ನಾಟಕೋತ್ಸವ: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ, ಡಾ.ಸಂಜೀವ ಕುಲಕರ್ಣಿ

ಸಾಣೇಹಳ್ಳಿ

ನಮ್ಮ ಬೇಸಿಗೆಗಳು ಉದ್ದ ಹಾಗೂ ಹೆಚ್ಚಾಗುತ್ತಿವೆ. ಮಳೆಯ ಪ್ರಮಾಣ ಅತಿರೇಕವಾಗುತ್ತಿದೆ. ಹೀಗೆ ಹತ್ತುಹಲವು ರೂಪದಲ್ಲಿ ಹವಾಮಾನ ಸಂಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕಾಗಿ ಪರಿಸರ ಮಾಲಿನ್ಯ ತಡೆಯುವುದು, ಪರಿಸರ ಕಲ್ಯಾಣ ಕೈಗೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ ಎಂದು ಧಾರವಾಡದ ಪರಿಸರಪ್ರೇಮಿ ಡಾ.ಸಂಜೀವ ಕುಲಕರ್ಣಿ ಸಲಹೆ ನೀಡಿದರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ʼಪರಿಸರ ರಕ್ಷಣೆಯ ಬಿಕ್ಕಟ್ಟು ಮತ್ತು ಪರಿಹಾರʼ ಕುರಿತು ಅವರು ಮಾತನಾಡಿದರು.

ಸಾಣೇಹಳ್ಳಿಯಲ್ಲಿ ಗಿಡಮರಗಳನ್ನು ಬೆಳೆಸಿರುವುದು, ನೀರು ಇಂಗಿಸುವ ಕ್ರಮ ಇಂತ ಜನೋಪಯೋಗಿ ಕಾರ್ಯಗಳ ಮೂಲಕ ಇಲ್ಲಿ ನಿಜವಾದ ಅಧ್ಯಾತ್ಮ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಕಿಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಶುರು ಮಾಡಿದಾಗಿನಿಂದ ಪರಿಸರಕ್ಕೆ ಅನ್ಯಾಯ ಶುರುವಾಯಿತು. ಆಗ ಅದನ್ನು ಕ್ಷಮಿಸುವ ಗುಣ ಭೂಮಿಗಿತ್ತು. ಆದರೆ ಕೈಗಾರಿಕಾ ಕ್ರಾಂತಿಯಾದ ಮೇಲೆ ಪ್ರಾಕೃತಿಕ ಸಂಪನ್ಮೂಲಗಳನ್ನು ಬಗೆದು ನಮ್ಮ ಜೀವನಕ್ಕೆ ಬಳಸಿಕೊಳ್ಳುವುದು ಶುರುವಾಯಿತು. ಇದರಿಂದ ಪರಿಸರ ಮಾಲಿನ್ಯ ಹೆಚ್ಚಿತು, ಹವಾಮಾನ ಸಂಕಷ್ಟ ಮತ್ತು ಭೂತಾಪ ಹೆಚ್ಚಳವಾಯಿತು ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಿಂದ ನಮ್ಮ ಬದುಕನ್ನು ರೂಪಿಸಿಕೊಂಡ ಬಗೆಯಿಂದ ಕಾರ್ಬನ್ ಡೈಆಕ್ಸ್ಡ್ ಸೇರಿದಂತೆ ಇತರ ಅನಿಲಗಳಿಂದ ತಾಪಮಾನ ಬದಲಾಗುತ್ತಿದೆ. ನಮ್ಮ ಜೀವನಶೈಲಿ ಇದೇ ರೀತಿ ಮುಂದುವರಿದರೆ ಅನೇಕ ಜೀವಗಳು ಸರ್ವನಾಶವಾಗುತ್ತವೆ ಎಂದು ಅವರು ಎಚ್ಚರಿಸಿದರು.

ನಮ್ಮ ಮಣ್ಣಿನ ಫಲವತ್ತತೆ ಶೇ. ೭೫ರಷ್ಟು ಕಡಿಮೆಯಾಗಿದೆ. ದೇಶದ ಎಲ್ಲ ನದಿಗಳು ಮಲಿನವಾಗಿವೆ. ಕಳೆದ ೭೫ ವರ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿದೆ. ಈಗಾಗಲೇ ಐದು ಬಾರಿ ಮಹಾಜೀವ ನಾಶವಾಗಿವೆ ಎಂದು ಪ್ರಾಕೃತಿಕ ವಿಜ್ಞಾನಿಗಳು ಹೇಳಿದ್ದಾರೆ. ಉದಾಹರಣೆಗೆ ಡೈನೊಸಾರ್ ಸಂಪೂರ್ಣ ನಾಶವಾಗಿವೆ ಎಂದು ಅವರು ತಿಳಿಸಿದರು.

ರಾಜಕಾರಣಿಗಳು, ವಿಜ್ಞಾನಿಗಳು ಸೇರಿ ಜಾಗತಿಕ ಮಟ್ಟದ ಮಹಾಶೃಂಗ ಸಭೆಗಳನ್ನು ಈಗಾಗಲೆ ೨೮ ಬಾರಿ ನಡೆಸಿದ್ದಾರೆ. ಹವಾಮಾನ ಸಂಕಷ್ಟ, ತಾಪಮಾನ ಹೆಚ್ಚಳದಿಂದ ಮೊದಲಿಗೆ ಬಡವರು ಬಲಿಯಾದರೆ ಶ್ರೀಮಂತರೂ ಬಲಿಯಾಗುತ್ತಾರೆ. ಇದಕ್ಕಾಗಿ ವಾಹನಗಳ ಬಳಕೆ ಕಡಿಮೆ ಮಾಡಬೇಕು, ಬಟ್ಟೆ, ಆಹಾರದ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ. ಒಟ್ಟಾರೆ ಅರ್ಥಪೂರ್ಣ ಬದುಕಿಗೆ ಅತ್ಮಾವಲೋಕನ ಆಗಬೇಕಿದೆ. ಗಾಂಧೀಜಿ ಅವರು ಹೇಳಿದಂತೆ ಬದಲಾವಣೆಯನ್ನು ನಮ್ಮಿಂದಲೇ ಶುರು ಮಾಡಿ ಎಂದು ಹೇಳಿದ ಹಾಗೆ. ಸಿರಿಧಾನ್ಯ ಬಳಸಬೇಕು, ಹತ್ತಿ ಬಟ್ಟೆಯಿಂದ ಖಾದಿ ಬಟ್ಟೆ ಬಳಸಬೇಕು, ರಾಸಾಯನಿಕಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು.

ಕಲ್ಮಶ ನಾಶಕ್ಕೆ ಇಷ್ಟಲಿಂಗ ಪೂಜೆ

ಅಂಗೈಯಲ್ಲಿ ಲಿಂಗವನ್ನು ಇಟ್ಟುಕೊಂಡು ಕಣ್ಣುಗಳನ್ನು ಕೀಲಿಸಿ ನೋಡುತ್ತ, ಓಂನಮಃ ಶಿವಾಯ ಎಂದು ಹೇಳಿದರೆ ನಮ್ಮ ಗಮನ ಕೇಂದ್ರೀಕೃತವಾಗುತ್ತದೆ. ಇದು ಇಷ್ಟಲಿಂಗ ಪೂಜೆ. ಆಗ ನಮ್ಮಲ್ಲಿನ ಕಲ್ಮಶ ನಾಶವಾಗುತ್ತದೆ. ಹೀಗೆ ನಿತ್ಯ ಇಷ್ಟಲಿಂಗವನ್ನು ಪೂಜಿಸಿದರೆ ಅಧ್ಯಾತ್ಮ ಸಾಧ್ಯವಾಗುತ್ತದೆ. ಇದನ್ನೇ ಶಿವಶರಣರು ಸಾರಿದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ʼಸಾಂಪ್ರದಾಯಿಕ ಆಚರಣೆಗಳುʼ ಕುರಿತು ಅವರು ಮಾತನಾಡಿದರು.

ಮದುವೆಯಲ್ಲಿ ಧರ್ಮೇಚ, ಅರ್ಥೇಚ ಹಾಗೂ ಕಾಮೇಚ ಎಂದು ಹೇಳುತ್ತಾರೆ. ಧರ್ಮೇಚ ಎಂದರೆ ಹೆಂಡತಿಯೊಂದಿಗೆ ಧರ್ಮದೊಂದಿಗೆ ನಡೆದುಕೊಳ್ಳುವೆ ಎಂದು. ಅರ್ಥೇಚ ಎಂದರೆ ಸಂಪಾದನೆಯಲ್ಲಿ ಕುಟುಂಬವನ್ನು ನೋಡಿಕೊಳ್ಳುವುದು ಹಾಗೂ ಕಾಮೇಚ ಎಂದರೆ ಕುಟುಂಬವನ್ನು ಪ್ರೀತಿಸುವುದು ಎಂದು ಅರಿಯಬೇಕು ಎಂದು ಹೇಳಿದರು.

ಆಷಾಢದಲ್ಲಿ ಚೆನ್ನಾಗಿ ಮಳೆ ಬರುವುದರಿಂದ ಇತರ ಕಾರ್ಯಗಳು ಸಾಧ್ಯವಾಗುವುದಿಲ್ಲ. ಶ್ರಾವಣದಲ್ಲಿ ರೈತಾಪಿ ಕೆಲಸಗಳು ಮುಗಿದಿರುತ್ತವೆ. ಶ್ರಾವಣ ಎಂದರೆ ಶ್ರವಣವೂ ಹೌದು ಅಂದರೆ ಚಿಂತನೆ ಮಾಡಲು ಸಾಧ್ಯವಾಗುತ್ತದೆ.
ದೀಪಾವಳಿ ಹಬ್ಬದಲ್ಲಿ ಗೋಪೂಜೆ ಮಾಡುತ್ತೇವೆ. ಏಪ್ರಿಲ್-ಮೇ ತಿಂಗಳಲ್ಲಿ ಜಾತ್ರೆಗಳಾಗುತ್ತವೆ. ಕೃಷಿ ಕೆಲಸಗಳು ಮುಗಿದಿರುವುದರಿಂದ ರೈತರು ಖುಷಿಯಾಗಿರಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಸನ್ಮಾನ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಶಂಕರ್, ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರಾದ ಆರ್.ಜಿ. ಹಳ್ಳಿ ನಾಗರಾಜ, ಡಾ.ಎಂ.ಜಿ.ಮೂಳೆ ಹಾಗೂ ಕಲಾವತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಮುರಡಯ್ಯ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರಾದ ಪ್ರಕಾಶಕ ಆರ್.ಜಿ.ಹಳ್ಳಿ ನಾಗರಾಜ ಮಾತನಾಡಿ, ಪುಸ್ತಕ ಸಂಸ್ಕೃತಿ ಹೆಚ್ಚಿಸುವುದರ ಜೊತೆಗೆ ನಾಟಕಗಳ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಸಾಣೇಹಳ್ಳಿ ಮಠ ಎಂದರು.

ಕಲಾವಿದ ಮುರುಡಯ್ಯ ಮಾತನಾಡಿ, ನನಗೂ ಸಾಣೇಹಳ್ಳಿಗೂ ಅವಿನಾಭಾವ ಸಂಬಂಧವಿದೆ. ಸಿಜಿಕೆ ಅವರು ಈ ಸಾಣೇಹಳ್ಳಿಯನ್ನು ಪರಿಚಯಿಸಿದರು. ಈಮೂಲಕ ಕಲಾವಿದನಾದೆ. ಎಸ್ಎಸ್ಎಲ್ಸಿಯಲ್ಲಿ ಮಾತ್ರ ಓದಿದ ನಂತರ ಸಿಜಿಕೆ ಒಡನಾಟ ಸಿಕ್ಕಿತು. ಅವರು ಹಸಿವಿನ ಅರಿವನ್ನು ತೋರಿಸಿದವರು, ಭಿಕ್ಷೆಯನ್ನು ಶುದ್ಧಮನಸ್ಸಿನಿಂದ ಕೇಳಿದರೆ ಯಾರಾದರೂ ಭಿಕ್ಷೆ ಹಾಕುತ್ತಾರೆ ಎನ್ನುತ್ತಿದ್ದರು. ಅವರು ನನಗೆ ಯುನಿವರ್ಸಿಟಿಯಾದವರು, ಬೆಳಕಾದವರು ಎಂದರು.

ದಾನಿಗಳಾದ ಲೋಕೇಶ, ನಿಜಲಿಂಗಪ್ಪ, ಬಾಳಿಕಾಯಿ ಮೋಹನ, ನಟರಾಜ ಅವರನ್ನು ಪಂಡಿತಾರಾಧ್ಯ ಸ್ವಾಮಿಗಳು ಸನ್ಮಾನಿಸಿದರು.

ಖುಷಿಯಾಗಿರಲು ನಾಟಕ ನೋಡಿ

ಇಂದು ಮೊಬೈಲ್ ಫೋನ್ ಅತಿ ಹೆಚ್ಚು ಬಳಸುವ ಯುಗದಲ್ಲಿ ಸಾಣೇಹಳ್ಳಿಗೆ ಬಂದು ನಾಟಕ ನೋಡುವುದರ ಮೂಲಕ ಖುಷಿ ಅನುಭವಿಸುತ್ತೀರಿ. ಇಂಥ ಪುಣ್ಯ ಎಲ್ಲೆಡೆಯೂ ಸಿಗದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.

ಟಿವಿ ಬಂದಾಗ ನೋಡಬೇಡ, ಕೆಟ್ಟು ಹೋಗುತ್ತಿ ಎಂದು ನಮ್ಮಜ್ಜ ಹೇಳುತ್ತಿದ್ದ. ಆದರೆ ನಮ್ಮ ಮಕ್ಕಳಿಗೆ ಟಿವಿ ನೋಡಬೇಡಿ, ಮೊಬೈಲ್ ಫೋನ್ ಬಳಸಬೇಡಿ ಎಂದು ಹೇಳುತ್ತಿಲ್ಲ. ನಾಟಕ, ಸಿನಿಮಾ ನೋಡುವುದರಿಂದ ಕ್ರಿಯಾಶೀಲರಾಗುತ್ತೀರಿ. ಹೀಗೆ ಕ್ರಿಯಾಶೀಲರಾಗಲು ಪಂಡಿತಾರಾಧ್ಯ ಸ್ವಾಮಿಗಳು ಕಾರಣರಾಗಿದ್ದಾರೆ ಎಂದರು.

Share This Article
Leave a comment

Leave a Reply

Your email address will not be published. Required fields are marked *