ಶರಣರು ಆರಾಧಿಸಿದ್ದು ಪುರಾಣದ ಶಿವನನ್ನಲ್ಲ

ಸಾವಿಲ್ಲದ, ಕೇಡಿಲ್ಲದ, ಸೀಮೆ ಇಲ್ಲದ, ನಿರ್ಭಯ, ನಿರಾಕಾರ ಶಿವ ಶರಣರ ಶಿವ

ದಾವಣಗೆರೆ

ಶಿವ ಎಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಹಿಮಾಲಯದ ಬೆಟ್ಟದಲ್ಲಿ ಪಾರ್ವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಕೊರಳಲ್ಲಿ ಹಾವನ್ನು ಸುತ್ತಿಕೊಂಡು ಗಣೆಶ ಷಣ್ಮಖರನ್ನು ಪಕ್ಕದಲ್ಲಿ ಕೂರಿಸಿಕೊಂಡು ತ್ರಿಶೂಲ ಢಮರುಗ ಹಿಡಿದುಕೊಂಡು ತಲೆಯಲ್ಲಿ ಗಂಗೆಯನ್ನು ಕೂರಿಸಿಕೊಂಡು ಎದುರಿನಲ್ಲಿ ತನ್ನ ವಾಹನವಾದ ಎತ್ತನ್ನು ನಿಲ್ಲಿಸಿಕೊಂಡು ಚಿತ್ರ.

ಅಥವಾ ಶ್ಮಶಾನದಲ್ಲಿ ರಾಕ್ಷಸರ ರುಂಡಗಳನ್ನು ಕೊರಳಿಗೆ ಹಾಕಿಕೊಂಡು ಚರ್ಮವನ್ನು ಸುತ್ತಿಕೊಂಡು ಮೈತುಂಬಾ ಬೂದಿ ಬಳಿದುಕೊಂಡ ಚಿತ್ರ.

ಅಥವಾ ಎತ್ತಿನ ಮೇಲೆ ಕುಳಿತ ಕುಟುಂಬದ ಚಿತ್ರ. ಹೀಗೆ ಯಾವುದೋ ಪೌರಾಣಿಕ ಚಲನಚಿತ್ರದ ಚಿತ್ರಗಳು ಅಥವಾ ಕ್ಯಾಲೆಂಡರ್ ನ ಚಿತ್ರಗಳು ನೆನಪಾಗುತ್ತದೆ.

ಶಿವ ಎಂದರೆ ಮಂಗಳ ಶುಭ ಎಂಬುವ ಅರ್ಥವೂ ಇದೆ.

ಶರಣರು ಈ ಪೌರಾಣಿಕ ಶಿವನನ್ನು ನಿರಾಕರಿಸಿದರು ಅವರ ನಿಲುವನ್ನು ನೋಡೋಣ ಬನ್ನಿ ಮೊದಲಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ವಚನವನ್ನು ನೋಡೋಣ.

ಅಸುರರ ಮಾಲೆಗಳಿಲ್ಲ ತ್ರಿಶೂಲ ಢಮರುಗವಿಲ್ಲ ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ ವೃಷಭವಾಹನನಲ್ಲ ಋಷಿಯರುಗಳೊಡನಿದ್ದಾತನಲ್ಲ ಎಸಗುವ ಸಂಸಾರದ ಕುರುಹಿಲ್ಲದಾಂತಗೆ ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ

ಈ ವಚನದಲ್ಲಿ ಪುರಾಣದ ಶಿವನನ್ನು ಚೌಡಯ್ಯನವರು ಸಾರಸಗಟಾಗಿ ತಿರಸ್ಕರಿದ್ದಾರೆ
ರಾಕ್ಷಸರ ಮಾಲೆಗಳಿಲ್ಲ, ತ್ರಿಶೂಲ ಢಮರುಗ ಇಲ್ಲ, ಎತ್ತಿನ ಮೇಲೆ ಹೋಗುವವನಲ್ಲ ಸಂಸಾರದ ಜಂಜಟ ಇಲ್ಲದ ಆತನಿಗೆ ಹೆಸರೇ ಇಲ್ಲ, ಇಂತಹ ಶಿವನನ್ನು ಪೂಜಿಸಿದವರು ಶರಣರು.

ಅಲ್ಲಮ ಪ್ರಭುಗಳು ತಮ್ಮ ಈ ಕೆಳಗಿನ ವಚನದಲ್ಲಿ ಶಿವನ ಸಂಸಾರವನ್ನೇ ತಿರಸ್ಕರಿದ್ದಾರೆ

ಪಾರ್ವತಿಯು ಪರ ಶಿವನ ಸತಿಯೆಂಬ ಶಿವ ದ್ರೋಹಿಗಳು ನೀವು ಕೇಳಿರೆ
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ
ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ
ಅಜಾತನ ಚರಿತ್ರ ಪವಿತ್ರ ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲ್ಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ ಆದಿಯ ಲಿಂಗ ಆನಾದಿಯ ಶರಣ ಗುರುವಿನ ಗುರು ಪರಮ ಗುರುವರನ ತೋರಿದೆನಯ್ಯ ಸಿದ್ಧರಾಮಯ್ಯ ಚನ್ನಬಸವಣ್ಣನು

ಈ ಮೇಲಿನ ವಚನದಲ್ಲಿ ಅಲ್ಲಮಪ್ರಭು ಅವರು ಶಿವನಿಗೆ ಸಂಸಾರದ ಸರಪಳಿ ತೊಡಿಸುವವರು ಶಿವ ದ್ರೋಹಿಗಳು ಎಂದೇ ಕರೆಯುತ್ತಾರೆ

ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು ವಿರೋಧಿಗಳಾದವರು. ಕಾಮಾರಿಯೆಂಬರು ಕಣ್ಕಾಣದವರು. ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು.
ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ
(ಅಲ್ಲಮಪ್ರಭುದೇವರು)

ಅಲ್ಲಮಪ್ರಭು ತಮ್ಮ ಇನ್ನೊಂದು ವಚನದಲ್ಲಿ
ಪುರಾಣಗಳು ಹೇಳುವಂತೆ ಅರ್ದನಾರೀಶ್ವರನೂ ಅಲ್ಲ
ತ್ರಿಪುರ ಸಂಹಾರಿಯೂ ಅಲ್ಲ
ಕಾಮನನ್ನು ನಾಶ ಮಾಡಿದವನೂ ಅಲ್ಲ
ಜಟಾಜೂಟದವನೂ ಅಲ್ಲ
ನಮ್ಮ ಶಿವ ಬಹುರೂಪಿ ಅಲ್ಲ
ನಿರಾಕಾರ ವಿಶ್ವ ಚೈತನ್ಯ ಎಂದು ಸಾರಿದ್ದಾರೆ

ಬಾಲ ಸಂಗಯ್ಯ ಎಂಬ ಶರಣರು ತಮ್ಮ ಒಂದು ವಚನದಲ್ಲಿ ಪೌರಾಣಿಕ ಶಿವನನ್ನು ಈ ಕೆಳಗಿನ ವಚನದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ

ಗಂಗಾಧರ ಗೌರೀಶ ದೇವರಲ್ಲ
ಶಂಕರ ಶಶಿಧರ ದೇವರಲ್ಲ
ತ್ರಿಶೂಲ ಖಟ್ವಾಂಗಧರರು ದೇವರಲ್ಲ
ಬ್ರಹ್ಮ ಕಪಾಲ ವಿಷ್ಣುಕಂಕಾಳ ದಂಡ ಹಿಡಿದ ಪ್ರಳಯಕಾಲರುದ್ರ ದೇವರಲ್ಲ ನಿರಾಳಸ್ವಯಂಭು ಲಿಂಗವ ತಾನೆಂದರಿದಡೆ
ತಾನೆ ದೇವಾ ನೋಡಾ ಅಪ್ರಮಾಣ ಕೂಡಲಸಂಗಮದೇವಾ

ಶಿವನ ಶತ ನಾಮಾವಳಿಯಲ್ಲಿ ಬರುವ ಯಾವುದೇ ಹೆಸರು ದೇವರಲ್ಲ ಅಂತ ಹೇಳಿದ್ದಾರೆ

ಹಾಗಾದರೆ ಶರಣರ ಶಿವ ಎಂಥವನು ಎಂದರೆ ಅದಕ್ಕೆ ಅಕ್ಕನ ವಚನ ಉತ್ತರ ನೀಡುತ್ತದೆ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಂಗೆ ನಾನೊಲಿದೆ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ ? ಭವವಿಲ್ಲದೇ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು
ಸೀಮೆ ಇಲ್ಲದ ನಿಸ್ಸೀಮಂಗೊಲಿದೆ ನಾನು
ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆಮಿಗೆ ಒಲಿದೆ ಎಲೆ ಅವ್ವಗಳಿರಾ

ಪುರಾಣದ ಶಿವನಿಗೆ ಗಡಿ ಇದೆ ಭಯ ಇದೆ ಅದಕ್ಕಾಗಿ ಅವನಿಗೆ ಆಯುಧ ಇದೆ ಉರಿಗಣ್ಣು ಇದೆ. ಆದರೆ ಶರಣರ ಶಿವ ಸಾವಿಲ್ಲದ ಕೇಡಿಲ್ಲದ ಭಯ ಇಲ್ಲದ ಸೀಮೆ ಇಲ್ಲದ ನಿರ್ಭಯ ರೂಪ ಇಲ್ಲದ ನಿರಾಕಾರ ಶಿವನನ್ನು ಶರಣರು ಪೂಜಿಸಿದ್ದು ಹೃದಯದಲ್ಲಿ ಇಟ್ಟುಕೊಂಡಿದ್ದು ಆರಾಧಿಸಿದ್ದು.

ರಾಷ್ಟ್ರ ಕವಿ ಕುವೆಂಪು ಅವರು ಸಹ ಜಲಗಾರ ನಾಟಕದಲ್ಲಿ ಶಿವನ ವೇಷಧಾರಿ ಜಲಗಾರನ ಬಾಯಲ್ಲಿ ರಜತ ಗಿರಿಯಲ್ಲಿ ಗಿರಿಜೆಯೊಡಗೂಡಿ ಸರಸ ಆಡುವ ರಸಿಕ ಶಿವನಲ್ಲ ಎಂದು ಹೇಳಿಸಿದ್ದಾರೆ.

ಶಿವನೆಂದರೆ ಶ್ರಮಿಕರ ಪ್ರತಿರೂಪ ನೊಂದವರ ಶೋಷಿತರ ರೂಪ ಶಿವ ನಮ್ಮೊಳಗಿನ ಚೈತನ್ಯವೇ ಶಿವ ಶಿವ ಎಂದರೆ ಮಂಗಳ ಶುಭ ಇಂಥಹ ಶಿವನನ್ನು ನಿತ್ಯವೂ ಆರಾಧಿಸೋಣ.

Share This Article
6 Comments
  • ಅರ್ಥಪೂರ್ಣವಾದ ಮತ್ತು ಅದ್ಭುತವಾದ ಅರ್ಥವಿವರಣೆ ಹಾಗೂ ನಿರ್ವಚನ 🙏

  • ಶರಣರ ಶಿವನೇ ನಿಜವಾದ ಶಿವ ಕೈಯಲ್ಲಿ ತ್ರೀಶೂಲ ಡಮರಗ ರುಂಡ ಹಿಡಿದವನು ರಾಕ್ಸಸರ ಶಿವ

  • ಕೆಲವೇ ವಚನಗಳನ್ನು ಆಧರಿಸಿ ಈ ಅಭಿಪ್ರಾಯಕ್ಕೆ ಬರುವುದು ಸಮಂಜಸವಲ್ಲ. ಇದೆಲ್ಲಾ ಹೀಗೆ ಒಬ್ಬರು ಇಬ್ಬರು ಯೋಚಿಸಿ ನಿರ್ಣಯಕ್ಕೆ ಬರುವಂತಹ ವಿಚಾರವೂ ಅಲ್ಲ. ದೇವರು ನಿರಾಕಾರ ಎಂಬುದನ್ನು ವೇದಗಳು ಸ್ಪಷ್ಟವಾಗಿ ಹೇಳುತ್ತವೆ. ಪುರಾಣದಲ್ಲಿ ಮಾತ್ರ ದೇವರ ರೂಪಗಳನ್ನು ಹೇಳಲಾಗಿದೆ. ಹಾಗಾಗಿ ಶರಣರು ಕಂಡ ಶಿವ ವೇದ ಹೇಳುವ ಶಿವನೇ ಎಂಬುದರಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇಲ್ಲ. ಈ ಲೇಖನದಲ್ಲಿರುವ ವಾದ ನೇರವಾಗಿ ಒಪ್ಪತಕ್ಕದ್ದಲ್ಲ, ಈ ಬಗ್ಗೆ ಹೆಚ್ಚಿನ ಚರ್ಚೆ ಇಲ್ಲಿ ಸಾಧ್ಯವೂ ಇಲ್ಲ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು