ಸಾಣೇಹಳ್ಳಿ
ಇಲ್ಲಿನ ಶ್ರೀ ಗುರುಬಸವ ಮಹಾಮನೆಯಲ್ಲಿ ನಡೆದ ಎರಡು ದಿನಗಳ ಕಾಲ ವಚನಾಧಾರಿತ ನಿಜಾಚರಣೆಗಳ ಕಮ್ಮಟದಲ್ಲಿ ಸೋಮವಾರ ಶಿವಧ್ವಜಾರೋಹಣ ನೆರವೇರಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿದರು.
ನಮ್ಮ ನಾಡಿನಲ್ಲಿ ಅನೇಕ ಧ್ವಜಗಳಿವೆ. ಒಂದೊಂದು ಧ್ವಜಕ್ಕೆ ಒಂದೊಂದು ಸಂಕೇತಗಳಿವೆ. ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಶಿವಧ್ಜಜಾರೋಹಣವನ್ನು ಆರೋಹಣ ಮಾಡುವಂಥ ಪರಂಪರೆಯನ್ನು ಆರಂಭ ಮಾಡಿದರು.
`ಶಿವ’ ಎಂದರೆ ಮಂಗಳ, ಲೇಸು, ಕಲ್ಯಾಣ, ಅಭ್ಯುದಯ. ಶರಣರ ಅನೇಕ ವಚನಗಳಲ್ಲಿ ಶಿವಾಚಾರದ ಧ್ವಜವನೆತ್ತಿ ಎನ್ನುವಂಥದ್ದು ಇದೆ. ಅವುಗಳ ಆಧಾರ ನೆಲೆಯಲ್ಲಿ ಶಿವಾಚಾರದ ಧ್ವಜವನ್ನು ಆರೋಹಣ ಮಾಡುವಂಥ ಅರ್ಥಪೂರ್ಣ ಭಾವ ನಮ್ಮ ಹಿರಿಯ ಗುರುಗಳವರದ್ದು. ಶಿವಧ್ವಜದ ಅಡಿಯಲ್ಲಿ ನಿಂತವರು ಜಾತ್ಯತೀತರಾಗಿ, ಲಿಂಗಾತೀತರಾಗಿ ಸಮಾನತೆಯನ್ನು ಎತ್ತಿ ಹಿಡಿಯಬೇಕು. ಸಕಲಜೀವಾತ್ಮರ ಒಳಿತನ್ನು ಹಾರೈಸಬೇಕು ಎನ್ನುವುದು ಆ ಗೀತೆಯ ಭಾವ.
ಇವತ್ತಿನ ದಿನಮಾನಗಳಲ್ಲಿ ಧ್ವಜಗಳೂ ಜಗಳಕ್ಕೆ ಕಾರಣವಾಗುತ್ತಿವೆ. ಒಂದೊಂದು ಧರ್ಮದಲ್ಲಿ ಅಥವಾ ಒಂದೊಂದು ರಾಜಕೀಯ ಪಕ್ಷಗಳಲ್ಲಿ ಬೇರೆ ಬೇರೆ ಸಂಘಟನೆಗಳಲ್ಲಿ ಈ ರೀತಿಯ ಧ್ವಜವನ್ನು ಆರೋಹಣ ಮಾಡ್ತಾ ಸಂಘಟನೆಯ ನೆಪದಲ್ಲಿ ವಿಘಟನೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಯಾವುದೇ ಧ್ವಜದ ಮೂಲ ಆಶಯ ಮನುಷ್ಯನ ಮನಸ್ಸಿನಲ್ಲಿರುವ ಕರ್ಮಠತನಗಳನ್ನು ಕಳೆದುಕೊಂಡು ಅವನಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾದ ಕೆಲಸಕಾರ್ಯಗಳನ್ನು ಮಾಡಬೇಕು.
ಅಂತರಂಗ ಬಹಿರಂಗ ಒಂದಾಗಿ ತನ್ನ ಬದುಕನ್ನು ಕಟ್ಟಿಕೊಂಡು ನಂತರ ಸಮಾಜದ ಬದುಕನ್ನು ಕಟ್ಟಬೇಕು. ಆದರೆ ದೇಶದ ಸ್ಥಿತಿಯನ್ನು ನೋಡಿದರೆ ಆ ಧ್ವಜಗಳೇ ಜಗಳಕ್ಕೆ ಕಾರಣವಾಗುತ್ತಿವೆ. ಈಗ ನಾವು ಮಾಡಬೇಕಾಗಿರುವುದು ವಚನಗಳ ಆಧಾರಿತ ನಡೆ-ನುಡಿ ನಮ್ಮಲ್ಲಿ ಇದೆಯೇ ಎಂದು ಪ್ರಶ್ನೆ ಹಾಕಿಕೊಳ್ಳಬೇಕು. ಆಚಾರ-ವಿಚಾರಗಳು ವಚನ ಆಧಾರವಾಗಿದ್ದರೆ ಬಹುಶಃ ಲಿಂಗಾಯತ ಧರ್ಮ ವಿಶ್ವದಲ್ಲೆಲ್ಲಾ ಪಸರಿಸುತ್ತಿತ್ತು.
ನಿಜವಾದ ಜಂಗಮ ಎಂದರೆ ಅರಿವು ಆಚಾರ ಒಂದಾದ ವ್ಯಕ್ತಿ. ಜಗತ್ತೇ ಜಂಗಮ. ಅದೊಂದು ಜೀವಂತಿಕೆಯ ಸಂಕೇತ. ಆದರೆ ಈಗ ಜಂಗಮವನ್ನು ಜಡವನ್ನಾಗಿಸಿದ್ದೇವೆ. ನಾವೆಲ್ಲ ವಚನ ಪರಂಪರೆಯನ್ನು ದೂರತಳ್ಳಿ ವೈದಿಕ ಪರಂಪರೆಯನ್ನು ನಮ್ಮ ಜನರಲ್ಲಿ ತುಂಬ್ತಾ ಇದೀವಿ. ಇತ್ತೀಚಿಗೆ ಪೂಜಾರಿ, ಪುರೋಹಿತರು ಪೂಜೆಯ ಪ್ಯಾಕೇಜ್ ಮಾಡಿಕೊಂಡು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿತ್ತಿದ್ದಾರೆ. ಈ ಪ್ಯಾಕೇಜ್‌ನಿಂದ ಪೂಜೆ ಮಾಡಿಸಿದವರಿಗಿಂತ ಪೂಜೆ ಮಾಡಿದವರಿಗೆ ಹೆಚ್ಚು ಲಾಭ. ಇಂಥ ಅನೇಕ ಮೌಢ್ಯಗಳನ್ನು, ಕಂದಾಚಾರಗಳನ್ನು ಲಿಂಗಾಯತರಲ್ಲಿ ಬಿತ್ತುತ್ತಿದ್ದಾರೆ.
ಇಂತಹ ಪ್ರೇರಣೆ ಒಂದು ಕಡೆಯಾದರೆ ಇನ್ನೊಂದು ಮಹಾಬುದ್ಧಿವಂತರೆನ್ನುವವರು ಹೊಸ ಹೊಸ ಕೃತಿಗಳನ್ನು ರಚನೆ ಮಾಡ್ತಾ ಇದ್ದಾರೆ. ಈಗಾಗಲೇ ಬಿಡುಗಡೆಗೊಂಡ ವಚನ ದರ್ಶನ ಪುಸ್ತಕದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿದೆ. ನಿಜವಾದ ದರ್ಶನ ಇರುವುದು ವಚನಗಳಲ್ಲಿ. ಆದರೆ ಈ ಕೃತಿಯ ಹಿಂದೆ ಏನೋ ಸಂಚು ಇದೆ. ನಮ್ಮ ಧರ್ಮವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದ್ದರೆ, ಅನುಷ್ಠಾನ ತಂದಿದ್ದರೆ ಅಂತಹ ಸಾವಿರ ಕೃತಿಗಳು ಪ್ರಕಟಿಸಿದರೂ ತಲೆಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ವೈದಿಕ ಪರಂಪರೆಯಿಂದ ಹೊರಬರಲಿಕ್ಕೆ ನಾವೇ ಸಿದ್ಧರಿಲ್ಲ. ನಮ್ಮ ಪರಂಪರೆ ಇಂಥದ್ದೆಂದು ಹೇಳಿದರೆ ನಮ್ಮ ಮೇಲೆ ಮುಗಿಬೀಳುವವರು ಸಾಕಷ್ಟು ಜನ ಇದ್ದಾರೆ. ಅವರು ಬೇರೆ ಯಾರೂ ಅಲ್ಲ; ನಮ್ಮವರೇ.
ಎರಡು ದಿನಗಳ ಕಾಲ ಲಿಂಗಾಯತ ಧರ್ಮದ ನಿಜ ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಇಂದಿನಿಂದ ಆಗ್ತಾ ಇದೆ. ಇದೊಂದು ಜಾಗೃತಿಯ ಕಮ್ಮಟ ಆಗ್ಬೇಕು. ಮತ್ತೆ ಮತ್ತೆ ವಚನ ಸಾಹಿತ್ಯವನ್ನು ಓದುವುದರ ಮೂಲಕ ನಿಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು. ಲಿಂಗಾಯತರು ತತ್ವ, ಸಿದ್ಧಾಂತಕ್ಕೆ ಬದ್ಧರಾಗಿರಬೇಕು ಎಂದರು.
ಕಮ್ಮಟದ ಬಗ್ಗೆ ಪ್ರಾಸ್ತಾವಿಕವಾಗಿ ಪಿ ರುದ್ರಪ್ಪ ಮಾತನಾಡಿದರು. ಶರಣ ಚಿಂತಕರಾದ ಗುಳ್ಳೇಹಳ್ಳಿ ಮಲ್ಲಿಕಾರ್ಜುನಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಚನಾಧಾರಿತ ನಿಜಾಚರಣೆಗಳನ್ನು ಕುರಿತಂತೆ ಶಿವಾನಂದ, ಮಡಿವಾಳಪ್ಪ ಎಂ. ಸಂಗೊಳ್ಳಿ, ಎಸ್.ಎನ್. ಅರಬಾವಿ, ಎಂ.ಎಂ. ಮಡಿವಾಳ ವಿಷಯ ಮಂಡನೆ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
Sharanu sharanarthigalu…poojya gurugala .. Pavithra karyakki ….Namma lingayata piligege nija tatva vannu boodane madi …lingayata dharmada nija aacharanegalannu tilisabekagide.