ಗದಗ
ವಚನಗಳು ಕೇವಲ ಭಕ್ತಿಯ ಮತ್ತು ಧಾರ್ಮಿಕ ಅಭಿವ್ಯಕ್ತಿಯಲ್ಲ. ಅವು ವೈಜ್ಞಾನಿಕ, ತಾರ್ಕಿಕ, ಮಾನವೀಯತೆ ಮತ್ತು ವೈಚಾರಿಕತೆಯ ಜೀವಂತ ರೂಪವಾಗಿವೆ. ಆದ್ದರಿಂದ ಶರಣರು ಜಗತ್ತಿನ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿಗಳು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೭೭ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಚನಕಾರರ ಧರ್ಮವನ್ನು, ಸಮಾಜವನ್ನು, ಅಧ್ಯಾತ್ಮವನ್ನು ಕುರಿತು ವಿಶ್ಲೇಷಣೆ ಮಾಡಿದರು.
ಸಮಾಜ ಜಾತಿಯಿಂದ ಮುಕ್ತವಾಗಿರಬೇಕು. ಶರಣರು ಜಗತ್ತಿನ ವಿಜ್ಞಾನದ ಬಗ್ಗೆ ವಚನಗಳ ಮೂಲಕ ತಿಳಿಸಿದರು. ಚಂದ್ರೋದಯಕೆ ಅಂಬುದಿ ಹೆಚ್ಚುವುದಯ್ಯಾ. ಈ ವಚನದಲ್ಲಿ ವಿಜ್ಞಾನದ ವಿಷಯವನ್ನು ಹೇಳಿದ್ದಾರೆ.
ವಚನಕಾರರು ದೇವರ ಹೆಸರಿನಲ್ಲಿ, ಕಲ್ಲಿನಲ್ಲಿ, ವಿಧಿ-ವಿಧಾನದಲ್ಲಿ ಹುಡುಕಬೇಡಿ ಎಂದರು.
ಕಲ್ಲು ದೇವರ ಮೇಲೆ ನಂಬಿಕೆ ಇಟ್ಟು, ಜೀವಂತ ಮನುಷ್ಯನ ಮೇಲೆ ದಯೆ ಇರದಿದ್ದರೆ ಧರ್ಮವಲ್ಲ. ತರ್ಕಬದ್ಧ ಚಿಂತನೆಗೆ, ವಿಜ್ಞಾನ ಪ್ರಶ್ನಿಸುವುದಕ್ಕೆ ಪ್ರೇರಣೆ ನೀಡುತ್ತದೆ ಎಂದು ಆಶೀರ್ವಚನದಲ್ಲಿ ನುಡಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಶಿಕ್ಷಣ ಉಪನಿರ್ದೇಶಕ ಕಛೇರಿಯ ತಾಂತ್ರಿಕ ಸಹಾಯಕರಾದ ಎಂ. ಎಚ್. ಸವದತ್ತಿಯವರು ‘ವಚನಗಳ ಬೆಳಕಿನಲ್ಲಿ ವಿಜ್ಞಾನ’ ಎಂಬ ವಿಷಯದ ಮೇಲೆ ಮಾತನಾಡುತ್ತಾ, ಲಿಂಗಪೂಜೆಯಲ್ಲಿ ವಿಜ್ಞಾನವಿದೆ. ಲಿಂಗಪೂಜೆಯಲ್ಲಿ ಆಯುಷ್ಯ ವೃದ್ಧಿ ಇದೆ. ಲಿಂಗಪೂಜೆಯನ್ನು ಬೆಳಗಾಗುವುದರೊಳಗೆ ಮಾಡಬೇಕು ಎಂದರು.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಎಂಬ ವಚನದಲ್ಲಿ ಬೆಳಕು ಎಲ್ಲದಕ್ಕೂ ಮೂಲ. ಪಕ್ಷಿಗಳು ಹಾಡುತ್ತವೆ. ಹೂವುಗಳು ಅರಳುತ್ತವೆ. ರೆಂಬೆ ಕೊಂಬೆಗಳು ಚಿಗುರುತ್ತವೆ. ಇವುಗಳೆಲ್ಲವೂ ವಿಜ್ಞಾನದ ಕೊಡುಗೆ. ಅಂದು ಗುಡಿ ಕಟ್ಟಿದರು, ಅದರ ಮುಂದೆ ಆಲದಮರ ನೆಟ್ಟರು, ಆಲದಮರ ಆಮ್ಲಜನಕ ಕೊಡುತ್ತದೆ. ಪರಾತ್ಪರದಲ್ಲಿ ಶಕ್ತಿ ಇದೆ. ಅದು ಶಿವಶಕ್ತಿ. ಅದಕ್ಕೆ ಅಕ್ಕಮಹಾದೇವಿ ಸಂಘದಿಂದಲ್ಲದೆ ಅಗ್ನಿ ಹುಟ್ಟದು ಎಂದರು.
ನೀಲದ ಮಣಿಯೊಂದು ಮಾಣಿಕ್ಯ ನುಂಗಿದಡೆ ಈ ವಚನದಲ್ಲಿ ಭೌತಶಾಸ್ತ್ರದ ವಿಶ್ಲೇಷಣೆ ಮಾಡಿದ್ದಾರೆ ಬಸವಣ್ಣನವರು. ನೀಲದ ಮಣಿ ಎಂದರೆ ಆಮ್ಲಜನಕ. ಕಲ್ಲನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರು ಇದು ಸರಿಯಲ್ಲ. ಜಗತ್ತಿನಲ್ಲಿ ೫೦೦೦ ಹಾವಿನ ಪ್ರಭೇದಗಳಿವೆ. ಅದರಲ್ಲಿ ೫೦ ಮಾತ್ರ ವಿಷಕಾರಿ. ಹಾವುಗಳು ರೈತರ ಗೆಳೆಯರು. ರೈತ ಬಿತ್ತಿದ ಬೆಳೆಯನ್ನು ಇಲಿಗಳು ತಿಂದು ಹಾಳು ಮಾಡುತ್ತಿವೆ. ಹಾವುಗಳು ಇಲಿಗಳನ್ನು ತಿನ್ನುತ್ತವೆ. ಇದರಿಂದ ರೈತನ ಬೆಳೆ ಸುರಕ್ಷಿತ. ಹಾವುಗಳನ್ನು ಕೊಲ್ಲಬಾರದು ಎಂದು ಅನೇಕ ವಿಜ್ಞಾನದ ವಿಸ್ಮಯ ಜಗತ್ತನ್ನು ವಚನಗಳೊಂದಿಗೆ ಸಮೀಕರಿಸಿ ಕೂತೂಹಲಕಾರಿಯಾಗಿ ಮಾತನಾಡಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಭರತ ಎಂ. ಹರ್ಲಾಪೂರ ಹಾಗೂ ವಚನ ಚಿಂತನವನ್ನು ಚಂದನ ಕೆ. ಬಳಿಗೇರ ಮಾಡಿದರು. ದಾಸೋಹ ಸೇವೆಯನ್ನು ಬಸವರಾಜ ಶಿವಪ್ಪ ಅಂಗಡಿ, ಶಿವಗಂಗಾ ಇಂಡಸ್ಟ್ರೀಸ್ ಗದಗ ಇವರ ಕುಟುಂಬ ವರ್ಗದವರಾದ ಮಹಾಂತೇಶ ಅಂಗಡಿ ಹಾಗೂ ರೇಖಾ ಅಂಗಡಿ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು, ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
