ತ್ರಿವಿಧ ದಾಸೋಹ ಮೂಲಕ ಸಮಾಜ ಸುಧಾರಿಸಿದ ಹೆಗ್ಗಳಿಕೆ ಹುಕ್ಕೇರಿ ಮಠದ್ದು

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ:

ಅನ್ನ, ಅರಿವು ಮತ್ತು ಆಶ್ರಯ ಈ ತ್ರಿವಿಧ ದಾಸೋಹದ ಮೂಲಕ ಮಧ್ಯಮ ವರ್ಗವನ್ನು ಸುಧಾರಿಸಿದ ಹೆಗ್ಗಳಿಕೆ ಜೊತೆಗೆ ಎಲ್ಲ ರಂಗಗಳಲ್ಲಿ ವಿದ್ಯಾರ್ಥಿಗಳನ್ನು ನೀಡಿ ನಾಡನ್ನು ಸಂಪನ್ಮೂಲಗೊಳಿಸಿದ ಶ್ರೇಯಸ್ಸು ಶ್ರೀಮಠದ್ದು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಒಬ್ಬ ಮಗ ತನ್ನ ತಂದೆ ಎದುರು ತಲೆಯೆತ್ತಿ ನಿಲ್ಲುವುದು ಹಾಗೂ ಒಬ್ಬ ಶಿಷ್ಯ ತನ್ನ ಗುರುವಿನ ಹೆಸರನ್ನು ತರುವುದು ಜೀವನದ ಸಾರ್ಥಕ ಕ್ಷಣಗಳು. ಅಂಥ ಸಂದರ್ಭ ಇಂದು ಕೂಡಿ ಬಂದಿದೆ. ಶ್ರೀಮಠದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸರ್ವರಂಗಗಳಲ್ಲಿ ಗುರುತಿಸಿಕೊಂಡು ತಮಗೆ ಕಲಿಸಿದ ಗುರುವಿಗೆ ವಂದಿಸುವ ಸಮಯವಿದು.

ಈ ಸುವರ್ಣ ಸಂದರ್ಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿ ಭವನದ ಮೊದಲ ಮಹಡಿ ಒಂದು ವರ್ಷದೊಳಗೆ ಉದ್ಘಾಟನೆಗೊಳ್ಳಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಮೂಲಕ ನಮ್ಮ ಬದುಕನ್ನು ರೂಪಿಸಿದ ನಮ್ಮ ಗುರುಗಳು ಪ್ರಾತಃಸ್ಮರಣೀಯರು. ಅವರ ಪ್ರಭಾವದಿಂದ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ವಿಶೇಷವಾಗಿ ಪ್ರತಿಯೊಬ್ಬರಿಗೂ ಗುರುವಿನ ಅನುಗ್ರಹ ಇರಬೇಕು. ಆ ಭಾಗ್ಯ ನನಗೆ ಸಿಕ್ಕಿದೆ.

ಜಿಲ್ಲಾಧಿಕಾರಿಯಾಗಿ ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ಸಂದರ್ಭ ಹಾಗೂ ಹಾವೇರಿ ಹುಕ್ಕೇರಿಮಠದ ಈ ಜಾತ್ರಾ ಸಂದರ್ಭದಲ್ಲಿ ನನ್ನ ಕರ್ತವ್ಯ ನಿಭಾಯಿಸಿರುವುದು ನನ್ನ ಪಾಲಿಗೆ ಅತಿ ಧನ್ಯತೆಯ ಕ್ಷಣಗಳು ಎಂದರು.

ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರು ಮಾತಾಡುತ್ತಾ, ಹುಕ್ಕೇರಿಮಠ ಕೇವಲ ಧರ್ಮಕೇಂದ್ರವಾಗದೇ ಶಿಕ್ಷಣ ಹಾಗೂ ಸಂಸ್ಕಾರದ ಮೂಲಕ ಮಾನವೀಯ ಮೌಲ್ಯಗಳನ್ನು ಹೇಳಿಕೊಡುತ್ತಿದೆ. ಜಾತಿ ಮತ್ತು ಧರ್ಮ ಮೀರಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಕಳೆದ ಎರಡೂವರೆ ದಶಕಗಳಿಂದ ಶ್ರೀಮಠದ ಭಕ್ತನಾಗಿ ಬದುಕಿನಲ್ಲಿ ಸಿದ್ಧಾಂತಗಳನ್ನು ಇಟ್ಟುಕೊಂಡು ಬದುಕಲು ಕಲಿತಿದ್ದೇನೆ. ವಿದ್ಯಾರ್ಥಿ ಭವನಕ್ಕೆ ಶಾಸಕರ ನಿಧಿಯಿಂದ ೧೦ ಲಕ್ಷ ರೂ.ಗಳ ಅನುದಾನ ನೀಡುವೆ ಎಂದರು.

ಪ್ರೊ. ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯರು ಮಾತಾಡುತ್ತಾ, ತಾಯಿ ಮಗುವಿಗೆ ಜನ್ಮ ನೀಡಿದರೆ, ಗುರು ಆ ಮಗುವಿನ ಬದುಕು ರೂಪಿಸುವ ಕೆಲಸ ಮಾಡುತ್ತಾರೆ. ನಮ್ಮ ದೇಶದಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಅವರನ್ನು ದೇವರ ರೂಪದಲ್ಲಿ ಕಾಣುತ್ತೇವೆ. ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಮಾಡುತ್ತಿರುವುದು ಶ್ಲಾಘನೀಯ ಮತ್ತು ಅನುಕರಣೀಯ ಎಂದರು.

ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಮೂಲೆಗದ್ದೆ ಶಿವಯೋಗಾಶ್ರಮದ ಚನ್ನಬಸವ ಸ್ವಾಮೀಜಿ, ನಿವೃತ್ತ ಶಿಕ್ಷಕರ ಪೈಕಿ ಪ್ರಾಥಮಿಕ ಶಾಲಾ ವಿಭಾಗದಿಂದ ಎಚ್.ಆರ್. ಹೊಸಮನಿ ಹಾಗೂ ಪ್ರೌಢಶಾಲೆ ವಿಭಾಗದಿಂದ ಬಿ. ಬಸವರಾಜ, ಹಿರಿಯ ವಿದ್ಯಾರ್ಥಿಗಳ ಪೈಕಿ ಡಾ. ಓಂಕಾರ ಕಾಕಡೆ ಹಾಗೂ ಪ್ರಕಾಶ ಮತ್ತಿಹಳ್ಳಿ ಮಾತನಾಡಿದರು.

ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಟವಿಸ್ವಾಮಿಮಠದ ಕುಮಾರಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಆಡಳಿತ ಮಂಡಳಿಯ ಎಸ್.ಎಸ್. ಮುಷ್ಠಿ, ವೀರಣ್ಣ ಅಂಗಡಿ, ಜಗದೀಶ ತುಪ್ಪದ, ಹಿರಿಯ ವಿದ್ಯಾರ್ಥಿಗಳಾದ ಬಸವರಾಜ ಅರಬಗೊಂಡ, ಮಲ್ಲಿಕಾರ್ಜುನ ಸಾತೇನಹಳ್ಳಿ, ಡಾ. ಬಸವರಾಜ ವೀರಾಪುರ, ವೀರೇಶ ಬಳ್ಳಾರಿ, ಮುಖಂಡರಾದ ಎಸ್.ಎಫ್.ಎನ್. ಗಾಜಿಗೌಡ್ರ ಹಾಗೂ ಡಾ. ಸಂಜಯ ಡಾಂಗೆ, ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.

 ಸಿ.ವೈ. ಅಂತರವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಎಸ್.ಎಫ್. ಮಳೆಪ್ಪನವರ ಹಾಗೂ ನಾಗರಾಜ ನಡುವಿನಮಠ ನಿರೂಪಿಸಿದರು. ಆನಂದ ಎಂ. ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *