ಇವಳು ತಿಪ್ಪೇಲಕ್ಷ್ಮೀ..
ಈ ತಿಪ್ಪೆಲಕ್ಷ್ಮಿಯು ನನ್ನಂತ ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ.
ಲಕ್ಷಮಿ, ಲಕ್ಷಮಿ, ಲಚ್ಚಮಿ, ಲಚ್ಮಿಯೆಂದೆಲ್ಲಾ ಕರೆಸಿಕೊಳ್ಳುವ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ, ತಿಪ್ಪೇಸ್ವಾಮಿ, ತಿಪ್ಪೇಶ, ತಿಪ್ಪೇನಾಗ, ತಿಪ್ಪಯ್ಯ ಮುಂತಾದ ಹೆಸರುಗಳಿಂದ ಪುರುಷ-ಸ್ತ್ರೀ ಎಂಬ ಭೇದಗಳಿಲ್ಲದೆ ಕೂಡ ಕರೆಯಲಾಗುತ್ತದೆ.
ಮಲೆಮಹದೇಶ್ವರನ ಕಾವ್ಯದಲ್ಲಿರುವಂತೆ ಮಲೆಯ ಮಹದೇವ ಹುಟ್ಟಿಬರುವುದೇ ತಿಪ್ಪೆಯಿಂದ.
ತಿಪ್ಪೆಗುಂಡಿಯಿಂದ ಎದ್ದುಬಂದ ಮಹದೇವ ತನ್ನ ಮೈತುಂಬಾ ಕೀವು-ರಕ್ತ-ರಸಕು ತುಂಬಿಕೊಂಡು, ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು, ಕೊರಳಿಗೆ ಸೇಂದಿ ಗಡಿಗೆ ಕಟ್ಟಿಕೊಂಡು ಕಲ್ಯಾಣಪಟ್ಟಣ ಪ್ರವೇಶಿಸುತ್ತಾನೆ.
ಮಂಟೇಸ್ವಾಮಿ ಕಾವ್ಯದಲ್ಲಿ ವ್ಯಕ್ತವಾಗಿರುವಂತೆ ಕಲ್ಯಾಣದಲ್ಲಿ ತನಗೆ ಶರಣರು ಪ್ರವೇಶ ನಿರಾಕರಿಸಿದ ಬಳಿಕ, ಮಂಟೇಸ್ವಾಮಿಯು ತನ್ನ ಮೈ ಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು ಮಾದಿಗರ ಘನಶರಣನಾದ ಹರಳಯ್ಯನ ತಿಪ್ಪೇಗುಂಡಿ ಸೇರಿಕೊಳ್ಳುತ್ತಾನೆ. ಹರಳಯ್ಯನ ತಿಪ್ಪೇಗುಂಡಿಯಲ್ಲಿದ್ದ ಮಂಟೇಸ್ವಾಮಿಯನ್ನು ಬಸವಣ್ಣ ಮತ್ತು ನೀಲಮ್ಮನವರು ಪ್ರಾರ್ಥಿಸಿ ಮರಳಿ ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಾರೆ.
ದೇಶಿ ಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯು ಸತ್ತೆಮ್ಮೆಯನ್ನು ಬದುಕಿಸುವ ಪವಾಡ ಮಾಡಿ, ತಿಪ್ಪೆಗೆ ಸೆಗಣಿ ಮತ್ತು ಮನೆಮಕ್ಕಳಿಗೆ ಹಾಲುಕೊಡುವ ಎಮ್ಮೆಗಳನ್ನು ಬದುಕಿಸಿ ಅನ್ನ ಬೆಳೆಯುವ ರೈತರಿಗೆ ನೆರವಾಗುತ್ತಾನೆ. ಪುರೋಹಿತಶಾಹಿ ವ್ಯವಸ್ಥೆಯು ಸೃಷ್ಟಿಸಿರುವ “ವರಮಹಾಲಕ್ಷ್ಮಿ”ಗಿಂತಲೂ ನಮ್ಮ ದುಡಿಯುವ ಜನರ ತಿಪ್ಪೇಲಕ್ಷ್ಮಿ ದೊಡ್ಡವಳು!