ಸಾಣೇಹಳ್ಳಿ
ಇಲ್ಲಿನ ಲತಾ ಮಂಟಪದಲ್ಲಿ ನಡೆಯುತ್ತಿರುವ ಎರಡನೆಯ ದಿನದ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಕುರಿತು ಸಮಾನ ಮನಸ್ಕರ ಸಂವಾದ ನಡೆಯಿತು.
‘ಮತದಾರರ ಜವಾಬ್ದಾರಿ’ ಕುರಿತು ಮಾತನಾಡಿದ ಮುಖ್ಯಮಂತ್ರಿ ಚಂದ್ರು ಎಲ್ಲ ಕ್ಷೇತ್ರಗಳಲ್ಲಿ ರಾಜಕಾರಣ ಇದೆ. ರಾಜಕಾರಣದಲ್ಲಿ ಪರಿವರ್ತನೆಗಿಂತ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇವತ್ತು ಐವತ್ತು ಕೋಟಿ ಇದ್ದರೆ ಮಾತ್ರ ಚುನಾವಣೆ ಮಾಡಲು ಸಾಧ್ಯ ಎನ್ನುವ ವಾತಾವರಣ ನಿರ್ಮಾಣ ಆಗ್ತ ಇದೆ. ಅದರ ಬದಲಾಗಿ ಸಾಲಗಾರರೆಲ್ಲಾ ಸೇರಿ ಒಂದಾಗಿ ಚುನಾವಣೆ ಮಾಡುವ ಪರ್ಯಾಯ ಕಾರ್ಯ ಆಗಬೇಕು. ವಿಚಾರ ಕ್ರಾಂತಿ ಎನ್ನುವುದು ವಿಚಾರಗಳ ವಾಂತಿಯಾಗುತ್ತಿವೆ. ಇದಕ್ಕೆ ಕಸಪೊರಕೆಯ ಅವಶ್ಯಕತೆ ಇದೆ.
ಇದಕ್ಕೆಲ್ಲಾ ಜವಾಬ್ದಾರಿ ಮತದಾರ. ಮತದಾರನಿಗೆ ತಿಳಿವಳಿಕೆಯ ಅವಶ್ಯಕತೆ ಇದೆ. ರಾಮಮಂದಿರ ಎಂದು ಹೇಳುವವರು, ಕುಂಭಮೇಳ ಎನ್ನುವವವರು, ಕುಟುಂಬ ರಾಜಕಾರಣದಿಂದ, ಮೌಢ್ಯವನ್ನು ಬಿತ್ತುವವರು ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕ್ರಾಂತಿ ಎನ್ನುವುದು ಒಂದೇ ದಿನದಲ್ಲಿ ಆಗುವಂಥದ್ದಲ್ಲ. ಅದಕ್ಕೆ ಸಮಯಬೇಕು. ಉಳ್ಳವರ ಮನೆ ಬಿಟ್ಟು ಇಲ್ಲದವರ ಮನೆಗೆ ಬೆಂಕಿ ಹಚ್ಚುವ ಕೆಲಸ ನಡೀತಾ ಇದೆ. ಗಣರಾಜ್ಯ ಗುಣರಾಜ್ಯವಲ್ಲ. ಮತದಾರರನ್ನು ಭ್ರಷ್ಟಾಚಾರಿಗಳನ್ನು ಮಾಡಿದರೆ ರಾಜಕಾರಣಿಗಳ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಾಧ್ಯ ಎನ್ನುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ.

ನಮ್ಮ ರಾಜ್ಯದಲ್ಲಿ ಪುಡಾರಿಗಳ ಸಂಖ್ಯೆ ಹೆಚ್ಚಿದೆ. ಸಾತ್ವಿಕರು ಇಲ್ಲ. ನದಿ ಮೂಲವನ್ನೇ ಕೆಡಿಸಿ ಹೊರಗೆ ಶುದ್ಧಿ ನೀರನ್ನು ಹುಡುಕುತ್ತಿರುವ ರಾಜಕಾರಣಿಗಳು ಇದ್ದಾರೆ. ಕಡ್ಡಾಯ ಮತದಾನದ ಮೂಲಕ ಅಭಿವೃದ್ಧಿಯಾಗುವ ಕೆಲಸ ಆಗಬೇಕು.
ಮತ ಮಾರಾಟ ಆಗುತ್ತಿದೆ. ಮತ ಜಾತಿಯಾಗುತ್ತಿದೆ. ಮತ ಧರ್ಮವಾಗುತ್ತಿದೆ. ಮತ ಪರಂಪರೆಯಾಗುತ್ತಿದೆ. ಮತ ಬಲಾಢ್ಯರ ಕೈವಶ ಆಗ್ತಾ ಇದೆ. ಮತ ಗ್ಯಾರಂಟಿ ಆಮಿಷಕ್ಕೆ ಒಳಗಾಗುತ್ತಿದೆ. ಮತ ಅಸ್ಥಿತ್ವದ ವಶವಾಗುತ್ತಿದೆ. ಹಿಂದೆಲ್ಲಾ ಮಾನ ಮರ್ಯಾಯ ಮುಖ್ಯವಾಗಿತ್ತು. ಇವತ್ತು ಹಣ, ಅಧಿಕಾರ ಮುಖ್ಯವಾಗಿದೆ. ನಮ್ಮಲ್ಲಿ ಪರಿವಾರ ರಾಜಕಾರಣ ಬೇರೂರಿದೆ. ಇದರಿಂದ ಭ್ರಷ್ಟಚಾರ ಎಡೆಮಾಡುತ್ತಿದೆ. ಕುಟುಂಬದಲ್ಲಿ ಒಳಮೀಸಲಾತಿಯಾಗಿರುವುದು ದೊಡ್ಡ ದುರಂತ. ಜನರ ಮನಸ್ಸನ್ನು ಪರಿವರ್ತನೆ ಮಾಡಬೇಕಾದರೆ ಜನಾಂದೋಲನ ಮಾಡಬೇಕಾದ ಅನಿವಾರ್ಯತೆ ಇದೆ. ಆಗ ಮತದಾರ ಪರಿವರ್ತನೆ ಮಾಡಲು ಸಾಧ್ಯ. ನಮ್ಮ ಆಲ್ಟರ್ನೇಟಿವ್ ವ್ಯವಸ್ಥೆ ಜಾರಿಗೆ ಬಂದಾಗ ಬದಲಾವಣೆ ಸಾಧ್ಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಮನುಷ್ಯ ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯ ಈ ಐದು ಕ್ಷೇತ್ರಗಳಲ್ಲಿ ಸುಧಾರಣೆ ಆಗದೇ ಇದ್ದರೆ ನಮ್ಮ ಬದುಕು ದುರಂತವಾಗುತ್ತದೆ.
ಮತದಾನ ಕಡ್ಡಾಯವಾಗಬೇಕು. ಇಲ್ಲವಾದರೆ ಸೌಲಭ್ಯಗಳು ನಿಲ್ಲಿಸಬೇಕು. ಯಾವುದೇ ಆಮಿಷಕ್ಕೆ ಬಲಿಯಾಗದೇ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಗುಪ್ತ ಮತದಾನ ಗುಪ್ತವಾಗಿಯೇ ನಡೆಯಬೇಕು. ಯಾವ್ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ ಎನ್ನುವುದನ್ನು ಬಹಿರಂಗ ಪಡಿಸಬಾರದು. ಸರ್ವೋದಯದಲ್ಲಿರುವವರು ಯಾರೂ ರಾಜಕೀಯಕ್ಕೆ ಹೋಗಬಾರದು. ತಾತ್ವಿಕರನ್ನು ಬೆಂಬಲಿಸುವ ಕಾರ್ಯ ಮಾಡಬೇಕು. ಪ್ರಾಮಾಣಿಕರಾಗಿರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ನಮ್ಮನ್ನು ನಾವು ಆತ್ಮಶುದ್ಧಿಯಾಗಿಟ್ಟುಕೊಳ್ಳಬೇಕು. ಎಲ್ಲ ಸುಧಾರಣೆಗೆ ಶಕ್ತಿ ತುಂಬುವಂಥದ್ದು ರಾಜಕೀಯ.
ಧರ್ಮ ಮತ್ತು ರಾಜಕೀಯ ಇವೆರೆಡು ಒಂದು ನಾಣ್ಯದ ಎರಡು ಮುಖಗಳು. ಇವೆರೆಡು ಕ್ಷೇತ್ರಗಳು ಸುಧಾರಣೆಯಾದರೆ ಐದು ಕ್ಷೇತ್ರಗಳು ಸುಧಾರಣೆ ಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಕುಂಬಾರ ಗುರುಪೀಠ ಬಸವಮೂರ್ತಿ ಕುಂಬಾರ ಕುಂಡಯ್ಯ ಸ್ವಾಮೀಜಿ ಮಾತನಾಡಿ ಸರ್ವೊದಯದ ಮೂಲಕ ನಮ್ಮ ಭವಿಷ್ಯವನ್ನು ರೂಪಿಸುವ ಕೆಲಸ ಆಗಬೇಕು. ಇದಕ್ಕೆ ನಾವೆಲ್ಲರೂ ಶ್ರಮವಹಿಸಿ ತಪ್ಪುಗಳು ಆಗುವುದನ್ನು ವಿರೋಧಿಸೋಣ. ಪರಿಸರಕ್ಕೆ ಬೆಂಕಿ ಇಡುವ ಕೆಲಸ ಮಾಡಬಾರದು ಎಂದರು.
ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಮಾತನಾಡಿ; ನಮ್ಮಲ್ಲಿ ದೀಪ ಬೆಳಗಿಸುವ ಕೆಲಸಕ್ಕಿಂತ ಬೆಂಕಿ ಹಚ್ಚುವ ಕೆಲಸ ಹೆಚ್ಚಾಗಿದೆ. ನಮ್ಮೊಳಗೆ ಅರಿವಿನ ಬೆಳಕು ಕಾಣಬೇಕು. ಮಧ್ಯಪಾನ ಕೆಟ್ಟದ್ದೆಂದು ಎಲ್ಲರಿಗೂ ಗೊತ್ತಿದೆ. ಮದ್ಯಪಾನ ನಿಷೇಧ ಮಾಡುವ ಮಂಡಳಿ ನಿರ್ಮಾಣ ಮಾಡುವುದರ ಬದಲಾಗಿ ಮದ್ಯಪಾನ ನಿಷೇಧ ಮಾಡಬೇಕು. ಕೋಟ್ಯಾಂತರ ಜನರ ಬದುಕು ಮದ್ಯಪಾನದಲ್ಲಿದೆ. ಇದರಿಂದ ಅವರ ಬದುಕು ದುರಂತದಲ್ಲಿ ಅಂತ್ಯವಾಗಬಾರದು. ನಮ್ಮಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಆಗ್ಬೇಕು. ಸರ್ವೋದಯದ ಚಿಂತನೆಗಳು ಅಭಿವೃದ್ಧಿಯಾಗಬೇಕಾದರೆ ನಾವುಗಳು ಸರಿಯಾಗಬೇಕು. ಸತತ ಪ್ರಯತ್ನ ಆದರೆ ಜನರನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲು ಸಾಧ್ಯ ಎಂದರು. ನಡೆ ನುಡಿ ಒಂದಾಗಬೇಕು. ನಡೆ ನುಡಿ ಒಂದಾಗುವ ಕೆಲಸ ಮಾಡಬೇಕು ಎಂದರು.

‘ರಾಜಕಾರಣದಲ್ಲಿ ಪರಿವರ್ತನೆ’ ಕುರಿತು ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ; ಮುಖ್ಯವಾಗಿ ರಾಜಕಾರಣದಲ್ಲಿ ಪರಿವರ್ತನೆ ಆಗುವುದಕ್ಕಿಂತ ಚುನಾವಣೆ ಸುಧಾರಣೆ ಆಗಬೇಕು. ವ್ಯವಸ್ಥೆಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ಜವಾಬ್ದಾರಿ ಮತದಾರನ ಕೈಯಲ್ಲಿದೆ. ಮತದಾರ ಸರಿಯಾದರೆ ನೇತಾರ ಸರಿಯಾಗುವನು. ಇಷ್ಟೆಲ್ಲಾ ಕೆಡುವುದಕ್ಕೆ ಕಾರಣ ರಾಜಕಾರಣ. ಧನಾತ್ಮಕವಾಗಿ ಪರಿವರ್ತನೆ ಆಗಬೇಕು. ಕುವ್ಯವಸ್ಥೆಯಿಂದ ಅವ್ಯವಸ್ಥೆಗೆ, ಅವ್ಯವಸ್ಥೆಯಿಂದ ವ್ಯವಸ್ಥೆಗೆ ತರುವುದೇ ಪರಿವರ್ತನೆ. ಆದರೆ ಇದು ನಮ್ಮ ರಾಜಕಾರಣದಲ್ಲಿ ಆಗ್ತಾ ಇಲ್ಲ. ಸುವ್ಯವಸ್ಥೆಯಿಂದ ಕುವ್ಯವಸ್ಥೆಯ ಕಡೆಗೆ ಹೋಗುತ್ತಿರುವುದು ದೊಡ್ಡ ದುರಂತ. ನಾಳೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕಾದರೆ ಇಂದು ಏನಾಗುತ್ತಿದೆ ಎಂದು ಅರಿಯುವುದು ಸೂಕ್ತ. ಸರ್ವೋದಯದಲ್ಲಿ ನಿರ್ಣಯಗಳು ಆಗುವ ಸಂದರ್ಭದಲ್ಲಿ ಚರ್ಚೆಯಾಗುವ ಅಗತ್ಯ ಇದೆ.
ಜಗತ್ತಿನ ಕುಬೇರರಲ್ಲಿ ಭಾರತದ ಕುಬೇರರು ೨೭೧ ಇದ್ದಾರೆ. ಇದರಲ್ಲಿ ಒಂದು ವರ್ಷದಿಂದೀಚಿಗೆ ೯೪ ಜನ ಕುಬೇರರು ಆ ಪಟ್ಟಿಗೆ ಹೊಸದಾಗಿ ಸೇರಿದ್ದಾರೆ. ಅಂದರೆ ಭಾರತದಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ ಅವರೆಲ್ಲರೂ ರಾಜಕಾರಣಿಗಳೇ. ಬಡವರು ಬಡವರಾಗಿಯೇ ಇದ್ದಾರೆ ಅವರೆಲ್ಲರೂ ಕೃಷಿಕರು, ಶ್ರಮಜೀವಿಗಳು. ಈ ತಾರತಮ್ಯವನ್ನು ಹೋಗಲಾಡಿಸಬೇಕಾದರೆ ಮತದಾರ ಜಾಗೃತನಾಗಬೇಕು. ಆಗ ಮಾತ್ರ ಪರಿವರ್ತನೆ ತರಲು ಸಾಧ್ಯ.
ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ ೨ನೆಯ ದೇಶ ಭಾರತ. ಮುಖ್ಯವಾಗಿ ಪರಿಸರ ಪರಿವರ್ತನೆ ಆಗಬೇಕು. ಪರಿಸರ ಜನಜಾಗೃತಿಯಾಗಬೇಕು. ಆಗ ಆರೋಗ್ಯಯುತವಾದ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಆದರೆ ನಮ್ಮ ದೇಶ ಆರ್ಥಿಕತೆಯಲ್ಲಿ ಶ್ರೀಮಂತ ನಂಬರ್ ಒನ್ ದೇಶ. ಆದರೂ ಎಲ್ಲ ಕ್ಷೇತ್ರಗಳು ಬಡತನದಲ್ಲಿ ಬೇಯ್ತಾ ಇದೆ. ಸಂಪತ್ತಿನ ಹಂಚಿಕೆ ಶ್ರೀಮಂತರ ಕೈವಶ ಆಗಿದೆ. ನಮ್ಮ ದೇಶ ಶ್ರೀಮಂತರ ಕೈಯಲ್ಲಿ ಕೊಡುವುದು ಸ್ವಾತಂತ್ರ್ಯವಲ್ಲ. ಹಾಗೇನಾದರೂ ಮಾಡಿದರೆ ‘ರಾವಣ ರಾಜ್ಯ ತಪ್ಪಿ, ಕುಂಬಕರ್ಣದ ರಾಜ್ಯವಾಗುವುದು’ ಎಂದು ಗಾಂಧೀಜಿಯವರು ಹೇಳಿದರು. ಅದು ನಮ್ಮ ದೇಶದಲ್ಲಿ ಆಗ್ತಾ ಇದೆ.
ನಮ್ಮ ಸರ್ವೋದಯ ಬಡವರು ಶ್ರೀಮಂತರು ಎಂದು ಗುಂಪು ಮಾಡಿ ಬಡವರೆಲ್ಲಾ ಒಂದಾದಾಗ ಮಾತ್ರ ಪರಿವರ್ತನೆಯ ಗಾಳಿ ಬೀಸಬೇಕು. ಈ ರಾಜ್ಯದ ‘ಬಡವರೆಲ್ಲಾ ಒಂದಾಗಿ’ ಎನ್ನುವ ಕರೆಯನ್ನು ಪಂಡಿತಾರಾಧ್ಯ ಶ್ರೀಗಳು ಕೊಟ್ಟಾಗ ಮಾತ್ರ ಪರಿವರ್ತನೆ ತರಲು ಸಾಧ್ಯ.
‘ಭ್ರಷ್ಟಾಚಾರಮುಕ್ತ ರಾಜಕಾರಣ’ ಕುರಿತು ಎಎಪಿ ಪಕ್ಷದ ಅಧ್ಯಕ್ಷ ರವಿ ಕೃಷ್ಣರೆಡ್ಡಿ ಮಾತನಾಡಿ; ನಮ್ಮಲ್ಲಿ ಕಳ್ಳರು, ಭ್ರಷ್ಟರು ಬಂದು ಚುನಾವಣೆಗೆ ನಿಲ್ಲುವರು. ಇದರಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರ ಬೆಳೆಯುತ್ತಲೇ ಇದೆ. ಉಗ್ರ ಕ್ರಾಂತಿಯ ಮೂಲಕ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಬೇಕು. ತಂತ್ರದ ಹುಡುಕಾಟದಲ್ಲಿ ಹುಡುಕಿ ನಾವೆಲ್ಲರೂ ಸೋತಿದ್ದೇವೆ. ಸಮೂಹವನ್ನು ಒಳ್ಳೆಯದಕ್ಕೆ ಪ್ರೇರೆಪಿಸುವಂಥ ಕೆಲಸ ಆಗಬೇಕು. ಗಾಂಧಿ ಟೋಪಿಯನ್ನು ಹಾಕಿಕೊಂಡು ಅಶಾಂತಿಗೆ ಹೋಗಬಾರದು. ಹೋರಾಟ, ಅಹಿಂಸೆ, ಉಗ್ರತೆಯಿಂದ ಕೂಡಿರಬಾರದು. ಇವತ್ತು ಮನೋರಂಜಿಸಲಿರುವುದು ತುಂಬ ಸುಲಭ. ಪ್ರಜಾಪ್ರಭುತ್ವದ ರಾಜ್ಯದಲ್ಲಿ ಮೂಲ ಭ್ರಷ್ಟಾಚಾರ. ಮೋಸ, ವಂಚನೆ, ಸುಳ್ಳು ಇವೆಲ್ಲಾ ಭ್ರಷ್ಟ ಆಚಾರ. ಆದರೆ ಕಣ್ಣಿಗೆ ಕಾಣುವಂಥದ್ದು ಹಣ ದುರ್ವ್ಯವಹಾರ. ಇದು ಕರ್ನಾಟಕದಲ್ಲಿ ವಿಜೃಂಭಿಸುತ್ತಿದೆ.
ಸಾರ್ವಜನಿಕರ ಆಸ್ತಿಯನ್ನು ಖಧೀಮರು, ಅಧಿಕಾರಿಗಳು, ರಾಜಕಾರಣಿಗಳು ಸುಳ್ಳು ದಾಖಲೆಯನ್ನು ಸೃಷ್ಟಿಸಿ ಲಪಾಟಾಯಿಸುತ್ತಿದ್ದಾರೆ. ಹಣವನ್ನು ಬಳಸಿಕೊಂಡು ಸಮಾಜದಲ್ಲಿ ಪ್ರಭಾವಿಯಾಗುತ್ತಿದ್ದಾರೆ. ಪಟ್ಟಣಗಳಲ್ಲಿ ಕೆರೆ, ಕುಂಟೆ, ಹಳ್ಳಗಳನ್ನು ನುಂಗಿದವರು ಇವತ್ತು ವಿಧಾನಸಭೆಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ಇವತ್ತಿನ ರಾಜಕಾರಣಿಗಳು ಎಜುಕೇಷನ್ ಬ್ಯುಜಿನೆಸ್ ಮಾಡಿಕೊಂಡಿದ್ದಾರೆ. ಸರಕಾರ ಶಾಲೆಗಳನ್ನು ಮುಚ್ಚುತ್ತಿವೆ. ಕಾರಣ ಇವತ್ತು ಖಾಸಗಿಯವರಿಂದ ಶಿಕ್ಷಣ ದಂಧೆಯಾಗಿರುವುದು. ಭ್ರಷ್ಟ ಮಠಾಧೀಶರು, ರಾಜಕಾರಣಿಗಳು ಹಲವಾರು ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲ. ಭ್ರಷ್ಟ ಮಠಾಧೀಶರು ಅಲ್ಲಿ ಕಾಲೇಜ್‌ಗಳನ್ನು ಸ್ಥಾಪನೆ ಮಾಡೋದಕ್ಕೆ ಬಿಡುತ್ತಿಲ್ಲ.
ನಮ್ಮ ದೇಶದಲ್ಲಿ ಸತ್ವಯುತ ರಾಜಕಾರಣದಲ್ಲಿ ಭ್ರಷ್ಟ, ದುಷ್ಟ, ವಾಮ ಮಾರ್ಗದ ವ್ಯಕ್ತಿಗಳು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲರೂ ವ್ಯಕ್ತಿಗತವಾಗಿ ಒಳ್ಳೆಯವರೇ. ಆದರೆ ಸಾಮಾಜಿಕವಾಗಿ ಬಂದರೆ ನಾವೆಲ್ಲರೂ ಭ್ರಷ್ಟರೇ. ಹಿಂದೆಲ್ಲಾ ಸಣ್ಣಪುಟ್ಟ ವಸ್ತುಗಳನ್ನು ಕದ್ದರೆ ಕಠಿಣ ಶಿಕ್ಷೆ ಇತ್ತು. ಈಗ ಇಡೀ ದೇಶವನ್ನೇ ಕೊಳ್ಳೆ ಹೊಡೆದರೂ ಶಿಕ್ಷಿಸದ ಪರಿಸ್ಥಿತಿಯಲ್ಲಿ ನಮ್ಮ ವ್ಯವಸ್ಥೆ ಇದೆ. ನಮ್ಮ ಮೌಲ್ಯಗಳು ಅಧಃಪತನ ಹೊಂದುವರ ಕಡೆಗೆ ಹೋಗುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತ ರಾಜಕಾರಣ ಆಗ್ಬೇಕು. ಪ್ರಾಮಾಣಿಕರು, ಸಜ್ಜನರು, ತಾತ್ವಿಕರು ರಾಜಕಾರಣದಲ್ಲಿದ್ದಾಗ ಮಾತ್ರ ಭ್ರಷ್ಟಮುಕ್ತ ರಾಜಕಾರಣ ಬರಬೇಕು. ಚುನಾವಣೆ ವ್ಯವಸ್ಥೆ ಬದಲಾವಣೆ ಆದರೆ ಮಾತ್ರ ಸಾತ್ವಿಕರು, ಸಜ್ಜನರು ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯ. ಚುನಾವಣೆ ಬದಲಾಗಬೇಕೆಂದರೆ ಜನರಲ್ಲಿ ಜಾಗೃತಿ ಮಾಡುವ ಕೆಲಸ ಸರ್ವೋದಯ ತಂಡದಿಂದ ಆಗ್ಬೇಕು. ನೈತಿಕ ಒತ್ತಡದಿಂದ ಕ್ರಿಯೆಯಲ್ಲಿ ತರಬೇಕು. ನಾವೆಲ್ಲರೂ ಹುಡುಕಾಟದಲ್ಲಿದ್ದೇವೆ. ಹುಡುಕಾಟದಲ್ಲಿದ್ದಾಗ ತಪ್ಪುಗಳಾಗುವುದು ಸಹಜ. ಶ್ರಮದ ಮೂಲಕ ಸಂಪಾದನೆ ಮಾಡಿದರೆ ತಪ್ಪೇನಿಲ್ಲ. ಆದರೆ ಮೋಸ, ವಂಚನೆಯಿಂದ ಮಾಡುತ್ತಿರುವುದೇ ಭ್ರಷ್ಟಾಚಾರ ಎಂದರು.
‘ಪ್ರಸ್ತುತ ರಾಜಕಾರಣದ ಮುನ್ನೋಟ’ದ ಬಗ್ಗೆ ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ; ಶ್ರೀಮಂತರ ಬಗ್ಗೆ ಯೋಚಿಸುವುದಕ್ಕಿಂತ ಬಡವರ ಬಗ್ಗೆ ಕಾಳಜಿ ವಹಿಸಬೇಕು. ಶ್ರೀಮಂತಿಕೆ ಎಂದರೆ ಬರೀ ಹಣದಿಂದ ಮಾತ್ರ ಅಳೆಯದೇ ನಮ್ಮ ಭಾವನೆಗಳಿಂದ ಅಳೆಯಬೇಕು. ಬೇಕು ಬೇಕು ಎಂದವರೆಲ್ಲಾ ಬಡವರೇ. ಸಾಕು ಸಾಕು… ಎನ್ನುವವರು ಶ್ರೀಮಂತರು. ಮನುಷ್ಯ ಯಾವಾಗಲೂ ತಪ್ಪುಗಳ ಬಗ್ಗೆ ಮಾತನಾಡಿದರೆ ಹೆಚ್ಚಿನ ತಪ್ಪಾಗುವುದು. ಆದರೆ ತಪ್ಪುಗಳ ಬಗ್ಗೆ ಮಾತನಾಡದೇ ಒಳ್ಳೆಯದರ ಕಡೆ ಗಮನಹರಿಸಬೇಕು. ಮನುಷ್ಯನ ದೃಷ್ಠಿಕೋನಕ್ಕೆ ಸಿಕ್ಕಿಕೊಂಡರೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ನಮ್ಮ ಆಲೋಚನೆ, ಭಾವನೆಗಳು ಬಯಲಿನಲ್ಲಿ ನಿಂತು ಖುಷಿಪಡಬೇಕು. ಕ್ರಿಯೆಯನ್ನು ಯಾವ ಮನಸ್ಸಿನಿಂದ ಮಾಡುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಆಕ್ರೋಶ ಬೇರೆಯವರ ಮೇಲೆ ತೋರಿಸದೇ ನಾನು ಏನು ಮಾಡಲು ಸಾಧ್ಯ ಎನ್ನುವ ಆಲೋಚನೆ ಮಾಡಬೇಕು. ಭವಿಷ್ಯದ ಕಡೆಗೆ ಹೆಚ್ಚು ಹೆಚ್ಚು ಚಿಂತನೆ ಮಾಡಬೇಕು. `ಮನ್ ಕೀ ಬಾತ್‌ನಿಂದ ದಿಲ್ ಕೀ ಬಾತ್’ ಕಡೆಗೆ ಹೋಗಬೇಕು. ಔಪಚಾರಿಕ ಮಾತುಗಳಿಗಿಂತ ಅನೌಪಚಾರಿಕವಾದ ಸಂಬಂಧವನ್ನಿಟ್ಟುಕೊಂಡು ಮಾತನಾಡಬೇಕು. ರಾಜಕಾರಣ ಸೀರಿಯಸ್ ಮಾಡೋದಲ್ಲ. ತಮಾಷೆಯ ಹಲವು ಮಜಲುಗಳ ಮೂಲಕ ಮಾಡಬೇಕು. ರಾಜಕಾರಣ ಅದೊಂದು ಪ್ರವೃತ್ತಿಯೆಂದು ತೆಗೆದುಕೊಳ್ಳಬೇಕು. ಇಲ್ಲಿರುವವರೆಲ್ಲರೂ ಸ್ನೇಹ, ಪ್ರೀತಿಯನ್ನಿಟ್ಟುಕೊಂಡು ಸ್ಪೇಸ್ ಆಗಬೇಕು.
ಹಣದ ಜೊತೆ ಸಂಬಂಧ ಬಿಟ್ಟರೆ ಉಳಿದೆಲ್ಲವೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿದ್ದೇವೆ. ಅನಿವಾರ್ಯತೆ ಇದ್ದಾಗ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಬರುವುದು. ಆದರೆ ಅನಿವಾರ್ಯತೆ ಯಾರಿಗೂ ಬರಬಾರದು. ಸರ್ವೋದಯದ ಗುಂಪಿಗೆ ಎಲ್ಲರೂ ಸೇರಿ ಶಕ್ತಿ ತುಂಬಬೇಕು. ಮಾತಿಗಿಂತ ಬದ್ಧತೆ ಮುಖ್ಯ. ಬದ್ಧತೆ ಮಾತು ಹಾಗೂ ಕೃತಿಗಿಳಿಯಬೇಕು.

‘ಪರಿಸರ ರಾಜಕಾರಣ’ ಕುರಿತು ಬೈರೇಗೌಡ ಮಾತನಾಡಿ; ಪರಿಸರ ನಿಯಮ, ಕಾನೂನುಗಳು ಅರಿವು ಮೂಡಿದಾಗ ಪರಿಸರದ ಕಾಳಜಿ ಬರೋದಕ್ಕೆ ಸಾಧ್ಯ. ವಿನಾಶ ಆಗುವವರೆಗೂ ನಾವು ಎಚ್ಚರಗೊಳ್ಳುವುದಿಲ್ಲ. ಕಾನೂನುಗಳನ್ನು ತಿಳಿದುಕೊಳ್ಳದೇ ಬದಲಾವಣೆ ಅಸಾಧ್ಯ. ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳುಮಾಡುತ್ತಿದ್ದೇವೆ. ಬೆಂಗಳೂರಿನ ಸುತ್ತಮುತ್ತ ಇರುವ ಕೆರೆಗಳ ನೀರು ಕಲುಷಿತಗೊಂಡಿದೆ. ಇದನ್ನು ಶುದ್ಧಿಕರಣ ಮಾಡಿ ಪರೀಕ್ಷೆಗೆ ಒಳಪಡಿಸಿದರೆ ಕುಡಿಯಲಿಕ್ಕೆ ಯೋಗ್ಯವಲ್ಲ ಎಂದು ರಿಜಲ್ಟ್ ಬಂತು. ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಬರಬೇಕು. ಪ್ರತಿಯೊಬ್ಬ ಮನುಷ್ಯ ವಿಜ್ಞಾನಿಯೇ. ಪರಿಸರ ಜಾಗೃತವಾಗಬೇಕಾದರೆ ರೈತ ಸಂಘಗಳು ಜವಾಬ್ದಾರಿ ವಹಿಸಿಕೊಳ್ಳಬೇಕು.
‘ಕೃಷಿ ಮತ್ತು ರಾಜಕಾರಣ’ದ ಬಗ್ಗೆ ಚಂದ್ರಶೇಖರ ನಾರಣಾಪುರ ಮಾತನಾಡಿ; ಕೃಷಿ ಹೊಟ್ಟಿಪಾಡಿಗಾಗಿ ಮಾಡುವುದಲ್ಲ. ಕೃಷಿಕ್ಷೇತ್ರ ಬೇರೆ ದೇಶಗಳ ಹುನ್ನಾರದಿಂದ ನಮ್ಮ ದೇಶದಲ್ಲಿ ಹಾಳಾಗಿದೆ. ಹಿಂದೆಲ್ಲಾ ತನ್ನ ಕುಟುಂಬದವರೆಲ್ಲಾ ಸೇರಿಕೊಂಡು ಕೃಷಿಯನ್ನು ಮಾಡಿ ಸ್ವಾವಲಂಬಿ ಜೀವನ ಮಾಡುತ್ತಿದ್ದರು. ಈಗ ಸಹಕಾರಿ ಸಂಘಗಳ ಮೂಲಕವಾಗಿ ರೈತರಿಗೆ ಹಣ ಕೊಡುವ ಕೆಲಸ ಪ್ರಾರಂಭವಾಯಿತು. ಆಗ ಪೂರ್ಣ ಪ್ರಮಾಣದಲ್ಲಿ ಪರಾವಲಂಬಿ ಕುಟುಂಬಗಳು ಹುಟ್ಟಿಕೊಂಡು ಕೃಷಿ ಹಾಳಾಯಿತು. ಕೃಷಿ ಕ್ಷೇತ್ರ ಬರುಬರುತ್ತಾ ಪರಾವಲಂಬಿ ಕ್ಷೇತ್ರವಾಗಿದೆ. ಕಾರ್ಪೋರೇಟ್ ಸಂಸ್ಥೆಗಳು ಮಾರುವಂಥ ಬೀಜಗಳನ್ನು ಕೊಂಡು ಬಿತ್ತುವ ಹುನ್ನಾರು ನಮ್ಮ ಕರ್ನಾಟಕದಲ್ಲಿ ನಡೀತಾ ಇದೆ. ಬೀಜಕ್ಕೂ ಕರುಳಿಗೂ ಸಂಬಂಧ ಇದ್ದರಿಂದ ನಮ್ಮ ಆರೋಗ್ಯ ಹಾಳಾಯಿತು. ಹೈಬ್ರಿಡ್ ಬೀಜಗಳಿಗೆ ಯಾವುದೇ ಅನ್ನದ್ರವ್ಯಗಳ ಅಂಶ ಇಲ್ಲವಾದ್ದರಿಂದ ನೂರೆಂಟು ರೋಗಗಳು ಬಂದು ರೋಗಗ್ರಸ್ಥರಾಗಿದ್ದೇವೆ. ಹೈಬ್ರೀಡ್ ಸಂಸ್ಕೃತಿ ಬೆಳೆದಂತಹ ಕಾರ್ಪೋರೇಟ್ ಸಂಸ್ಥೆಗಳು ದೊಡ್ಡದಾದವು. ಇವತ್ತು ಕೃಷಿಕ ಭಾರತದಲ್ಲಿ ಶ್ರೀಮಂತನಾಗಿದ್ದಾನೆ. ಹಳ್ಳಿಗಳಲ್ಲಿ ರೈತ ಕುಟುಂಬಗಳು ಸಂಪೂರ್ಣವಾಗಿ ಪರಾವಲಂಬನೆ ಜೀವನ ನಡೆಸುತ್ತಿದ್ದಾರೆ. ಇವತ್ತು ಆಡಳಿತ ಕಾರ್ಪೋರೇಟ್ ವ್ಯವಸ್ಥೆಯ ಕೈಯಲ್ಲಿ ಸಿಕ್ಕಿದೆ. ಸಾಯವಯ ಕೃಷಿಯಲ್ಲಿಯೂ ಮಾಫಿಯಾ ನಡೆಯುತ್ತಿದೆ. ನೈಸರ್ಗಿಕ ಹಾಗೂ ಸಾವಯವ ಕೃಷಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ನಡೆಸಬೇಕು. ಈ ಕೆಲಸವನ್ನು ಕೃಷಿ ವಿದ್ಯಾಲಯ ಮಾಡಬೇಕು. ಕೃಷಿ ವಿದ್ಯಾವಿದ್ಯಾಲಯ ಕೃಷಿಯ ಪಟ್ಟಿಯನ್ನು ಬದಲಾವಣೆ ಮಾಡಬೇಕು. ಹೈಬ್ರೀಡ್ ಬೀಜಗಳ ದಾಹದಿಂದ ೬೦೦ ಆಣೆಕಟ್ಟುಗಳು ನಿರ್ಮಾಣ ಆಗಿ ಕಾರ್ಬೋರೇಟ್ ಪ್ರಮಾಣ ಹೆಚ್ಚಾಗಿದೆ. ಅದರಿಂದ ತಾಪಮಾನ ಹೆಚ್ಚಾಗಿದೆ. ಇದರ ಪರಿಣಾಮದ ಬಗ್ಗೆ ಚಿಂತನೆ ಮಾಡಬೇಕು. ಸರಕಾರಗಳು ನಮ್ಮ ರೈತರಿಗೆ ಮಾರ್ಗದರ್ಶನ ಕೊಡುವ ಅವಶ್ಯಕತೆ ಇದೆ ಎಂದರು.
‘ಶಿಕ್ಷಣ ಮತ್ತು ರಾಜಕಾರಣ’ದ ಬಗ್ಗೆ ಅಬ್ದುಲ್ ರೆಹಮಾನ್ ಪಾಷಾ ಮಾತನಾಡಿ; ಮತ ಎನ್ನುವುದು ಮೂಲಭೂತ ಹಕ್ಕು. ಅದನ್ನು ಸಾಲ ಕೊಡುವುದು, ಮಾರಿಕೊಳ್ಳುವುದು ಅಲ್ಲ. ಅದು ಹಕ್ಕಿನ ಚಲಾವಣೆ. ಆಂದೋಲನ ನಡುವೆ ಶಿಬಿರಗಳನ್ನು ನಡೆಸುವುದು ಸೂಕ್ತ. ಮನುಷ್ಯ ಭ್ರಮೆಯಲ್ಲಿ ಬದುಕುವುದಕ್ಕಿಂತ ವಾಸ್ತವತೆಯಲ್ಲಿ ಬದುಕುವುದು ಸೂಕ್ತ. ಭವ್ಯವಾದ ದೇಶ ಕಟ್ಟಬೇಕು ಎಂದರೆ ಆ ದೇಶದಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಕರ್ನಾಟದಲ್ಲಿ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹಿಂದಿನ ವರ್ಷಕ್ಕಿಂತ ಈ ವರ್ಷ ಶೇ ೨ರಷ್ಟು ಕಡಿಮೆ ಮಾಡಿದ್ದಾರೆ. ಶಿಕ್ಷಣ ಮೂಲಭೂತ ಹಕ್ಕು. ಶಿಕ್ಷಣದಲ್ಲಿ ಸುಲಭಗೊಳಿಸುವ ಜವಾಬ್ದಾರಿ ಸರಕಾರದ್ದು.
ಸರಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೂಲಭೂತ ಹಕ್ಕುಗಳನ್ನು ಕಾಸುಕೊಟ್ಟು ಕೊಂಡುಕೊಳ್ಳುವ ವ್ಯವಸ್ಥೆ ನಡೆಯುತ್ತಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯು ಮುಖ್ಯವಾಹಿನಿಯಾಗಬೇಕು. ಶಿಕ್ಷಕರು ಶಿಕ್ಷಕರಾಗಿಯೇ ಕೆಲಸ ಮಾಡೋದಕ್ಕೆ ಸಾಧ್ಯ ಇಲ್ಲ. ಅನೈತಿಕತೆಯೇ ಶಿಕ್ಷಕರ ನೈತಿಕತೆಯನ್ನು ಕಸಿದುಕೊಳ್ಳುತ್ತಿದೆ. ಬಿಸಿಯೂಟದಲ್ಲಿ ಸುಳ್ಳು ಲೆಕ್ಕ ಬರೆದು ಭ್ರಷ್ಟಾಚಾರ ನಡೆಯುತ್ತಿದೆ. ಸರಕಾರ ಮಕ್ಕಳನ್ನು ಸರಕುಗಳನ್ನಾಗಿ ಮಾಡಿಕೊಳ್ಳಬಾರದು. ನೂರು ವರ್ಷ ದಾಟಿದ ಕನ್ನಡ ಶಾಲೆಗಳಿವೆ. ಅವೀಗ ದುಸ್ಥಿತಿಯಲ್ಲಿವೆ. ಅದನ್ನು ಗುರುತಿಸಿ ಪುನಶ್ಚೇತನ ಕೆಲಸ ಸರಕಾರ ಮಾಡಬೇಕು.
ಆರಂಭದಲ್ಲಿ ಪಿ ವಿ ನಾರಾಯಣ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಿದರು. ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್, ಶರಣ ವಚನ ಗೀತೆಗಳನ್ನು ಹಾಡಿದರು. ಸಂವಾದದಲ್ಲಿ ಶಿವನಕೆರೆ ಬಸವಲಿಂಗಪ್ಪ, ಎಂ ಸಿ ನಾಡಗೌಡ, ರವಿ ಕೃಷ್ಣಾರೆಡ್ಡಿ, ರಾಘವನ್ ಮುಂತಾದವರು ಭಾಗವಹಿಸಿದ್ದರು