ಬೀದರ:
ಮಾನವನ ಉನ್ನತಿಗೆ ವಚನಗಳು ಪ್ರೇರಣಾದಾಯಕ. ವಚನಗಳು ಓದಿದರೆ ನಮ್ಮೆಲ್ಲರ ಅಂತರಂಗ ಶುದ್ಧವಾಗುತ್ತದೆ. ಮಕ್ಕಳಲ್ಲಿ ವಚನ ಓದುವ ಹವ್ಯಾಸ ಬೆಳೆಸಬೇಕು. ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಬೇಕೆಂದರೆ ಬಸವಾದಿ ಶಿವಶರಣರ ವಚನಗಳೇ ದಾರಿದೀಪ ಎಂದು ಹುಲಸೂರು ತಾಲೂಕಿನ ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ತಿಳಿಸಿದರು.
ಲಿಂಗಾಯತ ಮಹಾಮಠ ಗೊರಟ ಗ್ರಾಮದಲ್ಲಿ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಹಾಗೂ ಜಗದ್ಗುರು ಶ್ರೀ ಬಸವಕುಮಾರ ಶಿವಯೋಗಿಗಳು ಹುಲಸೂರು ಇವರ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವದ ನಿಮಿತ್ಯ ‘ಶರಣ ಸಂದೇಶ ಯಾತ್ರೆಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರು ನಮಗಾಗಿ ಪ್ರಾಣವನ್ನು ಕೊಟ್ಟು ವಚನ ಸಾಹಿತ್ಯ ಉಳಿಸಿದ್ದಾರೆ. ಉಳಿಸಿದ ವಚನಗಳು ಜನಮಾನಸದಲ್ಲಿ ಬಿತ್ತುವ ಕಾರ್ಯ ನಾವು ನೀವೆಲ್ಲ ಮಾಡಬೇಕಾಗಿದೆ.
12ನೇ ಶತಮಾನದ ನಂತರ ಆಗಿಹೋದ ಅನೇಕ ಶಿವಯೋಗಿಗಳ ಜೀವನ ಸಂದೇಶ ತಿಳಿಸುವ ನಿಟ್ಟಿನಲ್ಲಿ ಶರಣ ಸಂದೇಶ ಯಾತ್ರೆ ಕಾರ್ಯಕ್ರಮ ಪೂಜ್ಯ ಹುಲಸೂರಿನ ಶಿವಾನಂದ ಮಹಾಸ್ವಾಮಿಗಳ ಮಾರ್ಗದರ್ಶನದಂತೆ 50 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರುವ ರವೀಂದ್ರ ಕೊಳಕೂರ, ಶರಣೆ ಡಾ. ಜಯದೇವಿತಾಯಿ ಲಿಗಾಡೆಯವರ ಜೀವನ ಸಂದೇಶ ತಿಳಿಸುತ್ತಾ, ಜಯದೇವಿ ತಾಯಿಯವರು ಕನ್ನಡ ಮತ್ತು ವಚನ ಸಾಹಿತ್ಯದ ಕುರಿತು ಅಪಾರ ಪ್ರೇಮವನ್ನು ಹೊಂದಿದವರು. ಸಾವಿರಾರು ತ್ರಿಪದಿಗಳು ರಚಿಸಿರುವ ಜಯದೇವಿತಾಯಿ ಲಿಗಾಡೆಯವರು ತಮ್ಮ ಕೊನೆಯ ಜೀವನವನ್ನು ಬಸವಕಲ್ಯಾಣದಲ್ಲಿ ಕಳೆದ ಮಹಾನ್ ಶರಣೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿರುವ ಲಿಂಗಾಯತ ಮಹಾಮಠ ಗೋಟಾ೯ ಗ್ರಾಮದ ಪೀಠಾಧಿಪತಿಗಳಾಗಿರುವ ಪೂಜ್ಯ ಪ್ರಭುದೇವ ಮಹಾ ಸ್ವಾಮೀಜಿ, ಶರಣರ ಸಿದ್ದಾಂತ ನಡೆ-ನುಡಿಯ ಸಿದ್ಧಾಂತ. ನಡೆ-ನುಡಿಗೆ ಕರ್ತನು ನೀನೇ ಬಸವ ಎನ್ನುತ್ತಾರೆ ಶಿವಯೋಗಿ ಸಿದ್ದರಾಮೇಶ್ವರರು.
ನಮ್ಮ ಮಾತು ಇನ್ನೊಬ್ಬರ ಮನಸ್ಸು ಅರಳಿಸುವಂತಿರಬೇಕೆ, ವಿನಹ ಕೆರಳಿಸುವಂತಿರಬಾರದು. ಮಾತನಾಡಿದರೆ ಮುತ್ತಿನಂತಿರಬೇಕು ಸುತ್ತಮುತ್ತಿನವರು ಆಯಬೇಕು. ವಸ್ತು ಮಾಡಿ ಕೊರಳಾಗ ಧರಿಸಬೇಕು ಎಂದು ಜಯದೇವಿತಾಯಿ ಲಿಗಾಡೆಯವರು ತ್ರಿಪದಿಯಲ್ಲಿ ಹೇಳಿದ್ದಾರೆ. ಅಂತೆಯೆ ನಮ್ಮ ನುಡಿ ಲಿಂಗಮೆಚ್ಚಿ ಅಹುದಹುದು ಎನ್ನುವಂತೆ ಮಾತಾಡಬೇಕು. ಮಾತೆ ಜ್ಯೋತಿರ್ಲಿಂಗ ಎಂದು ಶರಣರು ತಿಳಿಸಿದ್ದಾರೆ. ಅಂತಹ ಪ್ರೀತಿ ತುಂಬಿದ ಮಾತುಗಳು ಆಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ದೇವಪ್ಪ ಮಹಾದೇವ ಮಹಾಜನ, ವಿಜಯಲಕ್ಷ್ಮಿ ರಾಜೋಳೆ, ಬಾಬುರಾವ ರಾಜೋಳೆ ಭಾಗವಹಿಸಿದರು.
ಸಂಗೀತ ರವಿ ಜಗಶೆಟ್ಟಿ ಪ್ರಸಾದ ದಾಸೋಹ ಗೈದರು. ಪ್ರಜ್ವಲ ರಾಜೋಳೆ ನಿರೂಪಣೆ ಮಾಡಿದರು. ಶಾಶ್ವತ ಸೋಮನಾಥಪ್ಪ ರಾಜೇಶ್ವರೆ ಸ್ವಾಗತ ಮಾಡಿದರು. ಶ್ರೀಮಂತಪ್ಪ ರಾಜೇಶ್ವರೆ, ಚಂದ್ರಕಾಂತ ಕಣಜೆ ವಚನ ಗಾಯನ ಮಾಡಿದರು. ಲಿಂಗಾಯತ ಸೇವಾದಳದ ಅಧ್ಯಕ್ಷ ಸುಪ್ರೀತ ಪತಂಗೆ ಕಾರ್ಯಕ್ರಮ ನಡೆಸಿದರು.
