ಗದಗ
ಈ ಹಿಂದೆ ಪುರೋಹಿತಶಾಹಿಗಳು ದೇವರ ಪೂಜೆ, ದರ್ಶನ ಸೇರಿದಂತೆ ತಮಗೆ ಅನುಕೂಲವಾಗುವಂತೆ ಹಲವಾರು ಸಂಪ್ರದಾಯ ಮಾಡಿ ಶೋಷಣೆಗೆ ತೊಡಗಿದರು. ಜನಸಾಮಾನ್ಯರು ಇದರಿಂದ ಸಾಕಷ್ಟು ನಲುಗಿದರು.
ಆದರೆ ಆ ಸಂದರ್ಭದಲ್ಲಿ ಉದಿಸಿದ ಬಸವಣ್ಣನವರು ಈ ನೊಂದ ಜನರನ್ನು ತಮ್ಮ ಬಳಿಗೆ ಕರೆದು ದೇವರು ಗುಡಿಯಲ್ಲಿಲ್ಲ, ನಿಮ್ಮಲ್ಲೇ ಇದ್ದಾನೆ, ಆತ ನಿರಾಕಾರ, ಜಗತ್ತನ್ನೇ ವ್ಯಾಪಿಸಿದ್ದಾನೆ. ಅವನ ಸಾಕಾರ ರೂಪವೇ ಇಷ್ಟಲಿಂಗ. ಇದನ್ನೇ ಪೂಜಿಸಿರಿ, ದೇವರನ್ನು ಕಾಣಲು ಗುಡಿ, ದೇವಸ್ಥಾನಗಳಿಗೆ ಹೋಗುವ ಅವಶ್ಯಕತೆಯಿಲ್ಲ, ದೇವರನ್ನು ಕಾಣಲು ಹೊರಗೆ ಅರಸುವುದಕ್ಕಿಂತ ನಿಮ್ಮಲ್ಲೇ ಅರಸಿರೆಂದು ಜನಸಾಮಾನ್ಯರಿಗೆ ಇಷ್ಟಲಿಂಗ ನೀಡುವ ಮೂಲಕ ಬಸವಣ್ಣನವರು ಶೋಷಣೆ ತಪ್ಪಿಸಿದರೆಂದು ಶರಣತತ್ವ ಚಿಂತಕ, ಅನುಭಾವಿಗಳಾದ ಎಸ್. ಎ. ಮುಗದ ಅವರು ತಿಳಿಸಿದರು.

ಬಸವದಳದಲ್ಲಿ ನಡೆದ ೧೬೨೭ನೇ ಶರಣ ಸಂಗಮದಲ್ಲಿ ‘ಶಿವಯೋಗ ಪ್ರಾತ್ಯಕ್ಷಿಕೆ’ ಕಾರ್ಯಕ್ರಮದಲ್ಲಿ ಶಿವಯೋಗ ಕುರಿತು ಉಪನ್ಯಾಸ ಮಾಡುತ್ತ, ಆರಂಭದ ಹಂತ ಲಿಂಗಪೂಜೆಯಾಗಿದ್ದರೆ ನಂತರದ್ದು ಶಿವಯೋಗವಾಗಿದೆ. ಅಲ್ಲಿ ದೇವರನ್ನು ಕಾಣುವುದಾಗಿದೆ. ಲಿಂಗವು ಕಪ್ಪಾಗಿದ್ದು ಅದು ಹೊರಗಿನ ಬೆಳಕಿನ ಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ಪರಿಣಾಮ ಸಾಧಕನ ಕೈ ಅಂಗೈ ಕೂಡಾ ಬಿಸಿಯಾಗಿರುತ್ತದೆ. ಅದು ಲಿಂಗ ಸೇರುತ್ತದೆ. ಲಿಂಗಪೂಜೆಯ ನಂತರ ಪಾದೋದಕವನ್ನು ತೆಗೆದುಕೊಂಡಾಗ ಆ ಶಕ್ತಿ ಕಣಗಳೆಲ್ಲ ಪಾದೋದಕದ ಮೂಲಕ ಸಾಧಕನಲ್ಲಿ ಸೇರುತ್ತವೆ. ಅದೇ ಮಹಾಪ್ರಸಾದವಾಗುವುದು. ಇದು ತುಂಬ ಶಕ್ತಿಶಾಲಿಯಾದುದು.
ಇನ್ನು ಇಷ್ಟಲಿಂಗದಲ್ಲಿ ದೃಷ್ಠಿಯೋಗ ಸಾಧನೆಯು ಬಸವಣ್ಣನವರ ದೊಡ್ಡ ಸಂಶೋಧನೆಯಾಗಿದೆ. ಈ ಮೂಲಕ ಮೆದುಳಿನಲ್ಲಿರುವ ಫಿನಿಯಲ್ ಗ್ಲ್ಯಾಂಡನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಅವರು ತೋರಿಸಿದರು.
ಇಲ್ಲಿ ನಾವು ನಿರೀಕ್ಷಿಸುವ ದೃಷ್ಠಿಯೋಗದ ಬೆಳಕು ಕಣ್ಣಿನ ನರತಂತುಗಳ ಮೂಲಕ ತಲುಪುವ ಮೆದುಳಿನ ಭಾಗವೇ ಫಿನಿಯಲ್‌ಗ್ಲ್ಯಾಂಡ್ ಆಗಿದೆ. ಆ ಸಂದರ್ಭದಲ್ಲಿ ಸಾಧಕನಿಗೆ ಅದು ಸ್ವಲ್ಪ ಸ್ವಲ್ಪ ಅರಿವಾಗುತ್ತಿರುತ್ತದೆ.
ಆತನ ಇಷ್ಟಲಿಂಗದ ಸುತ್ತ ಬೆಳಕಿನ ವೃತ್ತ (ಪ್ರಭಾವಳಿ) ನಿರ್ಮಾಣವಾಗಿರುತ್ತದೆ. ಆಗ ಲಿಂಗದ ಹಿಂಬದಿ ದೀಪ ಹಚ್ಚಿಟ್ಟಿರುವ ಬೆಳಕಿನಂತೆ ಪ್ರಭೆ ನಮಗೆ ಕಾಣಿಸುವುದು. ಅದನ್ನೇ ನಾವು ನೋಡುತ್ತಾ ಹೋದಂತೆ ಕೊನೆ ಕೊನೆ ಆ ವ್ಯಕ್ತಿ ಕರಸ್ಥಲದ ಲಿಂಗದಲ್ಲಿಯೇ ಲೀನವಾದಂತೆ ಭಾಸವಾಗಿ ಒಂದು ಬಗೆಯ ರೋಮಾಂಚನವನ್ನು ಅನುಭವಿಸುತ್ತಾನೆ. ಮುಂದೆ ಸಾಧನೆ ಹೆಚ್ಚಾದಂತೆ ಲಿಂಗದ ಆ ಪ್ರಭಾವಳಿ ಮರಳಿ ಆತನ ಕಣ್ಣಿನ ಮೂಲಕ ಪ್ರವೇಶಿಸುವುದು ಅರಿವಿಗೆ ಬರುತ್ತದೆ.

ಲಿಂಗಯೋಗವು ಫೆನಿಯಲ್ ಗ್ಲ್ಯಾಂಡ್‌ನ್ನು ಜಾಗೃತಿಸುವ ವಿಧಾನವಾಗಿದೆ. ಇದರಿಂದ ಆ ವ್ಯಕ್ತಿಯಲ್ಲಿ ಹಲವಾರು ಪರಿವರ್ತನೆಗಳು ಆಗುವವು. ಆತನಲ್ಲಿ ಹೆಚ್ಚಿನ ಅರಿವು ಉಂಟಾಗುತ್ತದೆ. ಜ್ಞಾಪಕ ಶಕ್ತಿಯ ಹೆಚ್ಚಾಗುತ್ತದೆ. ತೃಪ್ತಭಾವವಿರುತ್ತದೆ. ಶಿವಯೋಗಕ್ಕೆ ವಚನಗಳ ಆಧಾರವೇ ಇದೆ. ಇದು ಒಂದು ವಿಜ್ಞಾನವಾಗಿದೆ. ಇದಕ್ಕೆ ಬರೀ ಅರ್ಧಗಂಟೆ ಮೀಸಲಿಟ್ಟರೆ ಸಾಕೆಂದು ಮುಗದ ಅವರು ಹೇಳಿದರು.
ಇನ್ನೋರ್ವ ಅನುಭಾವಿ ಶರಣ ಪ್ರಕಾಶ ಅಸುಂಡಿಯವರು ಕರ್ನಾಟಕದ ಗಾಂಧೀ ಹರ್ಡೇಕರ ಮಂಜಪ್ಪನವರ ೭೮ನೇ ಸ್ಮರಣೋತ್ಸವದ ಸಂದರ್ಭದಲ್ಲಿ ಅವರ ಬದುಕಿನ ಬಗ್ಗೆ ಮಾತನಾಡುತ್ತಾ, ಮಂಜಪ್ಪನವರು ಕಟ್ಟಾ ಬಸವಾನುಯಾಯಿಗಳು. ಅವರು ಮೊಟ್ಟ ಮೊದಲ ಬಾರಿಗೆ ‘ಬಸವ ಜಯಂತಿ’ಯನ್ನು ಆಚರಿಸಿದರು. ಈ ಮೂಲಕ ನಾಡಿನಾದ್ಯಂತ ಬಸವ ಜಯಂತಿಯು ಪ್ರಚುರಗೊಂಡಿತೆಂದರು.

ವಚನ ಪ್ರಾರ್ಥನೆ ಗಂಗಮ್ಮ ಹೂಗಾರ, ಜಯಶ್ರೀ ಹಳ್ಳಿಕೇರಿಯವರಿಂದ ಜರುಗಿತು. ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಪ್ರಕಾಶ ಅಸುಂಡಿ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿ.ಕೆ. ಕರೇಗೌಡ್ರ ವಹಿಸಿ ಮಾತಗಳನ್ನಾನಾಡಿದರು. ಶರಣು ಸಮರ್ಪಣೆಯನ್ನು ಪ್ರಶಾಂತ ಲಿಂಗಧಾಳ ಗೈದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಕಾರ್ಯಕ್ರಮದಲ್ಲಿ ಬಸವದಳದ ಶರಣ, ಶರಣೆಯರು ಭಾಗವಹಿಸಿದ್ದರು.