ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ‘ಶರಣ ಸಾಹಿತ್ಯ ಆಧಾರಿತ ನಾಟಕಗಳು’ ಚಿಂತನ ಗೋಷ್ಠಿ
ಚಿತ್ರದುರ್ಗ
೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣ ಸಾಹಿತ್ಯಧಾರಿತ ನಾಟಕಗಳು ಕುರಿತು ಚಿಂತನ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀ ಕೆ.ವಿ.ನಾಗರಾಜಮೂರ್ತಿ ಮಾತನಾಡಿ,
ಸುಮಾರು ೯೦೦ಕ್ಕೂ ಹೆಚ್ಚು ಶರಣರ ಬಗೆಗಿನ ನಾಟಕಗಳು ಬಂದಿವೆ. ಶರಣರನ್ನು ಕುರಿತು ಕನ್ನಡದಲ್ಲಿ ಬರುವುದಕ್ಕಿಂತ ಮುಂಚೆ ಮರಾಠಿಯಲ್ಲಿ ನಾಟಕ ರಚನೆಗೊಂಡಿರುವುದು ವಿಶೇಷ.
ಇದುವರೆಗಿನ ಕನ್ನಡ ಸಾಹಿತ್ಯವನ್ನು ಅವಲೋಕನ ಮಾಡಿದಾಗ ಹೆಚ್ಚು ಶರಣರ ಬಗ್ಗೆ ಹಾಗೂ ವಚನಕಾರರ ಬಗೆಗಿನ ಕೃತಿಗಳೇ ಬಂದಿರುವುದು. ಆನಕೃರವರ ಪ್ರಯತ್ನದಿಂದ ವಚನಗಳನ್ನು ಮೊದಲ ಬಾರಿ ಹಿಂದೂಸ್ಥಾನಿ ಸಂಗೀತದಲ್ಲಿ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾರ್ಜುನ ಮನ್ಸೂರರವರ ಮೂಲಕ ಹಾಡಿಸಿ ಅವುಗಳನ್ನು ಪ್ರಚಾರಕ್ಕೆ ತರುವಂತಹ ಕೆಲಸ ಮಾಡಿದರು.
ಶರಣರ ವಿಚಾರಗಳನ್ನು ಅವರ ಮೌಲ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಟಕಗಳನ್ನು ರಚಿಸುವಂತಹ ಕೆಲಸಗಳಾಗಬೇಕು ಎಂದು ತಿಳಿಸಿದರು.
ಹಿರಿಯ ರಂಗಕರ್ಮಿಗಳಾದ ಪ್ರೊ.ಚಂದ್ರಶೇಖರ ಉಷಾಲ ಮಾತನಾಡಿ, ಕನ್ನಡ ನಾಡಿನಲ್ಲಿ ಶರಣರ ವಿಚಾರಧಾರೆಗಳನ್ನು ಕುರಿತು ನಾಟಕಗಳು ಸಾಕಷ್ಟು ರಚನೆಗೊಂಡಿವೆ. ಪಲ್ಕುರಿಕೆ ಸೋಮನಾಥನಿಂದ ಆರಂಭಗೊಂಡ ವಚನಕಾರರ ಕುರಿತು ಕಥೆಗಳು ಆಧುನಿಕ ಸಾಹಿತ್ಯದವರೆಗು ಬೆಳೆದು ಬಂದಿವೆ.
ಜಗಜ್ಯೋತಿ ಬಸವೇಶ್ವರ, ಮಹಾತ್ಮ ಬಸವೇಶ, ತಲೆದಂಡ, ಸಂಕ್ರಾತಿ, ಮಹಾಚೈತ್ರ, ಶಿವರಾತ್ರಿ, ಕೆಟ್ಟಿತ್ತು ಕಲ್ಯಾಣ ಹೀಗೆ ನೂರು ನಾಟಕಗಳು ಶರಣರ ಕುರಿತು ರಚನೆಗೊಂಡಿವೆ. ಚಾರಿತ್ರಿಕ ಹಾಗೂ ಐತಿಹಾಸಿಕ ವಿಷಯಗಳ ಕುರಿತು ನಾಟಕಗಳು ರಚನೆಯಾಗುವುದು ವಿಶೇಷವಾಗಿದೆ. ವೈದಿಕ ಆವೈದಿಕ ಸಂಘರ್ಷದ ವೈರುಧ್ಯಗಳ ಕುರಿತು ನಾಟಕಗಳು ರಚನೆಯಾಗಿವೆ ಎಂದು ತಿಳಿಸಿದರು.
ಪತ್ರಕರ್ತ ಶ್ರೀ ಆರ್.ಜಿ.ಹಳ್ಳಿ ನಾಗರಾಜ ಮಾತನಾಡಿ, ಶರಣ ಸಾಹಿತ್ಯದಂತಹ ನಾಟಕಗಳಲ್ಲಿ ಮೊದಲು ಬಿ.ಪುಟ್ಟಸ್ವಾಮಿಯವರು ಅಕ್ಕಮಹಾದೇವಿಯವರ ಕುರಿತು ಮೊದಲು ನಾಟಕ ಬರೆದರು. ಆನಂತರದಲ್ಲಿ ಹಲವಾರು ನಾಟಕಕಾರರು ಸುಮಾರು ೨೩ ನಾಟಕಗಳನ್ನು ತಮ್ಮ ಅಧ್ಯಾಯನದಲ್ಲಿ ಗಮನಿಸಲಾಗಿದೆ. ನಾಟಕ ಅಷ್ಟೇ ಅಲ್ಲದೇ ಸಿನಿಮಾ ರಂಗದಲ್ಲೂ ಕೂಡ ಬಸವಣ್ಣವರ ಕುರಿತು ಚಲನಚಿತ್ರ ನಿರ್ಮಾಣಗೊಂಡಿವೆ. ಜನರನ್ನು ವಿಚಾರವಂತರನ್ನಾಗಿಸಲು ಶರಣರ ರಚನೆಗಳು ನಾಟಕ ರೂಪಾಂತರದ ಮೂಲಕ ಮೂಢಬೇಕಿದೆ ಎಂದು ತಿಳಿಸಿದರು.

ರಂಗಕರ್ಮಿ ಶ್ರೀ ಚಂದ್ರಶೇಖರಾಚಾರ್ ಮಾತನಾಡಿ, ಶರಣರ ವಚನಗಳಲ್ಲೇ ನಾಟಕದ ಅಂಶಗಳಿವೆ. ಇತ್ತೀಚೆಗೆ ಶೂನ್ಯ ಸಂಪಾದನೆಯನ್ನಿಟ್ಟುಕೊಂಡು ಹನ್ನೆರಡು ನಾಟಕಗಳನ್ನು ರಚಿಸಿದ್ದಾರೆ. ಶರಣರ ಚಳುವಳಿಯಲ್ಲಿ ಅಧುನಿಕ ರೀತಿಯಲ್ಲಿ ಬಿಂಬಿಸಿದಂತಹ ನಾಟಕ ಗಿರೀಶ್ ಕಾರ್ನಾಡರ ತಲೆದಂಡ ನಾಟಕವಾಗಿದೆ ಎಂದು ನುಡಿದರು.
ಆಧುನಿಕ ವಚನ ಕುರಿತು ಚಿಂತನಗೋಷ್ಠಿಯಲ್ಲಿ ಮೈಸೂರು ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮಿಗಳು ಮಾತನಾಡಿ, ವಚನಗಳು ಬುದ್ಧಿಯಿಂದ ಹುಟ್ಟಿದ್ದಲ್ಲ. ಅವು ಹೃದಯದಿಂದ ಹುಟ್ಟಿದವು. ವಚನಗಳು ಸಾಹಿತ್ಯವು ಹೌದು. ಆದರೇ ಅವನ್ನು ಬರೀ ಸಾಹಿತ್ಯಕ್ಕೆ ಸೀಮಿತಗೊಳಿಸುವುದು ತಪ್ಪು. ವಚನಗಳಲ್ಲಿ ಅನುಭವವಿದೆ ಅನುಭಾವವು ಇದೆ. ಅದು ವೈಚಾರಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಬಹುದೊಡ್ಡ ಜೀವನ ಮೌಲ್ಯಗಳನ್ನು ಕಟ್ಟಿಕೊಡುತ್ತಿದೆ. ಪ್ರಶಸ್ತಿಯ ಬೆನ್ನೇರಿ ಹೊರಟ ವ್ಯಕ್ತಿಗಳಿಂದ ಕವಿಗಳಿಂದ ಯಾವ ಅನುಭಾವದ ಸಾಹಿತ್ಯದ ರಚನೆ ಸಾಧ್ಯವೆಂದು ನುಡಿದರು.
ಸಾಹಿತಿ ಪ್ರೊ.ಭಿಕ್ಷಾವರ್ತಿ ಮಠ ಮಾತನಾಡಿ, ಜಗತ್ತಿನ ಸರ್ವಶ್ರೇಷ್ಠ ಸಾಹಿತ್ಯ ಬಹುತೇಕವಾಗಿ ಕಲ್ಪನೆಯ ಮೂಲಕವೇ ಹುಟ್ಟಿಕೊಂಡಿದ್ದರೆ ವಚನ ಸಾಹಿತ್ಯ ಜನಸಾಮಾನ್ಯರ ಬದುಕಿನ ಮೂಲಕ ಅರಳಿದಂತಹ ಸಾಹಿತ್ಯ. ಆಧುನಿಕ ವಚನಕಾರರಲ್ಲಿ ಕೇವಲ ಬಸವಣ್ಣನವರ ಅಂಧಾನುಕರಣೆ ಮಾಡಿದ್ದಾರೆ. ಅದನ್ನು ತಿರಸ್ಕರಿಸಿ ಎಂಬ ವಿಮರ್ಶೆಯ ಮಾತನ್ನು ನಾವು ಪರಿಗಣಿಸಬೇಕಿದೆ. ಶರಣರ ವಚನಗಳು ಚಳುವಳಿಯ ಪ್ರತಿಫಲದ ಮೂಲಕ ಬಂದಂತವು. ಅವು ಸಮೂಹದ ಫಲ. ಅಂತಹ ಶರಣರ ವಚನಗಳ ಅನುಭಾವವನ್ನು ನಾವು ಗುರಿತಿಸಬೇಕಾಗಿದೆ ಎಂದು ತಿಳಿಸಿದರು.
ಕದಳಿ ಮಹಿಳಾ ವೇದಿಕೆಯ ಶ್ರೀಮತಿ ಸುಶೀಲಾ ಸೋಮಶೇಖರ್ ಮಾತನಾಡಿ, ಬರಿ ವಚನಕಾರರು ಹೇಳಿದ್ದನ್ನೆ ಹಾಗೆ ಹೀಗೆ ಎಂದು ಮಾತನಾಡುವ ನಾವು ಏನು ಮಾಡಬೇಕು ಎಂಬುದನ್ನು ಅರಿಯಬೇಕಾಗಿದೆ. ಪದಾರ್ಥವನ್ನು ಪ್ರಸಾದವೆಂದ, ವೇಶ್ಯೆಯನ್ನು ಶರಣಯನ್ನಾಗಿಸಿ, ಮಹಿಳೆಯನ್ನು ಮಹದೇವಿ ಎಂದು ಕರೆದರು ಬಸವಣ್ಣ. ಮಾದಾರ ಚೆನ್ನಯನ ಮನೆಗೆ ಯಾವ ಜಾತಿಯೆಂದು ತಿಳಿದು ಹೋದವರಲ್ಲ. ಶರಣರ ವಚನಗಳಲ್ಲಿ ಅಡಗಿರುವ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಕು ಎಂದು ತಿಳಿಸಿದರು.
ಶ್ರೀ ಬಿ.ಎಸ್.ಪಾಟೀಲ್ ಮಾತನಾಡಿ, ಇಂದಿನ ಯುವಜನತೆಗೆ ಅಂತರಂಗದ ಶುದ್ಧತೆ ಬಹಳ ಮುಖ್ಯವಾಗಿದೆ. ಪಲ್ಲಕ್ಕಿಯ ಮೇಲಿರುವ ನಾಯಿ ಎಲುಬು ನೆಕ್ಕುವ ಸ್ವಭಾವದಂತೆ ಜಡ್ಡುಗಟ್ಟಿದ ಯುವ ಮನಸ್ಸುಗಳಿಗೆ ಅಂತರಂಗ ಬಹಿರಂಗದ ಶುದ್ಧತೆಯ ಅರಿವನ್ನು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಆಧುನಿಕ ವಚನ ಗೋಷ್ಠಿಯಲ್ಲಿ ಡಾ.ಮಲ್ಲಮ್ಮ ಪಾಟಿ, ಶ್ರೀ ದ್ವಾರನಕುಂಟೆ ಪಾತಣ್ಣ, ಕು.ನಂದಿನಿ.ಯು, ಶ್ರೀ ಸುರೇಶ್‌ಬಾಬು, ಡಾ.ರಾಜೇಂದ್ರ ಎಸ್ ಗಡಾದ್ ವಚನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು, ಡಾ.ಬಸವಕುಮಾರ ಸ್ವಾಮಿಗಳು, ಸಾ.ಶಿ.ಇ.ನಿವೃತ್ತ ನಿರ್ದೇಶಕರು ಶ್ರೀ ಎಂ.ಮಲ್ಲಣ್ಣ, ಶ್ರೀಮತಿ ಅನಿತ ಲಕ್ಷಿ ಆಚಾರ್ಯ, ಶ್ರೀ ಎಂ.ಕೆ.ಪ್ರಭುದೇವ್, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿ ಕದಳಿ ವೇದಿಕೆಯ ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ ರೂಪಕ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ರವಿಕುಮಾರ್ ಎ ಎಂ ಸ್ವಾಗತಿಸಿ, ಕೆ.ಪಿ.ಎಂ.ಗಣೇಶಯ್ಯ ಹಾಗೂ ಮಸ್ಕಿ ನಾಗರಾಜ್ ನಿರೂಪಿಸಿದರು.