ಶೂದ್ರರಿಗೆ ಜ್ಞಾನ ದಾಸೋಹ ನೀಡಿದ ಸಿರಿಗೆರೆ, ಸಾಣೇಹಳ್ಳಿ ಮಠಗಳು: ಗೋವಿಂದ ಕಾರಜೋಳ

ಸಾಣೇಹಳ್ಳಿ

12ನೇ ಶತಮಾನದ ನಂತರ ಶುರುವಾದ ಮಠಗಳು ವರ್ಗರಹಿತ, ಸುಂದರ ಸಮಾಜ ಸ್ಥಾಪನೆಗೆ ಶ್ರಮಿಸಿದ ಮಠಗಳಲ್ಲಿ ಸಿರಿಗೆರೆ ಮಠವೂ ಒಂದು. ಶೂದ್ರರಿಗೆ ಅಕ್ಷರ ಕಲಿಸುವುದು ಅಪರಾಧವಾಗಿತ್ತೋ ಅಂಥ ಕಾಲಘಟ್ಟದಲ್ಲಿ ಶಿವಕುಮಾರ ಸ್ವಾಮಿಗಳು ಬಸವತತ್ವವನ್ನು ಅನುಷ್ಠಾನಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಶಾಲೆ, ಕಾಲೇಜು ತೆರೆದರು. ಬಡವರಿಗೆ ಅದರಲ್ಲೂ ಅಸ್ಪೃಶ್ಯರಿಗೂ ಮಠದಲ್ಲಿ ಅವಕಾಶ ನೀಡಿ ಅಕ್ಷರ, ಅನ್ನ, ಜ್ಞಾನ ದಾಸೋಹ ಪಾಲಿಸಿದ್ದು ಸಿರಿಗೆರೆ ಮಠ. ಇದನ್ನು ಸಾಣೇಹಳ್ಳಿ ಮಠವೂ ಮುಂದುವರೆಸಿದೆ ಎಂದು ಸಂಸದ ಗೋವಿಂದ ಕಾರಜೋಳ ಶ್ಲಾಘಿಸಿದರು.

ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡುತ್ತ ಪಂಡಿರಾತಾಧ್ಯ ಶ್ರೀಗಳನ್ನು ನೋಡಿದಾಗ ಶಿವನ ನೆನಪಾಗುತ್ತದೆ ಜೊತೆಗೆ ಅಲ್ಲಮಪ್ರಭುವಿನ ವಚನ ನೆನಪಾಗುತ್ತದೆ. ಮನುಷ್ಯ ಶಿವನಸ್ವರೂಪಿಯಾದಾಗ ಯಾವುದೇ ಅನಿಷ್ಟಗಳು ತಾಗುವುದಿಲ್ಲ ಅವರನ್ನು ನೋಡಿದಾಗ ಅನುಭವ ಮಂಟಪ ನೆನಪಾಗುತ್ತದೆ. ವಚನಗಳು, ಅಲ್ಲಮಪ್ರಭು ಮಾಡಿದ ಕೆಲಸಗಳನ್ನು ಪಂಡಿತಾರಾಧ್ಯ ಶ್ರೀಗಳು ಕೈಗೊಂಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರು ಬಯಸಿದ ವರ್ಗರಹಿತ, ಜಾತಿರಹಿತ, ಲಿಂಗಭೇದ ಸಮಾಜ ನಿರ್ಮಾಣಕ್ಕೆ ಪಂಡಿತಾರಾಧ್ಯ ಶ್ರೀಗಳು ಕಂಕಣಬದ್ಧರಾಗಿದ್ದಾರೆ. ಸಿರಿಗೆರೆ ಮಠವು, ಈ ಸಾಣೇಹಳ್ಳಿ ಮಠವು ಈ ಭೂಮಿಯ ಮೇಲೆ ಮನುಷ್ಯಕುಲ ಇರುವವರೆಗೆ ಇರುತ್ತದೆ ಎಂದರು.

ಸಂಸದನಾಗಲು ಬಯಸಿದವನಲ್ಲ. ಹೈಕಮಾಂಡ್‌ ಮೂಲಕ ಬುಲಾವ್‌ ಬಂದಾಗ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದಿಸಿದ ಪರಿಣಾಮ ಸಂಸದನಾದೆ ಎಂದರು.

ಮಹಾಂತೇಶ ಅವರಿಗೆ ಶಿವಕುಮಾರ ಪ್ರಶಸ್ತಿ ಪ್ರದಾನ

ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಅವರಿಗೆ ಪಂಡಿತಾರಾಧ್ಯ ಶ್ರೀಗಳು ೨೦೨೪ನೇ ಸಾಲಿನ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಪ್ರಶಸ್ತಿ ಪುರಸ್ಕೃತರಾದ ಮಹಾಂತೇಶ ಮಾತನಾಡಿ, ಈ ಪ್ರಶಸ್ತಿ ಬರಲು ನನ್ನ ತಂದೆತಾಯಿಯ ಆಶೀರ್ವಾದ ಕಾರಣ. ನನ್ನ ಹೆತ್ತವರಾದ ಮಹಾಂತಪ್ಪ ಹಾಗೂ ಸೋನಮ್ಮ ಅವರಿಗೆ ಹತ್ತು ಮಕ್ಕಳು ನಾವು. ಏಳು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು. ಮನೆಯಲ್ಲಿ ಯಾರಿಗೂ ರಂಗಾಸಕ್ತಿ ಇರಲಿಲ್ಲ. ೧೯೫೪ರಲ್ಲಿ ದಾವಣಗೆರೆಯ ಜಯಲಕ್ಷ್ಮಿ ನಾಟ್ಯ ಸಂಘದವರ ಕಂಪನಿ ಸುಟ್ಟು ಹೋಗಿತ್ತು. ಆಗ ನನ್ನ ತಂದೆ ಮಹಾಂತಪ್ಪ ಅವರು ಆ ಕಂಪನಿಗೆ ನಾಟಕದ ಪರದೆಗಳನ್ನು, ಉಡುಪುಗಳನ್ನು ಕೊಟ್ಟು ಇಲಕಲ್ಲದಲ್ಲಿ ನಾಟಕವಾಡಿಸಿ ಕಳಿಸಿಕೊಟ್ಟರು ಎಂದು ಸ್ಮರಿಸಿದರು.

ಐದನೇ ತರಗತಿಯಲ್ಲಿದ್ದಾಗಲೇ ನಾಟಕ ಕಂಪನಿಗಳಿಗೆ ಹೋಗುವುದು ಹೆಚ್ಚಿತು. ನಂತರ ಸ್ನೇಹರಂಗದ ರಂಗತಂಡಕ್ಕೆ ಸೇರಿದೆ. ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಈ ತಂಡದ ಅಧ್ಯಕ್ಷನಾಗಿ ಹತ್ತು ವರ್ಷಗಳವರೆಗೆ ದುಡಿದೆ.

ಸಂಘಟನಾ ಚಾತುರ್ಯವನ್ನು ಶ್ರೀನಿವಾಸ್‌ ಜಿ. ಕಪ್ಪಣ್ಣ ಕಲಿಸಿಕೊಟ್ಟರು. ಹೀಗೆ ರಂಗನಂಟು ಬಿಡಲಿಲ್ಲ. ಪಂಡಿತಾರಾಧ್ಯ ಶ್ರೀಗಳು ಫೋನ್‌ ಮಾಡಿ ಶಿವಕುಮಾರ ಪ್ರಶಸ್ತಿ ಪುರಸ್ಕೃತನಾಗಿದ್ದೇನೆಂದು ಹೇಳಿದಾಗ ನಡುಗಿಬಿಟ್ಟೆ. ಈ ಪ್ರಶಸ್ತಿಯನ್ನು ನನ್ನ ಹೆತ್ತವರಿಗೆ, ನಿಧನಳಾದ ಅಕ್ಕಳಾದ ಸರೋಜಮ್ಮಳಿಗೆ, ಸ್ನೇಹರಂಗ ತಂಡಕ್ಕೆ ಅರ್ಪಿಸುವೆ ಎಂದು ಭಾವುಕರಾದರು.

ಇದಕ್ಕೂ ಮೊದಲು ರಂಗಕರ್ಮಿ ಶ್ರೀನಿವಾಸ್‌ ಜಿ.ಕಪ್ಪಣ್ಣ ಅವರು ಮಹಾಂತೇಶ ಗಜೇಂದ್ರಗಡ ಅವರ ಪರಿಚಯಪತ್ರವನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿ, ಮಹಾಂತೇಶ ಅವರು ನಮ್ಮ ಕನ್ನಡ ರಂಗಭೂಮಿಯ ಪುಣ್ಯಕೋಟಿ. ಉತ್ತರ ಕರ್ನಾಟಕದ ರಂಗಭೂಮಿಯ ಯಾವುದೇ ಕೆಲಸಕ್ಕೂ ಸೈ ಎನ್ನುವವರು ಅವರು. ಇಲಕಲ್ಲದಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗೆ ತರಬೇತಿ ನೀಡುವ ಕುರಿತು ಶೇಖ್‌ ಮಾಸ್ತರ್‌ ಫೋನ್‌ ಮಾಡಿ ಹೇಳಿದಾಗ ಮಹಾಂತೇಶ ಅವರು ಅನೇಕ ಕಲಾವಿದರನ್ನು ಕಲೆ ಹಾಕುತ್ತಾರೆ. ನಾನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಎಂಟು ಕಡೆ ಸುವರ್ಣ ರಂಗಭೂಮಿ ಯೋಜನೆಯಡಿ ರಂಗಮಂದಿರ ಕಟ್ಟಲು ಮುಂದಾದಾಗ ಮಹಾಂತೇಶ ಅವರು ಫೋನ್‌ ಮಾಡಿ ಇಲಕಲ್ಲ ಮರೆತುಬಿಟ್ಟಿರಿ ಎಂದು ಹೇಳಿದರು. ಆಮೇಲೆ ಇಲಕಲ್ಲದಲ್ಲೂ ರಂಗಮಂದಿರ ಕಟ್ಟಲು ಯೋಜನೆಗೆ ಸೇರಿಸಿದೆವು. ಹೀಗೆ ರಂಗಭೂಮಿಗಾಗಿ ಸದಾ ದುಡಿಯವವರು ಎಂದರು.

Share This Article
1 Comment
  • ಆದರೆ ಏನು ಪ್ರಯೋಜನ ಅದೇ ಶೂದ್ರರು ಮತ್ತೆ ಮನುವ್ಯದಿಗಳ ಪಾದದಡಿಗೆ ಬೀಳಲು ಪೈಪೋಟಿಯಲ್ಲಿ ಇದ್ದಾರೆ

Leave a Reply

Your email address will not be published. Required fields are marked *