿರಂತರವಾಗಿ ಪ್ರಯತ್ನವನ್ನು ಮಾಡ್ತಾ ಇದ್ದೇನೆ. ಎಲ್ಲ ಕ್ಷೇತ್ರಗಳು ನೀರಾವರಿ ಆದರೆ ಮಾತ್ರ ಜನರ ಕಲ್ಯಾಣ ಸಾಧ್ಯ ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕುರಿತು ಮಾತನಾಡಿದ ಮುಖ್ಯ ಶಿಕ್ಷಕ ಬಿ. ಪಿ. ಓಂಕಾರಪ್ಪ, ಶಿವಕುಮಾರ ಶ್ರೀಗಳು ವ್ಯಕ್ತಿಯಲ್ಲ; ಅವರೊಂದು ಶಕ್ತಿ. ಅಜ್ಞಾನ, ಅಂಧಕಾರ ಹೋಗಲಾಡಿಸಲು ಶಿಕ್ಷಣವೊಂದೇ ಮಾರ್ಗ ಎಂದು ತಿಳಿದು ಅನೇಕ ಶಾಲಾ ಕಾಲೇಜುಗಳನ್ನು ತೆರೆದರು. ಸಿರಿಗೆರೆ ಸ್ವಾಮಿಗಳು ಕೈಇಟ್ಟ ತಲೆ ಬೋಳು, ಕಾಲಿಟ್ಟ ನೆಲ ಹಾಳು ಎಂದು ಕೆಲವರು ಮಾತನಾಡುತ್ತಿದ್ದರು. ಯಾರ ತಲೆಯ ಮೇಲೆ ಕೈ ಇಡುವರೋ ಅವರು ಸನ್ಯಾಸಿಗಳಾಗುವರು. ಯಾರ ನೆಲದಲ್ಲಿ ಕಾಲಿಡುವರೋ ಅಲ್ಲೆಲ್ಲ ಶಾಲಾ ಕಾಲೇಜುಗಳು ಪ್ರಾರಂಭವಾಗುವವು. ಇಡೀ ಒಂದು ಮನೆತನವನ್ನು ಬದಲಾಯಿಸುವಂಥ ಶಕ್ತಿ ಶಿವಕುಮಾರ ಶ್ರೀಗಳಲ್ಲಿತ್ತು. ಆನೆ ನಡೆದದ್ದೇ ದಾರಿ ಎನ್ನುವಂತೆ ಯಾರಿಗೂ ಅಂಜುವವರಲ್ಲ. ನುಡಿಧೀರರಷ್ಟೇ ಅಲ್ಲ; ನಡೆಧೀರರಾಗಿದ್ದರು. ಲಿಂಗಾಯತ ಮಠದಲ್ಲಿ ಮೊಟ್ಟಮೊದಲು ಸಹಭೋಜನಪಂಕ್ತಿ ಮಾಡಿಸಿದ ಕೀರ್ತಿ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ವಚನ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸಿದವರು ಮೊದಲಿಗರು.
ಘಟ ಬೆಳೆದರೆ ಮಠ ಬೆಳೆಯುತ್ತೆ ಎಂದು ಯಾವಾಗಲೂ ಹೇಳುತ್ತಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರು ಎಲ್ಲ ರಂಗಳಲ್ಲೂ ಕೆಲಸ ಮಾಡಿದರು. ಅವರಿಗೆ ಜಾತಿ ಮುಖ್ಯವಾಗಿರಲಿಲ್ಲ. ನೀತಿ ಮುಖ್ಯವಾಗಿತ್ತು. ಎಲ್ಲರಿಗೂ ಸಮಾನ ಅವಕಾಶ ಕೊಡುತ್ತಿದ್ದರು. ಸಂಸ್ಥೆಗೆ ನೌಕರರು ಆಧಾರಸ್ತಂಭ ಎಂದು ಹೇಳುತ್ತಿದ್ದರು. ಅವರದು ತಾಯಿ ಹೃದಯ. ತಪ್ಪು ಮಾಡಿದವರನ್ನು ತಿದ್ದಿ ತೀಡಿ ಸರಿದಾರಿಗೆ ತರುತ್ತಿದ್ದರು. ಸಮರ್ಥವಾಗಿ ಉತ್ತರಾಧಿಕಾರಿ ಹಾಗೂ ಶಾಖಾಮಠಗಳ ಸ್ವಾಮಿಗಳು ನೇಮಕ ಮಾಡಿ ಸಮಾಜವನ್ನು ಮುನ್ನೆಡೆಸುವಂತೆ ಮಾರ್ಗದರ್ಶನ ಮಾಡಿದರು.
ಅವರೆಂದು ಎಲ್ಲದನ್ನು ನಾವು ಮಾಡಿದ್ದೇವೆಂದು ಹೇಳಿಕೊಳ್ಳಲಿಲ್ಲ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಪರಿಪಾಲಿಸುತ್ತಿದ್ದರು. ಸಿರಿಗೆರೆ ಸ್ವಾಮಿಗಳು ಸೀನಿದರೆ ವಿಧಾನಸೌಧವೇ ನಡುಗುತ್ತೆ ಎಂದು ಕೆಲವರು ಮಾತನಾಡುತ್ತಿದ್ದರು. ಅಷ್ಟೊಂದು ಗಟ್ಟಿತನ ಅವರಲ್ಲಿತ್ತು. ಸಿರಿಗೆರೆ ಮಠದ ಶಿಷ್ಯರು ಇವತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಇಷ್ಟು ಸಬಲವಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು. ಅವರು ಹಾಕಿದ ಬುನಾದಿಯ ಮೇಲೆ ನಮ್ಮಂಥ ಅನೇಕ ಭಕ್ತರು ಸುಸಂಸ್ಕೃತ ಬದುಕನ್ನು ನಡೆಸುತ್ತಿದ್ದೇವೆ. ಅವರು ಯಾವುದನ್ನೂ ಅಸಾಧ್ಯವೆಂದು ಕೈಕಟ್ಟಿ ಕೂರಲಿಲ್ಲ. ಎಲ್ಲವೂ ಅಸಾಧ್ಯವನ್ನೂ ಸಾಧ್ಯವನ್ನಾಗಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದರು. ಬಸವಾದಿ ಶಿವಶರಣರಂತೆ ಶಿವಕುಮಾರ ಶ್ರೀಗಳು ಪ್ರಾತಃಸ್ಮರಣೀಯರು. ಅವರನ್ನು ಸ್ಮರಿಸುವುದು, ಅವರ ಬಗ್ಗೆ ಮಾತನಾಡುವುದು ದೊಡ್ಡ ಪುಣ್ಯ ಎಂದರು.

ಬಸವಣ್ಣನವರನ್ನು ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಆದ್ರಿಕಟ್ಟೆಯ ಬಸವರಾಜಪ್ಪ ಮಾತನಾಡಿ, ಬಸವಣ್ಣ ವಿಶ್ವದ ಬೆಳಕು. ವಿಶ್ವದ ಎಲ್ಲ ಚಿಂತಕರ ಚಿಂತನೆಗಳು ಬಸವಣ್ಣನವರೊಬ್ಬರಲ್ಲಿತ್ತು. ದಯೆ ಎನ್ನುವುದು ಧರ್ಮ ಆಯಿತು. ಕೆಲಸ ಕಾಯಕವಾಯಿತು. ಅಂಗವೇ ಲಿಂಗವಾಯಿತು. ಇದು ಆಗಿದ್ದು ೧೨ನೆಯ ಶತಮಾನದಲ್ಲಿ. ಶರಣರು ಮನೆಗೆದ್ದು ಮಾರು ಗೆದ್ದಂಥದವರು. ಬಸವಣ್ಣನವರ ಮನೆಯೇ ಪ್ರಯೋಗಶಾಲೆಯಾಗಿತ್ತು. ಬಸವಣ್ಣನವರಿಗೆ ಎಲ್ಲ ಇದ್ದೂ ಏನೂ ಇಲ್ಲದಂತೆ ಬದುಕಿದವರು. ಬಯಲಿನೊಳಗೆ ಬಯಲಾಗಿದ್ದರು. ತಾಯಿ ಹೃದಯದಿಂದ ಎಲ್ಲರನ್ನು ಸಲಹಿದಂಥವರು. ಸರ್ವರನ್ನು ತನ್ನ ಅಪ್ಪುಗೆಯಲ್ಲಿ ತಬ್ಬಿಕೊಂಡರು. ಹೃದಯವಂತಿಕೆ, ಜಾತ್ಯತೀತ ಮನೋಭಾವ ಅವರಲ್ಲಿತ್ತು. ಬಸವಣ್ಣನ ಕಾಲದಲ್ಲಿ ಕುಲ, ಜಾತಿ, ಧರ್ಮ, ಅಂಧಕಾರ ಇವುಗಳನ್ನು ಬೇರು ಸಮೇತ ಕಿತ್ತು ಹಾಕಿ ಎಲ್ಲರಿಗೂ ಸರ್ವ ಸಮಾನ ಅವಕಾಶ ಕಲ್ಪಿಸಿದರು. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದನು ಕುಲಜ ಎಂದು ಸಾರಿದರು. ವೈಜ್ಞಾನಿಕ, ವೈಚಾರಿಕವಾಗಿ ಆಲೋಚನೆ ಮಾಡುವ ಶಕ್ತಿ ಬಸವಣ್ಣನವರಿಗಿತ್ತು. ಬಸವಣ್ಣನವರ ರಾಜಕೀಯ ಧೈರ್ಯ ಈಗಿನ ರಾಜಕಾರಣಿಗಳಿಗೆ ಬರಬೇಕು ಎಂದರು.
ಗುರುಮಹಾಂತೇಶ್ವರ ಮಠದ ಅಕ್ಕಮಹಾದೇವಿ ಮಾತಾಜಿಯವರು ಮಾತನಾಡಿ, ನಮ್ಮೆಲ್ಲರಿಗೂ ದಿನನಿತ್ಯವೂ ಬಸವ ಜಯಂತಿ. ಎಲ್ಲರ ಮನೆ ಮನಗಳಲ್ಲಿ ಬಸವ ಜಯಂತಿಗಳನ್ನು ಆಚರಿಸಬೇಕು. ಪಂಡಿತಾರಾಧ್ಯ ಶ್ರೀಗಳು ೨೧ನೆಯ ಶತಮಾನದ ಸಾಕ್ಷಾತ್ ಬಸವಣ್ಣನವರು. ಅವರ ನಡೆ ನುಡಿ, ಆಚಾರ-ವಿಚಾರಗಳು ಸಾಕ್ಷಾತ್ ಬಸವಣ್ಣನವರದ್ದೇ. ಇವರು ನಡೆದಾಡುವ ಬಸವಣ್ಣನವರು ಎಂದರು.
ವೇದಿಕೆಯ ಮೇಲೆ ಹೊಳಲ್ಕೆರೆಯ ಮಾಜಿ ಶಾಸಕ ಪಿ. ರಮೇಶ್ ಉಪಸ್ಥಿತರಿದ್ದರು.
ಆರಂಭದಲ್ಲಿ ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರು ಶಿವಕುಮಾರ ಸ್ವಾಮೀಜಿಯವರ ಜೀವನಾಧಾರಿತ ನಾಟಕ “ಮಹಾಬೆಳಗು” ಪ್ರದರ್ಶಿಸಿದರು.
ಬೆಳಿಗ್ಗೆ ಬಸವಣ್ಣ ಹಾಗೂ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರತಿಮೆಗಳ ಮೆರವಣಿಗೆ ಎತ್ತಿನ ಗಾಡಿಯ ಮೂಲಕ ಸಾಣೇಹಳ್ಳಿ ಗ್ರಾಮದ ಬೀದಿಗಳಲ್ಲಿ ನಡೆಯಿತು. ನಂತರ ಶ್ರೀ ಶಿವಕುಮಾರ ಸ್ವಾಮೀಜಿ ರಥವನ್ನು ಹಳೆಮಠದಿಂದ ಹೊಸಮಠದವರೆಗೆ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಎಳೆದರು.
ಎಸ್ ಆರ್ ಚಂದ್ರಶೇಖರಯ್ಯ ಸ್ವಾಗತಿಸಿದರೆ ಕಾವ್ಯ ಹೆಚ್. ಆರ್. ನಿರೂಪಿಸಿದರು. ವೇದಿಕೆಯ ಮೇಲೆ ಹೊಳಲ್ಕೆರೆಯ ಮಾಜಿ ಶಾಸಕ ರಮೇಶ್ ಉಪಸ್ಥಿತರಿದ್ದರು.