ನರಗುಂದ
ತ್ಯಾಗವೀರ ಶಿರಸಂಗಿ ಲಿಂಗರಾಜರ ಆದರ್ಶಮಯ ಜೀವನ ಪಠ್ಯದಲ್ಲಿ ಸೇರ್ಪಡೆಯಾಗಬೇಕು ಮತ್ತು ಸಮಾಜಕ್ಕಾಗಿ ತಮ್ಮ ಸಮಸ್ತ ಆಸ್ತಿಯನ್ನು ಧಾನ ಮಾಡಿದ ಲಿಂಗರಾಜರ ಜಯಂತಿಯನ್ನು ಎಲ್ಲ ಸರಕಾರಿ ಕಛೇರಿಗಳಲ್ಲಿ ಆಚರಿಸುವಂತೆ ಸರಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು.
ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಅವರು ಶಿರಸಂಗಿ ಸಂಸ್ಥಾನದ ದೊರೆಯಾಗಿ ೨೦ ನೇ ಶತಮಾನದಲ್ಲಿ ತ್ಯಾಗಮಯ ಜೀವನವನ್ನು ನಡೆಸಿದ ಅವರ ವಿಚಾರಧಾರೆಗಳು ಸರ್ವಕಾಲಿಕ ಎಂದು ನರಗುಂದ ಮುರುಘರಾಜೇಂದ್ರ ಪ್ರೀ ಬೋಡಿ೯ಗ್ ಟ್ರಸ್ಟಿನ ಅಧ್ಯಕ್ಷ ಚೆನ್ನಬಸಪ್ಪ ಗುರುಲಿಂಗಪ್ಪ ಕಂಠಿ ಅವರು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕವನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಮಹಾನ್ ಪುರುಷರು ತ್ಯಾಗವೀರ ಶಿರಸಂಗಿ ಲಿಂಗರಾಜರು. ದೇಶದ ಬೆನ್ನೆಲುಬು ಎಂದರೆ ರೈತ ಎಂಬುವುದನ್ನು ಮನಗಂಡಿದ್ದ ಶಿರಸಂಗಿ ಲಿಂಗರಾಜರು ೧೫೦ ಎಕರೆ ಹೊಲ ಖರೀದಿಸಿ ಅಲ್ಲಿ ಕೃಷಿ ತರಬೇತಿ ಶಾಲೆಯನ್ನು ಸ್ಥಾಪಿಸಿ ರೈತರಿಗೆ ಕೃಷಿಯ ಕುರಿತು ಮಾಹಿತಿಯನ್ನು ಒದಗಿಸಿ ಅವರನ್ನು ಬಲಪಡಿಸುವಲ್ಲಿ ಶ್ರಮಿಸುವುದರ ಜೊತೆಗೆ ಭವ್ಯ ಕೆರೆಗಳನ್ನು ಕಟ್ಟಿಸಿದ್ದರು, ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯ ವಿವಾಹಗಳನ್ನು ವಿರೋದಿಸಿದ್ದರು ಎಂದರು.
ಸಾನಿದ್ಯವಹಿಸಿದ್ದ ಭೈರನಹಟ್ಟಿ-ಶಿರೋಳ ಮಠದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ ಜೀವನವನ್ನೆ ತಾಗ್ಯ ಮಾಡಿದ ಶಿರಸಂಗಿ ಲಿಂಗರಾಜರು ಸ್ವಹಿತಕ್ಕಾಗಿ ಏನೂ ಮಾಡದೆ ಸರ್ವಸ್ವವನ್ನೂ ಸಮಾಜಕ್ಕಾಗಿಯೇ ದಾರೆ ಎರೆದ ಐತಿಹಾಸಿಕ ಪುರುಷ. ಅಂತಹ ಮಹಾನ್ ಪುರುಷನ ಸ್ಮಾರಕಗಳು ಅನಾಥವಾಗಿವೆ ಅವುಗಳನ್ನು ಜೀರ್ಣೋದ್ಧಾರಗೊಳಿಸಬೇಕು ಮತ್ತು ರಕ್ಷಣೆ ಮಾಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು. ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ ತ್ಯಾಗಮಯಿ, ಪರೋಪಕಾರಿ, ಶಿರಸಂಗಿ ಮನೆತನದ ಆಡಳಿತಗಾರ ಅವರ ಆಡಳಿತ ವಿಶ್ವದ ಎಲ್ಲಾ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ವೇದಿಕೆ ಮೇಲೆ ಮುಖಂಡರಾದ ಚಂದ್ರಶೇಖರಯ್ಯ ದಂಡಿನ, ನಿವೃತ್ತ ಮುಖ್ಯೋಪಾದ್ಯಾಯ ವೀರಯ್ಯ ಸಾಲಿಮಠ, ಬಿ.ಸಿ. ಐನಾಪೂರ, ಮಹಾಂತೇಶ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು.
