ಹೊಸದುರ್ಗ:
ಚುನಾವಣೆ ಬಂದಾಗ ಮಠಗಳು ಬೇಕು, ಮಠಗಳ ಭಕ್ತರು ಬೇಕು. ಆದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಸ್ವಾಮಿಗಳನ್ನು ತುಚ್ಛವಾಗಿ ಬೈದ ಸ್ವಾಮೀಜಿ ವಿರುದ್ಧ ಯಾರೂ ಪ್ರತಿಭಟಿಸಲಿಲ್ಲ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬುಧವಾರ ಸಂಜೆ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮನ್ನು ಟೀಕಿಸುವ ಮೂಲಕ ಕೆಲವರು ದೊಡ್ಡವರಾಗಲು ಪ್ರಯತ್ನಿಸುತ್ತಾರೆ. ಹಾಗಾಗಲು ಸಾಧ್ಯವಿಲ್ಲ. ರಚನಾತ್ಮಕ ಟೀಕೆಗಳನ್ನು ಗಮನಿಸಬಹುದು. ಆದರೆ ತಾವು ದೊಡ್ಡವರಾಗಲು ನಮ್ಮನ್ನು ಟೀಕಿಸುವವರನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆಯ ದಿನಪತ್ರಿಕೆಯಲ್ಲಿ ನಮ್ಮನ್ನು ಟೀಕಿಸಿ ಬರೆದ ಲೇಖನ ಪ್ರಕಟವಾಗಿದೆ. ಆದರೆ ನಮ್ಮನ್ನು ಬಲ್ಲವರು ನಾವು ಏನೆಂಬುದು ಗೊತ್ತು ಎಂದು ಹೇಳಿದರು.

ವಚನ ಸಂವಿಧಾನದಲ್ಲಿರುವುದನ್ನು ಹೇಳಿದಾಗ ಅನೇಕರ ಹೊಟ್ಟೆಯಲ್ಲಿ ಮೆಣಸಿನಕಾಯಿ ಮುರಿದ ಹಾಗಾಗುತ್ತದೆ.ತತ್ವಗಳನ್ನು ಸರಿಯಾಗಿ ಗ್ರಹಿಸದೆ ಟೀಕಿಸುವವರು ಇದ್ದಾರೆ ಎಂದರು.
ನಮ್ಮ ಎರಡು ಚೈತನ್ಯಗಳಲ್ಲಿ ವಿಶ್ವಗುರು ಬಸವಣ್ಣನವರು ಒಬ್ಬರು. ಅವರನ್ನು ಪರಿಚಯಿಸಿದ ನಮ್ಮ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಇನ್ನೊಬ್ಬರು. ಆತ್ಮನಿವೇದನೆ ಹಾಗೂ ದಿಟ್ಟ ಹೆಜ್ಜೆ ದಿಟ್ಟ ಕ್ರಮ ಅವರ ಎರಡು ಕೃತಿಗಳು ಪ್ರಮುಖವಾದವು. ಈ ಕೃತಿಗಳಲ್ಲಿ ಗುರು ಹೇಗಿರಬೇಕು ಎಂದು ತೋರಿಸುತ್ತವೆ ಎಂದು ತಿಳಿಸಿದರು.

ಶಿವಸಂಚಾರ ಶಾಶ್ವತ ನಿಧಿ: ಶಾಶ್ವತ ನಿಧಿ ಸಂಗ್ರಹ ಗುರಿ ನಮ್ಮ ಶಿವಸಂಚಾರಕ್ಕೆ ಶಾಶ್ವತ ನಿಧಿಯಾಗಿ ಮುಂದಿನ ನಾಟಕೋತ್ಸವದ ಹೊತ್ತಿಗೆ 3 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯಿದೆ. ಇದಕ್ಕಾಗಿ ಭಕ್ತರು ಕಾಣಿಕೆ ನೀಡಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕೋರಿದರು.
ಶಿವಸಂಚಾರದ ಕಲಾವಿದರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡುತ್ತಿದ್ದೇವೆ. ಇದನ್ನು ಹೆಚ್ಚಿಸಲು ಶಾಶ್ವತನಿಧಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಡೂರಿನ ಮಾಜಿ ಶಾಸಕ ಬೆಳ್ಳಿ ಪ್ರಕಾಶ, ಚನ್ನಗಿರಿ ಮಾಜಿ ಶಾಸಕ ವಡ್ನಾಳ ರಾಜಣ್ಣ, ಶಿವಮೊಗ್ಗದ ವರ್ತಕರಾದ ಎಚ್. ಓಂಕಾರಪ್ಪ, ಜಿಲ್ಲಾಧಿಕಾರಿ ಕುಮಾರಸ್ವಾಮಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಲೇಖಕಿ ಹೆಚ್.ಎಲ್. ಪುಷ್ಪ, ಡಾ. ಜೆ.ಎಸ್. ಪಾಟೀಲ ಮತ್ತಿತರರು ಮಾತನಾಡಿದರು.
